

ಢಾಕಾ: ಬಾಂಗ್ಲಾದೇಶದ ಬಡಾವಣೆಗಳ ವಿಡಿಯೋಗಳನ್ನು ಚಿತ್ರೀಕರಿಸಿ, ಅವುಗಳನ್ನು ಭಾರತದ ರಾಜಧಾನಿ ದೆಹಲಿಯ ದೃಶ್ಯಗಳೆಂದು ಬಿಂಬಿಸುತ್ತಿರುವ ಆರೋಪ ಚೀನಾದ ವ್ಲಾಗರ್ಗಳ ವಿರುದ್ಧ ಕೇಳಿಬಂದಿದೆ.
ಕಳೆದ ಹಲವು ತಿಂಗಳುಗಳಿಂದ ಢಾಕಾದ ಕೊಳಚೆ ಪ್ರದೇಶಗಳಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿರುವ ಈ ವ್ಲಾಗರ್ಗಳು, ಅಲ್ಲಿನ ಜನರ ಜೀವನಶೈಲಿ, ಮನೆಗಳು ಮತ್ತು ಪರಿಸರದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎನ್ನಲಾಗಿದೆ.
ಬಾಂಗ್ಲಾದೇಶದ ಪ್ರಮುಖ ಪತ್ರಿಕೆ 'ಪ್ರಥಮ್ ಆಲೋ' ನಡೆಸಿದ ತನಿಖೆಯಲ್ಲಿ ಈ ಅಂಶಗಳು ಬಹಿರಂಗವಾಗಿವೆ. ಢಾಕಾದ ಟೆಕ್ಪಾರಾ ಮತ್ತು ಉತ್ತಮಾ ಪ್ರದೇಶಗಳಲ್ಲಿ ಕನಿಷ್ಠ 150 ಚೀನಾ ಪ್ರಜೆಗಳು ವಿಡಿಯೋ ಚಿತ್ರೀಕರಿಸಿ, ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಈ ವ್ಲಾಗರ್ಗಳು ತಲಾ ಎರಡು ಮೊಬೈಲ್ ಫೋನ್ಗಳನ್ನು ಬಳಸುತ್ತಿದ್ದಾರೆ. ಒಂದು ಫೋನ್ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಿದರೆ, ಮತ್ತೊಂದು ಫೋನ್ನಲ್ಲಿ ಮಾಹಿತಿ ಓದುವುದು ಅಥವಾ ನೋಡುವುದು ಅವರ ಉದ್ದೇಶ ಎಂದು ವರದಿ ತಿಳಿಸಿದೆ.
'ಇದು ದೆಹಲಿ' ಎಂದು ಹೇಳಿ ವಿಡಿಯೋ!
ಚೀನಾದ ವ್ಲಾಗರ್ಗಳು ಢಾಕಾದಲ್ಲಿದ್ದರೂ, ತಾವು ಭಾರತದ ನವದೆಹಲಿಯಿಂದಲೇ ನೇರ ಪ್ರಸಾರ ಮಾಡುತ್ತಿರುವುದಾಗಿ ವೀಕ್ಷಕರಿಗೆ ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ಅಲ್ಲಿನ ಜನರ ಮನೆಗಳಿಗೂ ಪ್ರವೇಶಿಸಿ ವಿಡಿಯೋ ಚಿತ್ರೀಕರಿಸುತ್ತಿದ್ದಾರೆ ಎಂದು ವರದಿಯಾಗಿದೆ.
ನವೆಂಬರ್ 1ರಂದು ಮಿಯಾನ್ಮಿಯಾನ್ ಎಂಬ ಚೀನಾ ಮೂಲದ ಮಹಿಳೆ ಢಾಕಾದ ಟೆಕ್ಪಾರಾ ಪ್ರದೇಶದ ವಿಡಿಯೋವನ್ನು ಲೈವ್ ಮಾಡಿದ್ದಳು. ತಾನು ಚೀನಾದ ಸಿಚುವಾನ್ ಪ್ರಾಂತ್ಯದವಳು ಎಂದು ಪರಿಚಯಿಸಿಕೊಂಡಿದ್ದ ಆಕೆ, ವೀಕ್ಷಕರಿಗೆ ಇದು ದೆಹಲಿ ಎಂದು ಹೇಳಿದ್ದಳು.
ಬಾಂಗ್ಲಾದೇಶದ ಮಾಧ್ಯಮ ವರದಿಯಲ್ಲಿ ಪ್ರಕಟವಾದ ಅನುವಾದದ ಪ್ರಕಾರ, "ಇದು ದೆಹಲಿ. ಇಲ್ಲಿನ ಮನೆಗಳು ತುಂಬಾ ಕೊಳಕಾಗಿವೆ. ತಗಡಿನ ಮೇಲ್ಛಾವಣಿಯ ಮನೆಗಳಲ್ಲಿ ಫ್ಯಾನ್ ಕೂಡ ಇಲ್ಲ" ಎಂದು ಹೇಳಿದ್ದಾಳೆ ಎನ್ನಲಾಗಿದೆ. ಇನ್ನೊಂದು ವಿಡಿಯೋದಲ್ಲಿ ವಾಂಗ್ ವೇ ಎಂಬ ಚೀನಾ ಪ್ರಜೆ ರಸ್ತೆ ಬದಿಯ ಟೀ ಅಂಗಡಿಯೊಂದರಲ್ಲಿ ಜನರು ಚಹಾ ಕುಡಿಯುತ್ತಿರುವುದನ್ನು ಚಿತ್ರೀಕರಿಸಿದ್ದಾನೆ.
ಈ ವೇಳೆ, "ನೋಡಿ, ಇವರು ಚಹಾ ಕುಡಿಯುತ್ತಿದ್ದಾರೆ. ಇದು ಯಾವ ರೀತಿಯ ಚಹಾ ಗೊತ್ತೇ? ಇದು ಹಸುವಿನ ಮೂತ್ರದ ಚಹಾ" ಎಂದು ಹೇಳಿದ್ದಾನೆ ಎನ್ನಲಾಗಿದೆ. ಅಲ್ಲದೆ, ಕೊಳಕು ನದಿ ನೀರಿನಿಂದ ಚಹಾ ತಯಾರಿಸಲಾಗುತ್ತದೆ ಎಂದೂ ಆತ ಹೇಳಿದ್ದಾನೆ ಎಂದು ವರದಿ ತಿಳಿಸಿದೆ.
ಆದರೆ, ಕೆಲವು ವ್ಲಾಗರ್ಗಳು ಅಲ್ಲಿನ ಕಟ್ಟಡಗಳಲ್ಲಿರುವ ಹವಾನಿಯಂತ್ರಣ ಯಂತ್ರಗಳನ್ನು ತೋರಿಸಿ, ಅವುಗಳಲ್ಲಿ ಚೀನಾ ಕಂಪನಿಗಳ ಉತ್ಪನ್ನಗಳೇ ಹೆಚ್ಚಿವೆ ಎಂದು ಹೇಳಿರುವ ಉದಾಹರಣೆಗಳೂ ವರದಿಯಲ್ಲಿವೆ.
ಬಾಂಗ್ಲಾ ಮಾಧ್ಯಮಗಳಿಂದಲೇ ಬಟಾಬಯಲು!
ಈ ಚೀನಾ ಪ್ರಜೆಗಳ ಉದ್ದೇಶವೇನು ಎಂಬುದನ್ನು ತಿಳಿಯಲು ಬಾಂಗ್ಲಾದೇಶದ ಪತ್ರಕರ್ತರು ಅಕ್ಟೋಬರ್ 27 ಮತ್ತು ನವೆಂಬರ್ 3ರಂದು ಸ್ಥಳಕ್ಕೆ ಭೇಟಿ ನೀಡಿ, 17 ವ್ಲಾಗರ್ಗಳನ್ನು ಮಾತನಾಡಿಸಲು ಪ್ರಯತ್ನಿಸಿದ್ದಾರೆ. ಆದರೆ, ಬಹುತೇಕರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಈ ವೇಳೆ ರಿತು ಅಖ್ತರ್ ಎಂಬ ಸ್ಥಳೀಯ ಮಹಿಳೆಯೊಬ್ಬರು ಪತ್ರಕರ್ತರೊಂದಿಗೆ ಮಾತನಾಡಿದ್ದಾರೆ. ತಾವು ಹಲವು ತಿಂಗಳುಗಳಿಂದ ಚೀನಾ ಪ್ರಜೆಗಳಿಗೆ ಸ್ಥಳೀಯ ಗೈಡ್ ಆಗಿ ಕೆಲಸ ಮಾಡುತ್ತಿದ್ದು, ದಿನಕ್ಕೆ 700ರಿಂದ 800 ಟಾಕಾ ಸಂಭಾವನೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ತಮ್ಮಂತೆ ಹಲವು ಬಾಂಗ್ಲಾದೇಶಿ ಮಹಿಳೆಯರೂ ಅವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಚೀನಾದ ವ್ಲಾಗರ್ಗಳು ವೀಚಾಟ್ ಮತ್ತು ಡೌಯಿನ್ ಸೇರಿದಂತೆ ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಗೂ ಲೈವ್ ಸ್ಟ್ರೀಮಿಂಗ್ ಮೂಲಕ ಹಣ ಗಳಿಸುತ್ತಿದ್ದಾರೆ ಎನ್ನಲಾಗಿದೆ. ಬಡವರು ಹೆಚ್ಚಾಗಿ ವಾಸಿಸುವ ಪ್ರದೇಶಗಳನ್ನೇ ಅವರು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ರಿತು ಆರೋಪಿಸಿದ್ದಾರೆ.
ಫಾಂಗ್ಯು ಎಂಬ ಚೀನಾ ಪ್ರಜೆ ಪತ್ರಕರ್ತರೊಂದಿಗೆ ಮಾತನಾಡಿ, ವೀಚಾಟ್ನಲ್ಲಿ ಉತ್ಪನ್ನಗಳ ಪ್ರಚಾರಕ್ಕಾಗಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿರುವುದಾಗಿ ಹೇಳಿದ್ದಾನೆ. ಆದರೆ, ನಿರ್ದಿಷ್ಟವಾಗಿ ಈ ಬಡಾವಣೆಯನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿಲ್ಲ.
ಮನೆ, ಬಾತ್ರೂಂಗಳಿಗೂ ನುಗ್ಗಿ ಚಿತ್ರೀಕರಣ; ಸ್ಥಳೀಯರ ಆಕ್ರೋಶ
ವಿಡಿಯೋ ಚಿತ್ರೀಕರಣದ ಹೆಸರಿನಲ್ಲಿ ತಮ್ಮ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕೆಲವು ಚೀನಾ ಪ್ರಜೆಗಳು ಅನುಮತಿ ಪಡೆಯದೆ ಮನೆಗಳಿಗೆ ನುಗ್ಗಿ ವಿಡಿಯೋ ಮಾಡುತ್ತಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
"ಕೆಲವೊಮ್ಮೆ ಅವರು ನಮ್ಮ ಮನೆಗಳೊಳಗೆ ನುಗ್ಗಿ ಚಿತ್ರೀಕರಣ ಆರಂಭಿಸುತ್ತಾರೆ. ಮನೆಯೊಳಗೆ ನಾವು ಯಾವಾಗಲೂ ಸರಿಯಾದ ಉಡುಪಿನಲ್ಲಿ ಇರುವುದಿಲ್ಲ. ಹೀಗಿರುವಾಗ ಯಾರೋ ಏಕಾಏಕಿ ಮನೆಗೆ ಬಂದು ವಿಡಿಯೋ ಮಾಡಿದರೆ ಹೇಗಾಗುತ್ತದೆ?" ಎಂದು ಸ್ಥಳೀಯ ನಿವಾಸಿ ರೋಜಿನಾ ಖಾತೂನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೊಬ್ಬ ಮಹಿಳೆ ಪಾಪಿಯಾ ಬೇಗಂ ಮಾತನಾಡಿ, ಕೆಲವು ವ್ಲಾಗರ್ಗಳು ಬಾತ್ರೂಂಗಳಿಗೂ ನುಗ್ಗಿ ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. "ನಾವು ವಿರೋಧ ವ್ಯಕ್ತಪಡಿಸಿದರೂ ಅವರಿಗೆ ನಮ್ಮ ಭಾಷೆ ಅರ್ಥವಾಗುವುದಿಲ್ಲ. ನಗುತ್ತಾ ಕ್ಷಮೆ ಕೇಳಿ ಅಲ್ಲಿಂದ ಹೊರಟುಹೋಗುತ್ತಾರೆ. ದಿನವಿಡೀ ಇಂತಹ ಕಿರಿಕಿರಿ ಮುಂದುವರಿಯುತ್ತದೆ" ಎಂದು ಅವರು ಹೇಳಿದ್ದಾರೆ.
ಪೊಲೀಸರಿಗೆ ಅನುಮಾನ; ಆದರೆ ಉದ್ದೇಶವೇನು ಎಂಬುದು ನಿಗೂಢ!
ಈ ಚಟುವಟಿಕೆಗಳ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ಇದೆ. ಉತ್ತಮಾ ಪ್ರದೇಶದ ವಿವಿಧೆಡೆ ಚೀನಾ ಪ್ರಜೆಗಳು ಲೈವ್ ಸ್ಟ್ರೀಮಿಂಗ್ ಮಾಡುತ್ತಿರುವುದನ್ನು ಗಮನಿಸಿದ್ದೇವೆ. ಆದರೆ, ಅವರು ಯಾವ ಉದ್ದೇಶಕ್ಕಾಗಿ ಈ ವಿಡಿಯೋಗಳನ್ನು ಮಾಡುತ್ತಿದ್ದಾರೆ ಎಂಬುದು ತಿಳಿದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಉತ್ತಮಾ ವೆಸ್ಟ್ ಪೊಲೀಸ್ ಠಾಣೆಯ ಅಧಿಕಾರಿ ಮೊಹಮ್ಮದ್ ಖಾಲಿದ್ ಮನ್ಸೂರ್ ಮಾತನಾಡಿ, "ಅವರು ಏಕೆ ಈ ವಿಡಿಯೋಗಳನ್ನು ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಈ ವಿಡಿಯೋಗಳನ್ನು ಎಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂಬುದೂ ಗೊತ್ತಿಲ್ಲ. ಆದರೆ, ಈ ಚಟುವಟಿಕೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.
ಬಾಂಗ್ಲಾದೇಶದ ದೃಶ್ಯಗಳನ್ನು ಭಾರತದ ಹೆಸರಿನಲ್ಲಿ ಪ್ರಸಾರ ಮಾಡುತ್ತಿರುವ ಆರೋಪ, ಸ್ಥಳೀಯರ ಖಾಸಗಿತನಕ್ಕೆ ಧಕ್ಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುವ ಸಾಧ್ಯತೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ವಿಡಿಯೋಗಳ ಹಿಂದೆ ಯಾರಿದ್ದಾರೆ? ಅವುಗಳನ್ನು ಯಾರು ಮಾಡಿಸುತ್ತಿದ್ದಾರೆ? ಬಾಂಗ್ಲಾದೇಶದ ಪ್ರದೇಶಗಳನ್ನು ಭಾರತದ ಹೆಸರಿನಲ್ಲಿ ಏಕೆ ಬಿಂಬಿಸಲಾಗುತ್ತಿದೆ? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.