

ಲಡಾಖ್: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ನಡೆದ 'ಆಪರೇಷನ್ ಸಿಂಧೂರ' ವೇಳೆ ಸಶಸ್ತ್ರ ಪಡೆಗಳು ಪಾಕಿಸ್ತಾನಕ್ಕೆ 'ಇನ್ನಷ್ಟು ಹಾನಿ ಮಾಡಬಹುದಿತ್ತು' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ.
ಗಡಿ ರಸ್ತೆಗಳ ಸಂಸ್ಥೆ (BRO) ದೇಶದ ವಿವಿಧ ಭಾಗಗಳಲ್ಲಿ ಪೂರ್ಣಗೊಳಿಸಿದ 125 ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದ ನಂತರ ಮಾತನಾಡಿದ ರಾಜನಾಥ್ ಸಿಂಗ್, ಮೇ ತಿಂಗಳಲ್ಲಿ ನಡೆದ ಕಾರ್ಯಾಚರಣೆಯು ಭಾರತೀಯ ಪಡೆಗಳ ಸಾಮರ್ಥ್ಯ ಮತ್ತು ಶಿಸ್ತು ಎರಡನ್ನೂ ತಿಳಿಸಿತು. ನಮ್ಮ ಸೈನಿಕರು ಭಯೋತ್ಪಾದಕ ಬೆದರಿಕೆಗಳನ್ನು ಬಗ್ಗಬಡಿದರು ಎಂದು ತಿಳಿಸಿದರು.
"ಆಪರೇಷನ್ ಸಿಂಧೂರ' ವೇಳೆಯಲ್ಲಿ ನಮ್ಮ ಸಶಸ್ತ್ರ ಪಡೆಗಳು, ನಾಗರಿಕ ಆಡಳಿತ ಮತ್ತು ಗಡಿ ಪ್ರದೇಶಗಳ ನಾಗರಿಕರ ನಡುವೆ ಇದ್ದ ಸಮನ್ವಯ ಅದ್ಭುತವಾಗಿತ್ತು. ನಮ್ಮ ಸಶಸ್ತ್ರ ಪಡೆಗಳಿಗೆ ಬೆಂಬಲ ನೀಡಿದ್ದಕ್ಕಾಗಿ ಲಡಾಖ್‌ನ ಪ್ರತಿಯೊಬ್ಬ ನಾಗರಿಕರಿಗೆ ಮತ್ತು ಗಡಿ ಪ್ರದೇಶಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ" ಎಂದು ಹೇಳಿದರು.
ಈ ಸಮನ್ವಯ ನಮ್ಮ ಗುರುತನ್ನು ತಿಳಿಸುತ್ತದೆ. ನಮ್ಮ ಪರಸ್ಪರ ಬಂಧವೇ ನಮಗೆ ವಿಶ್ವದ ಅತ್ಯಂತ ವಿಶಿಷ್ಟ ಗುರುತನ್ನು ನೀಡುತ್ತದೆ. "ಖಂಡಿತವಾಗಿಯೂ, ನಾವು ಬಯಸಿದ್ದರೆ ಇನ್ನೂ ಹೆಚ್ಚಿನ ಹಾನಿ ಮಾಡಬಹುದಿತ್ತು, ಆದರೆ ನಮ್ಮ ಪಡೆಗಳು ಶೌರ್ಯವನ್ನು ಮಾತ್ರವಲ್ಲದೆ ಸಂಯಮವನ್ನೂ ಪ್ರದರ್ಶಿಸಿದವು. ಅಗತ್ಯವಿರುವುದನ್ನು ಮಾತ್ರ ಮಾಡಿದವು ಎಂದು ರಕ್ಷಣಾ ಸಚಿವರು ಹೇಳಿದರು.
ಬಲವಾದ ಸಂಪರ್ಕದಿಂದಾಗಿ ಇಂತಹ ಬೃಹತ್ ಕಾರ್ಯಾಚರಣೆ ಸಾಧ್ಯವಾಯಿತು. "ನಮ್ಮ ಸಶಸ್ತ್ರ ಪಡೆಗಳು ಸಮಯಕ್ಕೆ ಸರಿಯಾಗಿ ಮಿಲಿಟರಿ ಸರಕುಗಳನ್ನು ತಲುಪಿಸಲು ಸಾಧ್ಯವಾಯಿತು. ಗಡಿ ಪ್ರದೇಶಗಳೊಂದಿಗೆ ಸಂಪರ್ಕ ಸಾಧಿಸಲಾಯಿತು. ಇದು ಆಪರೇಷನ್ ಸಿಂಧೂರಗೆ ಐತಿಹಾಸಿಕ ಯಶಸ್ಸನ್ನು ನೀಡಿತು ಎಂದರು.
ಗಡಿ ಪ್ರದೇಶಗಳಲ್ಲಿ ಸುಧಾರಿತ ಸಂಪರ್ಕವು ಭದ್ರತೆಯನ್ನು ಬಹು ರೀತಿಯಲ್ಲಿ ಪರಿವರ್ತಿಸುತ್ತಿದೆ. ಪಡೆಗಳು ಕಷ್ಟಕರ ಭೂಪ್ರದೇಶಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತಿದೆ ಎಂದು ಅವರು ಹೇಳಿದರು.
Advertisement