Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ಬುಧವಾರ ಬೆಳಗ್ಗೆ ಸುಮಾರು 9 ಗಂಟೆಗೆ ರಸುವಾ ಜಿಲ್ಲೆಯ ಭೋಟೆ ಕೋಶಿ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿ ಭೀಕರ ಪ್ರವಾಹ ಉಂಟಾಯಿತು.
Nepal Floods
ನೇಪಾಳ ಪ್ರವಾಹ
Updated on

ಕಠ್ಮಂಡು: ಟಿಬೆಟ್ ಗಡಿಯ ಸಮೀಪದ ಪ್ರದೇಶಗಳಿಂದ ಧುಮುಕಿದ ಭಾರೀ ಪ್ರವಾಹ ಮಧ್ಯ ನೇಪಾಳದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಹಾನಿ ಉಂಟುಮಾಡಿದ್ದು, ಸುಮಾರು 160 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ನೂರಾರು ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ ಕನಿಷ್ಠ 133 ಭಾರತೀಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ ಸುಮಾರು 9 ಗಂಟೆಗೆ ರಸುವಾ ಜಿಲ್ಲೆಯ ಭೋಟೆ ಕೋಶಿ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿ ಭೀಕರ ಪ್ರವಾಹ ಉಂಟಾಯಿತು.

ಈ ಪ್ರವಾಹ ರಸುವಾ, ಧಾದಿಂಗ್ ಮತ್ತು ನುವಾಕೋಟ್ ಜಿಲ್ಲೆಗಳ ಮೇಲೆ ಭಾರೀ ಪರಿಣಾಮ ಬೀರಿದೆ.

ಕಠ್ಮಂಡುವಿನಿಂದ ಸುಮಾರು 125 ಕಿಲೋಮೀಟರ್ ಈಶಾನ್ಯ ಭಾಗದಲ್ಲಿರುವ ಹಾಗೂ ಟಿಬೆಟ್ ಗಡಿಗೆ ಹೊಂದಿಕೊಂಡಿರುವ ರಸುವಾ ಜಿಲ್ಲೆ ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರದೇಶವಾಗಿದೆ.

Nepal Floods
ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

ಹಿಮ-ಬಂಡೆ ಕುಸಿತವೇ ಕಾರಣ?

ಅಂತರರಾಷ್ಟ್ರೀಯ ಪರ್ವತಾಭಿವೃದ್ಧಿ ಕೇಂದ್ರ (ICIMOD) ತಜ್ಞರ ಪ್ರಕಾರ, ಟಿಬೆಟ್‌ನ ಎತ್ತರದ ಪ್ರದೇಶದಲ್ಲಿ ಸಂಭವಿಸಿದ ಹಿಮ ಮತ್ತು ಬಂಡೆಗಳ ಕುಸಿತ (ಐಸ್-ರಾಕ್ ಅವಲಾಂಚ್) ಈ ಭೀಕರ ಪ್ರವಾಹಕ್ಕೆ ಕಾರಣವಾಗಿರಬಹುದು. ಹಿಮ, ಕರಗಿದ ನೀರು ಮತ್ತು ಬಂಡೆ-ಮಣ್ಣಿನ ಅವಶೇಷಗಳು ನದಿಯ ಹರಿವಿನೊಂದಿಗೆ ಸೇರಿ ನೇಪಾಳದತ್ತ ಧಾವಿಸಿದ ಪರಿಣಾಮ ಈ ವಿನಾಶಕಾರಿ ಪ್ರವಾಹ ಉಂಟಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನಾಪತ್ತೆಯಾದ ಭಾರತೀಯರಿಗೆ ಸಹಾಯವಾಣಿ ಆರಂಭ

ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ನೆರವಿಗಾಗಿ ಕಠ್ಮಂಡುವಿನ ಭಾರತೀಯ ರಾಯಭಾರ ಕಚೇರಿ ತುರ್ತು ಸಂಪರ್ಕ ಸಂಖ್ಯೆಗಳನ್ನು ಪ್ರಕಟಿಸಿದ್ದು, +977 985 131 6807 ಮತ್ತು +977 970 910 7500 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಇದೇ ವೇಳೆ, ಟಿಬೆಟ್-ನೇಪಾಳ ಗಡಿ ಪ್ರದೇಶದಲ್ಲಿ ಸಿಲುಕಿರುವ ಭಾರತೀಯರ ನೆರವಿಗಾಗಿ ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯೂ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.

ಚೀನಾದ ಸ್ಥಳೀಯ ಅಧಿಕಾರಿಗಳು: +86 139 8999 0012

ಭಾರತೀಯ ರಾಯಭಾರ ಕಚೇರಿ, ಬೀಜಿಂಗ್: +86 185 1428 4905 (ವಾಟ್ಸಾಪ್ ಸೌಲಭ್ಯ ಲಭ್ಯ)

ಕೈಲಾಸ ಯಾತ್ರಿಕರ ಆತಂಕ

ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಕಾರ, ನಾಪತ್ತೆಯಾದವರಲ್ಲಿ ಹೆಚ್ಚಿನವರು ಭಾರತೀಯ ಕೈಲಾಸ ಮಾನಸಸರೋವರ ಯಾತ್ರಿಕರಾಗಿರುವ ಸಾಧ್ಯತೆ ಇದೆ.

ಸಹಾಯಕ್ಕಾಗಿ ನೇಪಾಳ ಪ್ರವಾಸೋದ್ಯಮ ಮಂಡಳಿ ಈ ಕೆಳಗಿನ ಸಂಖ್ಯೆಗಳನ್ನೂ ಪ್ರಕಟಿಸಿದೆ:

ಟೋಲ್ ಫ್ರೀ: 1234

ಹಾಟ್‌ಲೈನ್: 1144

ಪ್ರವಾಸಿ ಪೊಲೀಸ್: 9851289445

ನೇಪಾಳಕ್ಕೆ ಭಾರತದ ನೆರವು

ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳ ಪ್ರಧಾನಿ ಬಲೇಂದ್ರ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಂತಾಪ ಸೂಚಿಸಿದ್ದು, ಎಲ್ಲ ರೀತಿಯ ಮಾನವೀಯ ನೆರವು ನೀಡಲು ಭಾರತ ಸಿದ್ಧವಿದೆ ಎಂದು ಭರವಸೆ ನೀಡಿದ್ದಾರೆ. ಇದೀಗ ಭಾರತ ನೇಪಾಳಕ್ಕೆ 10 ಟನ್ ಮಾನವೀಯ ನೆರವು ಹಾಗೂ ಅಗತ್ಯ ಔಷಧಿಗಳನ್ನು ರವಾನಿಸಿದೆ.

ಭಾರತೀಯ ವಾಯುಪಡೆಯ ಸಿ-130ಜೆ ವಿಮಾನದ ಮೂಲಕ ದೆಹಲಿಯ ಹಿಂಡನ್ ವಾಯುನೆಲೆಯಿಂದ ಕಠ್ಮಂಡುವಿಗೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ. ಭಾರತ ರವಾನೆ ಮಾಡಿರುವ ಈ ನೆರವು ಸಾಮಗ್ರಿಗಳಲ್ಲಿ ತಾತ್ಕಾಲಿಕ ಆಶ್ರಯ ವ್ಯವಸ್ಥೆಗಳು, ಕಂಬಳಿಗಳು, ಹೈಜಿನ್ ಕಿಟ್‌ಗಳು, ಸೌರ ದೀಪಗಳು ಮತ್ತು ಅಗತ್ಯ ಔಷಧಿಗಳು ಸೇರಿವೆ.

ಭಾರತದಲ್ಲೂ ಕಟ್ಟೆಚ್ಚರ

ನೇಪಾಳದ ಪ್ರವಾಹದ ಪರಿಣಾಮವಾಗಿ ಗಂಡಕ್ ನದಿಯ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಮತ್ತು ಕುಶಿನಗರ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಸದ್ಯ ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾದವರ ಶೋಧ ಕಾರ್ಯ ತೀವ್ರಗೊಂಡಿದೆ.

ಈ ದುರಂತವು ಹಿಮಾಲಯ ಪ್ರದೇಶದಲ್ಲಿ ಹವಾಮಾನ ಬದಲಾವಣೆ ಹಾಗೂ ಹಿಮನದಿ ಸಂಬಂಧಿತ ಅಪಾಯಗಳ ಬಗ್ಗೆ ಮತ್ತೊಮ್ಮೆ ಗಂಭೀರ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com