Yemen, Somalia ಕರಾವಳಿಯಲ್ಲಿ ಕಡಲ್ಗಳ್ಳರ ಅಟ್ಟಹಾಸ: 22 ಮಂದಿ ಭಾರತೀಯರಿದ್ದ 2 ಹಡಗುಗಳ ಅಪಹರಣ..!

ಯೆಮೆನ್‌ನ ಅಲ್ ಮುಕಲ್ಲಾ ನಗರದ ಪೂರ್ವಕ್ಕೆ 136 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದ್ದಾಗ ಹಡಗು ಅಪಾಯದ ಸಂದೇಶ ರವಾನಿಸಿತ್ತು ಎಂದು ಸಾಗಣೆ ಹಡಗುಗಳ ಮೇಲ್ವಿಚಾರಣಾ ಸಂಸ್ಥೆ ವ್ಯಾನ್‌ಗಾರ್ಡ್ ತಿಳಿಸಿದೆ.
File photo
ಸಂಗ್ರಹ ಚಿತ್ರ
Updated on

ಯೆಮೆನ್ ಮತ್ತು ಸೊಮಾಲಿಯಾ ಕರಾವಳಿ ಸಮೀಪ ನಡೆದ ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 22 ಭಾರತೀಯ ಪ್ರಜೆಗಳಿದ್ದ ಎರಡು ವಾಣಿಜ್ಯ ಹಡಗುಗಳನ್ನು ಅಪಹರಿಸಲಾಗಿದೆ ಎಂದು ತಿಳಿದುಬಂದಿದೆ.

ಸೀಮುಲ್ (Seamull) ಟ್ಯಾಂಕರ್‌, ಸಿಬು 1 (SIBU 1) ಎಂದು ಕರೆಯಲ್ಪಡುವ ಈ ತೈಲ ಸಾಗಣೆ ಹಡಗಿನಲ್ಲಿ 20 ಮಂದಿ ಸಿಬ್ಬಂದಿ ಇದ್ದು, ಅವರಲ್ಲಿ 16 ಮಂದಿ ಭಾರತೀಯರಾಗಿದ್ದಾರೆ.

ಯೆಮೆನ್‌ನ ಅಲ್ ಮುಕಲ್ಲಾ ನಗರದ ಪೂರ್ವಕ್ಕೆ 136 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದ್ದಾಗ ಹಡಗು ಅಪಾಯದ ಸಂದೇಶ ರವಾನಿಸಿತ್ತು ಎಂದು ಸಾಗಣೆ ಹಡಗುಗಳ ಮೇಲ್ವಿಚಾರಣಾ ಸಂಸ್ಥೆ ವ್ಯಾನ್‌ಗಾರ್ಡ್ ತಿಳಿಸಿದೆ.

ಆರು ಮಂದಿ ಸಶಸ್ತ್ರ ವ್ಯಕ್ತಿಗಳು ಹಡಗನ್ನು ಹತ್ತಿ ವಶಕ್ಕೆ ಪಡೆದಿದ್ದು, ಇದೀಗ ಹಡಗಿನ ನಿಯಂತ್ರಣ ಅವರ ಕೈಯಲ್ಲಿದೆ. ಅವರು ಹಡಗನ್ನು ಸೊಮಾಲಿಯಾ ಕಡೆಗೆ ತಿರುಗಿಸುತ್ತಿದ್ದಾರೆ,” ಎಂದು ಯುರೋಪಿಯನ್ ಒಕ್ಕೂಟದ ಮಾರಿಟೈಮ್ ಸೆಕ್ಯುರಿಟಿ ಸೆಂಟರ್ ಇಂಡಿಯನ್ ಓಷನ್ (MSCIO) ತಿಳಿಸಿದೆ.

ಹಡಗಿನಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ, ಹಡಗಿನ ಚಲನವಲನಗಳ ಮೇಲೆ ಭದ್ರತಾ ಸಂಸ್ಥೆಗಳು ನಿರಂತರ ನಿಗಾ ಇರಿಸಿವೆ.

ಸೀಮುಲ್ ಟ್ಯಾಂಕರ್‌ಗೆ ಕಳೆದ ಡಿಸೆಂಬರ್‌ನಲ್ಲಿ ಅಮೆರಿಕ ನಿರ್ಬಂಧ ವಿಧಿಸಿತ್ತು. ಇರಾನ್‌ನ ತೈಲವನ್ನು ವಂಚನೆ ಸಾಗಣೆ ವಿಧಾನಗಳ ಮೂಲಕ ರಫ್ತು ಮಾಡುತ್ತಿದ್ದ "shadow fleet"ಯ ಭಾಗವಾಗಿದ್ದ ಹಡಗುಗಳ ಪೈಕಿ ಇದೂ ಒಂದು ಎಂದು ಅಮೆರಿಕ ಆರೋಪಿಸಿತ್ತು.

ಯುಎಇ ಮೂಲದ ಖತ್ರತ್ ಅಲ್‌ನಾದಾ ಅಲ್‌ಮಾಸಿ ಶಿಪ್ ಮ್ಯಾನೇಜ್‌ಮೆಂಟ್ ನಿರ್ವಹಿಸುತ್ತಿದ್ದ ನಾಲ್ಕು ಹಡಗುಗಳ ಪೈಕಿ ಸೀಮುಲ್ ಕೂಡ ಒಂದಾಗಿದೆ.

File photo
ಭಯೋತ್ಪಾದಕರ ರಕ್ಷಣೆಗೆ ವಿಶ್ವಸಂಸ್ಥೆ ವೇದಿಕೆ ಬಳಸದಿರಿ: ಪಾಕ್-ಚೀನಾಗೆ ಭಾರತದ ಖಡಕ್‌ ಎಚ್ಚರಿಕೆ

ಈ ಹಡಗುಗಳು ಹಲವು ಸಂದರ್ಭಗಳಲ್ಲಿ ನಾಫ್ತಾ ಮತ್ತು ಗ್ಯಾಸಾಯಿಲ್ ಸೇರಿದಂತೆ ಇರಾನ್‌ನ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸಿದ್ದವು. ಅಲ್ಲದೆ, ಯೆಮೆನ್‌ನ ಹೌತಿ ನಿಯಂತ್ರಿತ ಬಂದರುಗಳಿಗೂ ಈ ಹಡಗುಗಳು ತೆರಳಿದ್ದವು ಎಂದು ವರದಿಯಾಗಿದೆ.

ಸೊಮಾಲಿಯಾ ಕರಾವಳಿಯಲ್ಲೂ ಮತ್ತೊಂದು ಹಡಗು ಅಪಹರಣ

ಇದೇ ವೇಳೆ, ಕ್ಯಾಮರೂನ್ ಧ್ವಜ ಹೊಂದಿರುವ M/V LUTUF ಎಂಬ ಹಡಗನ್ನು ಆಗಸ್ಟ್ 17ರಂದು ಸೊಮಾಲಿಯಾದ ಪಂಟ್‌ಲ್ಯಾಂಡ್ ಕರಾವಳಿ ಸಮೀಪ ಅಪಹರಿಸಲಾಗಿದೆ.

ಈ ಹಡಗಿನಲ್ಲಿ 10 ಮಂದಿ ಸಿಬ್ಬಂದಿ ಇದ್ದು, ಅವರಲ್ಲಿ 6 ಮಂದಿ ಭಾರತೀಯರು ಇದ್ದಾರೆ. ಟರ್ಕಿಯ ಸೇನಾ ಉಪಕರಣಗಳು, ಸಂವಹನ ಸಾಧನಗಳು ಮತ್ತು ಉಪಗ್ರಹ ಉಪಕರಣಗಳನ್ನು ಹಡಗು ಸಾಗಿಸುತ್ತಿತ್ತು ಎಂದು ಸೊಮಾಲಿಯಾ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಎಪಿ ವರದಿ ತಿಳಿಸಿದೆ. ಆದರೆ ಹಡಗಿನಲ್ಲಿರುವ ಸಿಬ್ಬಂದಿಯ ಪ್ರಸ್ತುತ ಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ.

ಮತ್ತೆ ಕಡಲ್ಗಳ್ಳರ ಹಾವಳಿ

ಈ ಎರಡು ಘಟನೆಗಳು ಸೊಮಾಲಿಯಾ ಕಡಲ್ಗಳ್ಳರ ಚಟುವಟಿಕೆಗಳು ಮತ್ತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ನಡೆದಿವೆ. ಈ ಪ್ರದೇಶದಲ್ಲಿ ಈಗಾಗಲೇ ಹಲವು ವಾಣಿಜ್ಯ ಹಡಗುಗಳನ್ನು ಕಡಲ್ಗಳ್ಳರ ಗುಂಪುಗಳು ವಶದಲ್ಲಿಟ್ಟುಕೊಂಡಿವೆ ಎಂದು ವರದಿಗಳು ತಿಳಿಸಿವೆ.

2000ರ ದಶಕದಲ್ಲಿ ಸೊಮಾಲಿಯಾ ಕರಾವಳಿಯಲ್ಲಿ ಕಡಲ್ಗಳ್ಳರ ಹಾವಳಿ ವ್ಯಾಪಕವಾಗಿತ್ತು. 2011ರಲ್ಲಿ ಇದು ಗರಿಷ್ಠ ಮಟ್ಟ ತಲುಪಿತ್ತು. ನಂತರ ಅಂತಾರಾಷ್ಟ್ರೀಯ ನೌಕಾಪಡೆಗಳ ನಿಯೋಜನೆ ಹಾಗೂ ವಾಣಿಜ್ಯ ಹಡಗುಗಳ ಭದ್ರತಾ ಕ್ರಮಗಳ ಹೆಚ್ಚಳದಿಂದ ಕಡಲ್ಗಳ್ಳರ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿದ್ದವು.

ಆದರೆ, ಏಪ್ರಿಲ್‌ನಿಂದ ಮತ್ತೆ ದಾಳಿಗಳು ಹೆಚ್ಚಾಗಿವೆ. ಸದ್ಯ ಐದು ಸರಕು ಸಾಗಣೆ ಹಡಗುಗಳು ಕಡಲ್ಗಳ್ಳರ ವಶದಲ್ಲಿದ್ದು, ಸೋಮವಾರ ಸೊಮಾಲಿಯಾ ಕರಾವಳಿ ಸಮೀಪ ಮತ್ತೊಂದು ಹಡಗನ್ನು ಅಪಹರಿಸಲಾಗಿದೆ ಎಂದು ವರದಿಯಾಗಿದೆ.

ಭಾರತೀಯ ಸಿಬ್ಬಂದಿಯ ಸುರಕ್ಷತೆ ಸೇರಿದಂತೆ ಪರಿಸ್ಥಿತಿಯ ಮೇಲೆ ಅಧಿಕಾರಿಗಳು ಹಾಗೂ ಸಮುದ್ರ ಭದ್ರತಾ ಸಂಸ್ಥೆಗಳು ನಿರಂತರ ನಿಗಾ ಇರಿಸಿದ್ದು, ಅಪಹರಣಕ್ಕೊಳಗಾದ ಹಡಗುಗಳ ಚಲನವಲನ ಮತ್ತು ಸಿಬ್ಬಂದಿಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com