Operation Sindoor ನಿಲ್ಲಿಸಿದ್ದು ನಮ್ಮ ಸ್ವಂತ ನಿರ್ಧಾರ, ದೀರ್ಘ ಯುದ್ದಕ್ಕೂ ಸಿದ್ಧರಿದ್ದೆವು: ರಾಜನಾಥ್ ಸಿಂಗ್

ಆಪರೇಷನ್ ಸಿಂಧೂರ್ ನಡೆದು ಸುಮಾರು ಒಂದು ವರ್ಷವಾಗಿದ್ದು, ಈ ಕಾರ್ಯಾಚರಣೆ ಭಾರತವು ಹಳೆಯ ಧೋರಣೆಯಿಂದ ಹೊರಬಂದಿದೆ ಎಂಬುದನ್ನು ಜಗತ್ತಿಗೆ ತೋರಿಸಿದೆ.
Representative image
ಸಾಂದರ್ಭಿಕ ಚಿತ್ರAI ಚಿತ್ರ
Updated on

ನವದೆಹಲಿ: ಯಾವುದೇ ಒತ್ತಡಕ್ಕೆ ಮಣಿದು ಆಪರೇಷನ್ ಸಿಂಧೂರ್ ನಿಲ್ಲಿಸಲಿಲ್ಲ. ಸ್ವ ಇಚ್ಛೆಯಿಂದ ನಿರ್ಧಾರ ಕೈಗೊಂಡೆವು. ಪಾಕಿಸ್ತಾನ ವಿರುದ್ಧ ದೀರ್ಘಕಾಲದ ಯುದ್ಧಕ್ಕೂ ಸಿದ್ಧವಾಗಿದ್ದೆವು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.

ಎಎನ್‌ಐ ರಾಷ್ಟ್ರೀಯ ಭದ್ರತಾ ಸಮಾವೇಶ 2.0ರಲ್ಲಿ ಮಾತನಾಡಿದ ಅವರು, ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಭಯೋತ್ಪಾದನೆಯ ಕೇಂದ್ರಬಿಂದುವೆಂದು ಕರೆದರು. ಇದೇ ವೇಳೆ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯಬೇಕೆಂದು ಹೇಳಿದರು.

ಬಳಿಕ ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಪ್ರಶಂಸಿಸಿದ ಅವರು, ಸರ್ಕಾರದ ‘ಶೂನ್ಯ ಸಹಿಷ್ಣುತೆ’ ನೀತಿಹೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಾಕಿಸ್ತಾನದ ಪರಮಾಣು ದಾಳಿಯ ಬೆದರಿಕೆಗೆ ಬಗ್ಗಲಿಲ್ಲ ಎಂದು ತಿಳಿಸಿದರು.

ನಂತರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ನಡೆದ ‘ಆಪರೇಷನ್ ಸಿಂಧೂರ್’ ಅನ್ನು ಉಲ್ಲೇಖಿಸಿದ ಅವರು, ಆಪರೇಷನ್ ಸಿಂಧೂರ್ ನಡೆದು ಸುಮಾರು ಒಂದು ವರ್ಷವಾಗಿದ್ದು, ಈ ಕಾರ್ಯಾಚರಣೆ ಭಾರತವು ಹಳೆಯ ಧೋರಣೆಯಿಂದ ಹೊರಬಂದಿದೆ ಎಂಬುದನ್ನು ಜಗತ್ತಿಗೆ ತೋರಿಸಿತು ಎಂದು ಹೇಳಿದರು.

ನಮ್ಮ ಸಾಮರ್ಥ್ಯ ಕುಂದಿದೆ ಎಂದು ನಾವು ಈ ಕಾರ್ಯಾಚರಣೆಯನ್ನು ನಿಲ್ಲಿಸಲಿಲ್ಲ. ನಮ್ಮದೇ ಷರತ್ತುಗಳ ಮೇಲೆ ನಿಲ್ಲಿಸಿದೆವು. ಅಗತ್ಯವಿದ್ದರೆ ದೀರ್ಘ ಯುದ್ಧಕ್ಕೂ ನಾವು ಸಿದ್ಧರಾಗಿದ್ದೆವು. ನಮ್ಮ ಸೇನೆ ತುರ್ತು ಪರಿಸ್ಥಿತಿಯಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಶಕ್ತಿಯನ್ನು ಹೊಂದಿದೆ ಎಂದು ಅವರು ಹೇಳಿದರು.

ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ನಮ್ಮ ಸರ್ಕಾರವು ಯಾವುದೇ ಸಂದರ್ಭದಲ್ಲೂ ಯಾವುದೇ ಭಯೋತ್ಪಾದಕ ಚಟುವಟಿಕೆಯನ್ನು ಸಹಿಸುವುದಿಲ್ಲ. ಭಾರತೀಯ ಸಶಸ್ತ್ರ ಪಡೆಗಳು ಕಳೆದ ಕೆಲವು ವರ್ಷಗಳಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿಕೊಂಡಿವೆ ಎಂದು ಹೇಳಿದರು.

ಭಯೋತ್ಪಾದನೆಗೆ ಕಾರ್ಯಾಚರಣೆ, ಸೈದ್ಧಾಂತಿಕ ಮತ್ತು ರಾಜಕೀಯ ಎಂಬ ಮೂರು ಆಯಾಮಗಳಿವೆ, ಅದರ ಮೂಲವಾದ ರಾಜಕೀಯ ಬೆಂಬಲವನ್ನು ಸಂಪೂರ್ಣವಾಗಿ ಕಡಿದುಹಾಕಬೇಕು ಎಂದು ಕರೆ ನೀಡಿದರು.

Representative image
ಆಪರೇಷನ್ ಸಿಂಧೂರ್: ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ್ದ ಡ್ರೋನ್ ಗಳು ಇನ್ನು ಸೇನೆಯ ಅವಿಭಾಜ್ಯ ಅಂಗ!

ಭಯೋತ್ಪಾದನೆ ಕೇವಲ ರಾಷ್ಟ್ರವಿರೋಧಿ ಕೃತ್ಯವಲ್ಲ, ಅದು ಬಹು ಆಯಾಮಗಳನ್ನು ಹೊಂದಿದೆ ಮತ್ತು ಭಯೋತ್ಪಾದನೆಯನ್ನು ಅದರ ಮೂರು ಆಯಾಮಗಳಲ್ಲಿ - ಕಾರ್ಯಾಚರಣೆ, ಸೈದ್ಧಾಂತಿಕ ಮತ್ತು ರಾಜಕೀಯ - ನಿಭಾಯಿಸಿದರೆ ಮಾತ್ರ ಅದನ್ನು ಕಡಿದು ಹಾಕಲು ಸಾಧ್ಯ, ಭಯೋತ್ಪಾದನೆಯ ನಿಜವಾದ ಐಪಿ ವಿಳಾಸ ಎಂದರೆ, ಅದರ ಸೈದ್ಧಾಂತಿಕ ಮತ್ತು ರಾಜಕೀಯ ಬೇರುಗಳು, ಅಲ್ಲಿಯೇ ಅದು ಅಭಿವೃದ್ಧಿ ಹೊಂದುತ್ತದೆ.

ಭಯೋತ್ಪಾದನೆಯ ಸೈದ್ಧಾಂತಿಕ ಪೋಷಣೆ ಮತ್ತು ರಾಜಕೀಯ ಪೋಷಕತ್ವವು ರಾವಣನ ನಾಭಿಯಲ್ಲಿರುವ ಅಮೃತದಂತೆ. ಅದು ಒಂದು ತಲೆಯನ್ನು ಕತ್ತರಿಸಿದ ನಂತರ ಇನ್ನೊಂದನ್ನು ತಲೆಯ ಮೂಲಕ ಜೀವ ಪಡೆಯುತ್ತದೆ. ಭಯೋತ್ಪಾದನೆಗೆ ಜೀವ ನೀಡುವ ಈ ನಾಭಿಯನ್ನು ಒಣಗಿಸುವುದು ಅತ್ಯಗತ್ಯ ಎಂಬುದು ನನ್ನ ಅಭಿಪ್ರಾಯ.

ಪಾಕಿಸ್ತಾನದಂತಹ ದೇಶಗಳು ಭಯೋತ್ಪಾದನೆಯನ್ನು ನಿರಂತರವಾಗಿ ಬೆಂಬಲಿಸುತ್ತಿವೆ. ಭಾರತ ಮತ್ತು ಪಾಕಿಸ್ತಾನ ಎರಡೂ ಒಂದೇ ಸಮಯದಲ್ಲಿ ಸ್ವಾತಂತ್ರ್ಯವನ್ನು ಗಳಿಸಿದರೂ ಎರಡೂ ರಾಷ್ಟ್ರಗಳು ವಿಭಿನ್ನ ರೀತಿಯಲ್ಲಿವೆ. ಭಾರತವು ಮಾಹಿತಿ ತಂತ್ರಜ್ಞಾನಕ್ಕೆ ವಿಶ್ವಾದ್ಯಂತ ಹೆಸರುವಾಸಿಯಾಗಿದ್ದರೆ, ಪಾಕಿಸ್ತಾನವು ಅಂತರರಾಷ್ಟ್ರೀಯ ಭಯೋತ್ಪಾದನೆಯ ಕೇಂದ್ರಬಿಂದುವಾಗಿದೆ. ನಮ್ಮ ಮಿಲಿಟರಿ ಕೈಗಾರಿಕಾ ಸಂಕೀರ್ಣವು ಶಾಂತಿಯ ಅವಧಿಗೆ ಮಾತ್ರವಲ್ಲ, ಯುದ್ಧಕಾಲದಲ್ಲಿ ತ್ವರಿತ ಪೂರೈಕೆಗೆ ಸಹ ಸಿದ್ಧವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ನಮಗೆ ಪರಮಾಣು ದಾಳಿಯ ಬೆದರಿಕೆಯೂ ಇತ್ತು, ಆದರೆ, ನಾವು ಅದಕ್ಕೆ ಬಗ್ಗಲಿಲ್ಲ ಎಂದು ತಿಳಿಸಿದರು.

Representative image
ಭಾರತೀಯ ಸೈನಿಕರಿಗೆ ಮತ್ತೊಂದು ಬ್ರಹ್ಮಾಸ್ತ್ರ: Drone war ಗೆಲ್ಲಲು ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯ

ಪಹಲ್ಗಾಮ್ ದಾಳಿಯಲ್ಲಿ 26 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ, ಭಾರತ ‘ಆಪರೇಷನ್ ಸಿಂಧೂರ್’ ಮೂಲಕ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ತಾಣಗಳ ಮೇಲೆ ದಾಳಿ ನಡೆಸಿತು.

2025ರ ಮೇ 7ರಂದು ಆರಂಭವಾದ ಈ ಕಾರ್ಯಾಚರಣೆಯಲ್ಲಿ ಒಂಬತ್ತು ಪ್ರಮುಖ ಉಗ್ರ ತಾಣಗಳನ್ನು ನಾಶಪಡಿಸಲಾಗಿದ್ದು, 100ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಲಾಗಿದೆ.

ಪಾಕಿಸ್ತಾನವು ಡ್ರೋನ್ ದಾಳಿ ಹಾಗೂ ಗುಂಡಿನ ದಾಳಿ ನಡೆಸಿದ ನಂತರ ನಾಲ್ಕು ದಿನಗಳ ಕಾಲ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ಶುರುವಾಗಿತ್ತು. ಭಾರತ ಪ್ರತಿದಾಳಿ ನಡೆಸಿ ಲಾಹೋರ್ ಸೇರಿದಂತೆ ಹಲವು ರಾಡಾರ್ ಕೇಂದ್ರಗಳನ್ನು ನಾಶಪಡಿಸಿತು.

ಭಾರೀ ನಷ್ಟ ಅನುಭವಿಸಿದ ಪಾಕಿಸ್ತಾನ ಕೊನೆಗೆ ಯುದ್ಧ ವಿರಾಮಕ್ಕೆ ಮುಂದಾಗಿ, ಮೇ 10ರಂದು ಉಭಯ ದೇಶಗಳ ನಡುವೆ ಯುದ್ಧ ವಿರಾಮ ಜಾರಿಯಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com