

ಟಿಬೆಟ್ ಗಡಿಯ ಸಮೀಪ ನೇಪಾಳದ ಭೋಟೆ ಕೋಶಿ ನದಿಯ ತೀರ ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿ ಮೃತಪಟ್ಟವರ ಸಂಖ್ಯೆ 165ಕ್ಕೆ ಏರಿಕೆಯಾಗಿದ್ದು, ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ 300ಕ್ಕೂ ಹೆಚ್ಚು ಭಾರತೀಯರು ಸೇರಿದ್ದಾರೆ.
ಅವಶೇಷಗಳ ನಡುವೆ ಸಿಲುಕಿರುವವರಿಗಾಗಿ ರಕ್ಷಣಾ ತಂಡಗಳು ನಿರಂತರ ಶೋಧ ಕಾರ್ಯ ನಡೆಸುತ್ತಿವೆ. ಪರಿಹಾರ ಕಾರ್ಯಗಳಿಗೆ ಭಾರತವು 10 ಟನ್ ಮಾನವೀಯ ನೆರವು ಹಾಗೂ ಅಗತ್ಯ ಔಷಧಗಳನ್ನು ಕಳುಹಿಸಿದ್ದು, ಅಮೆರಿಕ 5 ಲಕ್ಷ ಡಾಲರ್ ತುರ್ತು ನೆರವು ಘೋಷಿಸಿದೆ.
ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪ್ರವಾಹದಿಂದ ಬಾಧಿತರಾದ ಭಾರತೀಯರ ನೆರವು ಮತ್ತು ಮಾಹಿತಿಗಾಗಿ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಿದೆ. ಎಕ್ಸ್‌ನಲ್ಲಿ ಪ್ರಕಟಿಸಿರುವ ಮಾಹಿತಿಯಂತೆ, +977 985 131 6807 ಅಥವಾ +977 970 910 7500 ಸಂಖ್ಯೆಗೆ ಸಂಪರ್ಕಿಸಬಹುದು.
ನೇಪಾಳ ಪ್ರವಾಸೋದ್ಯಮ ಮಂಡಳಿಯು ಸಹಾಯಕ್ಕಾಗಿ ಟೋಲ್ ಫ್ರೀ ಸಂಖ್ಯೆ 1234, ಹಾಟ್‌ಲೈನ್ 1144 ಅಥವಾ ಟೂರಿಸ್ಟ್ ಪೊಲೀಸ್ 9851289445 ಸಂಖ್ಯೆಯನ್ನು ಪ್ರಕಟಿಸಿದೆ.
ನೆರೆಯ ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದ ಗಂಡಕ್ ನದಿ ಜಲಾನಯನ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಹಾನಿ ಉಂಟಾದ ಹಿನ್ನೆಲೆಯಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಯಿತು. ಅಪಾಯದಲ್ಲಿರುವ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುವುದು ಸೇರಿದಂತೆ ತುರ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡರು.
ಟಿಬೆಟ್ ಗಡಿಯಲ್ಲಿರುವ ನೇಪಾಳದ ಪ್ರದೇಶದಲ್ಲಿ ಭೀಕರ ಹಠಾತ್ ಪ್ರವಾಹ ಸಂಭವಿಸಿದ ಬಳಿಕ 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತ ಸಂಭವಿಸಿ ಗ್ರಾಮಗಳು, ವಾಹನಗಳು ಹಾಗೂ ಕಟ್ಟಡಗಳು ಕೊಚ್ಚಿಹೋದ ಪರಿಣಾಮ ಕನಿಷ್ಠ 165 ಮಂದಿ ಮೃತಪಟ್ಟಿದ್ದು, 1,000ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ದುರಂತದ ಪರಿಣಾಮ ಚೀನಾದ ಟಿಬೆಟ್ ಪ್ರದೇಶದಲ್ಲಿ ಮೂವರು ಮೃತಪಟ್ಟಿದ್ದಾರೆ. ಭೋಟೆ ಕೋಶಿ ಮತ್ತು ತ್ರಿಶೂಲಿ ನದಿ ವ್ಯವಸ್ಥೆಗಳ ಪ್ರದೇಶಗಳಲ್ಲಿ ಸಂಭವಿಸಿದ ಈ ದುರಂತದ ಬಳಿಕ ಎರಡೂ ದೇಶಗಳ ರಕ್ಷಣಾ ತಂಡಗಳು ನಾಪತ್ತೆಯಾದ ನೂರಾರು ಮಂದಿಗಾಗಿ ಶೋಧ ಕಾರ್ಯ ನಡೆಸುತ್ತಿವೆ. ನಾಪತ್ತೆಯಾದವರಲ್ಲಿ ವಿದೇಶಿ ಪ್ರವಾಸಿಗರು, ಭಾರತೀಯರು ಮತ್ತು ಭದ್ರತಾ ಸಿಬ್ಬಂದಿಯೂ ಸೇರಿದ್ದಾರೆ.
ನೆರೆಯ ರಾಜ್ಯಗಳಲ್ಲಿ ಕಟ್ಟೆಚ್ಚರ
ನೆರೆಯ ನೇಪಾಳದ ಗಂಡಕ್ ನದಿ ಪಾತ್ರದಲ್ಲಿ ಉಂಟಾದ ಪ್ರವಾಹದಿಂದಾಗಿ ಬಿಹಾರ ಮತ್ತು ಉತ್ತರ ಪ್ರದೇಶ ಗಳಲ್ಲಿ ಹೈ ಅಲರ್ಟ್ (ಉನ್ನತ ಎಚ್ಚರಿಕೆ) ಘೋಷಿಸಲಾಗಿದ್ದು, ಅಪಾಯಕಾರಿ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಗುತ್ತಿದೆ.
ತುರ್ತು ಸಂಪರ್ಕ ಸಂಖ್ಯೆಗಳು (Emergency Contact Numbers)
ಖಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ (ಭಾರತೀಯ ನಾಗರಿಕರಿಗಾಗಿ):
+977 985 131 6807
+977 970 910 7500
ನೇಪಾಳ ಪ್ರವಾಸೋದ್ಯಮ ಮಂಡಳಿ (Nepal Tourism Board) & ಸ್ಥಳೀಯ ಸಹಾಯವಾಣಿ:
ಉಚಿತ ತುರ್ತು ಸಂಖ್ಯೆ (Toll Free): 1234
ಹಾಟ್‌ಲೈನ್ (Hotline): 1144
ಟೂರಿಸ್ಟ್ ಪೊಲೀಸ್ (Tourist Police): +977 985 128 9445
ಟಿಬೆಟ್ ಗಡಿಯ ಪ್ರದೇಶದಲ್ಲಿ ಭೀಕರ ಪ್ರವಾಹ ಸಂಭವಿಸಿ 24 ಗಂಟೆಗಳಿಗೂ ಹೆಚ್ಚು ಸಮಯ ಕಳೆದರೂ 823 ಮಂದಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ನೇಪಾಳದ ವಿಪತ್ತು ನಿರ್ವಹಣಾ ಸಂಸ್ಥೆ ಗುರುವಾರ ತಿಳಿಸಿದೆ.
ಸಂಪರ್ಕಕ್ಕೆ ಸಿಗದವರಲ್ಲಿ ಕನಿಷ್ಠ 579 ಪ್ರವಾಸಿಗರು — ನೇಪಾಳದವರು ಹಾಗೂ ವಿದೇಶಿಯರು — ಸೇರಿದ್ದಾರೆ. ನೇಪಾಳ ಮತ್ತು ಚೀನಾದಲ್ಲಿ ಒಟ್ಟು ಕನಿಷ್ಠ 165 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, ಚೀನಾದಲ್ಲಿ ಇನ್ನೂ 558 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಪ್ರವಾಹದ ಹಿನ್ನೆಲೆಯಲ್ಲಿ ಕೇರಳದ ಪಯ್ಯನ್ನೂರು ವಿಧಾನಸಭಾ ಕ್ಷೇತ್ರದ 37 ಮಂದಿ ನೇಪಾಳದಲ್ಲಿ ಸಿಲುಕಿದ್ದಾರೆ ಎಂದು ಶಾಸಕ ವಿ. ಕುಂಹಿಕೃಷ್ಣನ್ ತಿಳಿಸಿದ್ದಾರೆ.
ಅವರ ಸ್ಥಳ ಹಾಗೂ ದೂರವಾಣಿ ಸಂಖ್ಯೆಗಳ ಮಾಹಿತಿಯನ್ನು ಮುಖ್ಯಮಂತ್ರಿ ಕಚೇರಿಗೆ ನೀಡಿದ್ದು, ಅವರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕಚೇರಿ ಭರವಸೆ ನೀಡಿದೆ ಎಂದು ಶಾಸಕ ತಿಳಿಸಿದ್ದಾರೆ. ಎಲ್ಲಾ 37 ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಕುಟುಂಬಸ್ಥರು ಆತಂಕಪಡಬಾರದು ಎಂದು ಅವರು ಮನವಿ ಮಾಡಿದ್ದಾರೆ.
ನೇಪಾಳದಲ್ಲಿ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ಸಿಲುಕಿರುವ ಆಂಧ್ರಪ್ರದೇಶದ ನಿವಾಸಿಗಳನ್ನು ಗುರುತಿಸಿ, ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಗುರುವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಿಯಲ್ ಟೈಮ್ ಗವರ್ನನ್ಸ್ ಸಿಸ್ಟಂ (RTGS) ಮೂಲಕ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿ, ಸಂತ್ರಸ್ತ ಯಾತ್ರಾರ್ಥಿಗಳಿಗೆ ನೆರವು ನೀಡುವಂತೆ ಹಾಗೂ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸುವಂತೆ ನಾಯ್ಡು ಸೂಚಿಸಿದರು.
ಮಾಹಿತಿ ಮತ್ತು ನೆರವಿನ ಸಮನ್ವಯಕ್ಕಾಗಿ ದೆಹಲಿಯ ಎಪಿ ಭವನದಲ್ಲಿ ಪ್ರತ್ಯೇಕ ನಿಯಂತ್ರಣ ಕೊಠಡಿಯನ್ನೂ ಸ್ಥಾಪಿಸಲಾಗಿದೆ.
ಸಹಾಯವಾಣಿ ಸಂಖ್ಯೆಗಳು:
011-23384016, 011-23387089
ವಾಟ್ಸ್‌ಆ್ಯಪ್: 9059824101
ಹಠಾತ್ ಪ್ರವಾಹದ ಹಿನ್ನೆಲೆಯಲ್ಲಿ ನೇಪಾಳ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಸಿಲುಕಿರುವ ಕರ್ನಾಟಕದ ಜನರಿಗೆ ನೆರವು ನೀಡಲು ರಾಜ್ಯ ಸರ್ಕಾರ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ಪ್ರವಾಹದಿಂದ ಬಾಧಿತರಾದವರು ಅಥವಾ ಪ್ರದೇಶದಲ್ಲಿ ಸಿಲುಕಿರುವವರ ಮಾಹಿತಿಯನ್ನು ಸಂಗ್ರಹಿಸುತ್ತಿದೆ.
ಸಹಾಯವಾಣಿ ಸಂಖ್ಯೆಗಳು: 1070 / 080-22253707
ಭೀಕರ ಪ್ರವಾಹದಿಂದ ತತ್ತರಿಸಿರುವ ನೇಪಾಳದ ಪರಿಹಾರ ಕಾರ್ಯಗಳಿಗೆ ನೆರವಾಗಲು ಭಾರತವು 10 ಟನ್ ಮಾನವೀಯ ನೆರವನ್ನು ಹಸ್ತಾಂತರಿಸಿದೆ.
ಭಾರತದ ರಾಯಭಾರಿ ನವೀನ್ ಶ್ರೀವಾಸ್ತವ ಅವರು ಈ ನೆರವನ್ನು ನೇಪಾಳದ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಸಚಿವ ಖಡ್ಕ ರಾಜ್ ಪೌಡೆಲ್ ಅವರಿಗೆ ಹಸ್ತಾಂತರಿಸಿದರು.