

ಬೀಜಿಂಗ್: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೋಮವಾರ ಹಾರ್ಮುಜ್ ಜಲಸಂಧಿಯನ್ನು ಹಡಗುಗಳ ಸಾಮಾನ್ಯ ಸಂಚಾರಕ್ಕಾಗಿ ತೆರೆಯುವಂತೆ ಕರೆ ನೀಡಿದ್ದು, ಇದೊಂದು "ಅಂತರರಾಷ್ಟ್ರೀಯ ಜಲಮಾರ್ಗ" ಎಂದು ಹೇಳಿದ್ದಾರೆ. ಆದರೆ ಇರಾನ್ ಅದರ ಮೇಲೆ ತಾನೇ ಸಂಪೂರ್ಣ ಹಕ್ಕು ಹೊಂದಿರುವುದಾಗಿ ಪ್ರತಿಪಾದಿಸುತ್ತಿದೆ.
ಹಾರ್ಮುಜ್ ಜಲಸಂಧಿಯು ಸಾಮಾನ್ಯ ಸಂಚಾರಕ್ಕೆ ಮುಕ್ತವಾಗಬೇಕು. ಇದು ಪ್ರಾದೇಶಿಕ ದೇಶಗಳು ಮತ್ತು ಅಂತರರಾಷ್ಟ್ರೀಯ ಸಮುದಾಯದ ಸಾಮಾನ್ಯ ಹಿತಾಸಕ್ತಿಯಾಗಿದೆ ಎಂದು ಕ್ಸಿ ಜಿನ್ ಪಿಂಗ್ ಅವರು ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ದೂರವಾಣಿ ಮಾತುಕತೆಯ ಸಮಯದಲ್ಲಿ ಹೇಳಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಇರಾನ್, ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿರುವ ಕುರಿತು ಚೀನಾ ಅಧ್ಯಕ್ಷರ ಮೊದಲ ಹೇಳಿಕೆ ಇದಾಗಿದ್ದು, ನಂತರ ಪ್ರಸ್ತುತ ಸಂಘರ್ಷದಲ್ಲಿ ಇರಾನ್ ಬಂದರುಗಳ ಮೇಲೆ ಅಮೆರಿಕ ದಿಗ್ಬಂಧನ ಹೇರಿದೆ.
ಜಲಸಂಧಿಯನ್ನು ಮುಚ್ಚುವುದರಿಂದ ಪ್ರಪಂಚದಾದ್ಯಂತ, ವಿಶೇಷವಾಗಿ ಏಷ್ಯಾದಲ್ಲಿ ತೀವ್ರ ಇಂಧನ ಕೊರತೆ ಉಂಟಾಗಿದೆ ಮತ್ತು ಇರಾನಿನ ತೈಲದ ಪ್ರಮುಖ ಆಮದುದಾರ ಚೀನಾ, ದೀರ್ಘಾವಧಿಯ ಅಮೆರಿಕ-ಇಸ್ರೇಲ್-ಇರಾನ್ ಯುದ್ಧದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಿದೆ.
"ಚೀನಾ ತಕ್ಷಣದ ಮತ್ತು ಸಮಗ್ರ ಕದನ ವಿರಾಮವನ್ನು ಪ್ರತಿಪಾದಿಸುತ್ತದೆ, ಶಾಂತಿಯನ್ನು ಪುನಃಸ್ಥಾಪಿಸಲು ಅನುಕೂಲಕರವಾದ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಮತ್ತು ರಾಜಕೀಯ ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ವಿವಾದ ಪರಿಹರಿಸುವಂತೆ ಒತ್ತಾಯಿಸುತ್ತದೆ" ಎಂದು ಕ್ಸಿ ಹೇಳಿದ್ದಾರೆ.
ಪ್ರತ್ಯೇಕವಾಗಿ, ಅಮೆರಿಕದ ನೌಕಾ ದಿಗ್ಬಂಧನವನ್ನು ಧಿಕ್ಕರಿಸಿ ಚೀನಾದಿಂದ ಇರಾನ್ ಬಂದರಿಗೆ ಪ್ರಯಾಣಿಸುತ್ತಿದ್ದ ಸರಕು ಹಡಗಿನ ಮೇಲೆ ಅಮೆರಿಕ ನೌಕಾಪಡೆ ಗುಂಡು ಹಾರಿಸಿದ ಬಗ್ಗೆ ಚೀನಾ ವಿದೇಶಾಂಗ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.
ನಂತರ ಹಡಗನ್ನು ಅಮೆರಿಕ ನೌಕಾಪಡೆ ವಶಪಡಿಸಿಕೊಂಡಿದೆ.
Advertisement