'ಅದು 'ಎರಡು ಸಿದ್ಧಾಂತಗಳ ಕದನ'; ಪಾಕಿಸ್ತಾನದ ತಂತ್ರವು ಭಾರತಕ್ಕಿಂತ 'ಶ್ರೇಷ್ಠ'ವಾಗಿತ್ತು: ಸೇನಾ ಮುಖ್ಯಸ್ಥ ಆಸಿಮ್ ಮುನೀರ್

ಭಾರತವು ಅಮೆರಿಕದ ಮೂಲಕ ಕದನ ವಿರಾಮವನ್ನು ಕೋರಿದೆ ಮತ್ತು ಪಾಕಿಸ್ತಾನವು 'ಶಾಂತಿಯ ಹಿತದೃಷ್ಟಿಯಿಂದ' ಅದಕ್ಕೆ ಒಪ್ಪಿಕೊಂಡಿದೆ ಎಂದು ಮುನೀರ್ ಹೇಳಿದರು.
Asim Munir
ಆಸಿಮ್ ಮುನೀರ್
Updated on

ಇಸ್ಲಾಮಾಬಾದ್: ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಭಾನುವಾರ ಭಾರತದೊಂದಿಗಿನ ಕಳೆದ ವರ್ಷದ ಸಂಘರ್ಷವನ್ನು 'ಎರಡು ಸಿದ್ಧಾಂತಗಳ ನಡುವಿನ ಯುದ್ಧ' ಎಂದು ಕರೆದಿದ್ದಾರೆ.

ಭಾರತದೊಂದಿಗಿನ ನಾಲ್ಕು ದಿನಗಳ ಸಂಘರ್ಷಕ್ಕೆ ಇಸ್ಲಾಮಾಬಾದ್ ನೀಡಿದ 'ಮರ್ಕಾ-ಎ-ಹಕ್' ಹೆಸರಿನ ಮೊದಲ ವಾರ್ಷಿಕೋತ್ಸವದ ಅಂಗವಾಗಿ ರಾವಲ್ಪಿಂಡಿಯ ಜನರಲ್ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಮುನೀರ್, ಸಂಘರ್ಷದ ಸಮಯದಲ್ಲಿ ಪಾಕಿಸ್ತಾನದ ತಂತ್ರವು ಭಾರತಕ್ಕಿಂತ 'ಶ್ರೇಷ್ಠ'ವಾಗಿತ್ತು ಎಂದು ಹೇಳಿದರು.

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರು ಸೇರಿದಂತೆ 26 ಜನರು ಸಾವಿಗೀಡಾಗಿದ್ದಕ್ಕೆ ಪ್ರತಿಕ್ರಿಯೆಯಾಗಿ, ಭಾರತ ಕಳೆದ ವರ್ಷ ಮೇ 7 ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿ, ಕನಿಷ್ಠ 100 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿತು.

ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಪ್ರತೀಕಾರದ ದಾಳಿಗಳನ್ನು ಪ್ರಾರಂಭಿಸಿತು. ಆದರೆ, ಅವುಗಳಲ್ಲಿ ಹೆಚ್ಚಿನದನ್ನು ಭಾರತೀಯ ಸೇನೆ ವಿಫಲಗೊಳಿಸಿತು. ಬಳಿಕ ಮೇ 10, 2025 ರಂದು ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ಬಗ್ಗೆ ಒಪ್ಪಂಧ ಮಾಡಿಕೊಂಡವು.

ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುನೀರ್, ಕಳೆದ ವರ್ಷ ಮೇ 6-7ರ ರಾತ್ರಿ ಮತ್ತು ಮೇ 10ರ ನಡುವೆ ಭಾರತವು ಪಾಕಿಸ್ತಾನದ 'ಸಾರ್ವಭೌಮತ್ವ ಮತ್ತು ಗಡಿ ಪ್ರದೇಶದ' ಮೇಲೆ ಹಸ್ತಕ್ಷೇಪ ಮಾಡಿದೆ. ಪಾಕಿಸ್ತಾನವು 'ಸಂಪೂರ್ಣ ರಾಷ್ಟ್ರೀಯ ಏಕತೆ ಮತ್ತು ಮಿಲಿಟರಿ ಬಲದಿಂದ' ಪ್ರತಿಕ್ರಿಯಿಸಿತು ಎಂದು ಹೇಳಿದರು.

Asim Munir
ಪಾಕಿಸ್ತಾನ 'ಜವಾಬ್ದಾರಿಯುತ' ರಾಷ್ಟ್ರವಾಗಿ ಹೊರಹೊಮ್ಮಿದೆ, ಜಾಗತಿಕ ಶಾಂತಿಗೆ 'ಕೊಡುಗೆ' ನೀಡಿದೆ: ಪ್ರಧಾನಿ ಶೆಹಬಾಜ್ ಷರೀಫ್

'ಮರ್ಕಾ-ಎ-ಹಕ್ ಕೇವಲ ಎರಡು ದೇಶಗಳು ಅಥವಾ ಮಿಲಿಟರಿಗಳ ನಡುವೆ ನಡೆದ ಸಾಂಪ್ರದಾಯಿಕ ಯುದ್ಧವಲ್ಲ, ಆದರೆ ವಾಸ್ತವದಲ್ಲಿ, ಇದು ಎರಡು ಸಿದ್ಧಾಂತಗಳ ನಡುವಿನ ನಿರ್ಣಾಯಕ ಯುದ್ಧ ಆಗಿತ್ತು. ಸಂಘರ್ಷದ ಸಮಯದಲ್ಲಿ ಪಾಕಿಸ್ತಾನ 26 ಗುರಿಗಳನ್ನು ಹೊಡೆದುರುಳಿಸಿದೆ' ಎಂದು ಅವರು ಹೇಳಿದರು.

ಭಾರತವು ಅಮೆರಿಕದ ಮೂಲಕ ಕದನ ವಿರಾಮವನ್ನು ಕೋರಿದೆ ಮತ್ತು ಪಾಕಿಸ್ತಾನವು 'ಶಾಂತಿಯ ಹಿತದೃಷ್ಟಿಯಿಂದ' ಅದಕ್ಕೆ ಒಪ್ಪಿಕೊಂಡಿದೆ ಎಂದು ಮುನೀರ್ ಹೇಳಿದರು.

ಭವಿಷ್ಯದ ಯುದ್ಧಗಳು ಅವುಗಳ 'ಬಹು-ಕ್ಷೇತ್ರೀಯ' ಸ್ವಭಾವದಿಂದಾಗಿ ವಿಭಿನ್ನವಾಗಿರುತ್ತವೆ. ಪಾಕಿಸ್ತಾನವು ತಂತ್ರಜ್ಞಾನ, ಹಾರ್ಡ್‌ವೇರ್ ಮತ್ತು ತರಬೇತಿಯ ಮೂಲಕ ಸಂಘರ್ಷಗಳಿಗೆ ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದ ಮುನೀರ್, ನಮ್ಮ ರಕ್ಷಣೆ ದೋಷರಹಿತವಾಗಿ ಉಳಿಯುತ್ತದೆ. ನಾವು ಶಾಂತಿಯನ್ನು ಬಯಸುತ್ತೇವೆ ಮತ್ತು ವಿಶ್ವಾಸಾರ್ಹತೆಯ ಮೂಲಕವೇ ಅದನ್ನು ಕಾಪಾಡಿಕೊಳ್ಳುತ್ತೇವೆ. ಹ್ಯಾಂಗರ್-ವರ್ಗದ ಜಲಾಂತರ್ಗಾಮಿ ನೌಕೆಗಳು, ಹೊಸ ರಾಕೆಟ್ ಫೋರ್ಸ್ ಮತ್ತು ಯುದ್ಧ ವಿಮಾನಗಳ ಸ್ವಾಧೀನ ಸೇರಿದಂತೆ ಪಾಕಿಸ್ತಾನದ ಮಿಲಿಟರಿ ಆಧುನೀಕರಣವನ್ನು ಎತ್ತಿ ತೋರಿಸಿದರು.

ಕದನ ವಿರಾಮವನ್ನು ಎರಡೂ ಕಡೆಯ ದೇಶಗಳ ನಡುವೆ ನೇರವಾಗಿ ಮಾಡಿಕೊಳ್ಳಲಾಗಿದೆ ಎಂದು ಭಾರತ ಹೇಳಿಕೊಂಡಿದೆ.

ಈ ಮಧ್ಯೆ, ಆಪರೇಷನ್ ಸಿಂಧೂರದ ಮೊದಲ ವಾರ್ಷಿಕೋತ್ಸವದಂದು, ಪಾಕಿಸ್ತಾನ ಬೆಂಬಲಿತ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಭಾರತ ಪುನರುಚ್ಚರಿಸಿದೆ ಮತ್ತು ಈ ಬೆದರಿಕೆಯ ವಿರುದ್ಧ ಜಾಗತಿಕ ಹೋರಾಟವನ್ನು ಮತ್ತಷ್ಟು ಬಲಪಡಿಸುವುದಾಗಿ ಭಾರತ ಪ್ರತಿಜ್ಞೆ ಮಾಡಿದೆ.

X

Advertisement

X
Kannada Prabha
www.kannadaprabha.com