

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಕ್ರೌರ್ಯ ಮುಂದುವರೆದಿದ್ದು, ಈ ಬಾರಿ ಹಿಂದೂ ವಿಧವೆ ಮೇಲೆ ಇಬ್ಬರು ದುಷ್ಕರ್ಮಿಗಳು ಗ್ಯಾಂಗ್ ರೇಪ್ ಮಾಡಿ ಆಕೆಯ ಕೂದಲನ್ನು ಕತ್ತರಿಸಿ ಹಾಕಿರುವ ದಾರುಣ ಘಟನೆ ವರದಿಯಾಗಿದೆ.
ಬಾಂಗ್ಲಾದೇಶದ ಜೆನೈದಾ ಜಿಲ್ಲೆಯ ಕಲಿಗಂಜ್ ಉಪ-ಜಿಲ್ಲೆಯಲ್ಲಿ 40 ವರ್ಷದ ಹಿಂದೂ ವಿಧವೆಯೊಬ್ಬರ ಮೇಲೆ ಇಬ್ಬರು ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಆಕೆಯ ಕೂದಲನ್ನು ಕತ್ತರಿಸಿ, ಮರಕ್ಕೆ ಕಟ್ಟಿಹಾಕಿ, ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಈ ಘಟನೆ ದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಬಗ್ಗೆ ಕಳವಳ ಮೂಡಿಸಿದ್ದು, ಇದೇ ದಿನ ಶರಿಯತ್‌ಪುರದಲ್ಲಿ ಹಿಂದೂ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಭಾರತವು ಈ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳನ್ನು ಶಹೀನ್ ಮತ್ತು ಆತನ ಸಹೋದರ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ ಅತ್ಯಾಚಾರಕ್ಕೊಳಗಾದ ಮಹಿಳೆ, ಸುಮಾರು ಎರಡೂವರೆ ವರ್ಷಗಳ ಹಿಂದೆ ಆರೋಪಿ ಶಹೀನ್ ಮತ್ತು ಆತನ ಸಹೋದರನಿಂದ ಜಾಗದಲ್ಲಿದ್ದ ಎರಡು ಅಂತಸ್ತಿನ ಮನೆಯನ್ನು 20 ಲಕ್ಷ ಟಾಕಾಗೆ (ಬಾಂಗ್ಲಾದೇಶದ ಕರೆನ್ಸಿ) ಖರೀದಿಸಿದ್ದರು.
ಆಗಾಗ ಮನೆಗೆ ಬರುತ್ತಿದ್ದ ಶಹೀನ್ ಸಹೋದರರು
ಇನ್ನು ಮನೆ ಕೊಂಡು ಅದರಲ್ಲಿ ಜೀವನ ನಡೆಸುತ್ತಿದ್ದ ಆ ವಿಧವೆಯನ್ನು ಮಾತನಾಡಿಸಲು ಆರೋಪಿ ಶಹೀನ್ ಆಗಾಗ ಬರುತ್ತಿದ್ದರು. ಈ ವೇಳೆ ಆಕೆಗೆ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದ. ಮಹಿಳೆ ನಿರಾಕರಿಸಿದಾಗ, ಶನಿವಾರ ಸಂಜೆ ಆಕೆಯ ಗ್ರಾಮದ ಇಬ್ಬರು ಸಂಬಂಧಿಕರು ಭೇಟಿ ನೀಡಿದ್ದಾಗ, ಶಹೀನ್ ಮತ್ತು ಆತನ ಸಹೋದರ ಹಸನ್, ವಿಧವೆ ವಾಸವಿದ್ದ ಮನೆಗೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಅವರಿಂದ 50,000 ಟಾಕಾ (ಸುಮಾರು 37,000 ರೂ.) ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಮೊಬೈಲ್ ನಲ್ಲಿ ಕೃತ್ಯದ ವಿಡಿಯೋ
ಮಹಿಳೆ ಕಿರುಚಲು ಪ್ರಾರಂಭಿಸಿದಾಗ, ಆಕೆಯನ್ನು ಮರಕ್ಕೆ ಕಟ್ಟಿಹಾಕಿ, ಆಕೆಯ ಕೂದಲನ್ನು ಕತ್ತರಿಸಿ, ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ದುಷ್ಕರ್ಮಿಗಳು ಮಹಿಳೆಯನ್ನು ಚಿತ್ರಹಿಂಸೆ ನೀಡಿದ್ದರಿಂದ ಆಕೆ ಅರೆ ಪ್ರಜ್ಞಾವಸ್ಥೆಗೆ ತಲುಪಿದ್ದಾಳೆ. ಸ್ಥಳೀಯರು ಆಕೆಯನ್ನು ರಕ್ಷಿಸಿ ಜೆನೈದಾ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯ ಅಧೀಕ್ಷಕ ಡಾ. ಎಂ.ಡಿ. ಮುಸ್ತಫಿಝುರ್ ರಹಮಾನ್ ಅವರು ವಿಚಾರಿಸಿದಾಗ ಆ ಮಹಿಳೆ ಮೊದಲು ಏನು ನಡೆದಿದೆ ಎಂದು ವೈದ್ಯರಿಗೆ ಹೇಳಿರಲಿಲ್ಲ. ಆದರೆ ವೈದ್ಯಕೀಯ ಪರೀಕ್ಷೆಯ ನಂತರ ಆಕೆಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ತಿಳಿದುಬಂದಿದೆ. ಬಳಿಕ ಮಹಿಳೆ ಕಲಿಗಂಜ್ ಪೊಲೀಸ್ ಠಾಣೆಯಲ್ಲಿ ಶಹೀನ್ ಮತ್ತು ಹಸನ್ ವಿರುದ್ಧ ದೂರು ದಾಖಲಿಸಿದ್ದಾರೆ.
ಜೆನೈದಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಿಲಾಲ್ ಹುಸೇನ್, "ನಾವು ಸಂತ್ರಸ್ತೆಯನ್ನು ಠಾಣೆಗೆ ಕರೆಸಿ ದೂರು ದಾಖಲಿಸಿಕೊಂಡಿದ್ದೇವೆ. ತನಿಖೆಯ ನಂತರ, ಪೊಲೀಸರು ಗರಿಷ್ಠ ಕಾನೂನು ಕ್ರಮ ಕೈಗೊಳ್ಳುತ್ತಾರೆ" ಎಂದು ತಿಳಿಸಿದ್ದಾರೆ.
Advertisement