

ವಾಷಿಂಗ್ಟನ್/ರೋಮ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಟಲಿ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಕುರಿತು ಇಟಲಿಯ ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ ಹೇಳಿಕೆ ಹೊಸ ರಾಜತಾಂತ್ರಿಕ ವಿವಾದಕ್ಕೆ ಕಾರಣವಾಗಿದೆ.
ಟ್ರಂಪ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ, ಇಟಲಿಯ ವಿದೇಶಾಂಗ ಸಚಿವ ಆಂಟೊನಿಯೊ ತಾಜನಿ ಅವರು ಅಮೆರಿಕ ಪ್ರವಾಸವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದರು. ಈ ಪ್ರವಾಸದ ವೇಳೆ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಭೇಟಿಯಾಗಬೇಕಿತ್ತು.
ಆಂಟೊನಿಯೊ ತಾಜನಿ ಅವರು ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳನ್ನು “ಅವಮಾನಕಾರಿ” ಎಂದು ಕರೆದರೆ, ಮೆಲೋನಿಯವರು “ಸಂಪೂರ್ಣವಾಗಿ ಸುಳ್ಳು ಮತ್ತು ಕಟ್ಟುಕಥೆ” ಎಂದು ತಳ್ಳಿಹಾಕಿದ್ದಾರೆ.
ಒಮ್ಮೆ ಆಪ್ತ ಸಂಬಂಧ ಹೊಂದಿದ್ದ ಈ ಇಬ್ಬರು ನಾಯಕರ ನಡುವಿನ ಬಾಂಧವ್ಯದಲ್ಲಿ ಇದು ಮತ್ತೊಂದು ಬಿರುಕು ಮೂಡಿಸಿದ್ದು, ಅಮೆರಿಕ ಮತ್ತು ಅದರ ಯುರೋಪಿಯನ್ ಮಿತ್ರ ರಾಷ್ಟ್ರಗಳ ನಡುವಿನ ಸಂಬಂಧದಲ್ಲೂ ಹೊಸ ಉದ್ವಿಗ್ನತೆಯನ್ನು ಉಂಟುಮಾಡಿದೆ. ಫ್ರಾನ್ಸ್‌ನಲ್ಲಿ ಈ ವಾರ ನಡೆದ G7 Summit ಸಭೆಯಲ್ಲಿ ಸಂಬಂಧ ಸುಧಾರಣೆಯ ಲಕ್ಷಣಗಳು ಕಂಡುಬಂದಿದ್ದರೂ, ಈ ಘಟನೆ ಮತ್ತೆ ವಿವಾದಕ್ಕೆ ಕಾರಣವಾಗಿದೆ.
ಇಟಲಿಯ La7 TVಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ಜಿ7 ಶೃಂಗಸಭೆಯಲ್ಲಿ ತಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಮೆಲೋನಿ ಬೇಡಿಕೊಂಡಿದ್ದರು ಎಂದು ಹೇಳಿದ್ದರು. ಇಟಾಲಿಯನ್ ಭಾಷೆಯಲ್ಲಿ ಡಬ್ ಮಾಡಲಾದ ಆ ಸಂದರ್ಶನದ ಅನುವಾದದ ಪ್ರಕಾರ, ಅವರು ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಹಳ ಬೇಡಿಕೊಂಡರು. ನಾನು ಫೋಟೋ ತೆಗೆಸಿಕೊಳ್ಳಲು ಇಚ್ಛಿಸಿರಲಿಲ್ಲ, ಆದರೆ ಅವರ ಮೇಲೆ ಕರುಣೆ ತೋರಿಸಿ ಒಪ್ಪಿಕೊಂಡೆ ಎಂದು ಟ್ರಂಪ್ ಹೇಳಿದ್ದರು.
ಇದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿದ ಮೆಲೋನಿ, ಸಾಮಾಜಿಕ ಜಾಲತಾಣ X ನಲ್ಲಿ ವಿಡಿಯೊ ಸಂದೇಶ ಬಿಡುಗಡೆ ಮಾಡಿ, “ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು ಸಂಪೂರ್ಣ ಸುಳ್ಳು. ಅಮೆರಿಕ ಅಧ್ಯಕ್ಷರು ತಮ್ಮ ಮಿತ್ರ ರಾಷ್ಟ್ರಗಳೊಂದಿಗೆ ಈ ರೀತಿಯಾಗಿ ವರ್ತಿಸುವುದು ಏಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇದು ಮೊದಲ ಬಾರಿಯೂ ಅಲ್ಲ ಎಂದು ಹೇಳಿದರು.
ಪಾಶ್ಚಾತ್ಯ ರಾಷ್ಟ್ರಗಳ ಶತ್ರುಗಳು ಹಾಗೂ ಅಮೆರಿಕದ ವಿರೋಧಿಗಳ ವಿರುದ್ಧ ಅವರು ಇದೇ ರೀತಿಯ ದೃಢ ನಿಲುವು ತೋರಿಸುವುದಿಲ್ಲ ಎಂಬುದು ವಿಷಾದಕರ. ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ — ಇಟಲಿ ಮತ್ತು ನಾನು ಯಾರ ಮುಂದೆಯೂ ಬೇಡಿಕೊಳ್ಳುವುದಿಲ್ಲ ಎಂದು ಮೆಲೋನಿ ಹೇಳಿದ್ದಾರೆ.
ತಾಜನಿ ಅವರು ಮುಂದಿನ ವಾರ ಅಮೆರಿಕ ಪ್ರವಾಸ ಕೈಗೊಂಡು, ಮಿಯಾಮಿಯಲ್ಲಿ ನಡೆಯಬೇಕಿದ್ದ ಇಟಲಿ–ಅಮೆರಿಕ ವ್ಯಾಪಾರ, ಹೂಡಿಕೆ, ವಿಜ್ಞಾನ ಮತ್ತು ನಾವೀನ್ಯತೆ ವೇದಿಕೆಯಲ್ಲಿ ಭಾಗವಹಿಸಲು ಯೋಜಿಸಿದ್ದರು. ಅಮೆರಿಕದ ವಿದೇಶಾಂಗ ಇಲಾಖೆಯ ಪ್ರಕಾರ, ರೂಬಿಯೋ ಮತ್ತು ತಾಜಾನಿ ನಡುವಿನ ಸಭೆಯಲ್ಲಿ ಆರ್ಥಿಕ ಭದ್ರತೆ ಹಾಗೂ ಪ್ರಮುಖ ಖನಿಜಗಳ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರದ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ನಂತರ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.
NBC News ಗೆ ನೀಡಿದ ಮತ್ತೊಂದು ಸಂದರ್ಶನದಲ್ಲಿ ಟ್ರಂಪ್ ತಮ್ಮ ಟೀಕೆಯನ್ನು ಮತ್ತಷ್ಟು ತೀವ್ರಗೊಳಿಸಿದರು. ಅವರು ನನ್ನ ಅಭಿಮಾನಿಯಾಗಿರುವ ಅಗತ್ಯವಿಲ್ಲ. ಇರಾನ್ ಯುದ್ಧಕ್ಕೆ ಸಂಬಂಧಿಸಿದ ವಿಚಾರದಲ್ಲಿ ನ್ಯಾಟೋ ಗುಂಪಿನೊಂದಿಗೆ ಅವರು ನಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ ಎಂದು ಅವರು ಆರೋಪಿಸಿದರು.
ಟ್ರಂಪ್ ಮತ್ತು ಮೆಲೋನಿ ನಡುವೆ ಈ ರೀತಿ ಭಿನ್ನಾಭಿಪ್ರಾಯ ಇದು ಮೊದಲ ಸಲವೇನಲ್ಲ. ಈ ವರ್ಷದ ಆರಂಭದಲ್ಲಿ, ಇರಾನ್ ವಿರುದ್ಧದ ಯುದ್ಧಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪೋಪ್ Pope Leo XIV ಅವರ ಬಗ್ಗೆ ಟ್ರಂಪ್ ಮಾಡಿದ ಟೀಕೆಗಳನ್ನು ಮೆಲೋನಿ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದರು. ಇದಾದ ಬಳಿಕ, ಅಮೆರಿಕಕ್ಕೆ ಸಮರ್ಪಕ ಬೆಂಬಲ ನೀಡದಿರುವುದಕ್ಕಾಗಿ ಟ್ರಂಪ್ ಇಟಲಿ ಮತ್ತು ಮೆಲೋನಿ ಅವರನ್ನು ಟೀಕಿಸಿದ್ದರು.
ಮೆಲೋನಿ ಅವರನ್ನು ಪಶ್ಚಿಮ ಯುರೋಪಿನಲ್ಲಿರುವ ಟ್ರಂಪ್ ಅವರ ಅತ್ಯಂತ ನಿಕಟ ಮಿತ್ರರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತಿತ್ತು. ಆದರೆ ಇರಾನ್ ಯುದ್ಧದಲ್ಲಿ ಭಾಗವಹಿಸಲು ಅವರು ನಿರಾಕರಿಸಿದ ಬಳಿಕ ಇಬ್ಬರ ನಡುವಿನ ಸಂಬಂಧ ಹದಗೆಟ್ಟಿತು.
ಟ್ರಂಪ್ ಅವರು ಅಧ್ಯಕ್ಷರಾದ ಎರಡನೇ ಅವಧಿ ಆರಂಭವಾದ ಬಳಿಕ, ಸಂಪ್ರದಾಯವಾದಿ ಮತ್ತು ಜನಪ್ರಿಯತಾವಾದಿ ನಾಯಕಿಯಾಗಿರುವ ಮೆಲೋನಿ ಟ್ರಂಪ್ ಹಾಗೂ ಅವರ ಸಲಹೆಗಾರರ ಗಮನ ಸೆಳೆದಿದ್ದರು. ಟ್ರಂಪ್ ಅವರ ಎರಡನೇ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ ಏಕೈಕ ಯುರೋಪಿಯನ್ ನಾಯಕಿಯೂ ಅವರೇ ಆಗಿದ್ದರು.
ಕಠಿಣ ವಲಸೆ ನೀತಿಗಳು ಮತ್ತು ರಾಷ್ಟ್ರೀಯ ಸಾರ್ವಭೌಮತ್ವದಂತಹ ಹಲವು ವಿಷಯಗಳಲ್ಲಿ ಇಬ್ಬರೂ ಒಂದೇ ರೀತಿಯ ನಿಲುವು ಹೊಂದಿದ್ದರು. ಹಿಂದೆ ಟ್ರಂಪ್ ಅವರು ಮೆಲೋನಿ ಬಗ್ಗೆ ಹಲವು ಬಾರಿ ವೈಯಕ್ತಿಕವಾಗಿ ಪ್ರಶಂಸೆಯ ಮಾತುಗಳನ್ನಾಡಿದ್ದು, ಇತರ ಯುರೋಪಿಯನ್ ನಾಯಕರೊಂದಿಗೆ ತೋರಿದ ಕಠಿಣ ಧೋರಣೆಗೆ ವಿರುದ್ಧವಾಗಿ ಅವರೊಂದಿಗೆ ಸ್ನೇಹಪೂರ್ವಕವಾಗಿ ನಡೆದುಕೊಂಡಿದ್ದರು.
Advertisement