

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಎರಡನೇ ಅಧ್ಯಕ್ಷ ಅವಧಿಯ ಮೊದಲ ಸ್ಟೇಟ್ ಆಫ್ ದ ಯೂನಿಯನ್ ಭಾಷಣದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. “ಮೇಕ್ ಅಮೆರಿಕಾ ಗ್ರೇಟ್ ಅಗೈನ್” ಎಂಬ ತಮ್ಮ ಕಾರ್ಯಸೂಚಿಯನ್ನು ಕೇಂದ್ರೀಕರಿಸಿ ಅವರು ಭಾಷಣ ಮಾಡಿದರು.
ತಮ್ಮ ಭಾಷಣದಲ್ಲಿ, ಡೊನಾಲ್ಡ್ ಟ್ರಂಪ್ ಅವರು ಅಧಿಕಾರದಲ್ಲಿದ್ದ ಮೊದಲ ವರ್ಷದ ಬಗ್ಗೆ ಪ್ರಸ್ತಾಪಿಸಿದರು. ಆ ಅವಧಿಯಲ್ಲಿ ಆರ್ಥಿಕ ಪುನರುಜ್ಜೀವನ, ಗಡಿಭದ್ರತೆಯನ್ನು ಕಠಿಣಗೊಳಿಸುವುದು ಮತ್ತು ಅಮೆರಿಕವನ್ನು ಮಹಾಶಕ್ತಿಯಾಗಿ ಇನ್ನಷ್ಟು ದೃಢವಾಗಿ ಸ್ಥಾಪಿಸುವುದು ಮುಖ್ಯ ಆದ್ಯತೆಗಳಾಗಿದ್ದವು ಎಂದು ಹೇಳಿದರು. ಇತ್ತೀಚೆಗೆ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಅಮೆರಿಕದ ಐಸ್ ಹಾಕಿ ತಂಡವನ್ನೂ ಅವರು ಆಹ್ವಾನಿಸಿದ್ದರು.
ಟ್ರಂಪ್ ಭಾಷಣದ ಮುಖ್ಯಾಂಶಗಳು
ಡೊನಾಲ್ಡ್ ಟ್ರಂಪ್ ಅವರು ದೇಶವನ್ನು ಸ್ಥಗಿತಗೊಂಡ ಆರ್ಥಿಕತೆ, ಮುಕ್ತ ಗಡಿಗಳು ಹಾಗೂ ಪೊಲೀಸ್ ಮತ್ತು ಸೇನೆಯಲ್ಲಿ ಕಡಿಮೆ ನೇಮಕಾತಿಯ ಸ್ಥಿತಿಯಲ್ಲಿದೆ ಎಂದು ಹೇಳಿದರು. ಈಗ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ, ಗಡಿಗಳು ಸುರಕ್ಷಿತವಾಗಿವೆ ಮತ್ತು ಪೊಲೀಸ್ ಪಡೆ ಎಂದಿಗಿಂತ ಬಲವಾಗಿದೆ ಎಂದು ಹೇಳಿದರು.
ಕಳೆದ ಒಂಬತ್ತು ತಿಂಗಳಲ್ಲಿ ಅಕ್ರಮ ವಲಸಿಗರು ಯಾರೂ ಅಮೆರಿಕ ಪ್ರವೇಶಿಸಿಲ್ಲ ಎಂದು ಟ್ರಂಪ್ ಹೇಳಿ, ಕಾನೂನುಬದ್ಧವಾಗಿ ಮಾತ್ರ ಜನರಿಗೆ ಪ್ರವೇಶ ನೀಡಲಾಗುತ್ತದೆ ಎಂದರು.
“ನಮ್ಮ ದೇಶ ಮತ್ತೆ ಮರಳಿದೆ — ಹಿಂದಿಗಿಂತ ಶ್ರೀಮಂತ ಮತ್ತು ಬಲಿಷ್ಠವಾಗಿದೆ,” ಎಂದು ಅವರು ಹೇಳಿದರು. ಜುಲೈ 4ರಂದು ಅಮೆರಿಕದ ಸ್ವಾತಂತ್ರ್ಯದ 250 ವರ್ಷಾಚರಣೆಯನ್ನು ದೇಶ ಆಚರಿಸಲಿದೆ ಎಂದು ತಿಳಿಸಿದರು.
ಹತ್ಯೆ ಪ್ರಮಾಣ ಇತಿಹಾಸದಲ್ಲೇ ಸಾಕಷ್ಟು ಕಡಿಮೆಯಾಗಿದೆ ಎಂದು ಟ್ರಂಪ್ ಹೇಳಿದರು. ಮೂಲ ದರ ಏರಿಕೆ (Core inflation) ಕಳೆದ ಐದು ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, 2025ರ ಕೊನೆಯ ಮೂರು ತಿಂಗಳಲ್ಲಿ ಅದು 1.75 ಶೇಕಡಾಗಿತ್ತು ಎಂದರು. ಇಂಧನದ ಬೆಲೆ ಗ್ಯಾಲನ್‌ಗೆ 1.85 ಡಾಲರ್ ಗೆ ಇಳಿದಿದೆ ಎಂದರು.
ಸಾಮಾನ್ಯ ಗೃಹ ಸಾಲದ ವಾರ್ಷಿಕ ವೆಚ್ಚ ಒಂದು ವರ್ಷದಲ್ಲಿ 5,000 ಡಾಲರ್ ಕಡಿಮೆಯಾಗಿದೆ. ಷೇರು ಮಾರುಕಟ್ಟೆ ಒಂದು ವರ್ಷದಲ್ಲಿ 53 ಬಾರಿ ಹೊಸ ದಾಖಲೆಗಳನ್ನು ನಿರ್ಮಿಸಿದೆ ಎಂದು ಅವರು ಹೇಳಿದರು.
ಕಳೆದ 12 ತಿಂಗಳಲ್ಲಿ ಜಗತ್ತಿನ ವಿವಿಧ ಭಾಗಗಳಿಂದ 18 ಟ್ರಿಲಿಯನ್ ಡಾಲರ್ ಹೂಡಿಕೆ ಅಮೆರಿಕಕ್ಕೆ ಬಂದಿದೆ ಎಂದರು. ವೆನೆಜುವೆಲಾದಿಂದ 80 ಮಿಲಿಯನ್ ಡಾಲರ್ ಮೌಲ್ಯದ ತೈಲವನ್ನು ಪಡೆದಿದ್ದೇವೆ, “Drill Baby Drill” ಎಂಬ ನನ್ನ ವಾಗ್ದಾನವನ್ನು ನೆರವೇರಿಸಿದ್ದೇನೆ ಎಂದು ಹೇಳಿದರು.
ದೇಶದ ಇತಿಹಾಸದಲ್ಲೇ ಹೆಚ್ಚು ಮಂದಿ ಉದ್ಯೋಗಸ್ಥರಾಗಿದ್ದಾರೆ ಹಾಗೂ ಖಾಸಗಿ ವಲಯದಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ.
ಚುನಾವಣೆಗಳಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದ ಟ್ರಂಪ್, ತಮಗೆ ಮೂರನೇ ಅವಧಿಗೂ ಅಧ್ಯಕ್ಷ ಅವಕಾಶ ಇರಬೇಕು ಎಂದು ಹೇಳಿದರು. ಮತದಾನದ ವೇಳೆ ನಾಗರಿಕತ್ವದ ದಾಖಲೆ ಮತ್ತು ಮತದಾರ ಗುರುತಿನ ಚೀಟಿ ಕಡ್ಡಾಯವಾಗಬೇಕು ಎಂದರು.
ಲಿಂಗ ಪರಿವರ್ತನೆ (gender transition) ವಿಚಾರದಲ್ಲೂ ಟೀಕಿಸಿದರು. ಡೆಮಾಕ್ರಾಟ್ ಪಕ್ಷವನ್ನು “ಹುಚ್ಚರು” ಎಂದು ಕರೆದ ಅವರು, ದೇಶವನ್ನು ಅವರು ಹಾಳು ಮಾಡುತ್ತಿದ್ದರು, ತಮ್ಮ ಆಡಳಿತ ಸಮಯಕ್ಕೆ ತಕ್ಕಂತೆ ಅದನ್ನು ತಡೆದಿದೆ ಎಂದರು. ಕಳೆದ ವರ್ಷ ಸಾವಿಗೀಡಾದ ಸ್ನೇಹಿತ ಚಾರ್ಲಿ ಕಿರ್ಕ್ ಅವರಿಗೆ ಗೌರವ ನಮನ ಸಲ್ಲಿಸಿದರು.
ಇದೇ ವೇಳೆ, ಥಾಯ್ಲ್ಯಾಂಡ್–ಕಾಂಬೋಡಿಯಾ ಮತ್ತು ಭಾರತ–ಪಾಕಿಸ್ತಾನ ಸೇರಿದಂತೆ ಎಂಟು ಅಂತಾರಾಷ್ಟ್ರೀಯ ಸಂಘರ್ಷಗಳನ್ನು ತಾನು ತಡೆಯಲು ಸಹಾಯ ಮಾಡಿದ್ದೇನೆ ಎಂದು ಟ್ರಂಪ್ ಪುನರುಚ್ಛರಿಸಿದರು. ಆದರೆ ವಿಶ್ಲೇಷಕರು ಈ ರೀತಿಯ ಮಾತುಗಳು ಅತಿರೇಕವಾಗಿರಬಹುದು ಮತ್ತು ಅಮೆರಿಕದ ಪಾತ್ರ ಎಲ್ಲ ಸಂದರ್ಭಗಳಲ್ಲೂ ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.
Advertisement