

ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರ್ಕಾರವು 'ಭಾರತದಂತಹ ದೊಡ್ಡ ನೆರೆಯ ರಾಷ್ಟ್ರದೊಂದಿಗೆ ಕಹಿ ಸಂಬಂಧ'ವನ್ನು ಬಯಸುವುದಿಲ್ಲ. ಬದಲಾಗಿ, ನವದೆಹಲಿಯೊಂದಿಗೆ ಸಂಬಂಧವನ್ನು ಬಲಪಡಿಸಲು ಬಯಸುತ್ತದೆ ಎಂದು ಬಾಂಗ್ಲಾದೇಶದ ಹಣಕಾಸು ಸಲಹೆಗಾರ ಡಾ. ಸಲೇಹುದ್ದೀನ್ ಅಹ್ಮದ್ ಮಂಗಳವಾರ ಹೇಳಿದ್ದಾರೆ.
ಸಚಿವಾಲಯದಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸದ್ಯದ ಮಧ್ಯಂತರ ಸರ್ಕಾರವು ಭಾರತದಂತಹ ದೊಡ್ಡ ನೆರೆಯ ರಾಷ್ಟ್ರದೊಂದಿಗೆ ಯಾವುದೇ ರೀತಿಯ ಕಹಿ ಸಂಬಂಧವನ್ನು ಬಯಸುವುದಿಲ್ಲ. ಬದಲಾಗಿ, ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಸರ್ಕಾರದ ಪ್ರಮುಖ ಗುರಿಯಾಗಿದೆ' ಎಂದು ಹೇಳಿದರು.
ಬಾಂಗ್ಲಾದೇಶದ ದಿನಪತ್ರಿಕೆ 'ದೇಶ್ ರೂಪಾಂತರ್' ವರದಿ ಪ್ರಕಾರ, ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಅವರು ದೆಹಲಿಯೊಂದಿಗಿನ ಸಂಬಂಧಗಳಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಸಾಮಾನ್ಯ ಸ್ಥಿತಿಗೆ ಮರಳಿಸಲು ವೈಯಕ್ತಿಕ ಪ್ರಯತ್ನಗಳಲ್ಲಿ ತೊಡಗಿಕೊಂಡಿದ್ದಾರೆ. ಭಾರತದೊಂದಿಗಿನ ಸಂಬಂಧ ಹದಗೆಡುವಂತೆ ಮಾಡಲು ಸರ್ಕಾರಕ್ಕೆ ಯಾವುದೇ ಉದ್ದೇಶವಿಲ್ಲ. ಪ್ರಮುಖ ನೆರೆಯ ರಾಷ್ಟ್ರದೊಂದಿಗಿನ ಸೌಹಾರ್ದಯುತ ಸಂಬಂಧ ಎರಡೂ ಕಡೆಯ ಹಿತಾಸಕ್ತಿಗಳನ್ನು ಪೂರೈಸುತ್ತವೆ ಎಂದು ಅವರು ಹೇಳಿದರು.
ಇತ್ತೀಚಿನ ಭಾರತ ವಿರೋಧಿ ಹೇಳಿಕೆ ಉದ್ದೇಶಿಸಿ ಮಾತನಾಡಿದ ಅಹ್ಮದ್, ಅಂತಹ ಹೇಳಿಕೆಗಳು 'ಸಂಪೂರ್ಣವಾಗಿ ರಾಜಕೀಯ ಪ್ರೇರಿತ' ಮತ್ತು ಸರ್ಕಾರದೊಂದಿಗೆ ಯಾವುದೇ ಸಂಬಂಧವಿಲ್ಲ. ರಾಜಕೀಯ ಹಿನ್ನೆಲೆ ಏನೇ ಇರಲಿ, ರಾಷ್ಟ್ರ ಮಟ್ಟದಲ್ಲಿ ರಚನಾತ್ಮಕ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಸರ್ಕಾರ ಗುರಿಯಾಗಿದೆ ಎಂದು ಅವರು ಹೇಳಿದರು.
ಸದ್ಯದ ರಾಜಕೀಯ ವಾತಾವರಣದಿಂದ ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆರ್ಥಿಕ ಸಹಕಾರವನ್ನು ಬಲಪಡಿಸಲು ಭಾರತದಿಂದ 50,000 ಮೆಟ್ರಿಕ್ ಟನ್ ಅಕ್ಕಿಯನ್ನು ಆಮದು ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೃಢಪಡಿಸಿದರು.
ಭಾರತದೊಂದಿಗಿನ ಸಂಬಂಧವನ್ನು ಹದಗೆಡಿಸುವ ಬಾಹ್ಯ ಪ್ರಯತ್ನಗಳಿಂದ ಸರ್ಕಾರವು ಪ್ರಚೋದನೆಗಳಿಗೆ ಒಳಗಾಗುವುದಿಲ್ಲ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಂಡು ದ್ವಿಪಕ್ಷೀಯ ಸಂಬಂಧಗಳನ್ನು ಮುನ್ನಡೆಸುವತ್ತ ಆಡಳಿತವು ಎಚ್ಚರಿಕೆಯಿಂದ ಮುಂದುವರಿಯುತ್ತಿದೆ ಎಂದು ಅವರು ಹೇಳಿದರು.
Advertisement