

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ನರಮೇಧ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ಇಬ್ಬರು ಹಿಂದೂ ಯುವಕರನ್ನು ಹತ್ಯೆ ಮಾಡಲಾಗಿದೆ.
ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ನರಸಿಂಗ್ಡಿ ಜಿಲ್ಲೆಯ ಪಲಾಶ್ ಉಪಜಿಲ್ಲಾದ ಚೋರ್ಸಿಂದೂರ್ ಬಜಾರ್‌ನಲ್ಲಿ ದಿನಸಿ ಅಂಗಡಿ ಮಾಲೀಕ ಶರತ್ ಚಕ್ರವರ್ತಿ ಮೋನಿ ಮೇಲೆ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಮೋನಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ದಾಳಿ ಹಠಾತ್ತನೆ ನಡೆದಿದ್ದು, ದಾಳಿಕೋರರು ಕೂಡಲೇ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರಾಜಧಾನಿ ಢಾಕಾಗೆ ಸಮೀಪದಲ್ಲಿರುವ ಈ ಘಟನೆ ಇನ್ನಷ್ಟು ಆಘಾತಕಾರಿಯಾಗಿದೆ.
ಈ ಹತ್ಯೆ 18 ದಿನಗಳಲ್ಲಿ ನಡೆದ 6ನೇ ಹಿಂದೂ ವ್ಯಕ್ತಿಯ ಕೊಲೆಯಾಗಿದೆ. ಇದಕ್ಕೂ ಕೆಲವು ಗಂಟೆಗಳ ಮೊದಲು, ಸೋಮವಾರ ಸಂಜೆ 6 ಗಂಟೆ ಸುಮಾರಿಗೆ, ಜಶೋರ್ ಜಿಲ್ಲೆಯ ಮಣಿರಾಂಪುರ ಉಪಜಿಲ್ಲಾದ ಕೊಪಾಲಿಯಾ ಬಜಾರ್‌ನಲ್ಲಿ 45 ವರ್ಷದ ರಾಣಾ ಪ್ರತಾಪ್ ಬೈರಾಗಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ರಾಣಾ ಪ್ರತಾಪ್ ಐಸ್ ಕಾರ್ಖಾನೆಯನ್ನು ಹೊಂದಿದ್ದರು. ನರೈಲ್ ಜಿಲ್ಲೆಯಿಂದ ಪ್ರಕಟವಾಗುವ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರೂ ಆಗಿದ್ದರು.
ಸ್ಥಳೀಯ ನಿವಾಸಿಗಳು ನೀಡಿರುವ ಮಾಹಿತಿಗಳ ಪ್ರಕಾರ, ಕೆಲವು ಪುರುಷರು ಬೈಕ್ನಲ್ಲಿ ಬಂದು ಅವರನ್ನು ಕಾರ್ಖಾನೆಯಿಂದ ಹೊರಗೆಳೆದು, ಒಂದು ಗಲ್ಲಿಗೆ ಕರೆದೊಯ್ದು ಅವರ ತಲೆಗೆ ಹಲವು ಬಾರಿ ಗುಂಡು ಹಾರಿಸಿದ್ದರು. ಅಷ್ಟೇ ಅಲ್ಲದೆ ಕುತ್ತಿಗೆ ಕೊಯ್ದು ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.
ಪೊಲೀಸರು ದೇಹದಿಂದ ಏಳು ಖಾಲಿ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ರಾಣಾ ಪ್ರತಾಪ್ ಅವರ ತಲೆಗೆ ಮೂರು ಗುಂಡುಗಳು ತಗುಲಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಈ ಘಟನೆಗಳು ಬಾಂಗ್ಲಾದೇಶದಲ್ಲಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಿವೆ ಮತ್ತು ಹಿಂದೂ ಸಮುದಾಯದಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿವೆ.
ಶೇಖ್ ಹಸೀನಾ ಸರ್ಕಾರ ಬಾಂಗ್ಲಾದೇಶವನ್ನು ಪದಚ್ಯುತಗೊಳಿಸಿದ ನಂತರ, ಮೂಲಭೂತವಾದಿಗಳು ಸಕ್ರಿಯರಾಗಿದ್ದಾರೆ. ಮಧ್ಯಂತರ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಮೇಲೆ ಆಗಾಗ್ಗೆ ದಾಳಿಗಳು ನಡೆಯುತ್ತಿವೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ನಂಬುತ್ತವೆ.
ದುರ್ಬಲಗೊಂಡ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಬಳಸಿಕೊಳ್ಳುವ ಮೂಲಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ. ಅನೇಕ ಸಂದರ್ಭಗಳಲ್ಲಿ, ಧರ್ಮನಿಂದನೆಯಂತಹ ಆರೋಪಗಳನ್ನು ಬಳಸಿ ಮತ್ತು ಕೆಲವೊಮ್ಮೆ ವೈಯಕ್ತಿಕ ದ್ವೇಷದಿಂದಲೂ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ.
ಈ ನಡುವೆ ಹಿಂದೂಗಳ ನರಮೇಧ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ ಸರ್ಕಾರ ಹಿಂದೂಗಳು, ಕ್ರೈಸ್ತರು, ಬೌದ್ಧರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಉಗ್ರಗಾಮಿಗಳು ನಡೆಸುತ್ತಿರುವ ನಿರಂತರ ಹಗೆತನ ಖಂಡನೀಯವಾದದ್ದು. ಹಿಂದೂಗಳ ಮೇಲಿನ ದೌರ್ಜನ್ಯವನ್ನ ಸಹಿಸೋಕೆ ಆಗಲ್ಲ. ಭಾರತವು ಸೂಕ್ಷ್ಮ ನಿಗಾ ಇರಿಸಿದೆ. ಬಾಂಗ್ಲಾದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕು ಅಂತ ಭಾರತವೂ ಬಯಸುತ್ತದೆ. ಹಿಂದೂ ಯುವಕನ ಭೀಕರ ಹತ್ಯೆಯನ್ನ ನಾವು ಖಂಡಿಸುತ್ತೇವೆ. ಅಪರಾಧಿಗಳನ್ನ ನ್ಯಾಯಾಲಯದ ಕಟಕಟೆಗೆ ತಂದು ನಿಲ್ಲಿಸುತ್ತಾರೆ ಎಂದು ನಿರೀಕ್ಷಿಸುತ್ತೇವೆ ಎಂದು ಹೇಳಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಬೌದ್ಧರು ಸೇರಿದಂತೆ ಅಲ್ಪಸಂಖ್ಯಾತರ ವಿರುದ್ಧ ನಿರಂತರ ಹಗೆತನವು ಗಂಭೀರ ಕಳವಳಕಾರಿಯಾಗಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಘಟನೆಗಳನ್ನ ಮಾಧ್ಯಮ ಉತ್ಪ್ರೇಕ್ಷೆ ಅಥವಾ ರಾಜಕೀಯ ಹಿಂಸಾಚಾರ ಎಂದು ತಳ್ಳಿಹಾಕಲಾಗುವುದಿಲ್ಲ. ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ 2,900ಕ್ಕೂ ಹೆಚ್ಚು ಹಿಂಸಾಚಾರದ ಘಟನೆಗಳನ್ನ ಸ್ವತಂತ್ರ ಮೂಲಗಳು ದಾಖಲಿಸಿವೆ ಎಂದು ತಿಳಿಸಿದ್ದಾರೆ.
Advertisement