

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಒಂದು ಶತಮಾನಕ್ಕೂ ಹೆಚ್ಚು ಕಾಲ ತನ್ನ 'ಪಿಟ್ ರಿವರ್ಸ್ ಮ್ಯೂಸಿಯಂ'ನಲ್ಲಿ (Pitt Rivers Museum) ಇರಿಸಿಕೊಂಡಿದ್ದ ನಾಗಾ ಸಮುದಾಯದ 39 ವ್ಯಕ್ತಿಗಳ ಅವಶೇಷಗಳನ್ನು, ಐತಿಹಾಸಿಕ ಮರಳಿಸುವಿಕೆಯ (repatriation) ಉಪಕ್ರಮದ ಭಾಗವಾಗಿ ಭಾರತಕ್ಕೆ ಹಿಂದಿರುಗಿಸಿದೆ.
ಸೋಮವಾರ ವಸ್ತುಸಂಗ್ರಹಾಲಯದಲ್ಲಿ ನಡೆದ ಸಮಾರಂಭವೊಂದರಲ್ಲಿ, ಈ ಅವಶೇಷಗಳನ್ನು 'ಫೋರಮ್ ಫಾರ್ ನಾಗಾ ರಿಕನ್ಸಿಲಿಯೇಶನ್' (FNR) ಮತ್ತು 'ನಾಗಾ ಟ್ರೈಬ್ ಹೋಹೋ' (Naga Tribe Hoho) ಸಂಸ್ಥೆಗಳಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಈ ಹಸ್ತಾಂತರಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಪಿಟ್ ರಿವರ್ಸ್ ಮ್ಯೂಸಿಯಂನ ನಿರ್ದೇಶಕಿ ಪ್ರೊಫೆಸರ್ ಲಾರಾ ವ್ಯಾನ್ ಬ್ರೋಕ್‌ಹೋವನ್ ಮತ್ತು FNR ಪ್ರತಿನಿಧಿ ರೆವರೆಂಡ್ ಡಾ. ವಾಟಿ ಐಯರ್ ಸಹಿ ಹಾಕಿದರು.
FNR ಪರವಾಗಿ ವಿಸಿಯರ್ ಸನ್ಯು ಮತ್ತು ನಾಗಾ ಟ್ರೈಬ್ ಹೋಹೋ ಪರವಾಗಿ ತೇಜಾವೊ ವಿಹಿಯೆನುವೊ ಈ ಪ್ರಕ್ರಿಯೆಗೆ ಸಾಕ್ಷಿಯಾದರು.
FNR ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಹಸ್ತಾಂತರದ ನಂತರ, ಈ ಪೂರ್ವಜರ ಅವಶೇಷಗಳನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ನಾಗಾಲ್ಯಾಂಡ್‌ಗೆ ಕೊಂಡೊಯ್ಯುವ ಪ್ರಯಾಣಕ್ಕಾಗಿ ಸ್ಥಳಾಂತರಿಸಲಾಯಿತು.
1884ರಲ್ಲಿ ಸ್ಥಾಪನೆಯಾದ ಪಿಟ್ ರಿವರ್ಸ್ ಮ್ಯೂಸಿಯಂ, ಪ್ರಪಂಚದ ವಿವಿಧ ಭಾಗಗಳಿಂದ ಸಂಗ್ರಹಿಸಲಾದ ಸಾಂಸ್ಕೃತಿಕ ಕಲಾಕೃತಿಗಳನ್ನು ಹೊಂದಿದೆ; ಈ ಅವಶೇಷಗಳು ಕೂಡ ಅಲ್ಲಿನ ಸಂಗ್ರಹದ ಭಾಗವಾಗಿದ್ದವು.
ಸಮಾರಂಭದಲ್ಲಿ ಮಾತನಾಡಿದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊಫೆಸರ್ ಐರೀನ್ ಟ್ರೇಸಿ, ಈ ಹಸ್ತಾಂತರವನ್ನು ವಿಶ್ವವಿದ್ಯಾಲಯ ಮತ್ತು ನಾಗಾ ಜನರ ನಡುವಿನ ಸಂಬಂಧದಲ್ಲಿನ ಒಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು.
ಈ ಉಪಕ್ರಮ ಸಮುದಾಯದ ನೇತೃತ್ವದಲ್ಲಿ ನಡೆದ ಸಾಮರಸ್ಯ, ನೋವು ನಿವಾರಣೆ (healing) ಮತ್ತು ಶಾಂತಿಯ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದುದಾಗಿ ಆ ಹೇಳಿಕೆ ತಿಳಿಸಿದೆ.
ಸನ್ಯು ಅವರು ನಾಗಾ ಸಮುದಾಯಗಳ ಮೇಲೆ ಬ್ರಿಟಿಷ್ ವಸಾಹತುಶಾಹಿ ಹಿಂಸಾಚಾರ ಬೀರಿದ ಪರಿಣಾಮಗಳ ಬಗ್ಗೆ ಮಾತನಾಡಿದರು ಮತ್ತು ವಸಾಹತುಶಾಹಿ ಪಡೆಗಳು ತಮ್ಮ ಸ್ವಂತ ಹಳ್ಳಿಯನ್ನೇ ಹೇಗೆ ಸುಟ್ಟುಹಾಕಿದ್ದವು ಎಂಬುದನ್ನು ವಿವರಿಸಿದರು.
ಕ್ಷಮೆ ಮತ್ತು ಸಾಮರಸ್ಯದ ಮಹತ್ವವನ್ನು ಒತ್ತಿಹೇಳಿದ ಅವರು, ದಿವಂಗತ ನಾಗಾ ಶಾಂತಿ ಕಾರ್ಯಕರ್ತ ನಿಕೆತು ಇರಲು ಅವರ ಮಾತುಗಳನ್ನು ಉಲ್ಲೇಖಿಸುತ್ತಾ, "ರೂಪಾಂತರಗೊಳ್ಳದ ದ್ವೇಷವು (ಒಬ್ಬರಿಂದ ಇನ್ನೊಬ್ಬರಿಗೆ) ವರ್ಗಾವಣೆಯಾಗುತ್ತದೆ" ಎಂದು ಹೇಳಿದರು.