Trump ಹತ್ಯೆಗೆ Iran ಸಂಚು?: ಕತಾರ್ ನೀಡಿದ ಹೊಸ ವಿಮಾನ ಬಿಟ್ಟು ಹಳೇ 'Air Force One' ಹತ್ತಿದ ಅಮೆರಿಕಾ ಅಧ್ಯಕ್ಷ, NATO ಶೃಂಗಸಭೆ ವೇಳೆ ಹೈಡ್ರಾಮಾ..!

ಬೆದರಿಕೆ ಹೊಸ ಬೋಯಿಂಗ್ 747-8 ವಿಮಾನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಟ್ರಂಪ್ ಹಾಗೂ ಅವರು ಪ್ರಯಾಣಿಸುತ್ತಿದ್ದ ಯಾವುದೇ ವಿಮಾನವನ್ನು ಗುರಿಯಾಗಿಸುವ ಉದ್ದೇಶವಿತ್ತು.
Trump
ಟ್ರಂಪ್
Updated on

ವಾಷಿಂಗ್ಟನ್: ಇರಾನ್ ಬೆಂಬಲಿತ ಗುಂಪುಗಳಿಂದ ಕ್ಷಿಪಣಿ ದಾಳಿಯ ಭೀತಿ ಎದುರಾದ ಕಾರಣ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟರ್ಕಿಯಲ್ಲಿ ನಡೆದ ನೇಟೋ ಶೃಂಗಸಭೆಯ ವೇಳೆ ಕೊನೆಯ ಕ್ಷಣದಲ್ಲಿ ವಿಮಾನ ಬದಲಾಯಿಸಬೇಕಾಯಿತು ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ವರದಿಯ ಪ್ರಕಾರ, ಟ್ರಂಪ್ ಅವರು ಕತಾರ್ ಉಡುಗೊರೆಯಾಗಿ ನೀಡಿದ್ದ ಹೊಸ ಬೋಯಿಂಗ್ 747-8 ವಿಮಾನದಲ್ಲಿ ಟರ್ಕಿಗೆ ಆಗಮಿಸಿದ್ದರು. ಆದರೆ, ಅಲ್ಲಿದ್ದಾಗ ಅಮೆರಿಕದ ಗುಪ್ತಚರ ಸಂಸ್ಥೆಗಳಿಗೆ ಇರಾನ್ ಪರ ಸಂಘಟನೆಗಳಿಂದ ಟ್ರಂಪ್ ಅವರ ಮೇಲೆ ದಾಳಿ ನಡೆಸುವ ವಿಶ್ವಾಸಾರ್ಹ ಮಾಹಿತಿ ಲಭಿಸಿತ್ತು.

ಇದಾದ ಬಳಿಕ ಅಮೆರಿಕದ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಭದ್ರತಾ ದೃಷ್ಟಿಯಿಂದ ಹೊಸ ವಿಮಾನದ ಬದಲು ಹಳೆಯ ಏರ್ ಫೋರ್ಸ್ ಒನ್ ವಿಮಾನದಲ್ಲೇ ಪ್ರಯಾಣ ಮುಂದುವರಿಸುವಂತೆ ಸಲಹೆ ನೀಡಿದರು. ಟ್ರಂಪ್ ಕೂಡ ಆ ಸಲಹೆಯನ್ನು ಅನುಸರಿಸಿ ವಿಮಾನ ಬದಲಾಯಿಸಿದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಬೆದರಿಕೆ ಹೊಸ ಬೋಯಿಂಗ್ 747-8 ವಿಮಾನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಟ್ರಂಪ್ ಹಾಗೂ ಅವರು ಪ್ರಯಾಣಿಸುತ್ತಿದ್ದ ಯಾವುದೇ ವಿಮಾನವನ್ನು ಗುರಿಯಾಗಿಸುವ ಉದ್ದೇಶವಿತ್ತು ಎಂದು ಹೇಳಲಾಗಿದೆ.

ಆರಂಭದಲ್ಲಿ ಶ್ವೇತಭವನ ಈ ವಿಮಾನ ಬದಲಾವಣೆಯನ್ನು ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿತ್ತು. ಆದರೆ, ಬಳಿಕ ಇದು ಇರಾನ್‌ಗೆ ಸಂಬಂಧಿಸಿದ ಭದ್ರತಾ ಆತಂಕದಿಂದ ಕೈಗೊಂಡ ಕ್ರಮ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಆ ವೇಳೆ ಟ್ರಂಪ್ ಸಾರ್ವಜನಿಕವಾಗಿ, ಬ್ರಿಟನ್‌ನಲ್ಲಿ ನಿಯೋಜನೆಯಲ್ಲಿದ್ದ ಅಮೆರಿಕದ ಸೈನಿಕರು ಹೊಸ ವಿಮಾನವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲು ತಾವು ವಿಮಾನ ಬದಲಾಯಿಸಿದ್ದಾಗಿ ಹೇಳಿದ್ದರು. ಭದ್ರತಾ ಕಾರಣವೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

ಈ ಘಟನೆ ಬಳಿಕ ಕತಾರ್ ನೀಡಿದ ಹೊಸ ಬೋಯಿಂಗ್ 747-8 ವಿಮಾನದ ಭದ್ರತೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಹಳೆಯ ಏರ್ ಫೋರ್ಸ್ ಒನ್‌ನಲ್ಲಿ ಇರುವ ಕೆಲವು ಅತ್ಯಾಧುನಿಕ ಕ್ಷಿಪಣಿ ನಿರೋಧಕ ರಕ್ಷಣಾ ವ್ಯವಸ್ಥೆಗಳು ಈ ಹೊಸ ವಿಮಾನದಲ್ಲಿ ಇನ್ನೂ ಅಳವಡಿಸಿಲ್ಲ ಎನ್ನಲಾಗಿದೆ.

ಇತ್ತೀಚೆಗೆ ಸುದ್ದಿಗಾರರು ಇದೇ ಬಗ್ಗೆ ಪ್ರಶ್ನಿಸಿದಾಗ, "ಶೀಘ್ರದಲ್ಲೇ ಅಗತ್ಯ ಭದ್ರತಾ ವ್ಯವಸ್ಥೆಗಳನ್ನೆಲ್ಲ ಅಳವಡಿಸಲಾಗುವುದು" ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದರು.

Trump
Iran ಮೇಲಿನ ದಾಳಿಗೆ ದಿಢೀರ್ ಬ್ರೇಕ್: ಸಂಧಾನಕ್ಕೆ ಅಮೆರಿಕಾ ಮುಂದು, ಒಮಾನ್ ಮಧ್ಯಸ್ಥಿಕೆಗೆ ಅವಕಾಶ ನೀಡಿದ Trump..!

ಸುಮಾರು 14 ವರ್ಷ ಹಳೆಯದಾದ ಈ ವಿಮಾನವನ್ನು ಅಧ್ಯಕ್ಷರ ಅಧಿಕೃತ ಬಳಕೆಗೆ ತರಲು ತ್ವರಿತ ಹಾಗೂ ದುಬಾರಿ ಮಟ್ಟದ ನವೀಕರಣ ಕಾಮಗಾರಿ ನಡೆಸಲಾಗಿತ್ತು. ಈ ವರ್ಷದ ಕೊನೆಯಲ್ಲಿ ಹೆಚ್ಚುವರಿ ಭದ್ರತಾ ಸುಧಾರಣೆಗಳಿಗಾಗಿ ಸುಮಾರು ಒಂದು ತಿಂಗಳ ಕಾಲ ಈ ವಿಮಾನವನ್ನು ಸೇವೆಯಿಂದ ಹೊರಗಿಡಲಾಗುವುದು ಎಂದು ಶ್ವೇತಭವನ ಈಗಾಗಲೇ ಘೋಷಿಸಿದೆ.

ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಅವರು ಮಾತನಾಡಿ,"ಹೊಸ ಏರ್ ಫೋರ್ಸ್ ಒನ್ ಅಧ್ಯಕ್ಷರ ಪ್ರಯಾಣಕ್ಕೆ ಸಂಪೂರ್ಣ ಸುರಕ್ಷಿತವಾಗಿದೆ. ಆದರೆ, ತುರ್ತು ಪರಿಸ್ಥಿತಿಯಲ್ಲಿ ಹೆಚ್ಚುವರಿ ಭದ್ರತಾ ಸುಧಾರಣೆಗಳನ್ನು ಮಾಡಲಾಗುತ್ತದೆ. ಆ ಅವಧಿಯಲ್ಲಿ ಅಧ್ಯಕ್ಷರು ಹಳೆಯ ಏರ್ ಫೋರ್ಸ್ ಒನ್‌ನಲ್ಲೇ ಪ್ರಯಾಣಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಟರ್ಕಿಯಲ್ಲಿ ಎದುರಾದ ಈ ಬೆದರಿಕೆ, ಟ್ರಂಪ್ ಅವರನ್ನು ಗುರಿಯಾಗಿಸಿ ಇರಾನ್ ರೂಪಿಸಿದ್ದ ಸಂಚು ಕುರಿತು ಇಸ್ರೇಲ್ ಅಮೆರಿಕದೊಂದಿಗೆ ಹಂಚಿಕೊಂಡಿದ್ದ ಪ್ರತ್ಯೇಕ ಗುಪ್ತಚರ ಮಾಹಿತಿಯಿಂದ ಭಿನ್ನವಾಗಿದೆ ಎಂದು ವರದಿ ಹೇಳಿದೆ.

ಕೆಲವು ಅಮೆರಿಕದ ಅಧಿಕಾರಿಗಳು ಇಸ್ರೇಲ್ ನೀಡಿದ್ದ ಮಾಹಿತಿಯನ್ನು ಅನುಮಾನದಿಂದ ನೋಡಿದ್ದು, ಇರಾನ್ ವಿರುದ್ಧ ಅಮೆರಿಕ ಮತ್ತಷ್ಟು ಕಠಿಣ ಸೇನಾ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಲು ಆ ಮಾಹಿತಿ ಬಳಸಲಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಟ್ರಂಪ್ ಅವರ ಟರ್ಕಿ ಭೇಟಿಯ ಸಮಯದಲ್ಲೇ ಅಮೆರಿಕ ಮತ್ತೆ ಇರಾನ್ ಮೇಲೆ ವೈಮಾನಿಕ ದಾಳಿಗಳನ್ನು ಆರಂಭಿಸಿದ್ದರಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿತ್ತು.

ನ್ಯಾಟೊ ಶೃಂಗಸಭೆಯ ವೇಳೆ ಬೆದರಿಕೆಗಳ ಕುರಿತು ಪ್ರತಿಕ್ರಿಯಿಸಿದ್ದ ಟ್ರಂಪ್, "ಅವರು ಅಮೆರಿಕದ ನಾಯಕನನ್ನು, ಅಂದರೆ ನನ್ನನ್ನು ಗುರಿಯಾಗಿಸಲು ಬಯಸುತ್ತಿದ್ದಾರೆ. ಅವರ ಪ್ರತಿಯೊಂದು ಪಟ್ಟಿಯಲ್ಲೂ ನನ್ನ ಹೆಸರಿದೆ. ಇದುವರೆಗೆ ನಾನು ಅದೃಷ್ಟವಂತನಾಗಿದ್ದೇನೆ. ಆದರೆ ಅದು ಎಷ್ಟು ದಿನ ಇರುತ್ತದೆ ಗೊತ್ತಿಲ್ಲ," ಎಂದು ಹೇಳಿದ್ದರು.

ಇದೇ ವೇಳೆ ಅಮೆರಿಕದ ಸೀಕ್ರೆಟ್ ಸರ್ವಿಸ್ ನಿರ್ದೇಶಕ ಶಾನ್ ಕರನ್, ಹಿರಿಯ ಅಮೆರಿಕ ನಾಯಕರ ವಿರುದ್ಧದ ಬೆದರಿಕೆಗಳು ಹಿಂದೆಂದಿಗಿಂತಲೂ ಹೆಚ್ಚಾಗಿವೆ ಎಂದು ಹೇಳಿದ್ದಾರೆ.

ನನ್ನ 24 ವರ್ಷಗಳ ಸೇವಾವಧಿಯಲ್ಲಿ ಇಷ್ಟೊಂದು ಪ್ರಮಾಣದ ಬೆದರಿಕೆಗಳನ್ನು ನಾನು ಎಂದಿಗೂ ನೋಡಿಲ್ಲ. ಪರಿಸ್ಥಿತಿ ಅತ್ಯಂತ ಸೂಕ್ಷ್ಮ ಮತ್ತು ಅಸ್ಥಿರವಾಗಿದೆ. ರಾಷ್ಟ್ರದ ಉನ್ನತ ನಾಯಕರು ಮಾತ್ರವಲ್ಲ, ಸ್ಥಳೀಯ ಅಧಿಕಾರಿಗಳಿಗೂ ಅಪಾಯದ ಮಟ್ಟ ಹೆಚ್ಚಾಗಿದೆ," ಎಂದು ಅವರು ತಿಳಿಸಿದ್ದಾರೆ.

ಕರನ್ ಈ ಹಿಂದೆ ಟ್ರಂಪ್ ಅವರ ಭದ್ರತಾ ತಂಡದ ಮುಖ್ಯಸ್ಥರಾಗಿದ್ದು, 2024ರ ಜುಲೈನಲ್ಲಿ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ನಡೆದ ಹತ್ಯೆ ಯತ್ನದ ಸಮಯದಲ್ಲೂ ಟ್ರಂಪ್ ಅವರನ್ನು ರಕ್ಷಿಸಿದ್ದ ಅಧಿಕಾರಿಗಳಲ್ಲಿ ಒಬ್ಬರಾಗಿದ್ದರು.

X
Kannada Prabha
www.kannadaprabha.com