

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದಿಂದ ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕಿಂತ ಭಾರತದ ಮೇಲಿನ ಅಮೆರಿಕ ಸುಂಕ ಈಗ ಕಡಿಮೆಯಾಗಿದೆ. ಭಾರತೀಯ ವಸ್ತುಗಳ ಮೇಲಿನ ಆಮದು ಸುಂಕವನ್ನು ಶೇ. 50 ರಿಂದ ಶೇ.18ಕ್ಕೆ ಕಡಿಮೆಗೊಳಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದಕ್ಕೆ ಬದಲಾಗಿ ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ, ಭಾರತ ಇತರೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಟ್ರಂಪ್ ಹೇಳಿದ್ದಾರೆ.
ಭಾರತ- ಅಮೆರಿಕ ನಡುವಿನ ಹೊಸ ವ್ಯಾಪಾರ ಒಪ್ಪಂದದ ಬಳಿಕ ಚೀನಾ, ಪಾಕಿಸ್ತಾನ, ಇಂಡೋನೇಷ್ಯಾ, ಬಾಂಗ್ಲಾದೇಶ ಮತ್ತು ವಿಯೆಟ್ನಾಂ ಸೇರಿದಂತೆ ಪ್ರಮುಖ ಏಷ್ಯನ್ ದೇಶಗಳಿಗಿಂತ ಭಾರತದ ಮೇಲಿನ ಅಮೆರಿಕ ಸುಂಕ ಕಡಿಮೆಯಾಗಿದೆ. ಆದರೆ, ಯುರೋಪಿಯನ್ ರಾಷ್ಟ್ರಗಳು, ಜಪಾನ್ , ದಕ್ಷಿಣ ಕೊರಿಯಾ ದೇಶಗಳಿಗೆ ಹೋಲಿಸಿದರೆ ಭಾರತದ ಮೇಲಿನ ಸುಂಕ ಸ್ವಲ್ಪ ಹೆಚ್ಚಾಗಿದೆ.
ವಿಯೆಟ್ನಾಂ ಶೇ. 20, ಬಾಂಗ್ಲಾದೇಶ ಶೇ. 20, ಪಾಕಿಸ್ತಾನ ಶೇ. 18, ಮಲೇಷ್ಯಾ ಶೇ. 19, ಕಾಂಬೋಡಿಯಾ ಶೇ.19, ಥೈಲ್ಯಾಂಡ್ ಶೇ.19 ಹಾಗೂ ಚೀನಾದ ಮೇಲೆ ಶೇ. 37 ರಷ್ಟು ಸುಂಕವನ್ನು ಅಮೆರಿಕ ವಿಧಿಸುತ್ತಿದೆ. ಈಗ ಭಾರತದ ಮೇಲೆ ಶೇ. 18 ರಷ್ಟು ಸುಂಕವನ್ನು ವಿಧಿಸುತ್ತಿರುವುದರಿಂದ ಪಾಕಿಸ್ತಾನ, ಚೀನಾಗಿಂತಲೂ ಭಾರತಕ್ಕೆ ಹೆಚ್ಚಿನ ಲಾಭವಾಗಲಿದೆ.
ಅಮೆರಿಕ ಹೆಚ್ಚು ಸುಂಕ ವಿಧಿಸುತ್ತಿರುವ ದೇಶಗಳು: ಅಮೆರಿಕದಲ್ಲಿ ಟ್ರಂಪ್ ಆಡಳಿತಕ್ಕೆ ಬಂದ ನಂತರ ವಿವಿಧ ಕಾರಣಗಳಿಗೆ ಅಮೆರಿಕ ಬ್ರೆಜಿಲ್ ಮೇಲೆ ಶೇ. 50, ಮ್ಯಾನ್ಮಾರ್ ಮೇಲೆ ಶೇ. 40, ಲಾವೋಸ್ ಮೇಲೆ ಶೇ. 40, ಚೀನಾದ ಮೇಲೆ ಶೇ. 37 ಹಾಗೂ ದಕ್ಷಿಣ ಆಫ್ರಿಕಾದ ಮೇಲೆ ಶೇ. 30 ರಷ್ಟು ಸುಂಕ ವಿಧಿಸಿದೆ.
ಕಡಿಮೆ ಸುಂಕ ವಿಧಿಸುತ್ತಿರುವ ದೇಶಗಳು: ಯುನೈಟೆಡ್ ಕಿಂಗ್ ಡಮ್ ಶೇ.10, ಯುರೋಪಿಯನ್ ಒಕ್ಕೂಟ ಶೇ. 15, ಸ್ವಿಟ್ಜರ್ ಲೆಂಡ್ ಶೇ.15, ಜಪಾನ್ ಶೇ.15 ಮತ್ತು ದಕ್ಷಿಣ ಕೊರಿಯಾದ ಮೇಲೆ ಶೇ.15 ರಷ್ಟು ಸುಂಕ ವಿಧಿಸಲಾಗುತ್ತಿದೆ.
ಭಾರತ ಮತ್ತು ಅಮೆರಿಕ ನಡುವಿನ ಒಪ್ಪಂದದ ಷರತ್ತುಗಳು ಏನು?
ಭಾರತ ಹಾಗೂ ಅಮೆರಿಕ ನಡುವಿನ ಒಪ್ಪಂದದ ಬಗ್ಗೆ ಅಧಿಕೃತವಾಗಿ ತಿಳಿದುಬಂದಿಲ್ಲ. ಆದರೆ ರಾಯಿಟರ್ಸ್ ಸುದ್ದಿಸಂಸ್ಥೆ ಕೆಲವು ಒಪ್ಪಂದ ಮತ್ತು ಷರತ್ತುಗಳನ್ನು ವರದಿ ಮಾಡಿದೆ
ಅಮೆರಿಕ ಅಥವಾ ವೆನಿಜುವೆಲಾದಿಂದ ತೈಲ ಖರೀದಿ, ಬಯೋ- ಅಮೆರಿಕನ್ (ವ್ಯಾಪಾರ ನೀತಿಗೆ) ಭಾರತ ಬದ್ಧವಾಗಿರಬೇಕು. ಭಾರತವು ಅಮೆರಿಕದಿಂದ ಕಲ್ಲಿದ್ದಲು, ಇಂಧನ, ತಂತ್ರಜ್ಞಾನ, ಕೃಷಿ ಮತ್ತಿತರ ಉತ್ಪನ್ನಗಳನ್ನು ಖರೀದಿಸಬೇಕು. ಆಯ್ದು ಸರಕುಗಳ ಮೇಲೆ ಭಾರತ ಅಮೆರಿಕದ ಮೇಲೆ ಶೂನ್ಯ ಸುಂಕ ವಿಧಿಸಬೇಕು.
ಟ್ರಂಪ್‌ರ ಟ್ರೋತ್ ಸೋಶಿಯಲ್ ಮೀಡಿಯಾದಲ್ಲಿ ಕಡಿಮೆ ಸುಂಕದ ದರಗಳ ಪ್ರಾರಂಭದ ದಿನಾಂಕ, ರಷ್ಯಾದ ತೈಲ ಖರೀದಿಗಳನ್ನು ಕೊನೆಗೊಳಿಸಲು ಭಾರತಕ್ಕೆ ಗಡುವು, ವ್ಯಾಪಾರ ತಡೆ ಕಡಿತ ಮತ್ತು ಭಾರತವು ಯಾವ US ಉತ್ಪನ್ನಗಳನ್ನು ಖರೀದಿಸಲು ಬದ್ಧವಾಗಿದೆ ಸೇರಿದಂತೆ ಕೆಲವು ವಿವರಗಳನ್ನು ಒದಗಿಸಲಾಗಿದೆ.
ಆದರೆ ಒಪ್ಪಂದದ ನಿಯಮಗಳು ಅಥವಾ ಅದು ಯಾವಾಗ ಜಾರಿಗೆ ಬರಲಿದೆ ಎಂಬುದರ ಕುರಿತು ಭಾರತ ಅಥವಾ ಯುಎಸ್ ಯಾವುದೇ ವಿವರಗಳನ್ನು ನೀಡಿಲ್ಲ. ರಷ್ಯಾ ತೈಲ ಖರೀದಿಯನ್ನು ಭಾರತ ಸ್ಥಗಿತಗೊಳಿಸಿರುವ ವಿಷಯದ ಬಗ್ಗೆ ರಷ್ಯಾ ಯಾವುದೇ ಹೇಳಿಕೆ ನೀಡಿಲ್ಲ.
Advertisement