ರಾಜಕೀಯ ದಂಗೆ, ಶೇಖ್ ಹಸೀನಾ ನಿರ್ಗಮನ ಬಳಿಕ ಇಂದು ಬಾಂಗ್ಲಾದೇಶ ಚುನಾವಣೆ: 51 ಪಕ್ಷಗಳು ಕಣದಲ್ಲಿ, ಭವಿಷ್ಯ ನಿರ್ಧರಿಸುತ್ತಾರೆಯೇ Gen-Z ?

ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ಮತ್ತು ಬಾಂಗ್ಲಾದೇಶ ಜಮಾತ್-ಎ-ಇಸ್ಲಾಮಿ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ.
Security personnel stand guard next to a bullet proof bus of BNP chairman Tarique Rahman featured
ಬಿಎನ್‌ಪಿ ಅಧ್ಯಕ್ಷ ತಾರಿಕ್ ರಹ್ಮಾನ್ ಅವರ ಬುಲೆಟ್‌ಪ್ರೂಫ್ ಬಸ್‌ ಪಕ್ಕದಲ್ಲಿ, ಅವರ ನಿಧನರಾದ ತಂದೆ-ತಾಯಿ — ಮಾಜಿ ಪ್ರಧಾನಮಂತ್ರಿ ಖಾಲೆದಾ ಜಿಯಾ ಮತ್ತು ಮಾಜಿ ರಾಷ್ಟ್ರಪತಿ ಜಿಯೌರ್ ರಹ್ಮಾನ್ ಅವರ ಚಿತ್ರಗಳೊಂದಿಗೆ — ಭದ್ರತಾ ಸಿಬ್ಬಂದಿ ಕಾವಲು
Updated on

ಢಾಕಾ: ಆಗಸ್ಟ್ 2024ರಲ್ಲಿ ಭಾರೀ ಜನಾಂದೋಲನ ಅಂದು ಪ್ರಧಾನ ಮಂತ್ರಿಯಾಗಿದ್ದ ಶೇಖ್ ಹಸೀನಾ ಅಚಾನಕ್ ರಾಜೀನಾಮೆ ನೀಡಿದ ನಂತರ, ಹಲವು ರಾಜಕೀಯ ಪ್ರಕ್ಷುಬ್ಧ ಬೆಳವಣಿಗೆಗಳು ನಡೆದು ಬಾಂಗ್ಲಾದೇಶವು ಇಂದು ಗುರುವಾರ ಮತದಾನಕ್ಕೆ ಸಜ್ಜಾಗಿದೆ. ಅನೇಕ ಮತದಾರರು ಮೊದಲ ಬಾರಿಗೆ ಮತ ಚಲಾಯಿಸುತ್ತಿರುವುದರಿಂದ, ಈ ಚುನಾವಣೆಯು ಅವರಿಗೆ ವಿಶಿಷ್ಟ ಅನುಭವವಾಗಲಿದೆ. ಸಂಸತ್ ಸದಸ್ಯರನ್ನು ಆಯ್ಕೆ ಮಾಡುವುದರ ಜೊತೆಗೆ, ನಾಗರಿಕರು ಸಂವಿಧಾನ ಪರಿಷ್ಕರಣೆಗಳ ಕುರಿತು ಜನಮತ ಸಂಗ್ರಹದಲ್ಲಿಯೂ ಮತ ಚಲಾಯಿಸಲಿದ್ದಾರೆ.

ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ಮತ್ತು ಬಾಂಗ್ಲಾದೇಶ ಜಮಾತ್-ಎ-ಇಸ್ಲಾಮಿ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ.

ಶೇಖ್ ಹಸೀನಾ ವಿರೋಧಿ ಜನಾಂದೋಲನದಿಂದ ಉದ್ಭವಿಸಿದ ಹೊಸದಾಗಿ ಸ್ಥಾಪಿತವಾದ ನ್ಯಾಷನಲ್ ಸಿಟಿಜನ್ ಪಾರ್ಟಿ (NCP) ಜಮಾತ್ ಜೊತೆ 11 ಪಕ್ಷಗಳ ಮೈತ್ರಿಯಾಗಿ ಚುನಾವಣಾ ಕಣಕ್ಕಿಳಿದಿದೆ. ಹಿಂದೆ ಅಧಿಕಾರದಲ್ಲಿದ್ದ ಅನುಭವ ಹೊಂದಿರುವ ಬಿಎನ್‌ಪಿ, ಅವಾಮಿ ಲೀಗ್ ಸ್ಪರ್ಧೆಯಿಂದ ಹೊರಗುಳಿದ ಹಿನ್ನೆಲೆಯಲ್ಲಿ ಪ್ರಾಬಲ್ಯ ಸಾಧಿಸುವ ನಿರೀಕ್ಷೆಯಿತ್ತು. ಆದರೆ ಜಮಾತ್ ತನ್ನ ಬಲವಾದ ರಾಜಕೀಯ ಆಧಾರವನ್ನು ನಿರ್ಮಿಸಿಕೊಂಡಿದ್ದು, ಗಟ್ಟಿಯಾದ ಪ್ರತಿಸ್ಪರ್ಧಿಯಾಗಿ ತನ್ನನ್ನು ಗುರುತಿಸಿಕೊಳ್ಳುತ್ತಿದೆ.

Security personnel stand guard next to a bullet proof bus of BNP chairman Tarique Rahman featured
ಬಾಂಗ್ಲಾದೇಶ ಚುನಾವಣೆಗೆ 3 ದಿನ ಬಾಕಿ: ಹಿಂದೂ ಉದ್ಯಮಿ ಭೀಕರ ಹತ್ಯೆ!

ಹಿಂದಿನ ಚುನಾವಣೆಯಲ್ಲಿ ಜಮಾತ್‌ಗೆ 10% ಕ್ಕಿಂತ ಕಡಿಮೆ ಬೆಂಬಲ ಲಭಿಸಿದ್ದರೆ, ಬಿಎನ್‌ಪಿ 30% ಕ್ಕಿಂತ ಹೆಚ್ಚು ಮತಗಳನ್ನು ಪಡೆದಿತ್ತು. ಅವಾಮಿ ಲೀಗ್ ಸ್ಪರ್ಧೆಯಿಂದ ಹೊರಬಂದ ನಂತರ, ಬಿಎನ್‌ಪಿ ಸುಲಭವಾಗಿ ಬಹುಮತ ಪಡೆಯಲಿದೆ ಎಂದು ಹಲವರು ನಂಬಿದ್ದರು. ಆದರೆ ಜಮಾತ್‌ನ ಪುನರುದ್ಧಾರಿತ ಸ್ಪರ್ಧೆ ಚುನಾವಣಾ ಲೆಕ್ಕಾಚಾರವನ್ನು ಸಂಕೀರ್ಣಗೊಳಿಸಿದ್ದು, ಸಮೀಪದ ಪೈಪೋಟಿಯ ಸಾಧ್ಯತೆಯನ್ನು ಹೆಚ್ಚಿಸಿದೆ.

ಇತ್ತೀಚಿನ ಆಂದೋಲನವನ್ನು ಮುನ್ನಡೆಸಿದ್ದರೂ, ಎನ್‌ಸಿಪಿ ತನ್ನ ಹಿಂದಿನ ವೇಗವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದೆ. ಜಮಾತ್ ಜೊತೆಗಿನ ಮೈತ್ರಿಯಡಿ ಅದು 300 ಸಂಸತ್ ಸ್ಥಾನಗಳಲ್ಲಿ ಕೇವಲ 30 ಸ್ಥಾನಗಳಿಗೆ ಮಾತ್ರ ಸ್ಪರ್ಧಿಸುತ್ತಿದೆ. ಒಟ್ಟು ಸುಮಾರು 50 ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಎಡಪಂಥೀಯ ಹಾಗೂ ಇಸ್ಲಾಮಿಕ್ ಗುಂಪುಗಳೂ ಸೇರಿವೆ. ಇವುಗಳಲ್ಲಿ ಕೆಲವು ಜಮಾತ್-ಎನ್‌ಸಿಪಿ ಮೈತ್ರಿಗೆ ಬೆಂಬಲ ನೀಡುತ್ತಿದ್ದು, ಪ್ರಸ್ತಾವಿತ ಸಂವಿಧಾನ ಪರಿಷ್ಕರಣೆಗಳ ಕುರಿತು ಜನಮತ ಸಂಗ್ರಹ ನಡೆಸುವಂತೆ ಬೇಡಿಕೆಯನ್ನೂ ಮುಂದಿಟ್ಟಿವೆ.

Security personnel stand guard next to a bullet proof bus of BNP chairman Tarique Rahman featured
Watch | ಬಾಂಗ್ಲಾದೇಶ ಚುನಾವಣೆ: ಜನ್-ಝೀ ಹೊಸ ಸರ್ಕಾರದಿಂದ ಏನು ಬಯಸುತ್ತಾರೆ?

ಜನಮತ ಸಂಗ್ರಹ ಮತ್ತು ಸಾಮಾನ್ಯ ಚುನಾವಣೆ ಇಂದು ಒಂದೇ ದಿನ ನಡೆಯಲಿವೆ. ಮತದಾರರು ಎರಡು ಮತಪತ್ರಗಳನ್ನು ಚಲಾಯಿಸಲಿದ್ದಾರೆ — ಒಂದು ಸಂಸತ್ತಿಗಾಗಿ ಮತ್ತು ಮತ್ತೊಂದು ಜನಮತ ಸಂಗ್ರಹಕ್ಕಾಗಿ. ಅವಾಮಿ ಲೀಗ್ ಗೈರುಹಾಜರಿಯು ಅನೇಕ ಮಂದಿಯಲ್ಲಿ ಅನಿಶ್ಚಿತತೆಯನ್ನು ಉಂಟುಮಾಡಿದ್ದು, ಜನಮತ ಸಂಗ್ರಹದ ವಿಷಯವು ಇನ್ನಷ್ಟು ಸಂಕೀರ್ಣತೆಯನ್ನು ಉಂಟುಮಾಡಿದೆ.

ಕಾನೂನು-ಸುವ್ಯವಸ್ಥೆ, ಭದ್ರತೆ ಹೆಚ್ಚಳ

ಕಾನೂನು ಮತ್ತು ಸುವ್ಯವಸ್ಥೆಯ ವಿಷಯವೂ ಆತಂಕಗಳನ್ನು ಹುಟ್ಟಿಸಿದೆ. ಚುನಾವಣಾ ವೇಳಾಪಟ್ಟಿ ಪ್ರಕಟವಾದ ನಂತರದಿಂದ ಚುನಾವಣೆಗೆ ಸಂಬಂಧಿಸಿದ ಸುಮಾರು 400 ಹಿಂಸಾಚಾರ ಘಟನೆಗಳು ವರದಿಯಾಗಿದ್ದು, ಕನಿಷ್ಠ ಐದು ಮಂದಿ ಮೃತಪಟ್ಟಿದ್ದಾರೆ. ಅಧಿಕಾರಿಗಳು ಚುನಾವಣೆ ಶಾಂತಿಯುತವಾಗಿ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶದಾದ್ಯಂತ 42,761 ಮತಗಟ್ಟೆಗಳಲ್ಲಿ 7 ಲಕ್ಷಕ್ಕಿಂತ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಿಂದಿನ ಚುನಾವಣೆಯಲ್ಲಿ ಫಲಿತಾಂಶಗಳನ್ನು 12 ರಿಂದ 20 ಗಂಟೆಗಳೊಳಗೆ ಪ್ರಕಟಿಸಲಾಗುತ್ತಿತ್ತು; ಆದರೆ ಈ ಬಾರಿ ಎರಡು ಮತಪತ್ರಗಳು ಮತ್ತು ಹೆಚ್ಚಿದ ಮತದಾರರ ಭಾಗವಹಿಸುವಿಕೆ ಕಾರಣದಿಂದ ಮತ ಎಣಿಕೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಬಿಎನ್‌ಪಿ ಮತ್ತು ಜಮಾತ್ ಎರಡೂ ಪರಸ್ಪರ ಅನುಮಾನ ವ್ಯಕ್ತಪಡಿಸಿದ್ದು, ಸಮರ್ಪಕ ಸಿದ್ಧತೆಗಳ ಕೊರತೆ ಮತ್ತು ಸಮಾನ ಸ್ಪರ್ಧಾ ವಾತಾವರಣದ ಕೊರತೆಯಿದೆ ಎಂದು ಚುನಾವಣಾ ಆಯೋಗವನ್ನು ಟೀಕಿಸಿವೆ. ಅವರು ಸಂಭವನೀಯ ಹಸ್ತಕ್ಷೇಪ ಬಗ್ಗೆ ಸೂಚನೆ ನೀಡಿದೆ. ಮತ ಚಲಾಯಿಸಲು ಅನೇಕ ಢಾಕಾ ನಿವಾಸಿಗಳು ತಮ್ಮ ಸ್ವಗ್ರಾಮಗಳಿಗೆ ಹಿಂತಿರುಗಿದ್ದು, ಬೆಂಬಲಿಗರ ಪ್ರಯಾಣ ವೆಚ್ಚವನ್ನು ಪಕ್ಷಗಳು ಹೆಚ್ಚಾಗಿ ಭರಿಸುತ್ತಿವೆ.

ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಗುಂಪುಗಳಿಂದ ಚುನಾವಣೆಗೆ ಒತ್ತಡ ಇದ್ದರೂ, ಅವಾಮಿ ಲೀಗ್ ಮತ್ತು ಇತರ ಕೆಲವು ಪಕ್ಷಗಳಿಲ್ಲದೆ ಈ ಚುನಾವಣೆ ನಡೆಯಲಿದೆ. ಇದರಿಂದ ಮತದಾರರ ಹಾಜರಾತಿ ಮತ್ತು ಚುನಾವಣೆಯ ಮಾನ್ಯತೆ ಕುರಿತು ಆತಂಕಗಳು ವ್ಯಕ್ತವಾಗಿವೆ.

ಇಂದಿನ ಮತದಾನವು ಬಾಂಗ್ಲಾದೇಶದ ರಾಜಕೀಯ ಭವಿಷ್ಯವನ್ನು ರೂಪಿಸಿ, ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಗೆ ದಾರಿ ಮಾಡಿಕೊಡಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಚುನಾವಣಾ ಆಯೋಗ ಹಾಗೂ ಇತರ ಸಂಸ್ಥೆಗಳ ಮೇಲೆ ಸಾರ್ವಜನಿಕ ವಿಶ್ವಾಸ ಕಡಿಮೆಯಿದ್ದರೂ ಕೂಡ ನಾಗರಿಕರು ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಯ ನಿರೀಕ್ಷೆಯಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com