

ವಾಷಿಂಗ್ಟನ್: ನಗದು ಕೊರತೆಯಿಂದ ಬಳಲುತ್ತಿರುವ ಪಾಕಿಸ್ತಾನ, ತನ್ನ ತೀವ್ರ ಆರ್ಥಿಕ ಬಿಕ್ಕಟ್ಟಿನ ನಡುವೆ ಆಪರೇಷನ್ ಸಿಂಧೂರ ವೇಳೆ ಅಮೆರಿಕದಲ್ಲಿ ಲಾಬಿ ಮಾಡಲು ಮಿಲಿಯನ್ ಗಟ್ಟಲೆ ಡಾಲರ್ ಖರ್ಚು ಮಾಡಿತ್ತು. ಅಮೆರಿಕ ಸರ್ಕಾರ ಈಗ ಬಿಡುಗಡೆ ಮಾಡಿರುವ ದಾಖಲಾತಿಗಳಲ್ಲಿ ಈ ಅಂಶ ಬಹಿರಂಗವಾಗಿದೆ.
ತನ್ನ ವಾಯುನೆಲೆಗಳು ಮತ್ತು ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ವಾಯುದಾಳಿ ಸಮಯದಲ್ಲಿ ಪಾಕಿಸ್ತಾನ ಸಹಾಯಕ್ಕಾಗಿ ಅಮೆರಿಕಕ್ಕೆ ಓಡಿಹೋಗಿತ್ತು ಎನ್ನಲಾಗಿದೆ. ವಿದೇಶಿ ಏಜೆಂಟರ ನೋಂದಣಿ ಕಾಯ್ದೆ (FARA) ಅಡಿಯಲ್ಲಿ ದೊರೆತ ಮಾಹಿತಿಯಲ್ಲಿ ನೂರಾರು ಸಾವಿರ ಡಾಲರ್‌ಗಳ ಒಪ್ಪಂದ ಮತ್ತು ಪಾವತಿಯನ್ನು ತೋರಿಸಿದೆ.
ಇದರಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಪಾಕಿಸ್ತಾನದೊಂದಿಗೆ ಸಂಘಟನೆಗಳು ತೊಡಗಿಸಿಕೊಂಡಿರುವುದು ಕಂಡುಬಂದಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರು 26 ನಾಗರಿಕರನ್ನು ಕೊಂದ ಎರಡು ದಿನಗಳ ನಂತರ, ಏಪ್ರಿಲ್ 24 ರಂದು ನಡೆದ ಡೀಲ್ ನಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಲು ಜಾವೆಲಿನ್ ಅಡ್ವೈಸರ್ಸ್ LLC ಅನ್ನು ಏಪ್ರಿಲ್‌ನಲ್ಲಿ ನೋಂದಾಯಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ತಿಂಗಳ ಶುಲ್ಕವಾಗಿ $50,000 ಪಾವತಿಯನ್ನು ಜಾವೆಲಿನ್ ಬಹಿರಂಗಪಡಿಸಿದೆ. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಪಾಕಿಸ್ತಾನದ ನಿಲುವುಗಳನ್ನು US ಕಾರ್ಯನಿರ್ವಾಹಕ ಶಾಖೆ, ಕಾಂಗ್ರೆಸ್ ಮತ್ತು ಸಾರ್ವಜನಿಕರಿಗೆ ತಿಳಿಸುವುದು ತನ್ನ ಕೆಲಸದಲ್ಲಿ ಸೇರಿದೆ ಎಂದು ಸಂಸ್ಥೆ ಹೇಳಿದೆ.
ಪಟ್ಟಿ ಮಾಡಲಾದ ಸಮಸ್ಯೆಗಳಲ್ಲಿ ಜಮ್ಮು ಮತ್ತು ಕಾಶ್ಮೀರ ವಿವಾದ ಮತ್ತು ಪಾಕಿಸ್ತಾನ-ಭಾರತ ಸಂಬಂಧಗಳು ಸೇರಿವೆ. ಮತ್ತೊಂದು ಅರ್ಜಿಯಲ್ಲಿ ಸಾರ್ವಜನಿಕ ಸಂಪರ್ಕ ಸೇವೆಗಾಗಿ Qorvis Holding Inc ಕಂಪನಿಯನ್ನು ಪಾಕಿಸ್ತಾನ ರಾಯಭಾರಿ ಕಚೇರಿ ಬಾಡಿಗೆಗೆ ಪಡೆದಿರುವುದು ಕಂಡುಬಂದಿದೆ. ಭಾರತ ಮತ್ತು ಪಾಕಿಸ್ತಾನ ನಡುವಣ ಬೆಳವಣಿಗೆಗಳನ್ನು ಮಾಧ್ಯಮಗಳಲ್ಲಿ ಪ್ರಚುರಪಡಿಸಲು ಇದನ್ನು ನೇಮಕ ಮಾಡಿಕೊಳ್ಳಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
US ಕಾನೂನಿನಡಿ ವಿದೇಶಿ ಸರ್ಕಾರಗಳು ಮತ್ತು ಸಂಬಂಧಿತ ಸಂಸ್ಥೆಗಳು ಲಾಬಿ ಮತ್ತು ಸಾರ್ವಜನಿಕ ಸಂಪರ್ಕ ವ್ಯವಸ್ಥೆಗಳನ್ನು ಬಹಿರಂಗಪಡಿಸುವ ಅಗತ್ಯವಿದೆ.
Advertisement