US-Venezuela Conflict: ತೀರದ ಟ್ರಂಪ್ 'ಸಮರದಾಹ’; ಗ್ರೀನ್‌ಲ್ಯಾಂಡ್-ಕ್ಯೂಬಾ ಮೇಲೆ ಅಮೆರಿಕಾ ಕಣ್ಣು..?

ಗ್ರೀನ್‌ಲ್ಯಾಂಡ್ ಅತ್ಯಂತ ತಂತ್ರಜ್ಞಾನದ ಮಹತ್ವ ಹೊಂದಿದೆ. ಅಲ್ಲೆಲ್ಲಾ ರಷ್ಯಾ ಮತ್ತು ಚೀನಾ ಹಡಗುಗಳು ಕಾಣಿಸುತ್ತಿವೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ನಮಗೆ ಗ್ರೀನ್‌ಲ್ಯಾಂಡ್ ಅಗತ್ಯ. ಇದನ್ನು ಡೆನ್ಮಾರ್ಕ್ ನಿರ್ವಹಿಸಲು ಸಾಧ್ಯವಿಲ್ಲ.
Donald trump
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಸೇನಾ ಕಾರ್ಯಾಚರಣೆ ನಡೆಸಿ ವೆನೆಜುವೆಲಾ ಅಧ್ಯಕ್ಷರನ್ನು ಬಂಧಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇದೀಗ ಗ್ರೀನ್ ಲ್ಯಾಂಡ್ ಹಾಗೂ ಕ್ಯೂಬಾವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಇದೇ ವೇಳೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೋ ಅವರು ಕ್ಯೂಬಾದ ಕಮ್ಯುನಿಸ್ಟ್ ಸರ್ಕಾರ “ಗಂಭೀರ ಸಂಕಷ್ಟದಲ್ಲಿದೆ” ಎಂದು ಹೇಳಿದ್ದಾರೆ.

ಇಬ್ಬರ ಈ ಹೇಳಿಕೆಗಳು, ಪಶ್ಚಿಮದಲ್ಲಿ ಅಮೆರಿಕ ತನ್ನ ಪ್ರಭಾವವನ್ನು ಮತ್ತಷ್ಟು ವಿಸ್ತರಿಸಲು ಟ್ರಂಪ್ ಆಡಳಿತ ಗಂಭೀರವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ.

ಈ ಬೆಳವಣಿಗೆಗಳು ಅಮೆರಿಕದ ಮಿತ್ರ ಹಾಗೂ ಶತ್ರುಗಳಾಗಿರುವ ಆಗಿರುವ ಹಲವು ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದ್ದು, “ಮುಂದಿನ ಗುರಿ ಯಾರು?” ಎಂಬ ಪ್ರಶ್ನೆಗಳು ಜಾಗತಿಕವಾಗಿ ಕೇಳಿ ಬರುತ್ತಿವೆ.

ಫ್ಲೋರಿಡಾದ ತಮ್ಮ ನಿವಾಸದಿಂದ ವಾಷಿಂಗ್ಟನ್‌ಗೆ ವಾಪಸಾಗುವ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಟ್ರಂಪ್, ಗ್ರೀನ್‌ಲ್ಯಾಂಡ್ ಅತ್ಯಂತ ತಂತ್ರಜ್ಞಾನದ ಮಹತ್ವ ಹೊಂದಿದೆ. ಅಲ್ಲೆಲ್ಲಾ ರಷ್ಯಾ ಮತ್ತು ಚೀನಾ ಹಡಗುಗಳು ಕಾಣಿಸುತ್ತಿವೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ನಮಗೆ ಗ್ರೀನ್‌ಲ್ಯಾಂಡ್ ಅಗತ್ಯ. ಇದನ್ನು ಡೆನ್ಮಾರ್ಕ್ ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ವೆನೆಜುಯೆಲಾ ಕಾರ್ಯಾಚರಣೆ ಮೂಲಕ ಅಮೆರಿಕ ಸೇನಾ ಗ್ರೀನ್‌ಲ್ಯಾಂಡ್‌ಗೆ ಏನು ಸಂದೇಶ ನೀಡುತ್ತದೆ ಎಂಬ ಪ್ರಶ್ನೆಗೆ, ಅದನ್ನು ನೀವೇ ಅರ್ಥಮಾಡಿಕೊಳ್ಳಬೇಕು. ನನಗಂತೂ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಮೆಕ್ಸಿಕೋ, ಕ್ಯೂಬಾ ಮತ್ತು ಕೊಲಂಬಿಯಾ ದೇಶಗಳಲ್ಲಿ ಆಡಳಿತದಲ್ಲಿರುವ ಸರ್ಕಾರಗಳು ಅಮೆರಿಕಕ್ಕೆ ಡ್ರಗ್ಸ್‌ ಪೂರೈಕೆ ಮಾಡುವ ಮೂಲಕ ನಮ್ಮ ಜನರ ಬದುಕು ಹಾಳು ಮಾಡುತ್ತಿವೆ. ಹೀಗಾಗಿ ವೆನಿಜುವೆಲಾ ರೀತಿಯಲ್ಲೇ ಈ ದೇಶಗಳ ಮೇಲೂ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.

Donald trump
ನಾವ್ ಹೇಳಿದ್ದು ಮಾಡ್ಲಿಲ್ಲ ಅಂದ್ರೆ ಹೊಸ ನಾಯಕಿ ಕೂಡ 'ದೊಡ್ಡಬೆಲೆ' ತೆರಬೇಕಾಗುತ್ತೆ: ವೆನೆಜುವೆಲಾ ಹಂಗಾಮಿ ಅಧ್ಯಕ್ಷರಿಗೂ ಟ್ರಂಪ್ ಎಚ್ಚರಿಕೆ!

ಇನ್ನು ಕ್ಯೂಬಾದ ಪರಿಸ್ಥಿತಿಯೂ ಚೆನ್ನಾಗಿಲ್ಲ. ಅಲ್ಲಿನ ಜನ ಹಲವು ವರ್ಷಗಳಿಂದ ಸಂಕಷ್ಟದಲ್ಲಿದ್ದಾರೆ. ಕ್ಯೂಬಾ ಒಂದು ವಿಫಲ ರಾಷ್ಟ್ರ. ನಾವು ಕ್ಯೂಬಾದ ಜನರಿಗೆ ನೆರವಾಗಲು ಬಯಸಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ಲ್ಯಾಟಿನ್‌ ಅಮೆರಿಕದ ಮತ್ತೊಂದು ರಾಷ್ಟ್ರ ಕೊಲಂಬಿಯಾ ಅಧ್ಯಕ್ಷ ಗುಸ್ತಾವೋ ಪೆಟ್ರೋ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ದೇಶವು ಕನಿಷ್ಠ ಮೂರು ಪ್ರಮುಖ ಕೊಕೇನ್‌ ಫ್ಯಾಕ್ಟರಿಗಳನ್ನು ನಡೆಸುತ್ತಿದೆ. ಅವರು ಕೊಕೇನ್‌ ತಯಾರಿಸುತ್ತಿದ್ದಾರೆ. ನಂತರ ಅದನ್ನು ಅಮೆರಿಕಕ್ಕೆ ರವಾನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಏತನ್ಮಧ್ಯೆ ಡೆನ್ಮಾರ್ಕ್ ಪ್ರಧಾನಮಂತ್ರಿ ಮೆಟ್ಟೆ ಫ್ರೆಡರಿಕ್ಸನ್ ಅವರು ಪ್ರತಿಕ್ರಿಯಿಸಿ, ಗ್ರೀನ್‌ಲ್ಯಾಂಡ್ ವಿಲೀನಗೊಳಿಸಲು ಹಕ್ಕು ಟ್ರಂಪ್‌ಗಿಲ್ಲ. ನಾಟೋ ಸದಸ್ಯರಾಗಿರುವ ಡೆನ್ಮಾರ್ಕ್ ಈಗಾಗಲೇ ಭದ್ರತಾ ಒಪ್ಪಂದಗಳ ಮೂಲಕ ಅಮೆರಿಕಕ್ಕೆ ಗ್ರೀನ್‌ಲ್ಯಾಂಡ್‌ನಲ್ಲಿ ವ್ಯಾಪಕ ಪ್ರವೇಶವನ್ನು ನೀಡುತ್ತಿದೆ. ನಮ್ಮ ದೇಶ ಮಾರಾಟಕ್ಕಿಲ್ಲ. ಮಿತ್ರ ರಾಷ್ಟ್ರಕ್ಕೆ ಬೆದರಿಕೆ ಹಾಕುವುದನ್ನು ಅಮೆರಿಕಾ ನಿಲ್ಲಿಸಬೇಕೆಂದು ಹೇಳಿದ್ದಾರೆ.

ಈ ನಡುವೆ ಡೆನ್ಮಾರ್ಕ್ ಭಾನುವಾರ ಯುರೋಪಿಯನ್ ಒಕ್ಕೂಟದ ಹೇಳಿಕೆಗೆ ಸಹಿ ಹಾಕಿದ್ದು, ವೆನೆಜುವೆಲಾದ ಜನರು ತಮ್ಮ ಭವಿಷ್ಯವನ್ನು ನಿರ್ಧರಿಸುವ ಹಕ್ಕನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಟ್ರಂಪ್ ವೆನೆಜುಯೆಲಾವನ್ನು “ನಡೆಸುವೆ” ಎಂದು ಹೇಳಿರುವ ಹಿನ್ನೆಲೆಯಲ್ಲಿ, ಡೆನ್ಮಾರ್ಕ್'ನ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ವೆನೆಜುಯೆಲಾ, ಗ್ರೀನ್‌ಲ್ಯಾಂಡ್ ಮತ್ತು ಕ್ಯೂಬಾ ಕುರಿತು ಟ್ರಂಪ್ ಹೇಳಿಕೆಗಳು, ಅಮೆರಿಕದ ಮುಂದಿನ ಹೆಜ್ಜೆಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲವನ್ನು ಮೂಡಿಸತೊಡಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com