Canada ವಿರುದ್ಧ Trump ಸುಂಕಾಸ್ತ್ರ; 20 ಬಿಲಿಯನ್ ಡಾಲರ್‌ ಉತ್ಪನ್ನಗಳ ಮೇಲೆ ಶೇ.50ರಷ್ಟು ತೆರಿಗೆ, ಪ್ರತೀಕಾರದ ಎಚ್ಚರಿಕೆ ನೀಡಿದ Carney..!

ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೆನಡಾ ಜೊತೆ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಗಬೇಕು ಎಂದು ಹೇಳಿದ್ದರು. ಕೆನಡಾ ಪ್ರಧಾನಿ ಕಾರ್ನಿ ಅವರೊಂದಿಗೆ ತಮ್ಮ ಉತ್ತಮ ಸಂಬಂಧವನ್ನೂ ಅವರು ಉಲ್ಲೇಖಿಸಿದ್ದರು.
Canada Prime Minister Mark Carney and President Donald Trump
ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಅಮೆರಿಕ ಮತ್ತು ಕೆನಡಾ ನಡುವಿನ ವ್ಯಾಪಾರ ಸಮರ ಮತ್ತಷ್ಟು ತೀವ್ರಗೊಂಡಿದ್ದು, ಕೆನಡಾದ ಸುಮಾರು 20 ಬಿಲಿಯನ್ ಡಾಲರ್‌ ಮೌಲ್ಯದ ಉತ್ಪನ್ನಗಳ ಮೇಲೆ ಅಮೆರಿಕ ವಿಧಿಸಿರುವ ಶೇ.50ರಷ್ಟು ಹೊಸ ಸುಂಕ ಶನಿವಾರದಿಂದ ಜಾರಿಗೆ ಬಂದಿದೆ.

ಕೊನೆಯ ಕ್ಷಣದವರೆಗೂ ನಡೆದ ಮಾತುಕತೆಗಳು ಯಾವುದೇ ಒಪ್ಪಂದಕ್ಕೆ ಬಾರದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಈ ನಡುವೆ ಅಮೆರಿಕಾ ಕ್ರಮಕ್ಕೆ ತಕ್ಕ ಪ್ರತೀಕಾರ ಕೈಗೊಳ್ಳುವುದಾಗಿ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಕಾರ್ಮಿಕರು ಮತ್ತು ಉದ್ಯಮಗಳನ್ನು ರಕ್ಷಿಸಲು ಅಮೆರಿಕದ ಸುಂಕಕ್ಕೆ ಡಾಲರ್‌ಗೆ ಡಾಲರ್‌ ಸಮಾನವಾಗಿ ಪ್ರತಿಕ್ರಿಯಿಸುತ್ತೇವೆ ಎಂದು ಕಾರ್ನಿ ಹೇಳಿದ್ದಾರೆ.

ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಾರದ ಆರಂಭದಲ್ಲಿ ಒಪ್ಪಿಕೊಂಡಿದ್ದ ನಿಯಮಗಳ ಆಧಾರದ ಮೇಲೆ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಕೆನಡಾ ನಿರಾಕರಿಸಿದೆ” ಎಂದು ಹೇಳಿದರು.

ಉಕ್ಕು ಮತ್ತು ಅಲ್ಯೂಮಿನಿಯಂ ಸೇರಿದಂತೆ ಕೆಲವು ವಲಯಗಳಲ್ಲಿ ಸುಂಕ ಕಡಿತಗೊಳಿಸುವ ಪ್ರಸ್ತಾವವನ್ನು ಅಮೆರಿಕ ಮುಂದಿಟ್ಟಿದ್ದರೂ ಕೆನಡಾ ಒಪ್ಪಂದಕ್ಕೆ ಮುಂದಾಗಲಿಲ್ಲ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೆನಡಾ ಜೊತೆ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಗಬೇಕು ಎಂದು ಹೇಳಿದ್ದರು. ಕೆನಡಾ ಪ್ರಧಾನಿ ಕಾರ್ನಿ ಅವರೊಂದಿಗೆ ತಮ್ಮ ಉತ್ತಮ ಸಂಬಂಧವನ್ನೂ ಅವರು ಉಲ್ಲೇಖಿಸಿದ್ದರು.

ಆದರೆ, ಶುಕ್ರವಾರ ಹಲವು ಗಂಟೆಗಳ ಕಾಲ ನಡೆದ ಮಾತುಕತೆಯ ಬಳಿಕ ಉನ್ನತ ಸಮಾಲೋಚಕ ಡೊಮಿನಿಕ್ ಲೆಬ್ಲಾಂಕ್, “ಇನ್ನೂ ಕೆಲವು ವಿಚಾರಗಳಲ್ಲಿ ಕೆಲಸ ಮಾಡಬೇಕಿದೆ” ಎಂದು ತಿಳಿಸಿದರು. ಗುರುವಾರವೂ ಲೆಬ್ಲಾಂಕ್ ಮತ್ತು ಗ್ರೀರ್ ಸುಮಾರು ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು.

ಉಕ್ಕು, ಅಲ್ಯೂಮಿನಿಯಂ, ವಾಹನಗಳು ಮತ್ತು ಮರದ ಉತ್ಪನ್ನಗಳ ಮೇಲಿನ ಸುಂಕಗಳಲ್ಲಿ ಗಮನಾರ್ಹ ಕಡಿತಕ್ಕೆ ಅಮೆರಿಕ ಸಿದ್ಧವಿತ್ತು. ಆದರೆ, ಕೆನಡಾ ಅಮೆರಿಕದ ವಿರುದ್ಧ ತನ್ನ “ದೀರ್ಘಕಾಲದ ಪ್ರತೀಕಾರ ಕ್ರಮಗಳನ್ನು ಮುಂದುವರಿಸುತ್ತಿದೆ ಎಂದು ಗ್ರೀರ್ ಆರೋಪಿಸಿದ್ದಾರೆ.

Canada Prime Minister Mark Carney and President Donald Trump
ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್; ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!

ಇದಕ್ಕೆ ಪ್ರತಿಕ್ರಿಯಿಸಿದ ಕಾರ್ನಿ, ಅಮೆರಿಕದ ಪ್ರಸ್ತಾವಿತ ನಿಯಮಗಳಲ್ಲಿ ಕೊನೆಯ ಕ್ಷಣದಲ್ಲಿ ಮಾಡಲಾದ ಬದಲಾವಣೆಗಳು “ಅನ್ಯಾಯಕರ ಮತ್ತು ಆರ್ಥಿಕವಾಗಿ ಅಸಮಂಜಸವಾಗಿದ್ದು, ಯಾವುದೇ ಒಪ್ಪಂದದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿವೆ” ಎಂದು ಹೇಳಿದ್ದಾರೆ.

ಕೆನಡಾ ಕೈಗೊಂಡಿದ್ದ ಪ್ರತೀಕಾರ ಕ್ರಮಗಳಲ್ಲಿ ಅಮೆರಿಕವನ್ನು ಹೆಚ್ಚು ಕೆರಳಿಸಿದ ಕ್ರಮವೆಂದರೆ ಮದ್ಯದ ಅಂಗಡಿಗಳಿಂದ ಅಮೆರಿಕದ ಮದ್ಯ ಮತ್ತು ವೈನ್‌ಗಳನ್ನು ತೆಗೆದುಹಾಕಿರುವುದು ಎಂದು ಕೆನಡಾದ ಪ್ರಾದೇಶಿಕ ನಾಯಕರು ತಿಳಿಸಿದ್ದಾರೆ.

ಅಮೆರಿಕದ ಶ್ವೇತಭವನವು ಕೆನಡಾ ತನ್ನ ಸುಂಕ ನೀತಿಗಳ ಮೂಲಕ ಅಮೆರಿಕದ ಮದ್ಯ, ವಾಹನ ಮತ್ತು ಹೈನುಗಾರಿಕೆ ಉತ್ಪನ್ನಗಳಿಗೆ “ತಾರತಮ್ಯಪೂರ್ಣ ವರ್ತನೆ” ತೋರುತ್ತಿದೆ ಎಂದು ಆರೋಪಿಸಿತ್ತು.

ಈ ಹೊಸ ಸುಂಕಗಳು ಬುಧವಾರದಿಂದಲೇ ಜಾರಿಗೆ ಬರಬೇಕಾಗಿತ್ತು. ಆದರೆ, ಮಾತುಕತೆಯಲ್ಲಿ ಮಹತ್ವದ ಪ್ರಗತಿ ಕಂಡುಬಂದಿದೆ ಎಂದು ಹೇಳಿದ ಟ್ರಂಪ್, ಅವುಗಳ ಜಾರಿಗೆ ಮೂರು ದಿನಗಳ ಕಾಲಾವಕಾಶ ನೀಡಿದ್ದರು.

ಈ ವಾರ ಕೆನಡಾದ ಸಂಧಾನಕಾರರು ವಾಷಿಂಗ್ಟನ್‌ನಲ್ಲಿ ಬೀಡುಬಿಟ್ಟು, ಉಕ್ಕು, ಅಲ್ಯೂಮಿನಿಯಂ ಮತ್ತು ವಾಹನಗಳ ಮೇಲಿನ ಸುಂಕ ಸೇರಿದಂತೆ ಹಲವು ವಿವಾದಿತ ವಿಚಾರಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದರು.

ಟ್ರಂಪ್‌ ಅವರ ಸುಂಕ ನೀತಿಯಿಂದ ಕೆನಡಾದ ಆರ್ಥಿಕತೆ ಮೇಲೆ ಒತ್ತಡ ಹೆಚ್ಚಾಗಿದ್ದು, ಉದ್ಯೋಗ ನಷ್ಟ ಮತ್ತು ವ್ಯಾಪಾರ ಸಂಬಂಧಗಳ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಕೆನಡಾ ಅಮೆರಿಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡು, ಇತರ ದೇಶಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ವಿಸ್ತರಿಸಬೇಕೆಂದು ಕಾರ್ನಿ ನಿರಂತರವಾಗಿ ಒತ್ತಿ ಹೇಳಿದ್ದಾರೆ.

ಪ್ರಸ್ತುತ ಕೆನಡಾದ ಒಟ್ಟು ರಫ್ತಿನ ಸುಮಾರು 70ರಷ್ಟು ಅಮೆರಿಕವನ್ನೇ ಅವಲಂಬಿಸಿದೆ. ಈ ಅವಲಂಬನೆಯನ್ನು ಕಡಿಮೆ ಮಾಡುವುದು ಅಗತ್ಯ ಎಂದು ಕಾರ್ನಿ ಹೇಳಿದ್ದಾರೆ.

ಇದರ ನಡುವೆ ಅಮೆರಿಕ ಮತ್ತು ಕೆನಡಾ ನಡುವಿನ ಉತ್ತರ ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದ (USMCA) ಪರಿಷ್ಕರಣೆಯ ವಿಚಾರವೂ ಬಾಕಿಯಿದೆ. ಟ್ರಂಪ್ ಕಳೆದ ತಿಂಗಳು ಈ ಒಪ್ಪಂದವನ್ನು ನವೀಕರಿಸಲು ನಿರಾಕರಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com