

ಬೊಗೋಟಾ: ದಕ್ಷಿಣ ಅಮೆರಿಕಾದ ಕೊಲಂಬಿಯಾದಲ್ಲಿ ಸೋಮವಾರ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಮತ್ತು ಡಜನ್ಗಟ್ಟಲೆ ಕಟ್ಟಡಗಳು ಕುಸಿದಿವೆ. ಅವಶೇಷಗಳ ಅಡಿಯಲ್ಲಿ ಸಿಲುಕಿ, ಹಲವರು ಗಾಯಗೊಂಡಿದ್ದಾರೆ.
ಕೊಲಂಬಿಯಾದ ರಾಜಧಾನಿ ಬೊಗೋಟಾ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಇಂದು ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು, ಜನರನ್ನು ಬೆಚ್ಚಿಬೀಳಿಸಿದೆ.
ಬೊಗೋಟಾದ ಪಶ್ಚಿಮಕ್ಕೆ ಸುಮಾರು 250 ಮೈಲು(400 ಕಿಲೋಮೀಟರ್) ದೂರದಲ್ಲಿರುವ ಚೋಕೊ ಪ್ರದೇಶದಲ್ಲಿ ಸುಮಾರು 4,800 ಜನರಿರುವ ಸ್ಯಾನ್ ಜೋಸ್ ಡೆಲ್ ಪಾಲ್ಮರ್‌ನಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ ಮತ್ತು ಕೊಲಂಬಿಯಾದ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ ವರದಿ ಮಾಡಿದೆ.
ಭೂಕಂಪದ ಕೇಂದ್ರಬಿಂದು 66 ಮೈಲುಗಳ(107 ಕಿಲೋಮೀಟರ್) ಆಳದಲ್ಲಿ ಪತ್ತೆಯಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ ತಿಳಿಸಿದೆ.
ನೆರೆಯ ಈಕ್ವೆಡಾರ್‌ನಲ್ಲಿಯೂ ಭೂಕಂಪದ ಅನುಭವವಾಗಿದ್ದು, ಪಶ್ಚಿಮ ನಗರವಾದ ಪೆರೇರಾದಲ್ಲಿ ಈ ಭೂಕಂಪದಲ್ಲಿ ಕನಿಷ್ಠ 18 ಜನ ಸಾವನ್ನಪ್ಪಿದ್ದಾರೆ ಎಂದು ಮೇಯರ್ ಮೌರಿಸಿಯೊ ಸಲಾಜರ್ ಅವರು ಹೇಳಿದ್ದಾರೆ.
ಭೂಕಂಪದಿಂದಾಗಿ ಕನಿಷ್ಠ 20 ಕಟ್ಟಡಗಳು ಕುಸಿದಿವೆ. ನೆರೆಯ ಚೋಕೊ ಪ್ರಾಂತ್ಯದಲ್ಲಿ ಭೂಕಂಪದ ನಂತರ "ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ" ಎಂದು ಸಲಾಜರ್ ಅವರು, ಕ್ಯಾರಕೋಲ್ ರೇಡಿಯೊಗೆ ತಿಳಿಸಿದ್ದಾರೆ.
ಭೂಕಂಪ ಸಂಭವಿಸುತ್ತಿದ್ದಂತೆ ಜನರು ಮನೆ, ಕಟ್ಟಡಗಳಿಂದ ಬೀದಿಗೆ ಓಡಿಬಂದಿದ್ದಾರೆ. ಕೆಲವರು ಮಾಲ್ ಗಳಲ್ಲಿ ಸಿಲುಕಿದ್ದಾರೆ. ತಮ್ಮ ಕಣ್ಣೆದುರೇ ತಮ್ಮ ಮನೆ, ಅಪಾರ್ಟ್ ಮೆಂಟ್ ಗಳು ಉರುಳುತ್ತಿರುವುದನ್ನು ಕಂಡು ಬಹಳಷ್ಟು ಮಂದಿ ಕಣ್ಣೀರಾಗಿದ್ದಾರೆ. ಸ್ಯಾನ್ ಜೋಸ್ ಡೆಲ್ ಪಾಲ್ಮಾರ್‌ನಿಂದ 120 ಕಿ.ಮೀ ದೂರದಲ್ಲಿರುವ ಮನಿಜಾಲೆಸ್ ಸೇರಿದಂತೆ ವಿವಿಧ ನಗರಗಳಲ್ಲಿ ಕಟ್ಟಡಗಳು ಬಿರುಕು ಬಿಟ್ಟಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.