Los Angeles ಭೇಟಿಗೂ ಮುನ್ನ ಟ್ರಂಪ್‌ಗೆ ಆಘಾತ; ಗಾಲ್ಫ್‌ ಮೈದಾನದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿ ಬಂಧನ, ಹತ್ಯೆಗೆ ಸಂಚು ಶಂಕೆ..!

ಆತ ಗಾಲ್ಫ್‌ ಮೈದಾನದ ವಿವಿಧ ಭಾಗಗಳಲ್ಲಿ ಸಂಚರಿಸುತ್ತಾ ಛಾಯಾಚಿತ್ರಗಳು ಮತ್ತು ವಿಡಿಯೊಗಳನ್ನು ಸೆರೆಹಿಡಿಯುತ್ತಿದ್ದನು. ಅಲ್ಲದೆ, ಭದ್ರತಾ ವ್ಯವಸ್ಥೆ ಮತ್ತು ಭದ್ರತಾ ಯೋಜನೆಗಳ ಬಗ್ಗೆ ನಿಗಾ ವಹಿಸುತ್ತಿರುವಂತೆ ಕಂಡುಬಂದಿತ್ತು.
Donald Trump
ಡೊನಾಲ್ಡ್ ಟ್ರಂಪ್
Updated on

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಲಾಸ್ ಏಂಜಲೀಸ್‌ ಪ್ರವಾಸಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವಾಗಲೇ, ಅವರ ಗಾಲ್ಫ್‌ ಮೈದಾನದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬನನ್ನು ಭದ್ರತಾ ಅಧಿಕಾರಿಗಳು ಬಂಧಿಸಿದ್ದು, ಈ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದೆ.

ಈ ಘಟನೆ ಟ್ರಂಪ್‌ ವಿರುದ್ಧ ಮತ್ತೊಂದು ಹತ್ಯೆಯ ಸಂಚು ಇರಬಹುದೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದ್ದು, ಈ ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

ಸ್ಥಳೀಯ ಶೆರಿಫ್‌ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ, ಕ್ಯಾಲಿಫೋರ್ನಿಯಾದ ಡೌನಿ ನಿವಾಸಿಯಾಗಿರುವ 38 ವರ್ಷದ ವ್ಯಕ್ತಿಯನ್ನು ಗಾಲ್ಫ್‌ ಮೈದಾನದ ಒಳಭಾಗದಲ್ಲಿ ಸರಳ ಉಡುಪಿನ ಫೆಡರಲ್‌ ಭದ್ರತಾ ಅಧಿಕಾರಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವೇಳೆ ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.

ಪ್ರಾಥಮಿಕ ತನಿಖೆಯಲ್ಲಿ, ಆತ ಗಾಲ್ಫ್‌ ಮೈದಾನದ ವಿವಿಧ ಭಾಗಗಳಲ್ಲಿ ಸಂಚರಿಸುತ್ತಾ ಛಾಯಾಚಿತ್ರಗಳು ಮತ್ತು ವಿಡಿಯೊಗಳನ್ನು ಸೆರೆಹಿಡಿಯುತ್ತಿದ್ದನು. ಅಲ್ಲದೆ, ಭದ್ರತಾ ವ್ಯವಸ್ಥೆ ಮತ್ತು ಭದ್ರತಾ ಯೋಜನೆಗಳ ಬಗ್ಗೆ ನಿಗಾ ವಹಿಸುತ್ತಿರುವಂತೆ ಕಂಡುಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವನ ಅನುಮಾನಾಸ್ಪದ ಚಟುವಟಿಕೆ ಗಮನಕ್ಕೆ ಬಂದ ತಕ್ಷಣ ಭದ್ರತಾ ಅಧಿಕಾರಿಗಳು ಮಧ್ಯಪ್ರವೇಶಿಸಿ ಆತನನ್ನು ಬಂಧಿಸಿದ್ದಾರೆ. ಟ್ರಂಪ್‌ ಮಂಗಳವಾರ ಗಾಲ್ಫ್‌ ಮೈದಾನಕ್ಕೆ ಭೇಟಿ ನೀಡುವ ಮುನ್ನವೇ ಈ ಕ್ರಮ ಕೈಗೊಳ್ಳಲಾಗಿದೆ.

Donald Trump
ಟ್ರಂಪ್ ಬೆದರಿಕೆಗೆ ಇರಾನ್ ತಿರುಗೇಟು: ಶಾಂತಿ ಮಾತುಕತೆ ಮಧ್ಯೆಯೇ ವಾಕ್‌ಔಟ್‌; ನಮ್ಮ ತಾಳ್ಮೆ ಪರೀಕ್ಷಿಸಬೇಡಿ- ಅಮೆರಿಕಕ್ಕೆ ಕಠಿಣ ಎಚ್ಚರಿಕೆ

ಆದರೆ, ಬಂಧಿತ ವ್ಯಕ್ತಿಯ ಗುರುತನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ಆತನ ಗುರಿ ಟ್ರಂಪ್‌ ಅವರೇ ಆಗಿದ್ದರೇ ಅಥವಾ ಬೇರೆ ಉದ್ದೇಶ ಹೊಂದಿದ್ದನೇ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಲಾಗಿಲ್ಲ. ಗಾಲ್ಫ್‌ ಮೈದಾನದಲ್ಲಿ ಆತ ಸೆರೆಹಿಡಿದಿದ್ದ ಚಿತ್ರಗಳು, ವಿಡಿಯೊಗಳು ಮತ್ತು ಇತರ ಚಟುವಟಿಕೆಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತನ ಬಳಿ ಪತ್ತೆಯಾದ ಶಸ್ತ್ರಾಸ್ತ್ರದ ವಿವರಗಳನ್ನೂ ಇನ್ನೂ ಬಹಿರಂಗಪಡಿಸಲಾಗಿಲ್ಲ. ಆತನ ವಿರುದ್ಧ ಯಾವ ಆರೋಪಗಳನ್ನು ಹೊರಿಸಲಾಗುವುದು ಎಂಬುದರ ಬಗ್ಗೆಯೂ ಅಧಿಕಾರಿಗಳು ಮಾಹಿತಿ ನೀಡಿಲ್ಲ.

ಇತ್ತೀಚಿನ ತಿಂಗಳುಗಳಲ್ಲಿ ಟ್ರಂಪ್‌ ವಿರುದ್ಧ ಹಲವು ಬೆದರಿಕೆಗಳು ಹಾಗೂ ಹತ್ಯೆ ಯತ್ನಗಳ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಅವರ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಪ್ರವಾಸಗಳ ವೇಳೆ ಅಮೆರಿಕದ ಕಾನೂನು ಜಾರಿ ಸಂಸ್ಥೆಗಳು ಅತ್ಯಂತ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಅನುಸರಿಸುತ್ತಿವೆ.

ಈ ಘಟನೆ ಕೂಡ ಟ್ರಂಪ್‌ ಅವರ ಭದ್ರತೆ ಕುರಿತ ಆತಂಕವನ್ನು ಮತ್ತಷ್ಟು ಹೆಚ್ಚಿಸಿದ್ದು, ಪ್ರಕರಣದ ಕುರಿತು ಫೆಡರಲ್‌ ಅಧಿಕಾರಿಗಳು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com