ಕ್ಷಿಪಣಿ ದಾಳಿ ಆರೋಪ: Iranಗೆ UAE ಶಾಕ್, ಎಲ್ಲಾ ವ್ಯಾಪಾರ-ವಾಣಿಜ್ಯ ವಹಿವಾಟು ಸಂಪೂರ್ಣ ಸ್ಥಗಿತ..!

ದೇಶದ ಭದ್ರತೆ ಅಥವಾ ಪ್ರಾದೇಶಿಕ ಸಮುದ್ರ ಸಂಚಾರಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ದೃಢವಾಗಿ ಎದುರಿಸುವುದಾಗಿ ಸಚಿವಾಲಯ ಎಚ್ಚರಿಸಿದೆ.ಆದರೆ, ಇರಾನ್ ವಿದೇಶಾಂಗ ಸಚಿವಾಲಯ ಈ ಆರೋಪವನ್ನು “ಆಧಾರರಹಿತ” ಎಂದು ತಳ್ಳಿಹಾಕಿದೆ.
File photo
ಸಂಗ್ರಹ ಚಿತ್ರ
Updated on

ಅಬುಧಾಬಿ: ಇರಾನ್‌ನಿಂದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತನ್ನತ್ತ ಹಾರಿಸಲಾಗಿದೆ ಎಂದು ಆರೋಪಿಸಿರುವ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಇರಾನ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಆದರೆ, ಯುಎಇ ಮಾಡಿರುವ ಆರೋಪವನ್ನು ಟೆಹ್ರಾನ್ ಸಂಪೂರ್ಣವಾಗಿ ತಳ್ಳಿಹಾಕಿದೆ.

ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ಧಕ್ಕೆ ತರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಯುಎಇ ವಿದೇಶಾಂಗ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಮುಂದಿನ ಆದೇಶದವರೆಗೆ ಇರಾನ್‌ನೊಂದಿಗೆ ನಡೆಯುವ ಎಲ್ಲ ವ್ಯಾಪಾರ, ವಾಣಿಜ್ಯ ವಿನಿಮಯ ಹಾಗೂ ಹಣಕಾಸು ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ಇದಕ್ಕೂ ಮುನ್ನ ಯುಎಇ ರಕ್ಷಣಾ ಸಚಿವಾಲಯ, ಇರಾನ್‌ನಿಂದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಉಡಾವಣೆಯಾಗಿರುವುದನ್ನು ತನ್ನ ವಾಯು ರಕ್ಷಣಾ ವ್ಯವಸ್ಥೆ ಪತ್ತೆಹಚ್ಚಿದೆ ಎಂದು ತಿಳಿಸಿತ್ತು. ಈ ಪೈಕಿ ಒಂದು ಕ್ಷಿಪಣಿ ಯುಎಇಯ ಪ್ರಾದೇಶಿಕ ಜಲಸೀಮೆಯ ಹೊರಗೆ ಬಿದ್ದರೆ, ಮತ್ತೊಂದು ಕ್ಷಿಪಣಿ ದೇಶದ ಪ್ರಾದೇಶಿಕ ಜಲಸೀಮೆಯೊಳಗೆ ಬಿದ್ದಿದೆ ಎಂದು ಹೇಳಲಾಗಿದೆ.

ನಂತರದ ಹೇಳಿಕೆಯಲ್ಲಿ ಯುಎಇ ರಕ್ಷಣಾ ಸಚಿವಾಲಯ, ಕ್ಷಿಪಣಿಗಳು ಸಮುದ್ರ ಸಂಚಾರವನ್ನು ಗುರಿಯಾಗಿಸಿಕೊಂಡು ಹಾರಿಸಲಾಗಿತ್ತು ಎಂದು ಆರೋಪಿಸಿದೆ.

ದೇಶದ ಭದ್ರತೆ ಅಥವಾ ಪ್ರಾದೇಶಿಕ ಸಮುದ್ರ ಸಂಚಾರಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ದೃಢವಾಗಿ ಎದುರಿಸುವುದಾಗಿ ಸಚಿವಾಲಯ ಎಚ್ಚರಿಸಿದೆ.ಆದರೆ, ಇರಾನ್ ವಿದೇಶಾಂಗ ಸಚಿವಾಲಯ ಈ ಆರೋಪವನ್ನು “ಆಧಾರರಹಿತ” ಎಂದು ತಳ್ಳಿಹಾಕಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯಿ, ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧದ ನಡುವೆ ಇದು ‘ಫಾಲ್ಸ್ ಫ್ಲ್ಯಾಗ್ ಕಾರ್ಯಾಚರಣೆ’ ಆಗಿರಬಹುದು ಎಂದು ಹೇಳಿದ್ದಾರೆ.

ಟೆಹ್ರಾನ್ ವಿರುದ್ಧದ ಇಂತಹ ಆಧಾರರಹಿತ ಆರೋಪಗಳು ಉತ್ತಮ ನೆರೆಹೊರೆಯ ಸಂಬಂಧದ ತತ್ವಕ್ಕೆ ವಿರುದ್ಧವಾಗಿವೆ ಎಂದು ಬಘಾಯಿ ಹೇಳಿದ್ದಾರೆ.

File photo
ಇರಾನ್ ಒಪ್ಪಂದ ವಿಫಲ: ಹಾರ್ಮುಜ್ ಜಲಸಂಧಿಯನ್ನು 'ಅಮೆರಿಕದ ಹೊಸ ಪ್ರದೇಶ'ವನ್ನಾಗಿಸಲು ಟ್ರಂಪ್ ಯೋಜನೆ

ಈ ಪರಿಸ್ಥಿತಿಯನ್ನು ಪ್ರಾಮಾಣಿಕವಾಗಿ ವಿಶ್ಲೇಷಿಸುವಾಗ ಅಮೆರಿಕ ಮತ್ತು ಇಸ್ರೇಲ್‌ನ “ದುರುದ್ದೇಶಪೂರಿತ ಕ್ರಮಗಳನ್ನೂ” ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಾಗಿ ನೀಡಲಾಗಿದ್ದ 60 ದಿನಗಳ ಗಡುವು ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯಗೊಂಡ ಒಂದು ದಿನದ ಬಳಿಕ ಈ ಕ್ಷಿಪಣಿ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಯುದ್ಧದ ಆರಂಭಿಕ ಆರು ವಾರಗಳಲ್ಲಿ ಇರಾನ್ ಇತರ ಕೊಲ್ಲಿ ರಾಷ್ಟ್ರಗಳಿಗಿಂತ ಯುಎಇಯನ್ನು ಹೆಚ್ಚು ಗುರಿಯಾಗಿಸಿಕೊಂಡಿತ್ತು.

ಅಮೆರಿಕದ ಆಸ್ತಿಗಳನ್ನು ಗುರಿಯಾಗಿಸಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದ ಇರಾನ್, 530ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಹಲವು ಕ್ರೂಸ್ ಕ್ಷಿಪಣಿಗಳು ಹಾಗೂ 2,200ಕ್ಕೂ ಅಧಿಕ ಡ್ರೋನ್‌ಗಳನ್ನು ಹಾರಿಸಿತ್ತು ಎನ್ನಲಾಗಿದೆ.

ಮೇ ತಿಂಗಳ ಬಳಿಕ ಯುಎಇಯನ್ನು ಗುರಿಯಾಗಿಸಿಕೊಂಡ ಮೊದಲ ದಾಳಿ ಇದಾಗಿದೆ. ಇದಕ್ಕೂ ಕೆಲ ದಿನಗಳ ಹಿಂದೆ ಹಾರ್ಮುಜ್ ಜಲಸಂಧಿಯಲ್ಲಿ ತನ್ನ ಸರ್ಕಾರಿ ಸ್ವಾಮ್ಯದ ADNOC ಕಂಪನಿಗೆ ಸೇರಿದ ಎರಡು ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದೆ ಎಂದು ಅಬುಧಾಬಿ ಆರೋಪಿಸಿತ್ತು. ಆದರೆ, ಈ ದಾಳಿಯ ಹೊಣೆಯನ್ನು ಇರಾನ್ ಹೊತ್ತುಕೊಂಡಿಲ್ಲ.

ಇರಾನ್‌ಗೆ ದೊಡ್ಡ ಹೊಡೆತ ನೀಡಲಿದೆಯೇ ವ್ಯಾಪಾರ ನಿರ್ಬಂಧ?

ಇರಾನ್‌ನ ಬಂದರುಗಳ ಮೇಲೆ ಅಮೆರಿಕ ನೌಕಾ ದಿಗ್ಬಂಧನ ಮುಂದುವರಿಸಿರುವ ಸಂದರ್ಭದಲ್ಲಿ ಯುಎಇಯ ಈ ನಿರ್ಧಾರ ಹೊರಬಿದ್ದಿದೆ. ಇರಾನ್ ಮೇಲೆ ಸೇನಾ ಒತ್ತಡಕ್ಕಿಂತ ಆರ್ಥಿಕ ಒತ್ತಡ ಹೆಚ್ಚಿಸುವತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಗಮನ ಹರಿಸುತ್ತಿರುವ ಸೂಚನೆಗಳೂ ಇವೆ.

ನಿವೃತ್ತ ಅಮೆರಿಕ ಸೇನಾಧಿಕಾರಿ ಹಾಗೂ ಮಾಜಿ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ಕಿಮಿಟ್ ಅವರು ಮಾತನಾಡಿ, ಯುಎಇ ವಿಧಿಸಿರುವ ವ್ಯಾಪಾರ ನಿರ್ಬಂಧವು ಅಮೆರಿಕದ ನಿರ್ಬಂಧಗಳಿಗಿಂತಲೂ ಇರಾನ್‌ಗೆ ಹೆಚ್ಚಿನ ಹೊಡೆತ ನೀಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ದುಬೈ ಹಲವು ವರ್ಷಗಳಿಂದ ಇರಾನ್‌ನ ಪ್ರಮುಖ ವ್ಯಾಪಾರ ಪಾಲುದಾರನಾಗಿ ಬೆಳೆದಿದ್ದು, ಇರಾನ್ ಆಮದು ಮಾಡಿಕೊಳ್ಳುವ ಸರಕುಗಳ ಪೈಕಿ ಸುಮಾರು ಮೂರನೇ ಒಂದು ಭಾಗ ದುಬೈ ಮೂಲಕ ಬರುತ್ತದೆ ಎಂದು ಅವರು ಹೇಳಿದ್ದಾರೆ.

ಇರಾನ್‌ನ ಹಣಕಾಸು ವಹಿವಾಟುಗಳು ಮತ್ತು ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ತಪ್ಪಿಸುವ ಮಾರ್ಗಗಳಲ್ಲಿಯೂ ದುಬೈ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದ್ದಾರೆ.

ಇತರ ಕೊಲ್ಲಿ ರಾಷ್ಟ್ರಗಳು ತಕ್ಷಣವೇ ಯುಎಇಯ ಹಾದಿ ಹಿಡಿಯುವ ಸಾಧ್ಯತೆ ಕಡಿಮೆ. ಇರಾನ್‌ನ ಮುಂದಿನ ನಡೆಗಳನ್ನು ಗಮನಿಸಿ ಅವು ‘ಕಾದು ನೋಡುವ’ ತಂತ್ರ ಅನುಸರಿಸಬಹುದು ಎಂದು ಹೇಳಿದ್ದಾರೆ.

ಆದರೆ, ಯುಎಇಯ ಈ ಕ್ರಮವನ್ನು ಇರಾನ್ ಅತ್ಯಂತ ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದ್ದು, ಬಹುತೇಕ ಯುದ್ಧದ ಕ್ರಮಕ್ಕೆ ಸಮಾನವೆಂದು ಟೆಹ್ರಾನ್ ಅರ್ಥೈಸಿಕೊಳ್ಳಬಹುದು ಎಂದು ಕಿಮಿಟ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com