

ಕಠ್ಮಂಡು: 620ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ನೇಪಾಳ-ಚೀನಾ ಗಡಿಯಲ್ಲಿ ಆಗಸ್ಟ್ 26ರಂದು ಸಂಭವಿಸಿದ ಭೀಕರ ಹಿಮಾಲಯದ ಹಠಾತ್ ಪ್ರವಾಹದ (Flash Flood) ಪ್ರಮಾಣ ಎಷ್ಟಿತ್ತು ಎಂಬುದನ್ನು ಹೊಸ ಸ್ಯಾಟಲೈಟ್ ಚಿತ್ರಗಳು ಬಿಚ್ಚಿಟ್ಟಿದ್ದು, ಜಲಪ್ರಳಯದ ಆರ್ಭಟಕ್ಕೆ ಇಡೀ ಗಡಿಯೇ ನಾಪತ್ತೆಯಾಗಿದೆ.
ಹೌದು.. ಕಲ್ಲು, ಹಿಮ, ಕೆಸರು ಮತ್ತು ಅಪಾರ ಪ್ರಮಾಣದ ನೀರು ರಭಸದಿಂದ ನುಗ್ಗಿದ ಪರಿಣಾಮ ರಸುವಾಗಢಿ ಗಡಿ ದಾಟುವ ಕೇಂದ್ರ ಬಹುತೇಕ ಸಂಪೂರ್ಣವಾಗಿ ನಾಶವಾಗಿದೆ.
ವಾಣಿಜ್ಯ ಸ್ಯಾಟಲೈಟ್ ಸಂಸ್ಥೆ ವ್ಯಾಂಟರ್ (Vantor) ಬಿಡುಗಡೆ ಮಾಡಿರುವ ಹೈ-ರೆಸಲ್ಯೂಷನ್ ‘ಬಿಫೋರ್-ಆಫ್ಟರ್’ ಚಿತ್ರಗಳು ಪ್ರವಾಹದ ಮುನ್ನ ಹಾಗೂ ನಂತರದ ಪರಿಸ್ಥಿತಿಯ ನಡುವಿನ ಭಾರೀ ವ್ಯತ್ಯಾಸವನ್ನು ತೋರಿಸಿವೆ. 2024ರ ಏಪ್ರಿಲ್ 19ರಂದು ತೆಗೆದ ಚಿತ್ರವನ್ನು 2026ರ ಆಗಸ್ಟ್ 27ರಂದು, ಅಂದರೆ ದುರಂತ ಸಂಭವಿಸಿದ ಮರುದಿನ ತೆಗೆದ ಚಿತ್ರಕ್ಕೆ ಹೋಲಿಸಲಾಗಿದೆ.
ಹಳೆಯ ಚಿತ್ರದಲ್ಲಿ ರಸುವಾಗಢಿ ಪ್ರದೇಶದಲ್ಲಿ ಬಹುಮಹಡಿ ಗಡಿ ಕಟ್ಟಡ, ರಸ್ತೆಗಳು, ಪೇವ್‌ಮೆಂಟ್‌ಗಳು ಹಾಗೂ ಹಲವು ಮೂಲಸೌಕರ್ಯಗಳು ನದಿಯ ಪಕ್ಕದಲ್ಲಿ ಸ್ಪಷ್ಟವಾಗಿ ಕಾಣಿಸುತ್ತವೆ. ಆದರೆ ಪ್ರವಾಹದ ಬಳಿಕದ ಚಿತ್ರದಲ್ಲಿ ಆ ಪ್ರದೇಶದ ಬಹುಪಾಲು ಕಲ್ಲು, ಕೆಸರು ಮತ್ತು ಅವಶೇಷಗಳ ವಿಶಾಲ ರಾಶಿಯಾಗಿ ಮಾರ್ಪಟ್ಟಿರುವುದು ಕಂಡುಬಂದಿದೆ.
ಕಟ್ಟಡ, ಸೇತುವೆ, ರಸ್ತೆಗಳೇ ನಾಪತ್ತೆ
ಪ್ರವಾಹ ಪೀಡಿತ ಪ್ರದೇಶದ ಇತರ ಸ್ಯಾಟಲೈಟ್ ಚಿತ್ರಗಳಲ್ಲೂ ಮನೆಗಳು, ಸೇತುವೆಗಳು, ರಸ್ತೆಗಳ ಹಲವು ಭಾಗಗಳು ಮತ್ತು ಇತರ ಮೂಲಸೌಕರ್ಯಗಳು ಕೊಚ್ಚಿಹೋಗಿರುವುದು ಅಥವಾ ಅವಶೇಷಗಳ ಅಡಿಯಲ್ಲಿ ಹೂತುಹೋಗಿರುವುದು ಗೋಚರಿಸಿದೆ. ಈ ಕುರಿತು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ರಸುವಾಗಢಿಯ ಪ್ರಮುಖ ಬಹುಮಹಡಿ ಕಟ್ಟಡ ಹಾಗೂ ಅದರ ಸುತ್ತಲಿನ ಸೌಲಭ್ಯಗಳು ಪ್ರವಾಹದ ನಂತರದ ಸ್ಯಾಟಲೈಟ್ ಚಿತ್ರಗಳಲ್ಲಿ ಕಾಣಿಸುತ್ತಿಲ್ಲ.
ಸಾವಿನ ಸಂಖ್ಯೆ 623ಕ್ಕೆ ಏರಿಕೆ
ಈ ಭೀಕರ ದುರಂತದಲ್ಲಿ ಇದುವರೆಗೆ ಕನಿಷ್ಠ 623 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ 469 ಮಂದಿ ನೇಪಾಳದವರಾಗಿದ್ದರೆ, ಮೂವರು ಟಿಬೆಟ್‌ನಲ್ಲಿ ಮೃತಪಟ್ಟಿದ್ದಾರೆ. ಇನ್ನೂ 1,535 ಮಂದಿ ನಾಪತ್ತೆಯಾಗಿದ್ದಾರೆ. ನೇಪಾಳದಲ್ಲಿ 977 ಮಂದಿ ಹಾಗೂ ಟಿಬೆಟ್‌ನಲ್ಲಿ 558 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಪತ್ತೆಯಾದವರಲ್ಲಿ ಪ್ರವಾಸಿಗರು ಹಾಗೂ ಯಾತ್ರಿಕರೂ ಸೇರಿದ್ದಾರೆ. ಕನಿಷ್ಠ 540 ವಿದೇಶಿಯರು ಇನ್ನೂ ಪತ್ತೆಯಾಗಿಲ್ಲ ಎನ್ನಲಾಗಿದೆ.
NDRRMA ಪ್ರಕಾರ, ಚಿತ್ವಾನ್‌ನಲ್ಲಿ 233 ಮೃತದೇಹಗಳನ್ನು, ನಾವಲ್‌ಪರಾಸಿ ಪೂರ್ವದಲ್ಲಿ 158, ನುವಾಕೋಟ್‌ನಲ್ಲಿ 51, ಗೋರ್ಖಾದಲ್ಲಿ 48, ನಾವಲ್‌ಪರಾಸಿ ಪಶ್ಚಿಮದಲ್ಲಿ 47, ಧಾದಿಂಗ್‌ನಲ್ಲಿ 45, ತನಹುನ್‌ನಲ್ಲಿ 31 ಹಾಗೂ ರಸುವಾದಲ್ಲಿ 13 ಮೃತದೇಹಗಳನ್ನು ಪತ್ತೆಹಚ್ಚಿ ಹೊರತೆಗೆಯಲಾಗಿದೆ.