

ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 125 ವರ್ಷಗಳ ಇತಿಹಾಸವಿರುವ ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್ ಅನ್ನು ಸ್ಥಳೀಯ ಉದ್ಯಮಿಯೊಬ್ಬರು ಧ್ವಂಸಗೊಳಿಸಿರುವ ಘಟನೆ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಅಲ್ಪಸಂಖ್ಯಾತ ಸಿಖ್ ಸಮುದಾಯ ಈ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದು, ಭಾರತವೂ ಈ ಕೃತ್ಯವನ್ನು "ಅತ್ಯಂತ ಖಂಡನೀಯ ಹಾಗೂ ಉದ್ದೇಶಪೂರ್ವಕ ವಿಧ್ವಂಸಕ ಕೃತ್ಯ" ಎಂದು ಬಣ್ಣಿಸಿದೆ. ಜೂನ್ 24ರ ರಾತ್ರಿ ಸಂಬಂಧಿತ ಇಲಾಖೆಯಿಂದ ಅಗತ್ಯ ನಿರಾಕ್ಷೇಪಣಾ ಪ್ರಮಾಣಪತ್ರ (NOC) ಪಡೆಯದೇ ಗುರುದ್ವಾರವನ್ನು ನೆಲಸಮಗೊಳಿಸಲಾಗಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಆಕ್ರೋಶ
ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಪ್ರಕರಣದ ಕುರಿತು ತ್ವರಿತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜೊತೆಗೆ, ಧ್ವಂಸಗೊಂಡ ಗುರುದ್ವಾರದ ಭಾಗಗಳನ್ನು ಶೀಘ್ರದಲ್ಲೇ ಮರುನಿರ್ಮಿಸಬೇಕು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
"ಪಾಕಿಸ್ತಾನದ ಫರೂಖಾಬಾದ್‌ನಲ್ಲಿರುವ 125 ವರ್ಷಗಳಷ್ಟು ಹಳೆಯ ಪವಿತ್ರ ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್ ಧ್ವಂಸಗೊಂಡಿರುವ ವರದಿಗಳು ತೀವ್ರ ಆತಂಕ ಉಂಟುಮಾಡಿವೆ. ಈ ಪೂಜ್ಯ ಸಿಖ್ ಧಾರ್ಮಿಕ ಕ್ಷೇತ್ರದ ವಿರುದ್ಧ ನಡೆದಿರುವ ಉದ್ದೇಶಪೂರ್ವಕ ವಿಧ್ವಂಸಕ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸ್ಥಳೀಯ ಆಡಳಿತ ಅಥವಾ ಎವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ETPB) ಯಾವುದೇ ಅರ್ಥಪೂರ್ಣ ಕ್ರಮ ಕೈಗೊಂಡಿಲ್ಲ ಎಂಬ ವರದಿಗಳು ಇನ್ನಷ್ಟು ಕಳವಳಕ್ಕೆ ಕಾರಣವಾಗಿವೆ," ಎಂದು ಜೈಸ್ವಾಲ್ ಹೇಳಿದ್ದಾರೆ.
ಈ ಘಟನೆ ಏಕೈಕ ಘಟನೆಯಲ್ಲ. ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಪೂಜಾ ಸ್ಥಳಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿರುವ ವರದಿಗಳು ಈ ಹಿಂದೆಯೂ ಬಂದಿವೆ ಎಂದು ಭಾರತ ಹೇಳಿದೆ.
"ಈ ಪ್ರಕರಣದ ಕುರಿತು ತ್ವರಿತ ತನಿಖೆ ನಡೆಸಿ, ಈ ಹೇಯ ಕೃತ್ಯ ಎಸಗಿದವರನ್ನು ಕಾನೂನಿನ ಮುಂದೆ ನಿಲ್ಲಿಸಬೇಕು. ಧ್ವಂಸಗೊಂಡ ಗುರುದ್ವಾರದ ಭಾಗಗಳನ್ನು ಕೂಡಲೇ ಮರುಸ್ಥಾಪಿಸಿ ಮರುನಿರ್ಮಿಸಬೇಕು," ಎಂದು ಜೈಸ್ವಾಲ್ ಆಗ್ರಹಿಸಿದ್ದಾರೆ.
ಅಲ್ಲದೆ, ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣವನ್ನು ಖಚಿತಪಡಿಸುವ ತನ್ನ ಜವಾಬ್ದಾರಿಯನ್ನು ಪಾಕಿಸ್ತಾನ ಸರ್ಕಾರ ಸಮರ್ಪಕವಾಗಿ ನಿರ್ವಹಿಸಬೇಕು ಹಾಗೂ ದೇಶದಲ್ಲಿ ಮುಂದುವರಿದಿರುವ ಮತೀಯ ಹಿಂಸಾಚಾರ ಮತ್ತು ಧಾರ್ಮಿಕ ಅಸಹಿಷ್ಣುತೆಯ ವಾತಾವರಣಕ್ಕೆ ಅಂತ್ಯ ಹಾಡಬೇಕು ಎಂದು ಭಾರತ ಒತ್ತಾಯಿಸಿದೆ.
ಪಾಕಿಸ್ತಾನದಲ್ಲಿ ಪ್ರತಿಭಟನೆ
ಲಾಹೋರ್‌ನಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಫರೂಖಾಬಾದ್‌ನ ಐತಿಹಾಸಿಕ ಗುರುದ್ವಾರವನ್ನು ಸ್ಥಳೀಯ ಉದ್ಯಮಿಯೊಬ್ಬರು ಇತ್ತೀಚೆಗೆ ಧ್ವಂಸಗೊಳಿಸಿದ್ದಾರೆ ಎಂದು ಪಂಜಾಬ್ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಸಂಬಂಧಿತ ಇಲಾಖೆಯಿಂದ ಎನ್‌ಒಸಿ ಪಡೆಯದೇ ಉದ್ಯಮಿಯೊಬ್ಬರು ಗುರುದ್ವಾರವನ್ನು ಧ್ವಂಸಗೊಳಿಸಿದ್ದಾರೆ. ಸ್ಥಳೀಯ ಸಿಖ್ ಸಮುದಾಯ ಪ್ರತಿಭಟನೆ ನಡೆಸಿದ ನಂತರವೇ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದರು," ಎಂದು ಅವರು ಹೇಳಿದ್ದಾರೆ.
ಸಿಖ್ ಸಮುದಾಯದ ಪ್ರತಿಭಟನೆಯ ಬಳಿಕ ಪಂಜಾಬ್ ಮುಖ್ಯಮಂತ್ರಿ ಮರಿಯಂ ನವಾಜ್ ಈ ಪ್ರಕರಣದ ಕುರಿತು ಗಮನಹರಿಸಿದ್ದಾರೆ.
ಮರುಸ್ಥಾಪನೆಗೆ ಆದೇಶ
ಪಂಜಾಬ್ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ರಮೇಶ್ ಸಿಂಗ್ ಅರೋರಾ ಬುಧವಾರ ಫರೂಖಾಬಾದ್‌ನ ಗುರುದ್ವಾರಕ್ಕೆ ಭೇಟಿ ನೀಡಿ, ತಕ್ಷಣವೇ ಮರುಸ್ಥಾಪನೆ ಕಾಮಗಾರಿ ಆರಂಭಿಸುವುದಾಗಿ ಘೋಷಿಸಿದ್ದಾರೆ. ಶೇಖುಪುರಾ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ, ಪುರಸಭೆ ಹಾಗೂ ಔಕಾಫ್ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಅವರು, ಸ್ಥಳೀಯ ಸಿಖ್ ಸಮುದಾಯದ ಅಹವಾಲುಗಳನ್ನು ಆಲಿಸಿದರು.
ಪಾಕ್ ಸರ್ಕಾರ ಹೇಳಿದ್ದೇನು?
ಮುಖ್ಯಮಂತ್ರಿ ಮರಿಯಂ ನವಾಜ್ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳು ಹಾಗೂ ಅವರ ಪೂಜಾ ಸ್ಥಳಗಳ ರಕ್ಷಣೆಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಅರೋರಾ ತಿಳಿಸಿದ್ದಾರೆ. ಗುರುದ್ವಾರ ಇದ್ದ ಜಾಗದ ಮಾಲೀಕತ್ವ ಮತ್ತು ಕಾನೂನುಬದ್ಧ ಸ್ಥಿತಿಯ ಕುರಿತು ಔಕಾಫ್ ಇಲಾಖೆಗೆ ತಕ್ಷಣ ತನಿಖೆ ನಡೆಸುವಂತೆ ಅವರು ಸೂಚಿಸಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಆ ಜಾಗ ಔಕಾಫ್ ಆಸ್ತಿಯಾಗಿ ನೋಂದಾಯಿಸಿಲ್ಲ ಎಂದು ಹೇಳಿದ್ದಾರೆ.
"ನಾನು ವೈಯಕ್ತಿಕವಾಗಿ ಸ್ಥಳ ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲೇ ವಾಸ್ತವಾಂಶಗಳ ಆಧಾರದ ಮೇಲೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗುರುದ್ವಾರದ ಮರುಸ್ಥಾಪನೆ ಕಾರ್ಯವನ್ನು ತಕ್ಷಣ ಆರಂಭಿಸಲಾಗುವುದು," ಎಂದು ಅವರು ಹೇಳಿದ್ದಾರೆ.
ವ್ಯಾಪಾರಿಗಳ ಆಕ್ಷೇಪ
ಇನ್ನೊಂದೆಡೆ, ಗುರುದ್ವಾರದ ಸುತ್ತಮುತ್ತ ವ್ಯಾಪಾರ ನಡೆಸುತ್ತಿರುವ ಸ್ಥಳೀಯ ವ್ಯಾಪಾರಿಗಳು ಮರುಸ್ಥಾಪನೆ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಮಾರು 80 ವರ್ಷಗಳಿಂದ ಈ ಸ್ಥಳ ಬಳಕೆಯಿಲ್ಲದೆ ಇತ್ತು. ಈ ಅವಧಿಯಲ್ಲಿ ಹಲವು ಕುಟುಂಬಗಳು ಇಲ್ಲಿ ನೆಲೆಸಿದ್ದು, ಅನೇಕ ಅಂಗಡಿಗಳು ನಿರ್ಮಾಣವಾಗಿವೆ.
ಈಗ ಗುರುದ್ವಾರ ಮರುಸ್ಥಾಪನೆಯಾದರೆ ಹಲವಾರು ಕುಟುಂಬಗಳು ಸ್ಥಳಾಂತರಗೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ಅವರು ಹೇಳಿದ್ದಾರೆ.
ಸ್ಥಳಾಂತರ ಅನಿವಾರ್ಯವಾದರೆ, ಬಾಧಿತ ಕುಟುಂಬಗಳಿಗೆ ಪರ್ಯಾಯ ವಸತಿ ಹಾಗೂ ಜೀವನೋಪಾಯದ ವ್ಯವಸ್ಥೆ ಕಲ್ಪಿಸಬೇಕು ಎಂದು ವ್ಯಾಪಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.