

ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಕೌರ್ಯಗಳು ಮುಂದುವರೆದಿರುವಂತೆಯೇ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಹಿಂದೂ ಪತ್ರಕರ್ತನನ್ನು ಗುಂಡಿಕ್ಕಿ ಕೊಂದು ಹಾಕಿರುವ ಘಟನೆ ವರದಿಯಾಗಿದೆ.
ಮೂಲಗಳ ಪ್ರಕಾರ ಸ್ಥಳೀಯ ಪತ್ರಿಕೆಯೊಂದರ ಹಂಗಾಮಿ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದ ಹಿಂದೂ ಕಾರ್ಖಾನೆ ಮಾಲೀಕರನ್ನು ಸೋಮವಾರ ಸಂಜೆ ಬಾಂಗ್ಲಾದೇಶದಲ್ಲಿ ಬೈಕ್ ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಸದಸ್ಯರೊಬ್ಬರ ಮೇಲೆ ನಡೆದ ಹಿಂಸಾಚಾರದ ಇತ್ತೀಚಿನ ಘಟನೆಯಲ್ಲಿ ಇದು ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಾಂಗ್ಲಾದೇಶದ ಜಶೋರ್ ಜಿಲ್ಲೆಯ ಮಣಿರಾಂಪುರ ಉಪ ಜಿಲ್ಲೆಯ ಕೊಪಾಲಿಯಾ ಬಜಾರ್ ಪ್ರದೇಶದಲ್ಲಿ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸಾವನ್ನಪ್ಪಿದ ಪತ್ರಕರ್ತನನ್ನು ರಾಣಾ ಪ್ರತಾಪ್ (45) ಎಂದು ಗುರುತಿಸಲಾಗಿದೆ.
ಬೈಕ್ ನಲ್ಲಿ ಬಂದು ಗುಂಡಿನ ದಾಳಿ
ಪೊಲೀಸ್ ಮೂಲಗಳ ಪ್ರಕಾರ ಮೋಟಾರ್ ಸೈಕಲ್‌ನಲ್ಲಿ ಬಂದ ಪುರುಷರ ಗುಂಪೊಂದು ಪ್ರತಾಪ್‌ನನ್ನು ತನ್ನ ಐಸ್ ಕಾರ್ಖಾನೆಯಿಂದ ಹೊರಗೆ ಕರೆದೊಯ್ದು ಹತ್ತಿರದ ಗಲ್ಲಿಗೆ ಕರೆದೊಯ್ದರು, ಅಲ್ಲಿ ಅವನ ತಲೆಗೆ ಹತ್ತಿರದಿಂದ ಗುಂಡು ಹಾರಿಸಿ ಕೊಂದು ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡು ಹಾರಿಸುವ ಮೊದಲು ದಾಳಿಕೋರರು ಪ್ರತಾಪ್ ಜೊತೆ ಸ್ವಲ್ಪ ಸಮಯ ವಾದ ಮಾಡಿದ್ದಾರೆ. ಬಳಿಕ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸ್ಥಳೀಯ ನಿವಾಸಿ ತಿಳಿಸಿದ್ದಾರೆ.
ಪ್ರತಾಪ್ ಕಳೆದ ಎರಡು ವರ್ಷಗಳಿಂದ ಕೊಪಾಲಿಯಾ ಬಜಾರ್‌ನಲ್ಲಿ ಐಸ್ ಕಾರ್ಖಾನೆಯನ್ನು ನಡೆಸುತ್ತಿದ್ದರು. ಅವರು ನರೈಲ್ ಜಿಲ್ಲೆಯಿಂದ ಪ್ರಕಟವಾಗುವ ದಿನಪತ್ರಿಕೆ ಬಿಡಿ ಖೋಬೋರ್‌ನ ಹಂಗಾಮಿ ಸಂಪಾದಕರೂ ಕೂಡ ಆಗಿದ್ದರು.
ಪತ್ರಿಕೆಯ ಸುದ್ದಿ ಸಂಪಾದಕ ಅಬುಲ್ ಕಾಶೆಮ್ ಮಾತನಾಡಿ, "ಪ್ರತಾಪ್ ಈ ಹಿಂದೆ ಹಲವಾರು ಪ್ರಕರಣಗಳನ್ನು ಎದುರಿಸಿದ್ದರು. ಆದರೆ ಎಲ್ಲದರಲ್ಲೂ ಖುಲಾಸೆಗೊಂಡಿದ್ದರು. ಈ ಕೊಲೆಗೆ ಕಾರಣವೇನೆಂದು ನಾನು ಹೇಳಲಾರೆ" ಎಂದು ಅವರು ಹೇಳಿದರು.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಬಗ್ಗೆ ಹೆಚ್ಚಿನ ಕಳವಳ ವ್ಯಕ್ತವಾಗಿರುವ ನಡುವೆಯೇ ಈ ಹತ್ಯೆ ನಡೆದಿದೆ.
ಇತ್ತೀಚೆಗೆ ಡಿಸೆಂಬರ್‌ನಿಂದ ಹಿಂದೂ ವಿಧವೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಮತ್ತು ಕನಿಷ್ಠ ಮೂವರು ಹಿಂದೂ ಪುರುಷರ ಕೊಲೆಗಳ ವರದಿಗಳು ಅಲ್ಪಸಂಖ್ಯಾತರ ಸುರಕ್ಷತೆಯನ್ನು ಮಧ್ಯಂತರ ಸರ್ಕಾರ ನಿರ್ವಹಿಸುತ್ತಿರುವ ರೀತಿಗೆ ಟೀಕೆ ವ್ಯಕ್ತವಾಗಿದೆ.
Advertisement