

ನ್ಯೂಯಾರ್ಕ್: ಅಮೆರಿಕದ ನ್ಯೂ ಓರ್ಲಿಯನ್ಸ್‌ನ ಮಿಸಿಸಿಪ್ಪಿ ನದಿಯಲ್ಲಿ ಭೀಕರ ಹಡಗು ಅಪಘಾತ ಸಂಭವಿಸಿದ್ದು, ನಿಂತಿದ್ದ ಐಷಾರಾಮಿ ಕ್ರೂಸ್ ಹಡಗಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಕ್ರೂಸ್ ಹಡಗು ಮಗುಚಿ ನದಿಗೆ ಬಿದ್ದಿದೆ.
ಈ ವೇಳೆ ಹಡಗಿನಲ್ಲಿದ್ದ ಪ್ರಯಾಣಿಕರು ಜೀವ ಉಳಿಸಿಕೊಳ್ಳಲು ನೀರಿಗೆ ಹಾರಿದ್ದು, ಹಲವರು ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಕನಿಷ್ಠ 32 ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಚ್ಚರಿ ಎಂದರೆ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ನ್ಯೂ ಓರ್ಲಿಯನ್ಸ್ ಮೇಯರ್ ಹೆಲೆನಾ ಮೊರೆನೊ ತಿಳಿಸಿದ್ದಾರೆ.
ಅಪಘಾತ ಸಂಭವಿಸಿದಾಗ ಹಡಗಿನಲ್ಲಿ ಸುಮಾರು 180ರಿಂದ 190 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು ಎಂದು ಮೇಯರ್ ತಿಳಿಸಿದ್ದಾರೆ. ಹಡಗಿನಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಅಪಘಾತದ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಟ್ಯಾಂಕರ್ ಕ್ರೂಸ್ ಹಡಗಿಗೆ ಅಡ್ಡಲಾಗಿ ಡಿಕ್ಕಿ ಹೊಡೆಯುತ್ತಿದ್ದಂತೆ ಹಡಗು ಒಂದು ಬದಿಗೆ ವಾಲಿ, ಬಳಿಕ ಮಗುಚಿ ನದಿಯಲ್ಲಿ ಮುಳುಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಪ್ರಯಾಣಿಕರು ಕಿರುಚುತ್ತಾ ನೀರಿಗೆ ಹಾರುತ್ತಿರುವ ದೃಶ್ಯಗಳು ಆತಂಕ ಮೂಡಿಸಿವೆ.
ಟ್ಯಾಂಕರ್ ನಿಯಂತ್ರಣ ತಪ್ಪಿ ಡಿಕ್ಕಿ
ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಅಮೆರಿಕನ್ ಕ್ರೂಸ್ ಲೈನ್ಸ್ ನಿರ್ವಹಿಸುವ 'ಅಮೆರಿಕನ್ ಹೆರಿಟೇಜ್' ಎಂಬ ಕ್ರೂಸ್ ಹಡಗು ನದಿಯ ದಡದಲ್ಲಿ ನಿಂತಿದ್ದಾಗ, 'ಅಟ್ಲಾಂಟಿಕ್ ಅಸ್ಫಾಲ್ಟ್' ಎಂಬ ಟ್ಯಾಂಕರ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕ್ರೂಸ್ ಹಡಗು ನೀರಿನಲ್ಲಿ ಮುಳುಗಲು ಆರಂಭಿಸಿದೆ.
ಬಳಿಕ ಒಂದು ಬದಿಗೆ ಮಗುಚಿ ಸಂಪೂರ್ಣವಾಗಿ ಪಲ್ಟಿಯಾಗಿದೆ. ಹಡಗು ಮುಳುಗುವ ಮುನ್ನ ಸುಮಾರು 87 ಪ್ರಯಾಣಿಕರು ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
'ಯಾರೂ ನಾಪತ್ತೆಯಾಗಿಲ್ಲ, ಇದು ಪವಾಡವೇ ಸರಿ'
ರಕ್ಷಣಾ ಕಾರ್ಯಾಚರಣೆಯ ಕುರಿತು ಮಾತನಾಡಿದ ಮೇಯರ್ ಹೆಲೆನಾ ಮೊರೆನೊ, “ಯಾರೊಬ್ಬರೂ ನಾಪತ್ತೆಯಾಗಿಲ್ಲ. ಮಿಸಿಸಿಪ್ಪಿ ನದಿಯಲ್ಲಿ ಇದು ನಿಜಕ್ಕೂ ಪವಾಡವೇ ಸರಿ” ಎಂದು ಹೇಳಿದ್ದಾರೆ.
ತಂಡಗಳು, ಅಗ್ನಿಶಾಮಕ ಸಿಬ್ಬಂದಿ, ಬಂದರು ಸಿಬ್ಬಂದಿ ಮತ್ತು ಸಮೀಪದಲ್ಲಿದ್ದ ಇತರ ದೋಣಿಗಳಲ್ಲಿನ ಜನರು ತಕ್ಷಣ ಕಾರ್ಯಾಚರಣೆಗೆ ಇಳಿದಿದ್ದರಿಂದ ಎಲ್ಲರನ್ನೂ ರಕ್ಷಿಸಲು ಸಾಧ್ಯವಾಯಿತು ಎಂದು ಅವರು ತಿಳಿಸಿದ್ದಾರೆ.
ಅಪಘಾತದ ಬಳಿಕ ಆ ಪ್ರದೇಶದಲ್ಲಿ ನದಿಯಲ್ಲಿನ ಹಡಗು ಸಂಚಾರವನ್ನು ಅಮೆರಿಕದ ಕೋಸ್ಟ್ ಗಾರ್ಡ್ ಸ್ಥಗಿತಗೊಳಿಸಿದೆ. ಟ್ಯಾಂಕರ್‌ನ ಸ್ಟೀರಿಂಗ್ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ನಿಯಂತ್ರಣ ಕಳೆದುಕೊಂಡಿರಬಹುದು ಎಂದು ಕೋಸ್ಟ್ ಗಾರ್ಡ್ ಕ್ಯಾಪ್ಟನ್ ಮೆಲಾನಿ ಬರ್ನ್‌ಹ್ಯಾಮ್ ತಿಳಿಸಿದ್ದಾರೆ.