ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ: 19ಕ್ಕೂ ಹೆಚ್ಚು ಮಂದಿ ಸಾವು, ಇಂಡೋನೇಷ್ಯಾ ಸೇರಿ ಹಲವು ದೇಶಗಳಲ್ಲಿ ಸುನಾಮಿ ಎಚ್ಚರಿಕೆ

ಭೂಕಂಪದ ಪರಿಣಾಮ ಹಲವಾರು ಕಟ್ಟಡಗಳು ಕುಸಿದು ಬಿದ್ದಿದ್ದು, ಫಿಲಿಪೈನ್ಸ್‌ ಸೇರಿದಂತೆ ಇಂಡೋನೇಷ್ಯಾ, ತೈವಾನ್, ಪಲಾವ್, ಪಪುವಾ ನ್ಯೂಗಿನಿಯಾ ಮತ್ತು ಜಪಾನ್ ದೇಶಗಳಲ್ಲಿ ಸುನಾಮಿ ಎಚ್ಚರಿಕೆ ಘೋಷಿಸಲಾಗಿದೆ.
Police gather in front of a collapsed Jollibee fast food restaurant
ಕುಸಿದುಬಿದ್ದಿರುವ ರೆಸ್ಟೋರೆಂಟ್.
Updated on

ಮನಿಲಾ: ಫಿಲಿಪೈನ್ಸ್‌ನ ದಕ್ಷಿಣ ಭಾಗದಲ್ಲಿ ಸೋಮವಾರ ಸಂಭವಿಸಿದ ಪ್ರಬಲ 7.8 ತೀವ್ರತೆಯ ಭೂಕಂಪದಿಂದ ಕನಿಷ್ಠ 19 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಭೂಕಂಪದ ಪರಿಣಾಮ ಹಲವಾರು ಕಟ್ಟಡಗಳು ಕುಸಿದು ಬಿದ್ದಿದ್ದು, ಫಿಲಿಪೈನ್ಸ್‌ ಸೇರಿದಂತೆ ಇಂಡೋನೇಷ್ಯಾ, ತೈವಾನ್, ಪಲಾವ್, ಪಪುವಾ ನ್ಯೂಗಿನಿಯಾ ಮತ್ತು ಜಪಾನ್ ದೇಶಗಳಲ್ಲಿ ಸುನಾಮಿ ಎಚ್ಚರಿಕೆ ಘೋಷಿಸಲಾಗಿದೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (USGS) ಪ್ರಕಾರ, ಭೂಕಂಪವು ಫಿಲಿಪೈನ್ಸ್‌ ನ ಮಿಂಡನಾವೊ ದ್ವೀಪದ ಸರಂಗಾನಿ ಪ್ರಾಂತ್ಯದಿಂದ ಸುಮಾರು 24 ಕಿಲೋಮೀಟರ್ ಪಶ್ಚಿಮ ಭಾಗದ ಸಮುದ್ರದಲ್ಲಿ ಸಂಭವಿಸಿದೆ. ಭೂಕಂಪದ ತೀವ್ರತೆ ಹೆಚ್ಚು ಇದ್ದ ಕಾರಣ ಹಲವು ಪ್ರದೇಶಗಳಿಗೆ ಭೂಕಂಪನ ಅನುಭವವಾಗಿದೆ.

ಜನರಲ್ ಸ್ಯಾಂಟೋಸ್ ನಗರ ಪೊಲೀಸ್ ಅಧಿಕಾರಿಗಳ ಪ್ರಕಾರ, ಇದೂವರೆಗೆ 19 ಮಂದಿ ಸಾವು ದೃಢಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಅನೇಕ ಕಟ್ಟಡಗಳು ಹಾನಿಗೊಳಗಾಗಿದ್ದು, ಕೆಲವು ಸಂಪೂರ್ಣ ಕುಸಿದಿವೆ ಎಂದು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಜನರಲ್ ಸ್ಯಾಂಟೋಸ್ ನಗರದ ಒಂದು ವಾಣಿಜ್ಯ ಸಂಕೀರ್ಣ ಸಂಪೂರ್ಣವಾಗಿ ನೆಲಸಮವಾಗಿರುವ ದೃಶ್ಯಗಳು ಕಂಡುಬಂದಿವೆ.

ಜಾಲಿಬೀ ಫಾಸ್ಟ್‌ಫುಡ್ ರೆಸ್ಟೋರೆಂಟ್ ಹೊಂದಿದ್ದ ಕಟ್ಟಡ ಕುಸಿದಿದ್ದು, ಮತ್ತೊಂದು ಪ್ರದೇಶದಲ್ಲಿ ಖಾಲಿಯಾಗಿದ್ದ ಶಾಲಾ ಕಟ್ಟಡವೂ ಧರೆಗುರುಳಿದೆ. “ದೇವರೇ, ಕಟ್ಟಡ ಸಂಪೂರ್ಣ ಕುಸಿದುಬಿಟ್ಟಿದೆ” ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿರುವುದು ವಿಡಿಯೊಗಳಲ್ಲಿ ಕೇಳಿಬಂದಿದೆ.

ಭೂಕಂಪದ ಸುಮಾರು ಎರಡು ಗಂಟೆಗಳ ನಂತರ 6.1 ತೀವ್ರತೆಯ ಪ್ರಬಲ ಕಂಪನ (ಆಫ್ಟರ್‌ಶಾಕ್) ಕೂಡ ಸಂಭವಿಸಿದ್ದು, ಜನರಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ. ಈ ನಡುವೆ ಅಧಿಕಾರಿಗಳು ಹಾನಿಗೊಳಗಾದ ಕಟ್ಟಡಗಳ ಸಮೀಪ ಹೋಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

Police gather in front of a collapsed Jollibee fast food restaurant
ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ: ಸಮುದ್ರದಲ್ಲಿ ಅಲೆಗಳ ಅಬ್ಬರ; ಸುನಾಮಿ ಎಚ್ಚರಿಕೆ

ಭೂಕಂಪದ ಬಳಿಕ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಮುಂದಿನ ಮೂರು ಗಂಟೆಗಳ ಅವಧಿಯಲ್ಲಿ ಫಿಲಿಪೈನ್ಸ್‌, ಇಂಡೋನೇಷ್ಯಾ, ಪಲಾವ್, ತೈವಾನ್ ಮತ್ತು ಪಪುವಾ ನ್ಯೂಗಿನಿಯಾ ಕರಾವಳಿ ಪ್ರದೇಶಗಳಿಗೆ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಇದರಿಂದ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಫಿಲಿಪೈನ್ಸ್‌ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್. ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು, ಮಿಂಡನಾವೊದ ಪೀಡಿತ ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಕರಾವಳಿ ಪ್ರದೇಶದ ನಿವಾಸಿಗಳಿಗೆ ತಕ್ಷಣ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ.

“ಈಗಲೇ ಸುರಕ್ಷಿತ ಪ್ರದೇಶಗಳಿಗೆ ತೆರಳಿ. ತಡ ಮಾಡಬೇಡಿ. ನಿಮ್ಮ ಜೀವವೇ ಅತ್ಯಂತ ಮುಖ್ಯ” ಎಂದು ಮಾರ್ಕೋಸ್ ಮನವಿ ಮಾಡಿದ್ದಾರೆ.

ಇಂಡೋನೇಷ್ಯಾ ಸರ್ಕಾರ ಕೂಡ ಉತ್ತರ ಸುಲಾವೆಸಿ, ಗೊರೊಂಟಾಲೊ ಮತ್ತು ಸಂಗಿಹೆ ದ್ವೀಪಗಳ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲು ಆದೇಶಿಸಿದೆ.

ಜಪಾನ್ ಕೂಡ ತನ್ನ ಪೆಸಿಫಿಕ್ ಕರಾವಳಿ ಭಾಗಗಳಿಗೆ ಸುನಾಮಿ ಸಲಹೆ (Tsunami Advisory) ಹೊರಡಿಸಿದ್ದು, ಸುಮಾರು ಒಂದು ಮೀಟರ್ ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಫಿಲಿಪೈನ್ಸ್‌ ವಿಶ್ವದ ಅತ್ಯಂತ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಒಂದಾಗಿದ್ದು, ಪೆಸಿಫಿಕ್ "ರಿಂಗ್ ಆಫ್ ಫೈರ್" ವಲಯದಲ್ಲಿದೆ. ಈ ಪ್ರದೇಶದಲ್ಲಿ ಭೂಮಿಯ ಟೆಕ್ಟೋನಿಕ್ ಫಲಕಗಳ ಚಲನೆಯಿಂದ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತವೆ. ಕಳೆದ ವರ್ಷವೂ ಮಿಂಡನಾವೊ ಪ್ರದೇಶದಲ್ಲಿ 7.4 ಮತ್ತು 6.7 ತೀವ್ರತೆಯ ಭೂಕಂಪಗಳು ಸಂಭವಿಸಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದರು.

ಇದಕ್ಕೂ ಮೊದಲು ಸಂಭವಿಸಿದ್ದ 6.9 ತೀವ್ರತೆಯ ಭೂಕಂಪದಿಂದ 76 ಮಂದಿ ಮೃತಪಟ್ಟಿದ್ದು, ಸುಮಾರು 72 ಸಾವಿರ ಕಟ್ಟಡಗಳು ಹಾನಿಗೊಳಗಾಗಿದ್ದವು. ಇದೀಗ 7.8 ತೀವ್ರತೆಯ ಭೂಕಂಪ ಮತ್ತೊಮ್ಮೆ ಫಿಲಿಪ್ಪೀನ್ಸ್‌ನಲ್ಲಿ ಭಾರಿ ಆತಂಕ ಸೃಷ್ಟಿಸಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com