

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ, ಭಾರತ–ಪಾಕಿಸ್ತಾನ ನಡುವಿನ 2025ರ ಮೇ ತಿಂಗಳ ಆಪರೇಷನ್ ಸಿಂಧೂರ್ ಸಂಘರ್ಷವನ್ನು ತಾನು ತಡೆದಿರಲಿಲ್ಲವಾದರೆ 3.5 ಕೋಟಿ ಜನರು ಸಾಯುತ್ತಿದ್ದರು ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಹೇಳಿದ್ದಾಗಿ ಪ್ರತಿಪಾದಿಸಿದ್ದಾರೆ.
ದೇಶವನ್ನುದ್ದೇಶಿಸಿ ನಿನ್ನೆ 100 ನಿಮಿಷಕ್ಕಿಂತ ಹೆಚ್ಚು ಕಾಲ ನೀಡಿದ ತಮ್ಮ ಸ್ಟೇಟ್ ಆಫ್ ದ ಯೂನಿಯನ್ ಭಾಷಣದಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಅಣುಯುದ್ಧಕ್ಕೆ ತಿರುಗುತ್ತಿತ್ತು, ಆದರೆ ತಾನು ಅದನ್ನು ತಪ್ಪಿಸಿದ್ದೇನೆ ಎಂದು ಪುನರುಚ್ಚರಿಸಿದರು.
ನನ್ನ ಎರಡನೇ ಬಾರಿಯ ಅಧ್ಯಕ್ಷ ಆಡಳಿತದ ಮೊದಲ 10 ತಿಂಗಳಲ್ಲಿ ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಅದರಲ್ಲಿ ಪಾಕಿಸ್ತಾನ ಮತ್ತು ಭಾರತ ದೇಶಗಳ ನಡುವಿನ ಯುದ್ಧಗಳು ಕೂಡ ಸೇರಿವೆ. ಅದು ಅಣುಯುದ್ಧವಾಗಬಹುದಾಗಿತ್ತು. ಪಾಕಿಸ್ತಾನ ಪ್ರಧಾನಿಯವರೇ ಹೇಳಿದ್ದು, ನನ್ನ ಹಸ್ತಕ್ಷೇಪ ಇರದಿದ್ದರೆ 3.5 ಕೋಟಿ ಮಂದಿ ಸಾಯುತ್ತಿದ್ದರು ಎಂದರು.
ಈ ಹಿಂದೆ ಕೂಡ ಟ್ರಂಪ್ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದು, ಶರೀಫ್ ತಮ್ಮನ್ನು ಲಕ್ಷಾಂತರ ಜೀವಗಳನ್ನು ಉಳಿಸಿದ ವ್ಯಕ್ತಿ ಎಂದು ಕೊಂಡಾಡಿದ್ದಾರೆ ಎಂದು ಹೇಳಿದ್ದಾರೆ. ಹಿಂದಿನ ಸಂದರ್ಭಗಳಲ್ಲಿ ಅವರು 2.5 ಕೋಟಿ ಮತ್ತು ನಂತರ 1 ಕೋಟಿ ಜೀವಗಳು ಉಳಿದವು ಎಂದು ಕಡಿಮೆ ಅಂಕಿಗಳನ್ನು ಉಲ್ಲೇಖಿಸಿದ್ದರು.
2025ರ ಮೇ 7ರಂದು ಭಾರತವು “ಆಪರೇಶನ್ ಸಿಂಧೂರ್” ಆರಂಭಿಸಿ, ಏಪ್ರಿಲ್ 22ರಂದು ಪಹಲ್ಗಾಂನಲ್ಲಿ 26 ನಾಗರಿಕರು ಮೃತಪಟ್ಟ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿತ್ತು.
ಡೊನಾಲ್ಡ್ ಟ್ರಂಪ್ ಮೇ 10ರಂದು ಸಾಮಾಜಿಕ ಜಾಲತಾಣದಲ್ಲಿ ದೀರ್ಘ ರಾತ್ರಿಯ ಮಾತುಕತೆಗಳ ನಂತರ ಅಮೆರಿಕ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಯುದ್ಧ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಿದ ಬಳಿಕದಿಂದ, ಈ ಸಂಘರ್ಷವನ್ನು ತಾನು ತಡೆದಿದ್ದೇನೆ ಎಂಬ ಹೇಳಿಕೆಯನ್ನು ಸುಮಾರು 100 ಬಾರಿ ಮಾಡಿದ್ದಾರೆ.
ಆದರೆ ಭಾರತವು, ಶಸ್ತ್ರಸಂಘರ್ಷ ನಿಲ್ಲಿಸುವ ಕುರಿತು ಉಭಯ ದೇಶಗಳ ಸೈನ್ಯಗಳ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್‌ಗಳ ನಡುವೆ ನೇರ ಮಾತುಕತೆಯ ಬಳಿಕವೇ ಒಪ್ಪಂದ ತಲುಪಲಾಗಿದೆ ಎಂದು ನಿರಂತರವಾಗಿ ಸ್ಪಷ್ಟಪಡಿಸಿದೆ.
ಭಾರತವು, ಜಮ್ಮು- ಕಾಶ್ಮೀರ ಸೇರಿದಂತೆ ಪಾಕಿಸ್ತಾನದೊಂದಿಗೆ ಇರುವ ಎಲ್ಲಾ ವಿಷಯಗಳು ದ್ವಿಪಕ್ಷೀಯ ಮಾತುಕತೆಗಳ ಮೂಲಕವೇ ಪರಿಹರಿಸಬೇಕು ಎಂಬ ತನ್ನ ನಿಲುವನ್ನು ಮರುದೃಢಪಡಿಸಿದೆ.
ಇದೇ ವೇಳೆ, ತಮ್ಮ ಭಾಷಣದಲ್ಲಿ ಟ್ರಂಪ್ ಕಾಂಬೋಡಿಯಾ–ಥೈಲ್ಯಾಂಡ್, ಕೋಸೊವೊ–ಸರ್ಬಿಯಾ, ಇಸ್ರೇಲ್–ಇರಾನ್, ಈಜಿಪ್ಟ್–ಇಥಿಯೋಪಿಯಾ, ಅರ್ಮೇನಿಯಾ–ಅಜರ್ಬೈಜಾನ್, ಕಾಂಗೋ–ರುವಾಂಡಾ ಮತ್ತು ಗಾಜಾ ಯುದ್ಧ ಸೇರಿದಂತೆ ಹಲವು ಸಂಘರ್ಷಗಳನ್ನು ತಾವು ತಡೆಯಲು ಸಹಾಯ ಮಾಡಿದ್ದೇನೆ ಎಂದು ಹೇಳಿದರು. ಗಾಜಾ ಯುದ್ಧ ಈಗ ತೀರ ಕಡಿಮೆ ಮಟ್ಟದಲ್ಲಿ ಮುಂದುವರಿಯುತ್ತಿದೆ ಎಂದೂ ಹೇಳಿದರು.
ನಾವು ದೇಶದ ಒಳಗೆ ಮತ್ತು ಹೊರಗೆ ಅಮೆರಿಕನ್ನರ ಭದ್ರತೆಯನ್ನು ಮರುಸ್ಥಾಪಿಸುತ್ತಿದ್ದೇವೆ. ನಮ್ಮ ದೇಶ ಎಂದಿಗೂ ಇಷ್ಟು ಬಲವಾಗಿರಲಿಲ್ಲ ಎಂದು ತಮ್ಮ ಎರಡನೇ ಅವಧಿಯ ಎರಡನೇ ಸ್ಟೇಟ್ ಆಫ್ ದ ಯೂನಿಯನ್ ಭಾಷಣದಲ್ಲಿ ಟ್ರಂಪ್ ಹೇಳಿದರು.
ಭಾಷಣದ ವೇಳೆ ಕೆಲ ಡೆಮಾಕ್ರಾಟ್ ಶಾಸಕರು ಅಡ್ಡಿಪಡಿಸಿದಾಗ, ನೋಡಿ, ಹೇಗೆ ಹಾಸ್ಯಾಸ್ಪದವಾಗಿದೆ? ಅಸ್ವಸ್ಥ ಜನರು, ಎಂದು ಟ್ರಂಪ್ ಪ್ರತಿಕ್ರಿಯಿಸಿದರು.
ಫೆಬ್ರವರಿ 19ರಂದು ವಾಷಿಂಗ್ಟನ್‌ನಲ್ಲಿ ನಡೆದ ‘ಬೋರ್ಡ್ ಆಫ್ ಪೀಸ್’ ಕಾರ್ಯಕ್ರಮದಲ್ಲಿಯೂ ಟ್ರಂಪ್ ಇದೇ ಹೇಳಿಕೆ ಪುನರಾವರ್ತಿಸಿ, ಯುದ್ಧವನ್ನು ತಡೆದು 2.5 ಕೋಟಿ ಜೀವಗಳನ್ನು ಉಳಿಸಿದ್ದೇನೆ ಎಂದು ಶರೀಫ್ ಹೇಳಿದ್ದಾರೆ ಎಂದು ಹೇಳಿದ್ದರು. ಅಲ್ಲದೆ, ಸಂಘರ್ಷದ ವೇಳೆ ಹೊಡೆದುರುಳಿಸಿದ ಯುದ್ಧವಿಮಾನಗಳ ಸಂಖ್ಯೆಯನ್ನು 11ಕ್ಕೆ ಏರಿಸಿದ್ದರು.
Advertisement