
ನ್ಯೂಯಾರ್ಕ್: ಅಮೆರಿಕಾದ ನ್ಯೂಯಾರ್ಕ್ ರಸ್ತೆಯಲ್ಲಿ ಸೋಮವಾರ ಹೈಡ್ರಾಮಾವೊಂದು ನಡೆದಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಗಾವಲು ಪಡೆಗೆ ದಾರಿ ಮಾಡಿಕೊಡಲು ಪೊಲೀಸರು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಅವರನ್ನೇ ರಸ್ತೆಯಲ್ಲಿ ತಡೆದು ನಿಲ್ಲಿಸಿದ ಘಟನೆ ನಡೆದಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಗಾವಲು ವಾಹನ ಸಾಗಲಿದ್ದುದರಿಂದ ನಗರದ ರಸ್ತೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆ ವೇಳೆ ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಅವರ ಬೆಂಗಾವಲು ಪಡೆಯನ್ನು ತಡೆದು ನಿಲ್ಲಿಸಿದ್ದಾರೆ.
ಮ್ಯಾಕ್ರನ್ ಅವರು 80ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ ಕೆಲವೇ ಸಮಯದ ಬಳಿಕ, ಮ್ಯಾನ್‌ಹ್ಯಾಟನ್‌ನಲ್ಲಿ ಈ ಘಟನೆ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮ್ಯಾಕ್ರನ್ ಮತ್ತು ಅವರ ತಂಡವು ಪೊಲೀಸ್ ಅಧಿಕಾರಿಯೊಂದಿಗೆ ಸಂವಹನ ನಡೆಸುತ್ತಿರುವುದು ಕಂಡು ಬಂದಿದೆ.
ತಮ್ಮನ್ನು ತಡೆಹಿಡಿದಿರುವುದೇಕೆ ಎಂಬ ಮ್ಯಾಕ್ರನ್ ಪ್ರಶ್ನೆಗೆ, ಪೊಲೀಸ್ ಅಧಿಕಾರಿಯೊಬ್ಬರು, "ಕ್ಷಮಿಸಿ ಅಧ್ಯಕ್ಷರೇ, ಡೊನಾಲ್ಡ್ ಟ್ರಂಪ್ ಅವರ ಬೆಂಗಾವಲು ವಾಹನ ಬರುತ್ತಿದ್ದು, ರಸ್ತೆಯನ್ನು ಬಂದ್ ಮಾಡಲಾಗಿದೆ. ಈ ಅಡಚಣೆಗೆ ವಿಷಾವಿದೆ ಎಂದು ಹೇಳಿರುವುದು ಕಂಡು ಬಂದಿದೆ.
ಕೂಡಲೇ ತಮ್ಮ ಮೊಬೈಲ್ ತೆಗೆದ ಇಮ್ಯಾನ್ಯುಯೆಲ್ ಮ್ಯಾಕ್ರನ್ ಅವರು, ನೇರವಾಗಿ ಡೊನಾಲ್ಡ್ ಟ್ರಂಪ್ ಅವರಿಗೆ ಕರೆ ಮಾಡಿದ್ದಾರೆ. ಮ್ಯಾನ್‌ಹ್ಯಾಟನ್‌ನ ಬೀದಿಯಲ್ಲಿ ನಿಮ್ಮಿಂದಾಗಿ ನಾನು ರಸ್ತೆಬದಿ ನಿಂತಿದ್ದೇನೆ. ನಿಮಗಾಗಿ ಇಲ್ಲಿ ಎಲ್ಲವನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಆತ್ಮೀಯವಾಗಿ ದೂರಿದ್ದಾರೆ.
ನಂತರ ಬೆಂಗಾವಲು ವಾಹನ ಸಾಗಲು ಬಹಳ ಸಮಯ ತೆಗೆದುಕೊಂಡ ಹಿನ್ನೆಲೆಯಲ್ಲಿ ಇಮ್ಯಾನ್ಯುಯೆಲ್ ಮ್ಯಾಕ್ರನ್ ಅವರು ಕಾಲ್ನಡಿಗೆ ಮೂಲಕ ಫ್ರಾನ್ಸ್ ರಾಯಭಾರ ಕಚೇರಿಗೆ ತೆರಳಿದ್ದಾರೆ.
ಮ್ಯಾಕ್ರನ್ ಅವರು ಸುಮಾರು ಅರ್ಧಗಂಟೆ ನಡೆದುಕೊಂಡೇ ರಾಯಭಾರ ಕಚೇರಿಯನ್ನು ತಲುಪಿದ್ದಾರೆ. ಈ ವೇಳೆ ಹಲವರು ಮ್ಯಾಕ್ರನ್ ಅವರೊಂದಿಗೆ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಇಮ್ಯಾನ್ಯುಯೆಲ್ ಮ್ಯಾಕ್ರನ್ ಅವರು ಪ್ಯಾಲೆಸ್ಟೈನ್ ರಾಷ್ಟ್ರವನ್ನು ಫ್ರಾನ್ಸ್ ಔಪಚಾರಿಕವಾಗಿ ಗುರುತಿಸುವುದಾಗಿ ತಮ್ಮ ಭಾಷಣದಲ್ಲಿ ಘೋಷಿಸಿದ್ದರು. ಇದಾದ ಕೆಲವೇ ಸಮಯದ ಬಳಿಕ, ಅವರ ಬೆಂಗಾವಲು ಪಡೆಯನ್ನು ರಸ್ತೆಯಲ್ಲಿ ನಿಲ್ಲಿಸಲಾಗಿದ್ದು, ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.
Advertisement