

ಲಂಡನ್: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕವಾಗಿ ತಲೆದೊರಿರುವ ಇಂಧನ ಬಿಕ್ಕಟ್ಟು ಕೆಲವೇ ದಿನಗಳಲ್ಲ ಮತ್ತಷ್ಟು ಭೀಕರವಾಗುವ ಸಾಧ್ಯತೆ ಇದೆ.
ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸದೆ, ಇದೇ ಪರಿಸ್ಥಿತಿ ಮುಂದುವರೆದರೆ ಜುಲೈ ಅಥವಾ ಆಗಸ್ಟ್ ನಲ್ಲಿ ತೈಲ ಮಾರುಕಟ್ಟೆ 'ರೆಡ್ ಝೋನ್'(ಅಪಾಯ ವಲಯ)ಗೆ ತಲುಪಲಿದ್ದು, ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇಂಧನ ಬಿಕ್ಕಟ್ಟು ಸೃಷ್ಟಿಯಾಗಲಿದೆ ಎಂದು ಅಂತರಾಷ್ಟ್ರೀಯ ಇಂಧನ ಏಜೆನ್ಸಿ(ಐಇಎ) ಎಚ್ಚರಿಸಿದೆ.
21 ಕಿಮೀ ಅಗಲದ ಹಾರ್ಮುಜ್ ಜಲಮಾರ್ಗದ ಮೇಲೆ ಇರಾನ್ ಭೌಗೋಳಿಕ ನಿಯಂತ್ರಣವನ್ನು ಹೊಂದಿರುವುದರಿಂದ ಹಾರ್ಮುಜ್ ಸಂಚಾರವನ್ನು ಸ್ಥಗಿತಗೊಳಿಸಲು ಸಾಧ್ಯ. ಇದರಿಂದ ಪ್ರತಿದಿನ ಜಾಗತಿಕ ಮಾರುಕಟ್ಟೆಗೆ ಅಂದಾಜು 14 ಮಿಲಿಯನ್ ಬ್ಯಾರೆಲ್ ತೈಲ ಸಾಗಿಸಲಾಗುತ್ತದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ ಮುಖ್ಯಸ್ಥ ಫಾತಿಹ್ ಬಿರೋಲ್ ಅವರು ಸಿಎನ್ ಬಿಸಿಗೆ ತಿಳಿಸಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಅಥವಾ ಇಂಧನ ರಫ್ತು ಮಾಡಲು ಕಾರ್ಯಸಾಧ್ಯವಾದ ಪರ್ಯಾಯ ಮಾರ್ಗಗಳನ್ನು ಖಚಿತಪಡಿಸಿಕೊಳ್ಳಲು ವಿಫಲವಾದರೆ, ಜಗತ್ತನ್ನು ಇನ್ನಷ್ಟು ತೀವ್ರ ಪೂರೈಕೆ ಬಿಕ್ಕಟ್ಟಿಗೆ ತಳ್ಳುತ್ತದೆ ಎಂದು ಬಿರೋಲ್ ಎಚ್ಚರಿಸಿದ್ದಾರೆ.
ಇದೇ ಪರಿಸ್ಥಿತಿ ಮುಂದುವರೆದರೆ ಜುಲೈ ಆರಂಭದಲ್ಲಿಯೇ ತೈಲ ಮಾರುಕಟ್ಟೆಗಳು "ರೆಡ್ ಝೋನ್" ತಲುಪುವ ಅಪಾಯ ಇದೆ ಎಂದು ಬಿರೋಲ್ ಹೇಳಿದ್ದಾರೆ.
ಜಾಗತಿಕ ಇಂಧನ ಪೂರೈಕೆಗೆ ಅಡ್ಡಿಪಡಿಸಿರುವ ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಇಂಧನ ಮತ್ತು ವಿದೇಶಿ ವಿನಿಮಯವನ್ನು ಉಳಿಸಲು ಪ್ರಧಾನಿ ಮೋದಿ ಅವರು ಕರೆ ನೀಡಿದ ಬೆನಲ್ಲೇ ಪಂಜಾಬ್‌ನಲ್ಲಿ ಪೆಟ್ರೋಲ್ ಪಂಪ್‌ಗಳು ಖಾಲಿ ಖಾಲಿ ಹೊಡೆಯುತ್ತಿದ್ದು, ಇದರ ಬಿಸಿ ಕರ್ನಾಟಕಕ್ಕೂ ತಟ್ಟಲಿದೆ ಎನ್ನಲಾಗುತ್ತಿದೆ.
Advertisement