ಖಮೇನಿ ಕೈ-ಕಾಲು, ಮುಖಕ್ಕೆ ತೀವ್ರ ಗಾಯ; ಗಂಭೀರ ಸ್ಥಿತಿಯಲ್ಲಿ ಪರಮೋಚ್ಛ ನಾಯಕ: ಇರಾನ್ ಆಡಳಿತ ಸೇನೆ ಹಿಡಿತಕ್ಕೆ?

ಅಧಿಕಾರ ವಹಿಸಿಕೊಂಡ ದಿನದಿಂದ ಇಂದಿನವರೆಗೂ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರ ಧ್ವನಿಯೂ ಜನರಿಗೆ ಕೇಳಿಸಿಲ್ಲ. ಹೀಗಾಗಿ ಅವರು ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಾಗುತ್ತಿತ್ತು.
Mojtaba Khamenei
ಇರಾನ್ ದೇಶದ ನೂತನ ಪರಮೋಚ್ಛ ನಾಯಕ ಮೊಜ್ತಬಾ ಖಮೇನಿ
Updated on

ಇರಾನ್‌ನ ಪರಮೋಚ್ಛ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯ ಸ್ಥಿತಿ ಕುರಿತು ಬಿಗ್​ ಅಪ್ಡೇಟ್​ (Health Update) ಬಂದಿದೆ.

ಇತ್ತೀಚಿನ ವಾಯುದಾಳಿಯ ಸಂದರ್ಭದಲ್ಲಿ ಮೊಜ್ತಬಾ ಖಮೇನಿ ಅವರಿಗೆ ಗಂಭೀರ ಗಾಯಗಳಾಗಿದ್ದು, ವಿಶೇಷವಾಗಿ ಮುಖದ ಭಾಗದಲ್ಲಿ ತೀವ್ರ ಸುಟ್ಟ ಗಾಯಗಳಾಗಿವೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಫೆಬ್ರವರಿ 28 ರಂದು ನಡೆದ ಅಮೆರಿಕ–ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದರು. ಈ ದಾಳಿಯಲ್ಲಿ ಖಮೇನಿ ಕುಟುಂಬದ ಹಲವಾರು ಸದಸ್ಯರೂ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಸುಮಾರು ಆರು ವಾರಗಳ ಬಳಿಕ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ಹೊಸ ಸರ್ವೋಚ್ಚ ನಾಯಕರಾಗಿ ಘೋಷಿಸಲಾಯಿತು.

ಆದರೆ ಅಧಿಕಾರ ವಹಿಸಿಕೊಂಡ ದಿನದಿಂದ ಇಂದಿನವರೆಗೂ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರ ಧ್ವನಿಯೂ ಜನರಿಗೆ ಕೇಳಿಸಿಲ್ಲ. ಹೀಗಾಗಿ ಅವರು ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಾಗುತ್ತಿತ್ತು, ಆದರೆ ಇದೀಗ ಅವರ ಆರೋಗ್ಯದ ಕುರಿತು ಮುಖ್ಯವಾದ ಮಾಹಿತಿ ಹೊರಬಂದಿದೆ.

ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ವೈಮಾನಿಕ ದಾಳಿಯಲ್ಲಿ ಮೊಜ್ತಬಾ ಖಮೇನಿಗೆ ತೀವ್ರ ಗಾಯಗಳಾಗಿದ್ದು, ಅವರ ಸುತ್ತಲೂ ದೊಡ್ಡ ವೈದ್ಯಕೀಯ ತಂಡ ಸದಾ ಹಾಜರಿರುತ್ತದೆ ಎನ್ನಲಾಗಿದೆ.

ಮಾಹಿತಿಗಳ ಪ್ರಕಾರ, ಖಮೇನಿ ಅವರ ಮುಖ ಮತ್ತು ತುಟಿಗಳಿಗೆ ಭಾರೀ ಹಾನಿಯಾಗಿದ್ದು, ಇದರಿಂದಾಗಿ ಅವರು ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಈ ಗಾಯಗಳ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ ನಡೆಸುವ ಕುರಿತಂತೆಯೂ ವೈದ್ಯಕೀಯ ತಂಡ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

Mojtaba Khamenei
ಪಾಕಿಸ್ತಾನ ಡಬಲ್ ಗೇಮ್ ಆಡುತ್ತಿದೆ: ಇರಾನ್ ಕೆಂಡಾಮಂಡಲ; ಮುಂದಿನ ನಡೆಯೇ ನಿಗೂಢ! ಏನಿದು ಹೊಸ ವಿವಾದ?

ವೈದ್ಯಕೀಯ ತಜ್ಞರು ಈ ರೀತಿಯ ಗಾಯಗಳಿಗೆ ಹಲವು ಹಂತಗಳಲ್ಲಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು ಎಂದು ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.

ಇದೊಂದೇ ಅಲ್ಲ, ದಾಳಿಯಲ್ಲಿ ಅವರ ದೇಹದ ಇತರೆ ಭಾಗಗಳಿಗೂ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ಒಂದು ಕಾಲಿಗೆ ಗಂಭೀರ ಗಾಯವಾಗಿದ್ದು, ಅದಕ್ಕೆ ಹಲವಾರು ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆದರೂ ಸಂಪೂರ್ಣವಾಗಿ ಚೇತರಿಸಿಕೊಳ್ಳದಿದ್ದರೆ, ಕೃತಕ ಕಾಲಿನ ಅವಶ್ಯಕತೆ ಎದುರಾಗಬಹುದು ಎಂದು ಹೇಳಲಾಗುತ್ತಿದೆ. ಕೈಗಳಿಗೂ ಗಾಯವಾಗಿದ್ದು, ಚಿಕಿತ್ಸೆ ಇನ್ನೂ ಮುಂದುವರಿದಿದೆ.

ಈ ಪರಿಸ್ಥಿತಿಯ ಪರಿಣಾಮವಾಗಿ, ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಬಹುತೇಕ ನಿಲ್ಲಿಸಿದ್ದಾರೆ. ಅವರು ಸಭೆಗಳು ಅಥವಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬದಲು, ಮುಖ್ಯವಾಗಿ ಬರವಣಿಗೆಯ ಮೂಲಕವೇ ತಮ್ಮ ಸೂಚನೆಗಳನ್ನು ನೀಡುತ್ತಿದ್ದಾರೆ ಎನ್ನಲಾಗಿದೆ. ಅವರ ಸುತ್ತಲಿನ ಭದ್ರತೆ ಕೂಡ ಹೆಚ್ಚಿಸಲಾಗಿದೆ, ಕೆಲವೇ ಆಪ್ತ ವ್ಯಕ್ತಿಗಳಿಗೆ ಮಾತ್ರ ಅವರನ್ನು ಭೇಟಿ ಮಾಡುವ ಅವಕಾಶ ನೀಡಲಾಗುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಆದಾಗ್ಯೂ, ಖಮೇನಿ ಮಾನಸಿಕ ಸ್ಥಿತಿ ಸ್ಥಿರವಾಗಿದ್ದು, ದೇಶದ ಆಡಳಿತ ಸಂಬಂಧಿತ ನಿರ್ಧಾರಗಳಲ್ಲಿ ಅವರು ಇನ್ನೂ ಭಾಗವಹಿಸುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಜನರೊಂದಿಗೆ ಸಂಪರ್ಕ ಸಾಧಿಸಲು ನೇರ ಸಭೆಗಳ ಬದಲು ಮಧ್ಯವರ್ತಿ ವ್ಯವಸ್ಥೆಗಳನ್ನು ಖಮೇನಿ ಅವರು ಬಳಸುತ್ತಿದ್ದಾರೆ. ಅಂದರೆ ವಿಶ್ವಾಸಾರ್ಹ ವ್ಯಕ್ತಿಗಳ ಮೂಲಕ ಕೈಬರಹದ ಸಂದೇಶಗಳನ್ನು ಮುಚ್ಚಿದ ಲಕೋಟೆಗಳಲ್ಲಿ ಸಾಗಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಆದರೆ, ಈ ರೀತಿಯ ವ್ಯವಸ್ಥೆಯಿಂದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ನಿಧಾನವಾಗಿದ್ದು, ಆಡಳಿತದಲ್ಲಿ ಮಧ್ಯವರ್ತಿಗಳ ಪಾತ್ರ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಖಮೇನಿ ಅವರು, ಪ್ರಾಥಮಿಕ ಅಧಿಕಾರವನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗೆ ವಹಿಸಿದ್ದಾರೆಂದು ತಿಳಿದುಬಂದಿದೆ.

ಇರಾನ್‌ನ ಅತ್ಯಂತ ಶಕ್ತಿಶಾಲಿ ಭದ್ರತಾ ಸಂಸ್ಥೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈಗ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು, ಇದರಿಂದ ದೇಶದಲ್ಲಿ ಶಕ್ತಿಯ ಕೇಂದ್ರೀಕರಣ ಬದಲಾಗುತ್ತಿದ್ದು, “ಸೇನಾ-ಕೇಂದ್ರಿತ ಆಡಳಿತ ವ್ಯವಸ್ಥೆ” ರೂಪುಗೊಳ್ಳುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Mojtaba Khamenei
"One Leader, One Nation": ನಾಯಕತ್ವ ಕುರಿತ ಟ್ರಂಪ್ ಹೇಳಿಕೆಗೆ ಇರಾನ್ ತಿರುಗೇಟು!

ಖಮೇನಿ ಅವರು ಇರಾನ್–ಇರಾಕ್ ಯುದ್ಧದ ಸಮಯದಲ್ಲಿ “ಹಬೀಬ್ ಬ್ಯಾಟಲಿಯನ್” ನಲ್ಲಿ ಯುವ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದರು. ಆ ಘಟಕದ ಹಳೆಯ ಸಹಚರರು ಈಗ ಉನ್ನತ ಸ್ಥಾನಗಳಲ್ಲಿ ಇದ್ದು, ಇವರೇ ಇರಾನ್ ಅಡಳಿತ ವ್ಯವಸ್ಥೆಯಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.

ಈ ಸೇನಾ ಗುಂಪು ಈಗ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಪ್ರಮುಖ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪರಮೋಚ್ಛ ನಾಯಕನನ್ನುೂ ಕೂಡ ಸಹೋದ್ಯೋಗಿಯಂತೆ ನೋಡುತ್ತಿದೆ ಎಂದು ತಿಳಿದುಬಂದಿದೆ.

ವರದಿ ಪ್ರಕಾರ, ಸರ್ಕಾರ ಮತ್ತು ಆಯ್ಕೆಯಾದ ಅಧ್ಯಕ್ಷರು ಆರ್ಥಿಕ ಪುನಶ್ಚೇತನ ಹಾಗೂ ವಿದೇಶಾಂಗ ಮಾತುಕತೆಗಳಿಗೆ ಒತ್ತು ನೀಡಲು ಯತ್ನಿಸಿದರೂ, ಸೇನಾ ನಾಯಕರು ಅನೇಕ ಸಂದರ್ಭಗಳಲ್ಲಿ ಈ ಪ್ರಯತ್ನಗಳನ್ನು ಬದಿಗೊತ್ತಿದ್ದಾರೆ. ಇತ್ತೀಚೆಗೆ ಇಸ್ಲಾಮಾಬಾದ್‌ನಲ್ಲಿ ನಡೆದ ಮಾತುಕತೆಗಳಲ್ಲಿ ಸೇನಾ ವಲಯ ಹಸ್ತಕ್ಷೇಪ ಮಾಡಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ.

ಇದರಿಂದಾಗಿ ಇರಾನ್‌ನ ವಿದೇಶಾಂಗ ನೀತಿಯಲ್ಲಿ ಸೇನಾ ದೃಷ್ಟಿಕೋನವೇ ಮೇಲುಗೈ ಸಾಧಿಸುತ್ತಿದೆ. ಸುಮಾರು 300 ಬಿಲಿಯನ್ ಡಾಲರ್ ಆರ್ಥಿಕ ನಷ್ಟದ ನಡುವೆಯೂ ಮಾತುಕತೆಗಳನ್ನು ಮುಂದುವರಿಸುವುದನ್ನು ಸೇನಾ ನಾಯಕರು ವಿರೋಧಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯಲ್ಲಿ ತಿಳಿಸಿದೆ.

ಮೊಜ್ತಬಾ ಖಮೇನಿ ಅಧಿಕೃತವಾಗಿ ಪರಮೋಚ್ಛ ನಾಯಕನ ಸ್ಥಾನದಲ್ಲಿದ್ದರೂ, ನಿಜವಾದ ಆಡಳಿತಾಧಿಕಾರ ಇರಾನ್ ಸೇನೆ ಕೈಯಲ್ಲಿದೆ. ಶಸ್ತ್ರಚಿಕಿತ್ಸೆ ಬಳಿಕ ಮಾತನಾಡುವ ಸಾಮರ್ಥ್ಯ ಮರಳಿ ಪಡೆಯುವವರೆಗೆ, ಇರಾನ್ ಆಡಳಿತವು ಸೇನಾ ನಾಯಕರ ಮೇಲೆಯೇ ಅವಲಂಬಿತವಾಗಿರುತ್ತದೆ ಎಂದು ವರದಿಯಲ್ಲಿ ತಿಳಿಸಿದೆ.

ಇದರ ಮಧ್ಯೆ, ಇರಾನ್ ಸರ್ಕಾರ ಈ ಗಾಯಗಳ ತೀವ್ರತೆ ಅಥವಾ ಚಿಕಿತ್ಸೆಯ ವಿವರಗಳನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಇದರಿಂದಾಗಿ ವಿವಿಧ ಮಾಧ್ಯಮಗಳಲ್ಲಿ ವಿಭಿನ್ನ ರೀತಿಯ ವರದಿಗಳು ಹರಿದಾಡುತ್ತಿದ್ದು, ನಿಖರ ಮಾಹಿತಿ ಕುರಿತು ಅನಿಶ್ಚಿತತೆ ಮುಂದುವರಿದಿದೆ.

ಸುರಕ್ಷತಾ ಕಾರಣಗಳು ಮತ್ತು ರಾಜಕೀಯ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಈ ವಿಷಯವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಒಟ್ಟಿನಲ್ಲಿ, ಖಮೇನಿ ಅವರ ಆರೋಗ್ಯ ಸ್ಥಿತಿ ಕೇವಲ ವೈದ್ಯಕೀಯ ವಿಚಾರವಷ್ಟೇ ಅಲ್ಲದೆ, ಇರಾನ್‌ನ ರಾಜಕೀಯ ಮತ್ತು ಭದ್ರತಾ ವ್ಯವಸ್ಥೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಅವರ ಸಾರ್ವಜನಿಕ ಹಾಜರಾತಿ ಕಡಿಮೆಯಾಗಿರುವುದು ಮತ್ತು ಆರೋಗ್ಯದ ಬಗ್ಗೆ ಸ್ಪಷ್ಟ ಮಾಹಿತಿ ಕೊರತೆಯಿರುವುದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com