ಟ್ರಂಪ್ ಜೊತೆಗಿನ ಫೋಟೋ ಫೈಟ್‌ಗೆ ಮೆಲೋನಿ ಫುಲ್ ಸ್ಟಾಪ್: ಅಮೆರಿಕದೊಂದಿಗೆ ಬಾಂಧವ್ಯ ಮುಂದುವರಿಸಲು ನಿರ್ಧಾರ..!

ಇತ್ತೀಚೆಗೆ ಫ್ರಾನ್ಸ್‌ನಲ್ಲಿ ನಡೆದ ಜಿ7 ಶೃಂಗಸಭೆಯ ವೇಳೆ ಮೆಲೋನಿ ಪದೇ ಪದೇ ತನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಮನವಿ ಮಾಡಿದ್ದರು ಮತ್ತು ಅವರ ಮೇಲೆ ಕರುಣೆ ಬಂದ ಕಾರಣ ನಾನು ಒಪ್ಪಿಕೊಂಡೆ ಎಂದು ಟ್ರಂಪ್ ಹೇಳಿದ್ದರು. ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.
Meloni, Donald Trump
ಮೆಲೋನಿ, ಡೊನಾಲ್ಡ್ ಟ್ರಂಪ್
Updated on

ರೋಮ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ಫೋಟೋ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನಗಳು ಆರಂಭವಾಗಿವೆ.

ಇತ್ತೀಚಿನ ವಾಕ್ಸಮರದ ಬಳಿಕ ಮೆಲೋನಿ, ಅಮೆರಿಕ ಮತ್ತು ಇಟಲಿ ನಡುವಿನ ಸಾಂಪ್ರದಾಯಿಕ ಸ್ನೇಹ ಹಾಗೂ ಮೈತ್ರಿ ಸಂಬಂಧಗಳನ್ನು ಪುನಃ ಸಾಮಾನ್ಯ ಸ್ಥಿತಿಗೆ ತರಲು ಬಯಸುವುದಾಗಿ ಹೇಳಿದ್ದಾರೆ.

ಮಂಗಳವಾರ ಮಾತನಾಡಿದ ಮೆಲೋನಿ, "ಈ ವಿವಾದವನ್ನು ಮತ್ತಷ್ಟು ಮುಂದುವರಿಸುವ ಯಾವುದೇ ಉದ್ದೇಶ ನನಗಿಲ್ಲ. ರೋಮ್ ಮತ್ತು ವಾಷಿಂಗ್ಟನ್ ನಡುವಿನ ದಶಕಗಳ ಹಳೆಯ ಬಾಂಧವ್ಯವನ್ನು ಸಾರ್ವಜನಿಕ ವಾಗ್ವಾದದ ಆಧಾರದ ಮೇಲೆ ಅಳೆಯಬಾರದು" ಎಂದು ಹೇಳಿದ್ದಾರೆ.

ಇತ್ತೀಚೆಗೆ ಫ್ರಾನ್ಸ್‌ನಲ್ಲಿ ನಡೆದ ಜಿ7 ಶೃಂಗಸಭೆಯ ವೇಳೆ ಮೆಲೋನಿ ಪದೇ ಪದೇ ತನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಮನವಿ ಮಾಡಿದ್ದರು ಮತ್ತು ಅವರ ಮೇಲೆ ಕರುಣೆ ಬಂದ ಕಾರಣ ನಾನು ಒಪ್ಪಿಕೊಂಡೆ ಎಂದು ಟ್ರಂಪ್ ಹೇಳಿದ್ದರು. ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಟ್ರಂಪ್ ಆರೋಪವನ್ನು ತಳ್ಳಿಹಾಕಿದ ಮೆಲೋನಿ, "ಈ ಹೇಳಿಕೆ ಸಂಪೂರ್ಣವಾಗಿ ಕಾಲ್ಪನಿಕ ಮತ್ತು ಸತ್ಯಕ್ಕೆ ದೂರವಾದದ್ದು" ಎಂದು ತಿರುಗೇಟು ನೀಡಿದ್ದರು. ಟ್ರಂಪ್ ಅವರ ಹೇಳಿಕೆ ತನಗೆ ಅಚ್ಚರಿ ತಂದಿದೆ ಎಂದು ಕೂಡ ಅವರು ಹೇಳಿದ್ದರು.

Meloni, Donald Trump
ಮೆಲೋನಿ ಕುರಿತು ಟ್ರಂಪ್ ವಿವಾದಾತ್ಮಕ ಹೇಳಿಕೆ: ಅಮೆರಿಕ ಪ್ರವಾಸ ರದ್ದುಗೊಳಿಸಿದ ಇಟಲಿ ವಿದೇಶಾಂಗ ಸಚಿವ

ಈ ವಿವಾದದ ನಡುವೆಯೂ ಅಮೆರಿಕ-ಇಟಲಿ ಸಂಬಂಧಗಳ ಮಹತ್ವವನ್ನು ಒತ್ತಿ ಹೇಳಿದ ಮೆಲೋನಿ, ಸಾಮಾಜಿಕ ಜಾಲತಾಣಗಳಲ್ಲಿನ ವಾಗ್ವಾದದಿಂದ ಎರಡು ರಾಷ್ಟ್ರಗಳ ನಡುವಿನ ದಶಕಗಳ ಸಹಕಾರಕ್ಕೆ ಧಕ್ಕೆಯಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಇಟಲಿಯ ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಯುರೋಪ್-ಅಮೆರಿಕ ಮೈತ್ರಿಕೂಟದ ಮೇಲಿನ ತಮ್ಮ ಬದ್ಧತೆ ಮುಂದುವರಿಯಲಿದೆ ಎಂದು ತಿಳಿಸಿದರು.

"ವಿದೇಶಾಂಗ ನೀತಿ ವೈಯಕ್ತಿಕ ಜಗಳ ಅಥವಾ ಸಾಮಾಜಿಕ ಜಾಲತಾಣದ ಪ್ರದರ್ಶನವಾಗಬಾರದು" ಎಂದು ಹೇಳಿದ್ದಾರೆ.

ಈ ವಿವಾದ ಮತ್ತಷ್ಟು ತೀವ್ರಗೊಂಡಿದ್ದು, ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ‘ಟ್ರೂತ್ ಸೋಶಿಯಲ್’ನಲ್ಲಿ ಮೆಲೋನಿ ಅವರ ಜನಪ್ರಿಯತೆ ಕುಸಿಯುತ್ತಿದೆ ಎಂದು ಆರೋಪಿಸಿದ ನಂತರ. ಜೊತೆಗೆ ಇರಾನ್ ವಿರುದ್ಧದ ಅಮೆರಿಕ ನೇತೃತ್ವದ ಸೇನಾ ಕಾರ್ಯಾಚರಣೆಗೆ ಇಟಲಿ ಬೆಂಬಲ ನೀಡದಿರುವುದನ್ನೂ ಟ್ರಂಪ್ ಟೀಕಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಮೆಲೋನಿ, "ನನ್ನ ಜನಪ್ರಿಯತೆ ಬಗ್ಗೆ ನಿಮಗೆ ಚಿಂತಿಸುವ ಅಗತ್ಯವಿಲ್ಲ. ಇಟಲಿಯ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವ ನನ್ನ ಸಾಮರ್ಥ್ಯದ ಆಧಾರದ ಮೇಲೆ ಜನರು ನನ್ನನ್ನು ಬೆಂಬಲಿಸುತ್ತಾರೆ" ಎಂದು ತಿರುಗೇಟು ನೀಡಿದ್ದರು.

ಟ್ರಂಪ್ ಮತ್ತು ಮೆಲೋನಿ ನಡುವಿನ ಈ ಮಾತಿನ ಸಮರ ಜಾಗತಿಕ ರಾಜಕೀಯದಲ್ಲಿ ಸಾಕಷ್ಟು ಗಮನ ಸೆಳೆದಿದ್ದು, ಇದೀಗ ಎರಡೂ ದೇಶಗಳ ನಡುವಿನ ಸಂಬಂಧಗಳಿಗೆ ಯಾವುದೇ ಧಕ್ಕೆಯಾಗದಂತೆ ಪರಿಸ್ಥಿತಿಯನ್ನು ಶಮನಗೊಳಿಸಲು ಮೆಲೋನಿ ಮುಂದಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com