

ಆಸ್ಕರ್ ಪ್ರಶಸ್ತಿ ವಿಜೇತ, ಹಾಲಿವುಡ್ ಸಿನಿಮಾ ಸರಣಿ 'ಮೆನ್ ಇನ್ ಬ್ಲ್ಯಾಕ್'ನ ನಟ ಟಾಮಿ ಲೀ ಜೋನ್ಸ್ ಅವರ ಪುತ್ರಿ ವಿಕ್ಟೋರಿಯಾ ಕಾಫ್ಕಾ ಜೋನ್ಸ್ ಸಾವಿನ ಸುದ್ದಿ ಹೊಸ ವರ್ಷದ ಆಚರಣೆಯಲ್ಲಿದ್ದ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಹೋಟೆಲ್‌ವೊಂದರಲ್ಲಿ ವಿಕ್ಟೋರಿಯಾ ಶವ ಪತ್ತೆಯಾಗಿದೆ. ಜನವರಿ 1ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ 34 ವರ್ಷದ ಮಹಿಳೆ ಶವ ಪತ್ತೆಯಾಗಿರುವ ಸುದ್ದಿ ಪೊಲೀಸರಿಗೆ ಮುಟ್ಟಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪರಿಶೀಲನೆ ನಡೆಸಿದರು. ಆದರೆ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಗುರುವಾರ ಬೆಳಿಗ್ಗೆ 2:52ರ ಸುಮಾರಿಗೆ ಸ್ಯಾನ್ ಫ್ರಾನ್ಸಿಸ್ಕೋದ ನೋಬ್ ಹಿಲ್ ಬಳಿ ಇರುವ ಐತಿಹಾಸಿಕ ಫೇರ್‌ಮಾಂಟ್ ಹೋಟೆಲ್‌ನಲ್ಲಿ ವೈದ್ಯಕೀಯ ತುರ್ತುಸ್ಥಿತಿಯ ಬಗ್ಗೆ ತುರ್ತು ಸೇವೆಗೆ ಕರೆಬಂದಿತ್ತು. ಅರೆವೈದ್ಯರು ಬರುವ ಹೊತ್ತಿಗೆ ಹೊಟೇಲ್ ಸಿಬ್ಬಂದಿ ವಿಕ್ಟೋರಿಯಾಗೆ ಸಿಪಿಆರ್ ಮಾಡಲು ಪ್ರಯತ್ನಿಸುತ್ತಿದ್ದರು. ಆದರೆ ಆಕೆಯನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವೈದ್ಯರು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ವಿಕ್ಟೋರಿಯಾ ಜೋನ್ಸ್ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ಯಾನ್ ಫ್ರಾನ್ಸಿಸ್ಕೋ ಪೊಲೀಸ್ ಇಲಾಖೆ ಮತ್ತು ಮುಖ್ಯ ವೈದ್ಯಕೀಯ ಪರೀಕ್ಷಕರ ಕಚೇರಿಯು ಕೂಲಂಕಷ ತನಿಖೆ ನಡೆಸುತ್ತಿದೆ. ಕೋಣೆಯಲ್ಲಿ ಅವರ ಜೊತೆ ಬೇರೆ ಯಾರಾದರೂ ಇದ್ದಾರೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಅಧಿಕಾರಿಗಳು ಇನ್ನೂ ಯಾವುದೇ ಅಪರಾಧವನ್ನು ದೃಢಪಡಿಸಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವೇ ಸಾವಿನ ನಿಖರ ಕಾರಣ ತಿಳಿಯಲಿದೆ.
1991ರಲ್ಲಿ ಜನಿಸಿದ ವಿಕ್ಟೋರಿಯಾ ಜೋನ್ಸ್, ಟಾಮಿ ಲೀ ಜೋನ್ಸ್ ಮತ್ತು ಅವರ ಮಾಜಿ ಪತ್ನಿ ಕಿಂಬರ್ಲಿ ಕ್ಲೌಗ್ಲಿ ದಂಪತಿಗಳ ಪುತ್ರಿ. ತನ್ನ ತಂದೆಯ ಹೆಜ್ಜೆಗಳನ್ನು ಅನುಸರಿಸಿ, ವಿಕ್ಟೋರಿಯಾ ಬಾಲ್ಯದಲ್ಲಿಯೇ ನಟನಾ ಜಗತ್ತಿಗೆ ಪ್ರವೇಶಿಸಿದಳು. ಅವರು ಜನಪ್ರಿಯ ಚಲನಚಿತ್ರ "ಮೆನ್ ಇನ್ ಬ್ಲ್ಯಾಕ್ II" ಮತ್ತು ಟಿವಿ ಕಾರ್ಯಕ್ರಮ "ಒನ್ ಟ್ರೀ ಹಿಲ್" ನಲ್ಲಿ ಕಾಣಿಸಿಕೊಂಡರು. ಇದಲ್ಲದೆ, ಅವರು 2005ರಲ್ಲಿ ತಮ್ಮ ತಂದೆ ನಿರ್ದೇಶಿಸಿದ "ದಿ ತ್ರೀ ಬರಿಯಲ್ಸ್ ಆಫ್ ಮೆಲ್ಕ್ವಿಯೇಡ್ಸ್ ಎಸ್ಟ್ರಾಡಾ" ಚಿತ್ರದಲ್ಲಿ ಅಭಿನಯಿಸಿದ್ದರು. ಅನೇಕ ಹಾಲಿವುಡ್ ಸೆಲೆಬ್ರಿಟಿಗಳು ಟಾಮಿ ಲೀ ಜೋನ್ಸ್ ಮತ್ತು ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
Advertisement