ಗಲ್ಫ್ ರಾಷ್ಟ್ರಗಳ ಮನವಿ: ಇರಾನ್ ಮೇಲಿನ ದಾಳಿ ಮುಂದೂಡಿದ ಡೊನಾಲ್ಡ್ ಟ್ರಂಪ್

ಯೋಜಿತ ದಾಳಿಯ ಕುರಿತು ಡೊನಾಲ್ಡ್ ಟ್ರಂಪ್ ಹೆಚ್ಚಿನ ವಿವರಗಳನ್ನು ನೀಡಲಿಲ್ಲ. ಆದರೆ, ಸ್ವೀಕಾರಾರ್ಹ ಒಪ್ಪಂದ ಸಾಧ್ಯವಾಗದಿದ್ದರೆ ಕ್ಷಣಾರ್ಧದಲ್ಲೇ ಇರಾನ್ ಮೇಲೆ ಸಂಪೂರ್ಣ ಮತ್ತು ಭಾರೀ ಮಟ್ಟದ ದಾಳಿ ನಡೆಸಲು ಸಿದ್ಧರಾಗಿರಿ ಎಂದು ಅಮೆರಿಕ ಸೇನೆಗೆ ಸೂಚನೆ ನೀಡಿದ್ದಾಗಿ ತಿಳಿಸಿದ್ದಾರೆ.
Donald Trump
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಇಂದು ಮಂಗಳವಾರಕ್ಕೆ ಯೋಜಿಸಲಾಗಿದ್ದ ಇರಾನ್ ಮೇಲಿನ ಸೈನಿಕ ದಾಳಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಗಂಭೀರ ಮಾತುಕತೆಗಳು ನಡೆಯುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.

ನಿನ್ನೆ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್‌ನಲ್ಲಿ ಡೊನಾಲ್ಡ್ ಟ್ರಂಪ್ ಈ ಘೋಷಣೆ ಮಾಡಿದ್ದು, ಒಪ್ಪಂದಕ್ಕೆ ಬರದಿದ್ದರೆ ಯುದ್ಧ ಮತ್ತೆ ಆರಂಭವಾಗಬಹುದು ಎಂದು ಅವರು ಈ ಮೊದಲು ಎಚ್ಚರಿಕೆ ನೀಡಿದ್ದರು. ಅಸ್ಥಿರ ಯುದ್ಧ ವಿರಾಮದ ಬಳಿಕ ಇರಾನ್‌ಗೆ ಒಪ್ಪಂದಕ್ಕೆ ಬರಲು ಸಮಯ ಕಡಿಮೆಯಾಗುತ್ತಿದೆ ಎಂದೂ ಅವರು ಹೇಳಿದ್ದರು.

ಯೋಜಿತ ದಾಳಿಯ ಕುರಿತು ಡೊನಾಲ್ಡ್ ಟ್ರಂಪ್ ಹೆಚ್ಚಿನ ವಿವರಗಳನ್ನು ನೀಡಲಿಲ್ಲ. ಆದರೆ, ಸ್ವೀಕಾರಾರ್ಹ ಒಪ್ಪಂದ ಸಾಧ್ಯವಾಗದಿದ್ದರೆ ಕ್ಷಣಾರ್ಧದಲ್ಲೇ ಇರಾನ್ ಮೇಲೆ ಸಂಪೂರ್ಣ ಮತ್ತು ಭಾರೀ ಮಟ್ಟದ ದಾಳಿ ನಡೆಸಲು ಸಿದ್ಧರಾಗಿರಿ ಎಂದು ಅಮೆರಿಕ ಸೇನೆಗೆ ಸೂಚನೆ ನೀಡಿದ್ದಾಗಿ ತಿಳಿಸಿದ್ದಾರೆ.

Donald Trump
ಇರಾನ್‌ನ ಪರಿಷ್ಕೃತ 14 ಅಂಶಗಳ ಪ್ರಸ್ತಾವನೆಯನ್ನು ಅಮೆರಿಕಕ್ಕೆ ಸಲ್ಲಿಸಿದ ಪಾಕಿಸ್ತಾನ; ಒಪ್ಪಿಕೊಳ್ಳುತ್ತಾರಾ ಟ್ರಂಪ್?

ಮೇ 19ರಂದು ದಾಳಿ ನಡೆಸುವ ಯೋಜನೆ ಇದ್ದುದನ್ನು ಡೊನಾಲ್ಡ್ ಟ್ರಂಪ್ ಈ ಮೊದಲು ಬಹಿರಂಗಪಡಿಸಿರಲಿಲ್ಲ. ಆದರೆ ಕಳೆದ ವಾರಾಂತ್ಯದಲ್ಲಿ, ಇರಾನ್‌ಗೆ ಸಮಯ ವೇಗವಾಗಿ ಮುಗಿಯುತ್ತಿದೆ. ಅವರು ಬೇಗ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಅವರಲ್ಲಿ ಏನೂ ಉಳಿಯುವುದಿಲ್ಲ ಎಂದು ಎಚ್ಚರಿಸಿದ್ದರು.

ಏಪ್ರಿಲ್ ಮಧ್ಯಭಾಗದಲ್ಲಿ ನಡೆದ ಯುದ್ಧ ವಿರಾಮವು, ಇರಾನ್ ಒಪ್ಪಂದಕ್ಕೆ ಬರದಿದ್ದರೆ ಕೊನೆಗೊಳ್ಳಬಹುದು ಎಂದು ಡೊನಾಲ್ಡ್ ಟ್ರಂಪ್ ಹಲವು ವಾರಗಳಿಂದ ಹೇಳುತ್ತಿದ್ದರು. ಆದರೆ ಆ ಒಪ್ಪಂದದ ಷರತ್ತುಗಳಲ್ಲಿ ಆಗಾಗ ಬದಲಾವಣೆ ಕಾಣಿಸಿಕೊಂಡಿತ್ತು.

ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಾಯಕರ ಮನವಿಯ ಮೇರೆಗೆ ಯೋಜಿತ ದಾಳಿಯನ್ನು ಕೈಬಿಟ್ಟಿರುವುದಾಗಿ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಟೆಹ್ರಾನ್‌ಗೆ ಟ್ರಂಪ್ ಹಲವು ಬಾರಿ ಗಡುವು ನೀಡಿದರೂ ನಂತರ ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಂದಿಗೆ ಇರಾನ್ ಯುದ್ಧದ ಕುರಿತು ಮಾತುಕತೆ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com