

ಬ್ರೆಜಿಲ್: ಬ್ರೆಜಿಲ್‌ನ ಈಶಾನ್ಯ ಭಾಗದಲ್ಲಿ ಹೋಟೆಲ್‌ನ ಕಿಟಕಿಯ ಅಲ್ಯೂಮಿನಿಯಂ ಚೌಕಟ್ಟು ಮುರಿದು ಬಿದ್ದ ಪರಿಣಾಮ, 26 ವರ್ಷದ ಯುವತಿಯೊಬ್ಬರು ಏಳನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಈ ಘಟನೆ ನಡೆದಾಗ ಆಕೆಯ ಗೆಳೆಯ ಕಾರಿಡಾರ್‌ನಲ್ಲಿ ನಿಂತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮರನ್ಹಾವೊ ರಾಜ್ಯದ ರಾಜಧಾನಿಯಾದ ಸಾವೊ ಲೂಯಿಸ್‌ನ ಪೋಂಟಾ ಡಿ'ಅರೇಯಾದಲ್ಲಿರುವ 'ರಿಯೊ ಪೊಟಿ ಹೋಟೆಲ್'ನಲ್ಲಿ, ಮಂಗಳವಾರ ಬೆಳಗಿನ ಜಾವ 1:30ರ ಸುಮಾರಿಗೆ ಇಬ್ಬರು ಮಕ್ಕಳ ತಾಯಿಯಾದ ರೆನಾಟಾ ರೆಬೆಕಾ ನೆಗ್ರಾವೊ ಸಾಲ್ಡನ್ಹಾ ಡೋಸ್ ಸ್ಯಾಂಟೋಸ್ ಅವರು ಆಕಸ್ಮಿಕವಾಗಿ ಕಿಟಕಿಗೆ ಒರಗಿದಾಗ ಅದು ಮುರಿದು ಬಿದ್ದ ಪರಿಣಾಮ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಯುವತಿ, ಹೋಟೆಲ್ ಪ್ರವೇಶದ್ವಾರದ ಮೇಲ್ಭಾಗದಲ್ಲಿರುವ ಛಾವಣಿಯ (ಕ್ಯಾನೋಪಿ) ಮೇಲೆ ಬಿದ್ದಿದ್ದಾರೆ. ಕೂಡಲೇ ಅವರಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸಲಾಯಿತಾದರೂ, ಗಾಯಗಳ ತೀವ್ರತೆಯಿಂದಾಗಿ ಅವರು ಬದುಕುಳಿಯಲಿಲ್ಲ.
ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ರೆನಾಟಾ ಮತ್ತು ಆಕೆಯ ಗೆಳೆಯ ಹೋಟೆಲ್ ನ ತಮ್ಮ ರೂಮ್‌ಗೆ ಹೋಗುತ್ತಿದ್ದರು. ಈ ವೇಳೆ ಕಳೆದು ಹೋಗಿದ್ದ ರೂಮ್ ಕೀಗಾಗಿ ಹುಡುಕಾಟ ನಡೆಸಿದ್ದರು. ಹುಡುಕಾಟದ ವೇಳೆ ರೆನಾಟಾ ಕಿಟಕಿಗೆ ಒರಗಿ ನಿಲ್ಲುತ್ತಾರೆ. ಈ ವೇಳೆ ಇದ್ದಕ್ಕಿದ್ದಂತೆ ಕಿಟಕಿ ಮುರಿದು ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ.
ಆಕೆಯ ಗೆಳೆಯ ಕೆಲವು ಸೆಕೆಂಡುಗಳ ಕಾಲ ಅಲ್ಲೇ ನಿಶ್ಚಲಯವಾಗಿ ನಿಂತಿದ್ದ. ಸ್ವಲ್ಪ ಸಮಯದ ನಂತರ ಹೋಟೆಲ್ ಉದ್ಯೋಗಿಯೊಬ್ಬರು ಸ್ಥಳಕ್ಕೆ ಆಗಮಿಸುತ್ತಾರೆ. ಹಾನಿಗೊಳಗಾದ ಕಿಟಕಿ ಗಮನಿಸಿ, ಯಾರೋ ಕೆಳಗೆ ಬಿದ್ದಿದ್ದಾರೆ ಎಂಬುದನ್ನು ಅರಿತುಕೊಳ್ಳುತ್ತಾರೆ. ಘಟನೆ ನಡೆದಾಗ ಆ ಜೋಡಿಯು ಯಾವುದೋ ಅಮಲಿನಲ್ಲಿದ್ದಂತೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಗಾಗಿ ಮಹಿಳೆಯ ಗೆಳೆಯನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.