ವಾಷಿಂಗ್ಟನ್: ಅಮೆರಿಕ-ಇರಾನ್ ಕದನ ವಿರಾಮ ಮುಕ್ತಾಯಗೊಳ್ಳಲು ಕೆಲವೇ ಗಂಟೆಗಳ ಮೊದಲು, ಪಾಕಿಸ್ತಾನದ ವಿನಂತಿಯನ್ನು ಉಲ್ಲೇಖಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮವನ್ನು 'ಅನಿರ್ದಿಷ್ಟಾವಧಿಗೆ' ವಿಸ್ತರಿಸಿದರು.
ತಮ್ಮ ಹೇಳಿಕೆಯಲ್ಲಿ, 'ಗಂಭೀರವಾಗಿ ಒಡೆದಿರುವ' ಇರಾನಿನ ಆಡಳಿತವು ಶಾಶ್ವತ ಶಾಂತಿ ಒಪ್ಪಂದಕ್ಕಾಗಿ 'ಏಕೀಕೃತ ಪ್ರಸ್ತಾವನೆ'ಯನ್ನು ಮಂಡಿಸಲು ಸಮಯ ನೀಡುವ ಸಲುವಾಗಿ ಕದನ ವಿರಾಮವನ್ನು ವಿಸ್ತರಿಸಲಾಗುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. ಟೆಹ್ರಾನ್‌ಗೆ ಅಮೆರಿಕ ಗಡುವು ವಿಧಿಸದಿರುವುದು ಇದೇ ಮೊದಲಾಗಿದ್ದು, ತಮ್ಮ ಕಾರ್ಯತಂತ್ರದಲ್ಲಿನ ಬದಲಾವಣೆಯ ಶ್ರೇಯ ಪಾಕಿಸ್ತಾನಿ ನಾಯಕತ್ವಕ್ಕೆ ಸಲ್ಲುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
'ಇರಾನ್ ಸರ್ಕಾರವು ಆಳವಾಗಿ ವಿಭಜನೆಗೊಂಡಿದೆ ಮತ್ತು ಅಸ್ಥಿರವಾಗಿದೆ. ಆದ್ದರಿಂದ, ತಕ್ಷಣವೇ ದಾಳಿ ಮಾಡುವ ಬದಲು, ಅಮೆರಿಕ ಮಿಲಿಟರಿ ಕ್ರಮವನ್ನು ವಿರಾಮಗೊಳಿಸುತ್ತದೆ. ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಅವರು ವಿನಂತಿಸಿಕೊಂಡಿದ್ದರಿಂದ ಈ ಕದನ ವಿರಾಮವನ್ನು ವಿಸ್ತರಿಸಲಾಗಿದೆ. ಯಾವುದೇ ಮುಂದಿನ ಕ್ರಮ ಕೈಗೊಳ್ಳುವ ಮೊದಲು ಏಕೀಕೃತ ಶಾಂತಿ ಪ್ರಸ್ತಾಪವನ್ನು ಮಂಡಿಸಲು ಇರಾನ್‌ಗೆ ಸಮಯ ನೀಡಲಾಗುತ್ತಿದೆ' ಎಂದು ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಆದರೆ, ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಕರಾವಳಿಯಲ್ಲಿ ಬಂದರುಗಳ ಮೇಲಿನ ದಿಗ್ಬಂಧನ ಜಾರಿಯಲ್ಲಿರುತ್ತದೆ. ಅಮೆರಿಕದ ಸೇನೆಯು 'ಇತರ ಎಲ್ಲ ವಿಷಯಗಳಲ್ಲಿಯೂ ಸಿದ್ಧ ಮತ್ತು ಸಮರ್ಥವಾಗಿರುತ್ತದೆ. ಅವರ ಪ್ರಸ್ತಾವನೆ ಸಲ್ಲಿಸಲ್ಪಟ್ಟ ಬಳಿಕ ಚರ್ಚೆಗಳು ಒಂದಲ್ಲ ಒಂದು ರೀತಿಯಲ್ಲಿ ಮುಕ್ತಾಯಗೊಳ್ಳುವವರೆಗೆ ಕದನ ವಿರಾಮವನ್ನು ವಿಸ್ತರಿಸಲಾಗುವುದು' ಎಂದು ಟ್ರಂಪ್ ಹೇಳಿದ್ದಾರೆ.
ಪಾಕಿಸ್ತಾನ ಹೇಳಿದ್ದೇನು?
ಕದನ ವಿರಾಮವನ್ನು ವಿಸ್ತರಿಸುವ ಇಸ್ಲಾಮಾಬಾದ್‌ನ ವಿನಂತಿಯನ್ನು ಸ್ವೀಕರಿಸಿದ್ದಕ್ಕಾಗಿ ಮತ್ತು ಅದರ 'ರಾಜತಾಂತ್ರಿಕ ಪ್ರಯತ್ನಗಳಲ್ಲಿ' 'ನಂಬಿಕೆ ಮತ್ತು ವಿಶ್ವಾಸ' ತೋರಿಸಿದ್ದಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದಗಳು ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿದ್ದಾರೆ.
'ವೈಯಕ್ತಿಕವಾಗಿ ಮತ್ತು ಫೀಲ್ಡ್ ಮಾರ್ಷಲ್ ಸೈಯದ್ ಅಸಿಮ್ ಮುನೀರ್ ಅವರ ಪರವಾಗಿ, ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳಿಗೆ ಅವಕಾಶ ನೀಡುವ ಮೂಲಕ ಕದನ ವಿರಾಮವನ್ನು ವಿಸ್ತರಿಸುವ ನಮ್ಮ ವಿನಂತಿಯನ್ನು ಸ್ವೀಕರಿಸಿದ್ದಕ್ಕಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ. ಈ ನಂಬಿಕೆ ಮತ್ತು ವಿಶ್ವಾಸವನ್ನು ಇರಿಸುವುದರೊಂದಿಗೆ, ಪಾಕಿಸ್ತಾನವು ಮಾತುಕತೆಯ ಮೂಲಕ ಸಂಘರ್ಷ ಇತ್ಯರ್ಥಕ್ಕೆ ಶ್ರದ್ಧೆಯಿಂದ ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತದೆ' ಎಂದು ಮುನೀರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಉಭಯ ದೇಶಗಳು ಕದನ ವಿರಾಮವನ್ನು ಪಾಲಿಸುವುದನ್ನು ಮುಂದುವರಿಸುತ್ತಾರೆ ಮತ್ತು ಸಂಘರ್ಷಕ್ಕೆ ಶಾಶ್ವತ ಅಂತ್ಯ ಹಾಡಲು ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಎರಡನೇ ಸುತ್ತಿನ ಮಾತುಕತೆಯ ಸಮಯದಲ್ಲಿ ಸಮಗ್ರ 'ಶಾಂತಿ ಒಪ್ಪಂದ'ವನ್ನು ತೀರ್ಮಾನಿಸಲು ಸಾಧ್ಯವಾಗುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ' ಎಂದು ಅವರು ಹೇಳಿದರು.
ಇದರಿಂದಾಗಿ ಪಾಕಿಸ್ತಾನವು ಜಾಗತಿಕವಾಗಿ ಪ್ರಮುಖ ರಾಜತಾಂತ್ರಿಕ ಪ್ರಾಮುಖ್ಯತೆಯನ್ನು ಪಡೆಯಲಿದೆ. ಪಾಕ್ ಅನ್ನು ಅಮೆರಿಕ ಮತ್ತು ಇರಾನ್ ನಡುವಿನ ಪ್ರಬಲ ಮಧ್ಯವರ್ತಿ ಅಥವಾ "ಸೇತುವೆ"ಯಾಗಿ ನೋಡಲಾಗುತ್ತದೆ. ಇದು ಅದರ ಅಂತರರಾಷ್ಟ್ರೀಯ ಖ್ಯಾತಿ ಮತ್ತು ಪ್ರಭಾವವನ್ನು ಸುಧಾರಿಸುತ್ತದೆ.
ಇದಕ್ಕೂ ಮೊದಲು, ಇರಾನ್ ನಾಯಕರು ಸಹ ಹಲವಾರು ಸಂದರ್ಭಗಳಲ್ಲಿ ಪಾಕಿಸ್ತಾನದ ನಾಯಕತ್ವದ ರಾಜತಾಂತ್ರಿಕ ಪ್ರಯತ್ನಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದರು.
ಪಾಕಿಸ್ತಾನ ಶಾಂತಿಪ್ರಿಯ ದೇಶವಾಗಿದ್ದು ಹೇಗೆ?
ಜಾಗತಿಕ ಶಾಂತಿಪ್ರಿಯನಾಗಿ ಗುರುತಿಸಿಕೊಳ್ಳುವ ತನ್ನ ಹೊಸ ಪಾತ್ರದಲ್ಲಿ ಇರಾನ್ ಮತ್ತು ಯುಎಸ್ ನಡುವಿನ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡಲು ಪಾಕಿಸ್ತಾನ ಮಾಡುತ್ತಿರುವ ಉದ್ರಿಕ್ತ ಪ್ರಯತ್ನಗಳ ಹಿಂದೆ, ತನ್ನ ರಾಜತಾಂತ್ರಿಕ ನಿಲುವನ್ನು ಮರುರೂಪಿಸಿಕೊಳ್ಳುವ ಮತ್ತು ವ್ಯವಹಾರಗಳನ್ನು ಆಕರ್ಷಿಸುವ ಪ್ರಯತ್ನವಿದೆ. ಅಸ್ಥಿರ ಮಧ್ಯಪ್ರಾಚ್ಯವು ಹಣಕಾಸಿನ ಕೊರತೆಯಿಂದ ಬಳಲುತ್ತಿರುವ ಇಸ್ಲಾಮಾಬಾದ್ ಪರವಾಗಿಲ್ಲ. ಏಕೆಂದರೆ, ಇದು ಪ್ರಾದೇಶಿಕ ಶಾಂತಿಗೆ ಸವಾಲಾಗಿದೆ ಮಾತ್ರವಲ್ಲದೆ ಸೌದಿ ಅರೇಬಿಯಾದೊಂದಿಗಿನ ಭದ್ರತಾ ಒಪ್ಪಂದ ಮತ್ತು ಕೊಲ್ಲಿಯಿಂದ ರವಾನೆಯಾಗುವ ಇಂಧನ ಸರಬರಾಜಿನ ಮೇಲಿನ ಅವಲಂಬನೆಯಿಂದಾಗಿ ಅದನ್ನು ತೀವ್ರ ಸಂಕಷ್ಟಕ್ಕೆ ದೂಡುವ ಬೆದರಿಕೆಯನ್ನೂ ಒಡ್ಡುತ್ತದೆ.
ಇದರಿಂದ ಪಾಕಿಸ್ತಾನಕ್ಕೆ ಸಿಗುವುದೇನು?
ಪಾಕಿಸ್ತಾನವನ್ನು ಕೆಲವು ದೇಶಗಳು ಮತ್ತು ವಿಶ್ಲೇಷಕರು ಆಂತರಿಕ ಸಮಸ್ಯೆಗಳು ಮತ್ತು ಉಗ್ರಗಾಮಿ ಗುಂಪುಗಳನ್ನು ಬೆಂಬಲಿಸುವ ಆರೋಪಗಳೊಂದಿಗೆ ಹೋರಾಡುತ್ತಿರುವ ದುರ್ಬಲ ಆರ್ಥಿಕತೆ ಎಂದು ನಕಾರಾತ್ಮಕವಾಗಿ ನೋಡುತ್ತಾರೆ. ಆದಾಗ್ಯೂ, ಪಾಕಿಸ್ತಾನವು ಈ ಚಿತ್ರಣವು ಅಪೂರ್ಣ ಎಂದು ನಂಬುತ್ತದೆ. ಏಕೆಂದರೆ, ಅದು ಜಗತ್ತಿನ ಏಕೈಕ ಪರಮಾಣು ಶಸ್ತ್ರಸಜ್ಜಿತ ಮುಸ್ಲಿಂ ರಾಷ್ಟ್ರವಾಗಿದೆ. ಅಲ್ಲದೆ, 600,000 ಸೈನಿಕರು ಇರುವ ದೊಡ್ಡ ಮಿಲಿಟರಿ ಪಡೆಯನ್ನು ಹೊಂದಿದೆ.
ಸಂಘರ್ಷ ಉಲ್ಬಣಗೊಳ್ಳುತ್ತಿರುವಂತೆ, ಪಾಕಿಸ್ತಾನದ ನಾಯಕರು ಅದರ ಮೇಲೆ ಹೆಚ್ಚಿನ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ದುರ್ಬಲ ಆರ್ಥಿಕತೆ ಮತ್ತು ಪ್ರಕ್ಷುಬ್ಧ ರಾಜಕೀಯದ ದೀರ್ಘಕಾಲದ ದೌರ್ಬಲ್ಯಗಳನ್ನು ಸಮತೋಲನಗೊಳಿಸಲು ದೇಶದ ಮಿಲಿಟರಿ ಪರಾಕ್ರಮವನ್ನು ಬಳಸುತ್ತಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಆರ್ಥಿಕ ದುರ್ಬಲತೆ ಎದ್ದು ಕಾಣುತ್ತಿದೆ. ಹಣ ಉಳಿಸಲು ದಿನನಿತ್ಯ ವಿದ್ಯುತ್ ಕಡಿತ ಮತ್ತು ಸೌದಿ ಅರೇಬಿಯಾದಿಂದ ತುರ್ತು ಪರಿಸ್ಥಿತಿಯಲ್ಲಿ 3 ಬಿಲಿಯನ್ ಡಾಲರ್ ಸಾಲ ಪಡೆಯಲಾಗಿದೆ. ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಸ್ಥಾನಮಾನದೊಂದಿಗೆ, ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಬಹುದು ಎಂದು ಅದು ಆಶಿಸುತ್ತದೆ. ಆದಾಗ್ಯೂ, ಅದು ಹೂಡಿಕೆಯನ್ನು ಉತ್ತೇಜಿಸಲು ತೆರಿಗೆಗಳನ್ನು ಕಡಿಮೆ ಮಾಡುವುದು ಮತ್ತು ಆಡಳಿತ ಮತ್ತು ಸ್ಥಿರತೆಯನ್ನು ಸುಧಾರಿಸಲು ಕಾನೂನುಗಳು ಮತ್ತು ಸಂಸ್ಥೆಗಳನ್ನು ಬಲಪಡಿಸುವುದರ ಮೇಲೆ ಅವಲಂಬಿತವಾಗಿರುತ್ತದೆ.
ಮುನೀರ್ ಅವರ ನಾಯಕತ್ವದಲ್ಲಿ, ಪಾಕಿಸ್ತಾನವು ಈಗಾಗಲೇ ಅಮೆರಿಕದೊಂದಿಗೆ ಹಲವಾರು ಆರ್ಥಿಕ ಒಪ್ಪಂದಗಳನ್ನು ಮಾಡಿಕೊಂಡಿದೆ. ಮಾತುಕತೆಗಳು ಯುದ್ಧವನ್ನು ಕೊನೆಗೊಳಿಸುವಲ್ಲಿ ಯಶಸ್ವಿಯಾದರೆ, ಅದು ಇಸ್ಲಾಮಾಬಾದ್‌ನ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಅದಕ್ಕೆ ಇತರ ಅವಕಾಶಗಳನ್ನು ತೆರೆಯುತ್ತದೆ.
ಮಾತುಕತೆ ವಿಫಲವಾದರೆ, ಪಾಕಿಸ್ತಾನವು ಕೆಲವು ಆರೋಪಗಳನ್ನು ಹೊತ್ತುಕೊಳ್ಳಬಹುದು ಎಂದು ಕೆಲವು ತಜ್ಞರು ಗಮನಸೆಳೆದಿದ್ದಾರೆ. ಈಗಾಗಲೇ, ಇಸ್ಲಾಮಾಬಾದ್ ತಟಸ್ಥ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವುದಕ್ಕಿಂತ ಹೆಚ್ಚಾಗಿ ಅಮೆರಿಕದ ಹಿತಾಸಕ್ತಿಗಳನ್ನು ಬೆಂಬಲಿಸುತ್ತಿದೆ ಎಂಬ ಆರೋಪಗಳನ್ನು ಎದುರಿಸುತ್ತಿದೆ.
Advertisement