

ನೂಕ್ (ಗ್ರೀನ್‌ಲ್ಯಾಂಡ್): ಗ್ರೀನ್‌ಲ್ಯಾಂಡ್ ಮೇಲೆ ಅಮೆರಿಕeದ ನಿಯಂತ್ರಣಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಯುರೋಪಿನ ಎಂಟು ರಾಷ್ಟ್ರಗಳಿಂದ ಆಮದು ಆಗುವ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ ಘೋಷಿಸಿದ್ದಾರೆ.
ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫ್ರಾನ್ಸ್, ಜರ್ಮನಿ, ಬ್ರಿಟನ್, ನೆದರ್‌ಲ್ಯಾಂಡ್ಸ್ ಮತ್ತು ಫಿನ್‌ಲ್ಯಾಂಡ್ ಮೇಲೆ ಶೇ.10ರಷ್ಟು ಹೆಚ್ಚಿನ ತೆರಿಗೆ ಹೇರಲಾಗಿದ್ದು, ಹೊಸ ಸುಂಕ ನಿಯ ಫೆಬ್ರವರಿಯಿಂದ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಜೂನ್ 1ರೊಳಗೆ “ಗ್ರೀನ್‌ಲ್ಯಾಂಡ್ ಸಂಪೂರ್ಣವಾಗಿ ಅಮೆರಿಕಾ ವಶವಾಗದಿದ್ದರೆ ಈ ಸುಂಕವನ್ನು 25 ಶೇಕಡಾಕ್ಕೆ ಹೆಚ್ಚಿಸಲಾಗುತ್ತದೆ ಎಂದೂ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಇದಲ್ಲದೆ, ಗ್ರೀನ್‌ಲ್ಯಾಂಡ್ ಅನ್ನು ವಶಕ್ಕೆ ಪಡೆಯುವ ಉದ್ದೇಶಕ್ಕೆ ವಿರೋಧ ವ್ಯಕ್ತಪಡಿಸಿದರೆ ‘ನ್ಯಾಟೋ’ದಿಂದಲೇ ಹೊರಬರುವುದಾಗಿಯೂ ಟ್ರಂಪ್ ಅವರು ಬೆದರಿಕೆ ಹಾಕಿದ್ದಾರೆ.
‘ಒಂದು ವೇಳೆ ಗ್ರೀನ್ ಲ್ಯಾಂಡ್ ವಶಪಡಿಸಿಕೊಳ್ಳಲು ನ್ಯಾಟೋದಿಂದ ಯಾವುದೇ ನೆರವು ಸಿಗದಿದ್ದರೆ ನೀವು ನ್ಯಾಟೋದಿಂದ ಹೊರಬರಲಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿರುವ ಅವರು, ಈ ಕುರಿತು ನಾವು ಪರಿಶೀಲಿಸುತ್ತೇವೆ. ನಮ್ಮ ರಾಷ್ಟ್ರೀಯ ಭದ್ರತೆಗಾಗಿ ಗ್ರೀನ್‌ಲ್ಯಾಂಡ್ ಅತ್ಯಗತ್ಯ. ನಮ್ಮ ಕೈಯಲ್ಲಿ ಗ್ರೀನ್ ಲ್ಯಾಂಡ್ ಇಲ್ಲದೇ ಹೋದರೆ ವಿಶೇಷವಾಗಿ ಗೋಲ್ಡನ್ ಡೋಮ್ (ಕ್ಷಿಪಣಿ ರಕ್ಷಣಾ ವ್ಯವಸ್ಥೆ) ಸೇರಿ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಲಿದೆ ಎಂದು ತಿಳಿಸಿದರು.
ಬಲವಂತವಾಗಿಯಾದರೂ ಸರಿ ನಾವು ಗ್ರೀನ್‌ಲ್ಯಾಂಡ್ ದೇಶವನ್ನು ವಶಪಡಿಸಿಕೊಂಡೇ ತೀರುತ್ತೇವೆ ಎಂದು ಹಲವು ದಿನಗಳಿಂದ ಪದೇ ಪದೇ ಟ್ರಂಪ್ ಹೇಳುತ್ತಲೇ ಇದ್ದಾರೆ.
ಮತ್ತೊಂದೆಡೆ ಇದಕ್ಕೆ ನ್ಯಾಟೋ ದೇಶಗಳಾದ ಜರ್ಮನಿ, ಫ್ರಾನ್ಸ್, ಡೆನ್ಮಾರ್ಕ್ ಸೇರಿ ಹಲವು ದೇಶಗಳು ವಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ. ಜೊತೆಗೆ ಇತ್ತೀಚೆಗೆ ಹಲವು ದೇಶಗಳು ಗ್ರೀನ್‌ಲ್ಯಾಂಡ್‌ಗೆ ತಮ್ಮ ಸೇನೆಯನ್ನು ಕಳುಹಿಸುವ ಮೂಲಕ ಟ್ರಂಪ್‌ರ ನಿರ್ಧಾರಕ್ಕೆ ಸಡ್ಡು ಹೊಡೆದಿವೆ. ಅದರ ಬೆನ್ನಲ್ಲೇ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ.
ಈ ಬೆಳವಣಿಗೆಯ ನಡುವೆಯೇ, ಗ್ರೀನ್‌ಲ್ಯಾಂಡ್ ರಾಜಧಾನಿ ನೂಕ್‌ನಲ್ಲಿ ನೂರಾರು ಮಂದಿ ತೀವ್ರ ಚಳಿ, ಮಳೆ ಮತ್ತು ಹಿಮದಿಂದ ಕೂಡಿದ ಪರಿಸ್ಥಿತಿಯನ್ನು ಲೆಕ್ಕಿಸದೆ ತಮ್ಮ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಮೂಲಕ ಅಮೆರಿಕಾ ನಡೆ ವಿರುದ್ಧ ಕಿಡಿಕಾರಿದ್ದಾರೆ.
ಪ್ರತಿಭಟನಾಕಾರರು ಕೆಂಪು-ಬಿಳಿ ರಾಷ್ಟ್ರೀಯ ಧ್ವಜಗಳನ್ನು ಹಿಡಿದು, ರಾಷ್ಟ್ರಗೀತೆ ಹಾಡುತ್ತಾ ನಗರದ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ನಮ್ಮ ಭವಿಷ್ಯವನ್ನು ನಾವೇ ರೂಪಿಸುತ್ತೇವೆ. ಗ್ರೀನ್‌ಲ್ಯಾಂಡ್ ಮಾರಾಟಕ್ಕಿಲ್ಲ ಎಂಬ ಘೋಷಣಾ ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.
ಇನ್ನು ಅಮೆರಿಕದ ಸಂಸತ್ ಸದಸ್ಯರ ದ್ವಿಪಕ್ಷೀಯ ನಿಯೋಗವು ಕೊಪನ್‌ಹೇಗನ್‌ನಲ್ಲಿ ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್‌ಗೆ ಬೆಂಬಲ ವ್ಯಕ್ತಪಡಿಸಿತು.
ನಿಯೋಗದ ನಾಯಕ ಸೆನೆಟರ್ ಕ್ರಿಸ್ ಕೂನ್ಸ್ ಅವರು ಮಾತನಾಡಿ, ಗ್ರೀನ್‌ಲ್ಯಾಂಡ್ ಕುರಿತು ನಡೆಯುತ್ತಿರುವ ಬೆಳವಣಿಗೆಗಳು ಆತಂಕ ಉಂಟುಮಾಡುತ್ತಿವೆ. ಈ ಪರಿಸ್ಥಿತಿಯನ್ನು ಶಮನಗೊಳಿಸುವುದು ತಮ್ಮ ಉದ್ದೇಶ ಎಂದು ಹೇಳಿದರು.
ಡೆನ್ಮಾರ್ಕ್ ಜನರು ಅಮೇರಿಕಾ ಜನರ ಮೇಲಿನ ತಮ್ಮ ನಂಬಿಕೆಯನ್ನು ತ್ಯಜಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಡೆನ್ಮಾರ್ಕ್ ಮತ್ತು ನ್ಯಾಟೋ ಬಗ್ಗೆ ಅಮೆರಿಕಕ್ಕೆ ಗೌರವವಿದೆ ಎಂದು ತಿಳಿಸಿದ್ದಾರೆ.
ನ್ಯಾಟೋ ಎಂಬುದು ಮಿಲಿಟರಿ ಕೂಟ. 2ನೇ ಮಹಾಯುದ್ಧದ ಬಳಿಕ 1949ರಲ್ಲಿ ಯುರೋಪ್‌ನ 30 ಮತ್ತು ಉತ್ತರ ಅಮೆರಿಕದ 2 ದೇಶಗಳು ಸೇರಿಕೊಂಡು ಪರಸ್ಪರರ ರಕ್ಷಣೆಗೆ ರಚಿಸಿಕೊಂಡ ಸೇನಾ ಒಕ್ಕೂಟ. ಸದಸ್ಯ ದೇಶಗಳ ಮೇಲೆ ಬೇರೆ ಯಾವುದೇ ದೇಶ ದಾಳಿ ಮಾಡಿದರೆ ನ್ಯಾಟೋ ದೇಶಗಳು ಒಂದಾಗಿ ಆ ದೇಶದ ರಕ್ಷಣೆಗೆ ಬರುತ್ತವೆ.
2024ರಲ್ಲಿ ನ್ಯಾಟೋ ಪಡೆಗಳ ವಾರ್ಷಿಕ ವೆಚ್ಚ 45 ಲಕ್ಷ ಕೋಟಿ ರು.ನಷ್ಟಿತ್ತು. ಇದರಲ್ಲಿ ಮೂರನೇ ಎರಡು ಭಾಗದಷ್ಟು ವೆಚ್ಚವನ್ನು ಅಮೆರಿಕವೊಂದೇ ಭರಿಸುತ್ತದೆ. ಹೀಗಾಗಿ ಅಮೆರಿಕ ನ್ಯಾಟೋ ತೊರೆದರೆ, ಕೂಟಕ್ಕೆ ಭಾರೀ ಹೊರೆ ಬೀಳಲಿದೆ
Advertisement