

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದು ನಾನೇ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪದೇ ಪದೇ ಪ್ರತಿಪಾದಿಸುತ್ತಿದ್ದಾರೆ.
ಶ್ವೇತಭವನದಲ್ಲಿ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕುವ ಕಾರ್ಯಕ್ರಮದ ವೇಳೆ ವರದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಸಂಘರ್ಷವನ್ನು ನಿಲ್ಲಿಸದಿದ್ದರೆ ಎರಡೂ ದೇಶಗಳ ಮೇಲೆ ಶೇಕಡಾ 200 ರಷ್ಟು ಸುಂಕ (Tariffs) ವಿಧಿಸುವುದಾಗಿ ತಾವು ಬೆದರಿಕೆ ಹಾಕಿದ್ದರಿಂದ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡವು ಎಂದು ಹೇಳಿದ್ದಾರೆ.
ನನ್ನ ಮಧ್ಯಸ್ಥಿಕೆಯಿಂದಲೇ ಸುಮಾರು 3 ರಿಂದ 5 ಕೋಟಿ ಜನರ ಪ್ರಾಣ ಉಳಿದಿದೆ ಮತ್ತು ಸಂಭಾವ್ಯ ಅಣ್ವಸ್ತ್ರ ಯುದ್ಧ ತಪ್ಪಿದೆ ಎಂದು ತಿಳಿಸಿದ್ದಾರೆ.
ಅನೇಕ ಸಂದರ್ಭಗಳಲ್ಲಿ ನನಗೆ ಧನ್ಯವಾದ ಪತ್ರಗಳನ್ನು ಮತ್ತು ನೊಬೆಲ್ ಸಮಿತಿಗೆ ಪತ್ರಗಳನ್ನು ಕಳುಹಿಸಿದ್ದಾರೆ. ಭಾರತದ ವಿಷಯದಲ್ಲಿ, ನಾನು 30ರಿಂದ 50 ದಶಲಕ್ಷ ಪ್ರಾಣಗಳನ್ನು ಉಳಿಸಿರುವುದಾಗಿ ಪಾಕಿಸ್ತಾನದ ಪ್ರಧಾನಿ ಹೇಳಿಕೊಂಡಿದ್ದಾರೆ. ಬಹುಶಃ ಅದಕ್ಕಿಂತಲೂ ಹೆಚ್ಚಾಗಿರಬಹುದು.
ಎರಡೂ ಅಣ್ವಸ್ತ್ರ ದೇಶಗಳು ಯುದ್ಧದಲ್ಲಿ ತಲ್ಲೀನವಾಗಿದ್ದವು. 11 ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಯಿತು. ಹೆಚ್ಚಿನ ತೆರಿಗೆ ಹೇರುವ ಬೆದರಿಕೆ ಮೂಲಕ ನಾನು ಅದನ್ನು ಬಗೆಹರಿಸಿದ್ದೇನೆ. ನೀವು ಯುದ್ಧ ಮಾಡುತ್ತಲೇ ಇದ್ದರೆ ಸುಂಕ ವಿಧಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದೆ. ಆಗ ಅವರು ದಯವಿಟ್ಟು ಅದನ್ನು ಮಾಡಬೇಡಿ ಎಂದು ಬೇಡಿಕೊಂಡರು' ಎಂದು ಟ್ರಂಪ್ ತಿಳಿಸಿದ್ದಾರೆ.
2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಭೀಕರ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 26 ಜನರು (25 ಭಾರತೀಯ ಪ್ರವಾಸಿಗರು ಮತ್ತು ಒಬ್ಬ ನೇಪಾಳದ ಪ್ರಜೆ) ಮೃತಪಟ್ಟಿದ್ದರು. ಇದು 2008ರ ಮುಂಬೈ ದಾಳಿಯ ನಂತರ ನಾಗರಿಕರ ಮೇಲಿನ ನಡೆದ ಅತ್ಯಂತ ದೊಡ್ಡ ದಾಳಿಯಾಗಿತ್ತು.
ದಾಳಿ ಬಳಿಕ ಪಾಕಿಸ್ತಾನ ಬೆಂಬಲಿತ 'ಲಷ್ಕರ್-ಎ-ತೈಬಾ'ದ ಮುಖವಾಡ ತಂಡವಾದ 'ದ ರೆಸಿಸ್ಟೆನ್ಸ್ ಫ್ರಂಟ್' (TRF) ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು.
ಉಗ್ರರ ಈ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ್ದವು.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (PoJK) 9 ಭಯೋತ್ಪಾದಕ ತರಬೇತಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಲಾಗಿತ್ತು. ಪ್ರಮುಖವಾಗಿ ಬಹವಾಲ್‌ಪುರದಲ್ಲಿದ್ದ ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಲಾಗಿತ್ತು. ಪಹಲ್ಗಾಮ್ ದಾಳಿಯಲ್ಲಿ ವಿಧವೆಯಾದ ಮಹಿಳೆಯರ ಗೌರವಾರ್ಥವಾಗಿ ಈ ಕಾರ್ಯಾಚರಣೆಗೆ 'ಸಿಂಧೂರ್' ಎಂದು ಹೆಸರಿಡಲಾಗಿತ್ತು ಈ ಕಾರ್ಯಾಚರಣೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದರು. ನಂತರ ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ಭಾರತೀಯ ಅಧಿಕಾರಿಗಳನ್ನು ಸಂಪರ್ಕಿಸಿ ಕದನ ವಿರಾಮಕ್ಕೆ ವಿನಂತಿಸಿದ್ದರು. ಬಳಿಕ ಮೇ 10, 2025 ರಂದು ಸಂಜೆ 5:00 ಗಂಟೆಯಿಂದ (IST) ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಜಾರಿಗೆ ಬಂದಿತು.
ಆದರೆ, ಸಂಘರ್ಷ ನಿಲ್ಲಿಸದಿದ್ದರೆ ಭಾರತ ಮತ್ತು ಪಾಕಿಸ್ತಾನದ ಮೇಲೆ ಶೇ. 200 ರಿಂದ 250ರಷ್ಟು ಸುಂಕ ವಿಧಿಸುವುದಾಗಿ ತಾವು ಬೆದರಿಕೆ ಹಾಕಿದ್ದರಿಂದಲೇ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡವು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಲೇ ಇದ್ದಾರೆ. ಈ ಹೇಳಿಕೆಯನ್ನು ಭಾರತ ನಿರಾಕರಿಸಿದ್ದರೂ, ಟ್ರಂಪ್ ಅವರು ತಮ್ಮ ಹೇಳಿಕೆಯನ್ನು ಪುನರುಚ್ಛರಿಸುತ್ತಲೇ ಇದ್ದಾರೆ.
ನಿನ್ನೆಯಷ್ಟೇ ಎಎನ್‌ಐ ರಾಷ್ಟ್ರೀಯ ಭದ್ರತಾ ಸಮಾವೇಶ 2.0ರಲ್ಲಿ ಮಾತನಾಡಿದ್ದ ರಾಜನಾಥ್ ಸಿಂಗ್ ಅವರು, ಎಎನ್‌ಐ ರಾಷ್ಟ್ರೀಯ ಭದ್ರತಾ ಸಮಾವೇಶ 2.0ರಲ್ಲಿ ಮಾತನಾಡಿದ ಅವರು ಹೇಳಿದ್ದರು. ಇದೀಗ ಟ್ರಂಪ್ ಅವರು ನನ್ನಿಂದಲೇ ಸಂಘರ್ಷ ನಿಂತಿತ್ತು ಎಂದು ಹೇಳಿಕೆ ನೀಡಿದ್ದು, ಈ ಹೇಳಿಕೆ ಮತ್ತೆ ಚರ್ಚೆಗಳನ್ನು ಹುಟ್ಟುಹಾಕಿದೆ.
Advertisement