10 ವರ್ಷಗಳ ಪ್ಲ್ಯಾನ್, 2 ಗಂಟೆಗಳಲ್ಲಿ ಪರಾರಿ: ಕಿಮ್ ಕಪಿಮುಷ್ಠಿಯಿಂದ ತಪ್ಪಿಸಿಕೊಂಡ ಫ್ಯಾಮಿಲಿ, ವಿಶ್ವದ ಗಮನ ಸೆಳೆದ ಗ್ರೇಟ್ ಎಸ್ಕೇಪ್ ಸ್ಟೋರಿ..!

ಇಲ್ಲಿನ ಜನರಿಗೆ ಹೊರಗಿನ ಪ್ರಪಂಚದ ಜೊತೆ ಸಂಪರ್ಕವಿರುವುದಿಲ್ಲ. ಇಂಟರ್ನೆಟ್ ಸೌಲಭ್ಯ ಸೀಮಿತವಾಗಿದ್ದು, ಸರ್ಕಾರಿ ಪ್ರಸಾರ ಮಾಡುವ ಟಿವಿ ಮತ್ತು ರೇಡಿಯೋ ಚಾನೆಲ್‌ಗಳನ್ನು ಮಾತ್ರ ವೀಕ್ಷಿಸಲು ಅನುಮತಿ ಇದೆ. ವಿದೇಶಿ ಚಲನಚಿತ್ರಗಳನ್ನು ನೋಡುವುದು ಅಥವಾ ಸಂಗೀತ ಕೇಳುವುದು ಇಲ್ಲಿ ದೊಡ್ಡ ಅಪರಾಧ.
Represenative image
ಸಾಂದರ್ಭಿಕ ಚಿತ್ರ
Updated on

ಜಗತ್ತಿನ ಅತ್ಯಂತ ರಹಸ್ಯಮಯ ಮತ್ತು ಕಟ್ಟುನಿಟ್ಟಿನ ದೇಶಗಳಲ್ಲಿ ಉತ್ತರ ಕೊರಿಯಾ ಮುಂಚೂಣಿಯಲ್ಲಿದೆ. ಕಿಮ್ ಜೊಂಗ್ ಉನ್ ಅವರ ಸರ್ವಾಧಿಕಾರಿ ಆಡಳಿತದಲ್ಲಿ ಈ ದೇಶವು ತನ್ನದೇ ಆದ ವಿಚಿತ್ರ ಮತ್ತು ಕಠೋರ ಕಾನೂನುಗಳಿಗೆ ಹೆಸರುವಾಸಿಯಾಗಿದೆ.

ಇಲ್ಲಿನ ಜನರಿಗೆ ಹೊರಗಿನ ಪ್ರಪಂಚದ ಜೊತೆ ಸಂಪರ್ಕವಿರುವುದಿಲ್ಲ. ಇಂಟರ್ನೆಟ್ ಸೌಲಭ್ಯ ಸೀಮಿತವಾಗಿದ್ದು, ಸರ್ಕಾರಿ ಪ್ರಸಾರ ಮಾಡುವ ಟಿವಿ ಮತ್ತು ರೇಡಿಯೋ ಚಾನೆಲ್‌ಗಳನ್ನು ಮಾತ್ರ ವೀಕ್ಷಿಸಲು ಅನುಮತಿ ಇದೆ. ವಿದೇಶಿ ಚಲನಚಿತ್ರಗಳನ್ನು ನೋಡುವುದು ಅಥವಾ ಸಂಗೀತ ಕೇಳುವುದು ಇಲ್ಲಿ ದೊಡ್ಡ ಅಪರಾಧ. ಇಂತಹ ಸಣ್ಣ ಕಾರಣಗಳಿಗೂ ಮರಣದಂಡನೆಯಂತಹ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲಿನ ನಾಗರಿಕರು ಸರ್ಕಾರದ ಅನುಮತಿಯಿಲ್ಲದೆ ಒಂದು ಪ್ರಾಂತ್ಯದಿಂದ ಮತ್ತೊಂದು ಪ್ರಾಂತ್ಯಕ್ಕೆ ಅಥವಾ ವಿದೇಶಗಳಿಗೆ ಹೋಗುವಂತಿಲ್ಲ.

ಸುಮಾರು 5 ವರ್ಷಗಳ ಕಾಲ ವಿದೇಶಿ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದ ಈ ದೇಶವು, ಇತ್ತೀಚೆಗೆ ಪ್ರವಾಸಿಗರಿಗಾಗಿ ತನ್ನ ಬಾಗಿಲುಗಳನ್ನು ತೆರೆದಿದ್ದರೂ, ಅಲ್ಲಿಗೆ ಹೋಗುವವರಿಗೆ ಕಠಿಣ ಷರತ್ತುಗಳನ್ನು ವಿಧಿಸಲಾಗಿದೆ. ಒಬ್ಬ ವಿದೇಶಿ ಪ್ರವಾಸಿಗ ಈ ದೇಶಕ್ಕೆ ಭೇಟಿ ನೀಡಿದರೆ ಅವರ ಜೊತೆ ಸದಾ ಇಬ್ಬರು ಸರ್ಕಾರಿ ಮಾರ್ಗದರ್ಶಕರು ಇರುತ್ತಾರೆ. ಅನುಮತಿಯಿಲ್ಲದೆ ಫೋಟೋ ತೆಗೆಯುವುದು ಅಥವಾ ಸ್ಥಳೀಯರೊಂದಿಗೆ ಮಾತನಾಡುವುದು ಇಲ್ಲಿ ಶಿಕ್ಷಾರ್ಹ ಅಪರಾಧ.

ಇಲ್ಲಿ ಚುನಾವಣೆಗಳು ನಡೆದರೂ, ಅದು ಕೇವಲ ಸರ್ವಾಧಿಕಾರದ ಪ್ರದರ್ಶನವಾಗಿರುತ್ತದೆ. 2026ರ ಮಾರ್ಚ್‌ನಲ್ಲಿ ನಡೆದ ಚುನಾವಣೆಯಲ್ಲಿ ಕಿಮ್ ಜೊಂಗ್ ಉನ್ ಅವರ ಪಕ್ಷ ಶೇ. 99.93ರಷ್ಟು ಮತಗಳನ್ನು ಪಡೆದಿರುವುದು ಇದಕ್ಕೆ ಸಾಕ್ಷಿ. ಇಷ್ಟೊಂದು ಕಠೋರವಾಗಿರುವ ದೇಶದಿಂದ 9 ಮಂದಿ ಸದಸ್ಯರ ಕುಟುಂಬವು ಸಾಹಸ ರೀತಿಯಲ್ಲಿ ತಪ್ಪಿಸಿಕೊಂಡ ಘಟನೆಯೊಂದು ಜಾಗತಿಕವಾಗಿ ಸಂಚಲನ ಮೂಡಿಸಿದೆ.

ಕಿಮ್ ಜಾಂಗ್ ಉನ್ ಆಡಳಿತದ ಕಠಿಣ ನಿಯಂತ್ರಣಗಳ ನಡುವೆ ಬದುಕುತ್ತಿದ್ದ ಈ ಕುಟುಂಬವು ಸುಮಾರು 10 ವರ್ಷಗಳ ಕಾಲ ಯೋಜನೆ ರೂಪಿಸಿ ಕೊನೆಗೂ ಸ್ವಾತಂತ್ರ್ಯವನ್ನು ಕಂಡುಕೊಂಡಿದೆ.

Represenative image
ಇರಾನ್ ಯುದ್ಧವೇ ಮುಗಿದಿಲ್ಲ.. ಆಗಲೇ Ballistic Missile ಹಾರಿಸಿದ ಉತ್ತರ ಕೊರಿಯಾ; Japan ಹೈ ಅಲರ್ಟ್!

10 ವರ್ಷಗಳಿಂದ ಪ್ಲ್ಯಾನ್

ಈ ಸಾಹಸದ ಬೀಜ ಬಿತ್ತಿದ್ದು ಕಿಮ್ ಸಹೋದರರ ತಂದೆ. ಸಮುದ್ರ ಮಾರ್ಗದ ಮೂಲಕ ದಕ್ಷಿಣ ಕೊರಿಯಾಕ್ಕೆ ಓಡಿಹೋಗಬೇಕೆಂದು ಅವರು 10 ವರ್ಷಗಳ ಹಿಂದೆಯೇ ಯೋಜಿಸಿದ್ದರು. ಆದರೆ, ಆ ಕನಸು ನನಸಾಗುವ ಮೊದಲೇ ಅವರು ಮೃತಪಟ್ಟರು.

ನಂತರ ಅವರ ಮಕ್ಕಳಾದ ಕಿಮ್ ಇಲ್-ಹ್ಯೋಕ್ ಮತ್ತು ಕಿಮ್ ಯಿ-ಹ್ಯೋಕ್ ಅಪ್ಪನ ಆಸೆಯನ್ನು ಈಡೇರಿಸಲು ನಿರ್ಧರಿಸಿದರು. ಸಮುದ್ರ ಮಾರ್ಗದ ಮೂಲಕ ಪಾರಾಗಲು ಸಮುದ್ರ ತೀರದಲ್ಲಿ ಕೆಲಸ ಮಾಡಿಕೊಂಡು, ಮೀನುಗಾರಿಕೆ ಮತ್ತು ದೋಣಿ ಚಾಲನೆ ಕೌಶಲ್ಯಗಳನ್ನು ಕಲಿತರು. ಗಸ್ತು ತಂತ್ರಗಳನ್ನು ಗಮನಿಸಿ, ಅನುಮಾನ ಮೂಡದಂತೆ ಗಾರ್ಡುಗಳೊಂದಿಗೆ ಸ್ನೇಹ ಬೆಳೆಸಿ, ಅಗತ್ಯವಿದ್ದಲ್ಲಿ ಲಂಚ ನೀಡಿ ತಮ್ಮ ಯೋಜನೆಯನ್ನು ರಹಸ್ಯವಾಗಿ ಮುಂದುವರಿಸಿದರು.

ಅಪಾಯಕಾರಿ ಸಮುದ್ರ ಮಾರ್ಗ ಬಳಕೆ

ಸಾಮಾನ್ಯವಾಗಿ ಚೀನಾ ಮೂಲಕ ಪರಾರಿಯಾಗುವುದು ಸಾಮಾನ್ಯ. ಆದರೆ ಅಲ್ಲಿ ಸಿಕ್ಕಿಬಿದ್ದರೆ ಮರಳಿ ಕಳುಹಿಸುವ ಭೀತಿ ಇತ್ತು. ಆದ್ದರಿಂದ ಈ ಕುಟುಂಬವು ಅತ್ಯಂತ ಅಪಾಯಕಾರಿ ಎಲ್ಲೋ ಸೀ ಸಮುದ್ರ ಮಾರ್ಗವನ್ನು ಆಯ್ಕೆ ಮಾಡಿಕೊಂಡಿತು. ನಾರ್ತರ್ನ್ ಲಿಮಿಟ್ ಲೈನ್ ಬಳಿ ಗಸ್ತು ಕಠಿಣವಾಗಿರುವುದರಿಂದ ಇದು ದೊಡ್ಡ ಸವಾಲಾಗೇ ಪರಿಣಮಿಸಿತ್ತು.

2 ಗಂಟೆಗಳಲ್ಲಿ ಗ್ರೇಟ್ ಎಸ್ಕೇಪ್

ಮೇ 6, 2023 ರಂದು ಬಿರುಗಾಳಿ ಮತ್ತು ಮಳೆಯ ಮುನ್ಸೂಚನೆ ಸಿಕ್ಕಾಗ ಕುಟುಂಬ ಎಸ್ಕೇಪ್ ಆಗುವ ನಿರ್ಧಾರ ಕೈಗೊಂಡಿತು. ಮಳೆಯ ಕಾರಣ ರಾಡಾರ್‌ಗಳಲ್ಲಿ ದೋಣಿ ಪತ್ತೆಯಾಗುವುದು ಕಷ್ಟ ಎಂಬುದು ಅವರ ಲೆಕ್ಕಾಚಾರವಾಗಿತ್ತು.

ಕಿಮ್ ಇಲ್-ಹ್ಯೋಕ್ ಅವರ ಐದು ತಿಂಗಳ ಗರ್ಭಿಣಿ ಪತ್ನಿ ಮತ್ತು ಇಬ್ಬರು ಚಿಕ್ಕ ಮಕ್ಕಳು ಮೊದಲು ನೆಲಬಾಂಬ್ ಇರುವ ಅಪಾಯಕಾರಿ ಪ್ರದೇಶವನ್ನು ಕಾಲ್ನಡಿಗೆಯಲ್ಲೇ ದಾಟಬೇಕಾಯಿತು. ಸಿಕ್ಕಿಬೀಳುವ ಭೀತಿಯಿಂದ 4 ಮತ್ತು 6 ವರ್ಷದ ಇಬ್ಬರು ಕಂದಮ್ಮಗಳನ್ನು ಗೋಣಿಚೀಲದಲ್ಲಿ ಅಡಗಿಸಿ ಇಡಲಾಗಿತ್ತು. ಮಕ್ಕಳು ಕಿಂಚಿತ್ತೂ ಶಬ್ದ ಮಾಡದಂತೆ ಸೂಚಿಸಲಾಗಿತ್ತು. ಸುಮಾರು 2 ಗಂಟೆಗಳ ಜೀವ ಪಣಕ್ಕಿಟ್ಟು ಪ್ರಯಾಣಿಸಿದ ಬಳಿಕ ಅವರು ಉತ್ತರ ಕೊರಿಯಾದ ಗಡಿಯನ್ನು ದಾಟಲು ಯಶಸ್ವಿಯಾದರು.

Represenative image
ಕಿಮ್ ಪಟ್ಟಕ್ಕಾಗಿ ಪುತ್ರಿ, ಸಹೋದರಿ ನಡುವೆ ಜಟಾಪಟಿ: ಉತ್ತರ ಕೊರಿಯಾ ಸರ್ವಾಧಿಕಾರಕ್ಕಾಗಿ ಅತ್ತೆ-ಸೊಸೆ ಫೈಟ್?

ದಕ್ಷಿಣ ಕೊರಿಯಾ ಸೇರಿದ ಕುಟುಂಬ

ಗಡಿಯನ್ನು ದಾಟಿದ ನಂತರ ಅವರು ದಕ್ಷಿಣ ಕೊರಿಯಾ ವ್ಯಾಪ್ತಿಯ ಯೆನ್‌ಪ್ಯೋಂಗ್ ದ್ವೀಪದ ಬಳಿ ತಲುಪಿದರು. ಅಲ್ಲಿನ ನೌಕಾಪಡೆ ಅವರನ್ನು ಗುರುತಿಸಿ ರಕ್ಷಣೆ ನೀಡಿತು. ಬಳಿಕ ಅವರ ಗುರುತನ್ನು ದೃಢೀಕರಿಸಿ ಆಶ್ರಯ ನೀಡಿತು. ಪ್ರಸ್ತುತ ಕುಟುಂಬವು ಸುರಕ್ಷಿತವಾಗಿದೆ.

ಸ್ವಾತಂತ್ರ್ಯ ಸಿಕ್ಕರೂ ಬೆನ್ನು ಬಿಡದ ಸಂಕಷ್ಟ

ಈ ಕುಟುಂಬಕ್ಕೆ ದಕ್ಷಿಣ ಕೊರಿಯಾದ ಯಿಯೋನ್‌ಪಯಾಂಗ್ ದ್ವೀಪದ ದೀಪಗಳು ಕಂಡಾಗ ಅವರ ಸಂಕಷ್ಟ ಕೊನೆಗೊಂಡಿತ್ತು. ದಕ್ಷಿಣ ಕೊರಿಯಾದ ನೌಕಾಪಡೆ ಅವರನ್ನು ರಕ್ಷಿಸಿತ್ತು. ಸಿಯೋಲ್ ತಲುಪಿದ ನಾಲ್ಕು ತಿಂಗಳ ನಂತರ ಕಿಮ್ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಕುಟುಂಬವು ಹೊಸ ಜೀವನದ ಸಂಭ್ರಮದಲ್ಲಿತ್ತು. ಆದರೆ, ಈ ಸಂತಸ ಬಹಳ ಕಾಲ ಉಳಿಯಲಿಲ್ಲ.

ಕುಟುಂಬದ ಪಾರಾಗುವಿಕೆಗೆ ಹಗಲಿರುಳು ಶ್ರಮಿಸಿದ್ದ ಕಿರಿಯ ಸಹೋದರ ಕಿಮ್ ಯಿ-ಹ್ಯೋಕ್, ದಕ್ಷಿಣ ಕೊರಿಯಾ ತಲುಪಿದ ಕೇವಲ 19 ತಿಂಗಳ ನಂತರ ಸ್ಕೂಬಾ ಡೈವಿಂಗ್ ಅಪಘಾತದಲ್ಲಿ ಮೃತಪಟ್ಟರು. ಕಷ್ಟಪಟ್ಟು ಪಡೆದ ಸ್ವಾತಂತ್ರ್ಯವನ್ನು ಅನುಭವಿಸುವ ಮೊದಲೇ ಅವರು ವಿಧಿವಶರಾದರು.

ಉತ್ತರ ಕೊರಿಯಾದಿಂದ ಈವರೆಗೂ ಪರಾರಿಯಾದವರೆಷ್ಟು?

ದಕ್ಷಿಣ ಕೊರಿಯಾ ಸರ್ಕಾರದ ಪ್ರಕಾರ, ಇಂದಿನವರೆಗೆ ಸುಮಾರು 35,000 ಜನರು ಉತ್ತರ ಕೊರಿಯಾದಿಂದ ಪರಾರಿಯಾಗಿದ್ದಾರೆಂದು ತಿಳಿಸಿದೆ. ಇವರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿರುವುದು ಗಮನಾರ್ಹ. ಕಠಿಣ ನಿಯಂತ್ರಣಗಳ ಕಾರಣ ಇಂತಹ ಘಟನೆಗಳು ನಿರಂತರವಾಗಿ ವರದಿಯಾಗುತ್ತಿವೆ ಎನ್ನಲಾಗಿದೆ.

ಸ್ವಾತಂತ್ರ್ಯಕ್ಕಾಗಿ 10 ವರ್ಷಗಳ ಕಾಲ ಹೋರಾಟ ನಡೆಸಿ, ಕೇವಲ 2 ಗಂಟೆಗಳಲ್ಲಿ ಜೀವದ ಹಂಗಿಲ್ಲದೆ ಪರಾರಿಯಾದ ಈ ಕುಟುಂಬದ ಕಥೆ ಹಾಲಿವುಡ್ ಸಿನಿಮಾಗಳಿಗಿಂತ ಕಡಿಮೆಯಿಲ್ಲ. ಆದರೆ, ಈ ಘಟನೆ ಉತ್ತರ ಕೊರಿಯಾದಲ್ಲಿ ಮಾನವ ಹಕ್ಕುಗಳ ಸ್ಥಿತಿ ಬಗ್ಗೆ ಮತ್ತೊಮ್ಮೆ ಜಾಗತಿಕ ಚರ್ಚೆ ಶುರುವಾಗುವಂತೆ ಮಾಡಿದೆ.

ಆ ದೇಶದಲ್ಲಿ ಜನರು ಎದುರಿಸುತ್ತಿರುವ ನಿರ್ಬಂಧಗಳು, ಸ್ವಾತಂತ್ರ್ಯದ ಕೊರತೆ ಹಾಗೂ ಬದುಕಿನ ಕಠಿಣತೆ ಇಂತಹ ಪಲಾಯನಗಳಿಗೆ ಕಾರಣವಾಗುತ್ತಿದ್ದು, ಸ್ವಾತಂತ್ರ್ಯ ಮತ್ತು ಸುರಕ್ಷಿತ ಜೀವನಕ್ಕಾಗಿ ಜನರು ಎಷ್ಟು ದೊಡ್ಡ ಅಪಾಯವನ್ನಾದರೂ ಸ್ವೀಕರಿಸಲು ಸಿದ್ಧರಾಗಿರುವುದನ್ನು ಈ ಘಟನೆ ಸ್ಪಷ್ಟವಾಗಿ ತೋರಿಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com