

ದಾವೋಸ್: ಭಾರತ ಮತ್ತು ಯುರೋಪಿಯನ್ ಒಕ್ಕೂಟವು "ಐತಿಹಾಸಿಕ" ಮುಕ್ತ ವ್ಯಾಪಾರ ಒಪ್ಪಂದ(FTA)ವನ್ನು ಅಂತಿಮಗೊಳಿಸುವ ಹಂತಕ್ಕೆ ತಲುಪಿದ್ದು, ಇದು ಸುಮಾರು ಎರಡು ಶತಕೋಟಿ ಜನರ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ ಮತ್ತು ಜಾಗತಿಕ GDP ಯ ಸುಮಾರು ಕಾಲು ಭಾಗದಷ್ಟು ಪಾಲನ್ನು ಹೊಂದಿದೆ ಎಂದು ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಮಂಗಳವಾರ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವದ ವಿವಿಧ ದೇಶಗಳ ವಿರುದ್ಧ ಸುಂಕ ಸಮರ ಸಾರಿದ್ದು ಹುಚ್ಚು ದೊರೆಯ ಹುಚ್ಚಾಟಕ್ಕೆ ಭಾರತದಂತ ದೇಶಗಳು ಎಫ್ ಟಿಎ ಮೂಲಕ ತಿರುಗೇಟು ನೀಡಲು ಸಜ್ಜಾಗಿವೆ.
ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ವಾನ್ ಡೆರ್ ಲೇಯೆನ್ ಅವರು ಜನವರಿ 25 ರಿಂದ 27 ರವರೆಗೆ ಭಾರತದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.
ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು, ಯುರೋಪಿಯನ್ ಒಕ್ಕೂಟವು ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸುವ ಹಂತದಲ್ಲಿದೆ. ಈ ಡೀಲ್ "ಒಪ್ಪಂದಗಳ ಮಹಾತಾಯಿ" ಇದ್ದಂತೆ ಎಂದು ಬಣ್ಣಿಸಿದರು.
ಜನವರಿ 27 ರಂದು ನಡೆಯಲಿರುವ ಭಾರತ-EU ಶೃಂಗಸಭೆಯಲ್ಲಿ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಅಂತಿಮವಾಗಲಿದ್ದು, ಇದನ್ನು ಎರಡೂ ಕಡೆಯವರು ಘೋಷಿಸಲಿದ್ದಾರೆ.
"ನಾನು ಭಾರತಕ್ಕೆ ಪ್ರಯಾಣಿಸುತ್ತಿದ್ದೇನೆ. ಇನ್ನೂ ನಾವು ಮಾಡಬೇಕಾದ ಕೆಲಸಗಳಿವೆ. ಆದರೆ ನಾವು ಒಂದು ಐತಿಹಾಸಿಕ ವ್ಯಾಪಾರ ಒಪ್ಪಂದದ ಅಂಚಿನಲ್ಲಿದ್ದೇವೆ. ಕೆಲವರು ಇದನ್ನು ಎಲ್ಲಾ ಒಪ್ಪಂದಗಳ ಮಹಾತಾಯಿ ಎಂದು ಕರೆಯುತ್ತಾರೆ. ಇದು 2 ಬಿಲಿಯನ್ ಜನರ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ. ಇದು ಜಾಗತಿಕ GDP ಯ ಸುಮಾರು ಕಾಲು ಭಾಗದಷ್ಟಿದೆ" ಎಂದು ಲೇಯೆನ್ ಹೇಳಿದರು.
"ಯುರೋಪ್ ಇಂದಿನ ಬೆಳವಣಿಗೆಯ ಕೇಂದ್ರಗಳು ಮತ್ತು ಲ್ಯಾಟಿನ್ ಅಮೆರಿಕದಿಂದ ಇಂಡೋ-ಪೆಸಿಫಿಕ್ ಮತ್ತು ಅದರಾಚೆಗಿನ ಈ ಶತಮಾನದ ಆರ್ಥಿಕ ಶಕ್ತಿ ಕೇಂದ್ರಗಳೊಂದಿಗೆ ವ್ಯಾಪಾರ ಮಾಡಲು ಬಯಸುತ್ತದೆ" ಎಂದು ಅವರು ತಿಳಿಸಿದ್ದಾರೆ.
Advertisement