
ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ಸ್ಥಗಿತಗೊಳಿಸದ ಭಾರತದ ವಿರುದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದಲ್ಲಾ ಒಂದು ರೀತಿಯ ಮಸಲತ್ತು ಆರಂಭಿಸಿದ್ದಾರೆ.
ಈ ನಡುವೆ ಓವಲ್ ಕಚೇರಿಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರೊಂದಿಗೆ ಗುರುವಾರ ರಹಸ್ಯವಾದ ಮಾತುಕತೆ ಸೇರಿದಂತೆ ಉನ್ನತ ಮಟ್ಟದ ದ್ವಿಪಕ್ಷೀಯ ಸಭೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಶ್ವೇತಭವನವು ಬಿಡುಗಡೆ ಮಾಡಿರುವ ಟ್ರಂಪ್ ಅವರ ಸಾರ್ವಜನಿಕ ವೇಳಾಪಟ್ಟಿಯ ಪ್ರಕಾರ, ನ್ಯೂಯಾರ್ಕ್‌ನಲ್ಲಿ ನಡೆಯಲಿರುವ 80ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಬಳಿಕ ಶರೀಫ್ ವಾಷಿಂಗ್ಟನ್ ಡಿಸಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ. ಬುಧವಾರ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯನ್ನು ಉದ್ದೇಶಿಸಿ ಶರೀಫ್ ಮಾತನಾಡಿದ್ದರು.
ಪಾಕಿಸ್ತಾನದ ಕ್ರೋಢೀಕೃತ ಸಾಲದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಶರೀಫ್, ಜಾಗತಿಕ ಸವಾಲುಗಳಿಗೆ ಇದು ಕಾರ್ಯಸಾಧ್ಯವಾದ ಪರಿಹಾರವಲ್ಲ ಎಂದಿದ್ದರು. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಇಸ್ಲಾಮಾಬಾದ್ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ಅವರ ಹೇಳಿಕೆ ಮೇಲೆ ಇದು ಬೆಳಕು ಚೆಲ್ಲಿತ್ತು.
ಮಂಗಳವಾರ ಶರೀಫ್, ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಪಾಕಿಸ್ತಾನ ಒಳಗೊಂಡಂತೆ ಎಂಟು ಇಸ್ಲಾಮಿಕ್-ಅರಬ್ ರಾಷ್ಟ್ರಗಳ ನಾಯಕರ ನಡುವಿನ ಸಭೆಯ ನಂತರ ಟ್ರಂಪ್ ಅವರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ್ದರು. ಪ್ರಧಾನಿ ಶೆಹಬಾಜ್ ಮತ್ತು ಉಪಪ್ರಧಾನಿ/ವಿದೇಶಾಂಗ ಸಚಿವ ಇಶಾಕ್ ದಾರ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಚರ್ಚೆಯಲ್ಲಿ ಭಾಗವಹಿಸಿದ್ದರು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವರು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಶರೀಫ್ ಭೇಟಿಗೂ ಮುನ್ನ ಟಿಕ್‌ಟಾಕ್ ಭದ್ರತಾ ಒಪ್ಪಂದ ರದ್ಧತಿ ಸೇರಿದಂತೆ ಕಾರ್ಯನಿರ್ವಾಹಕ ಆದೇಶಗಳಿಗೆ ಟ್ರಂಪ್ ಸಹಿ ಹಾಕುವ ಸಾಧ್ಯತೆಯಿದೆ ಎನ್ನಲಾಗಿದೆ.
Advertisement