

ಇಸ್ಲಾಮಾಬಾದ್: 'ಆಪರೇಷನ್ ಸಿಂಧೂರ' ವೇಳೆ ಭಾರತ ಜೊತೆಗಿನ ಉದ್ವಿಗ್ನತೆ ಶಮನಗೊಳಿಸುವಲ್ಲಿ ಮಧ್ಯಸ್ಥಿಕೆ ವಹಿಸಿದೆ ಎಂಬ ಚೀನಾದ ಹೇಳಿಕೆಯನ್ನು ಪಾಕಿಸ್ತಾನ ಬೆಂಬಲಿಸಿದೆ. ಇದನ್ನು ಶಾಂತಿಗಾಗಿ ಅಂತಾರಾಷ್ಟ್ರೀಯ ಪ್ರಯತ್ನಗಳ ಭಾಗವಾದ ರಾಜತಾಂತ್ರಿಕತೆ ಎಂದು ಕರೆದಿದೆ.
ಚೀನಾದ ನಾಯಕರು ಪಾಕಿಸ್ತಾನದ ನಾಯಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಮೇ 6 ರಿಂದ 10 ರವರೆಗಿನ ಆ ಮೂರ್ನಾಲ್ಕು ದಿನಗಳಲ್ಲಿ ಭಾರತೀಯ ನಾಯಕರೊಂದಿಗೂ ಸಂಪರ್ಕದಲ್ಲಿದ್ದರು. ಆ ಸಂದರ್ಭದಲ್ಲಿ ಅಥವಾ ತದನಂತರ ಚೀನಾ ಮಧ್ಯಸ್ಥಿಕೆ ವಹಿಸಿರಬಹುದು ಎಂದು ವಿದೇಶಾಂಗ ಕಚೇರಿಯ ವಕ್ತಾರ ತಾಹಿರ್ ಅಂದ್ರಾಬಿ ಹೇಳಿದ್ದಾರೆ.
ಸಕಾರಾತ್ಮಕ ರಾಜತಾಂತ್ರಿಕ ಮಾತುಕತೆಯೊಂದಿಗೆ ಉದ್ವಿಗ್ನತೆ ತಗ್ಗಿಸುವಲ್ಲಿ ಮತ್ತು ಆ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆ ತರುವಲ್ಲಿ ಬೀಜಿಂಗ್ ಕೊಡುಗೆ ನೀಡಿದ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಕಳೆದ ಮೇ 7ರಿಂದ 10 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಎರಡೂ ದೇಶಗಳ ಸೇನೆಗಳ ಡಿಜಿಎಂಒಗಳ (ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು) ನೇರ ಮಾತುಕತೆಯ ಮೂಲಕ ಪರಿಹರಿಸಲಾಗಿದೆ ಎಂದು ಭಾರತ ಹೇಳಿದೆ.
ಈ ವರ್ಷ ಚೀನಾ ಮಧ್ಯಸ್ಥಿಕೆ ವಹಿಸಿದ ಪ್ರಮುಖ ಸಮಸ್ಯೆಗಳ ಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳ ಉದ್ವಿಗ್ನತೆಯೂ ಸೇರಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಕಳೆದ ಮಂಗಳವಾರ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಮೇ 7-10 ರ ಸಂಘರ್ಷವನ್ನು ಉಭಯ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವಿನ ನೇರ ಮಾತುಕತೆಯ ಮೂಲಕ ಪರಿಹರಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕೆ ಜಾಗವಿಲ್ಲ ಎಂದು ಭಾರತ ನಿರಂತರವಾಗಿ ಹೇಳುತ್ತಾ ಬಂದಿದೆ.
Advertisement