'ಭಾರತದ ಆರ್ಥಿಕತೆ ಹದಗೆಟ್ಟು ಹೋಗಿದೆ, ಉದ್ಯೋಗ, ಉತ್ಪಾದನಾ ವಲಯ ತೀವ್ರ ಬಿಕ್ಕಟ್ಟಿನಲ್ಲಿದೆ': ಅಮೆರಿಕದಲ್ಲಿ ಭಾರತ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ; Video

ನಿನ್ನೆ ಅಮೆರಿಕಾದ ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತದ ಆರ್ಥಿಕ ಮಾದರಿಯು ಸುಮಾರು ಒಂದು ದಶಕದ ಹಿಂದೆಯೇ ಉತ್ತಮ ಫಲಿತಾಂಶ ನೀಡುವುದನ್ನು ನಿಲ್ಲಿಸಿದೆ ಎಂದು ಟೀಕಿಸಿದರು.
Leader of Opposition in the Lok Sabha Rahul Gandhi speaks during a fireside chat at Columbia University
ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇಂಟರ್‌ನ್ಯಾಷನಲ್ ಅಂಡ್ ಪಬ್ಲಿಕ್ ಅಫೇರ್ಸ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾತನಾಡಿದರು.
Updated on: 

ಭಾರತವು ಬೃಹತ್ ನಿರುದ್ಯೋಗ, ದುರ್ಬಲಗೊಂಡ ಉತ್ಪಾದನಾ ವಲಯ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಆಳವಾದ ಸಮಸ್ಯೆಗಳಿಂದಾಗಿ 'ಆರ್ಥಿಕ ದುರಂತ'ದ ಅಂಚಿನಲ್ಲಿದೆ. ಇದೇ ಆರ್ಥಿಕ ಹಾದಿಯಲ್ಲಿ ಮುಂದುವರಿದರೆ ದೇಶ ಗಂಭೀರ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಭಾರತ ಬಗ್ಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಟೀಕಿಸಿ ಮತ್ತೆ ಸುದ್ದಿಯಾಗಿದ್ದಾರೆ.

ನಿನ್ನೆ ಅಮೆರಿಕಾದ ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತದ ಆರ್ಥಿಕ ಮಾದರಿಯು ಸುಮಾರು ಒಂದು ದಶಕದ ಹಿಂದೆಯೇ ಉತ್ತಮ ಫಲಿತಾಂಶ ನೀಡುವುದನ್ನು ನಿಲ್ಲಿಸಿದೆ ಎಂದು ಟೀಕಿಸಿದರು. ದೇಶದ ದುರ್ಬಲಗೊಂಡ ಆರ್ಥಿಕ ಬೆನ್ನೆಲುಬನ್ನು ಪುನಶ್ಚೇತನಗೊಳಿಸುವಲ್ಲಿ 'ಮೇಕ್ ಇನ್ ಇಂಡಿಯಾ' ಮತ್ತು 'ಸ್ಟಾರ್ಟ್‌ಅಪ್ ಇಂಡಿಯಾ'ದಂತಹ ಸರ್ಕಾರದ ಉಪಕ್ರಮಗಳು ವಿಫಲವಾಗಿವೆ ಎಂದರು.

“ಭಾರತ ಆರ್ಥಿಕ ದುರಂತದ ಅಂಚಿನಲ್ಲಿದೆ ಎಂಬುದು ಕಟುವಾದ ವಾಸ್ತವ. ಇದನ್ನು ಯಾರಾದರೂ ನಿರ್ಲಕ್ಷಿಸಬಹುದು, ಮಾಧ್ಯಮಗಳೂ ನಿರ್ಲಕ್ಷಿಸಬಹುದು. ಆದರೆ ಭಾರತದಲ್ಲಿ ಬೃಹತ್ ನಿರುದ್ಯೋಗ ಸಮಸ್ಯೆಯಿದೆ. ಶಿಕ್ಷಣ ವ್ಯವಸ್ಥೆಯಲ್ಲೂ ದೊಡ್ಡ ಸಮಸ್ಯೆಯಿದೆ” ಎಂದು ಅವರು ಹೇಳಿದರು.

ನಿನ್ನೆ ಬೆಳಗ್ಗೆ ನ್ಯೂಯಾರ್ಕ್‌ಗೆ ಆಗಮಿಸಿದ್ದ ರಾಹುಲ್ ಗಾಂಧಿ, ವಿಶ್ವವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದರು.

Leader of Opposition in the Lok Sabha Rahul Gandhi speaks during a fireside chat at Columbia University
'ನಿಮ್ಮ ಗರ್ಲ್ ಎಲ್ಲಿದ್ದಾರೆ ಈಗ' ಎಂದು ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರ ಹೀಗಿತ್ತು...Video

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕೃಷಿ ಕ್ಷೇತ್ರಗಳು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪ್ರತಿಪಾದಿಸಿದ ಅವರು, ದೇಶದ ಉತ್ಪಾದನಾ ವಲಯವನ್ನು ಪುನರ್‌ನಿರ್ಮಿಸುವ ಅಗತ್ಯವಿದೆ ಎಂದರು.

ಆರ್ಥಿಕತೆಯ ಬೆನ್ನೆಲುಬು ಎಂದರೆ ಉದ್ಯೋಗ ಸೃಷ್ಟಿಸುವ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಕೃಷಿ ಕ್ಷೇತ್ರ. ಭಾರತಕ್ಕೆ ಇವು ಅತ್ಯಂತ ಮೂಲಭೂತವಾಗಿ ಅಗತ್ಯವಾಗಿವೆ. ಆದರೆ ಆರ್ಥಿಕತೆಯ ಬೆನ್ನೆಲುಬನ್ನೇ ಮುರಿಯಲಾಗಿದೆ.

ಸೇವಾ ವಲಯದಿಂದ ಎಲ್ಲರಿಗೂ ಸಾಕಷ್ಟು ಉದ್ಯೋಗಗಳನ್ನು ಒದಗಿಸಲು ಸಾಧ್ಯವಿಲ್ಲ. ಶೇ.1, ಶೇ.2, ಶೇ.3 ಅಥವಾ ಶೇ.5ರಷ್ಟು ಜನರಿಗೆ ಉದ್ಯೋಗ ನೀಡಬಹುದು. ಆದರೆ ಸೇವಾ ವಲಯವೊಂದರಿಂದಲೇ ಎಲ್ಲರಿಗೂ ಭವಿಷ್ಯ ರೂಪಿಸಲು ಸಾಧ್ಯವಿಲ್ಲ. ನಾವು ಮೂಲತಃ ಉತ್ಪಾದನಾ ವಲಯದ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಂತಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಕಾಂಗ್ರೆಸ್ ಪಕ್ಷ ಶ್ರಮಪಟ್ಟು ನಿರ್ಮಿಸಿದ್ದ ಆರ್ಥಿಕ ವ್ಯವಸ್ಥೆಯ ರಚನೆ ದುರ್ಬಲಗೊಂಡಿದೆ ಎಂದು ಆರೋಪಿಸಿದ ಅವರು, ಅದನ್ನು ಪುನರ್‌ನಿರ್ಮಿಸುವ ಅಗತ್ಯವಿದೆ. ಬಲಿಷ್ಠ ಉತ್ಪಾದನಾ ನೆಲೆ ಇಲ್ಲದೆ ಭಾರತ ಯಶಸ್ವಿಯಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದರು.

ಉತ್ಪಾದನಾ ವಲಯವಿಲ್ಲದೆ ನಾವು ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವೇ ಇಲ್ಲ. ಅದು ಅಸಾಧ್ಯ ಎಂದು ಹೇಳಿದರು.

ಖಾಸಗಿ ಹೂಡಿಕೆ ಕೊರತೆಯ ಬಗ್ಗೆ ಪ್ರಶ್ನಿಸಿದ ರಾಹುಲ್ ಗಾಂಧಿ, ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿ ಅವರ ಉದ್ಯಮ ಸಮೂಹಗಳೂ ಸೇರಿದಂತೆ ಬೆರಳೆಣಿಕೆಯಷ್ಟು ದೊಡ್ಡ ಉದ್ಯಮ ಸಂಸ್ಥೆಗಳು ಮಾತ್ರ ವಿಸ್ತರಣೆಯಾಗುತ್ತಿವೆ. ಆದರೆ ಸಣ್ಣ ಉದ್ಯಮಗಳು ಸಂಕಷ್ಟ ಎದುರಿಸುತ್ತಿವೆ ಎಂದು ಆರೋಪಿಸಿದರು.

ಭಾರತದಲ್ಲಿ ಖಾಸಗಿ ಹೂಡಿಕೆ ಏಕೆ ನಡೆಯುತ್ತಿಲ್ಲ? ದೇಶದಲ್ಲಿ ಬೆಳೆಯುತ್ತಿರುವ ಉದ್ಯಮಗಳೆಂದರೆ ಅದಾನಿ ಮತ್ತು ಅಂಬಾನಿ ಅವರ ಉದ್ಯಮಗಳಷ್ಟೇ ಏಕೆ? ಟಾಟಾ ಸಮೂಹವನ್ನೂ ಅಕ್ಷರಶಃ ಅದಾನಿ ಅವರು ವಶಕ್ಕೆ ಪಡೆಯುತ್ತಿದ್ದಾರೆಯೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

Leader of Opposition in the Lok Sabha Rahul Gandhi speaks during a fireside chat at Columbia University
'ಅಪ್ಪನ ತೊಡೆ ಮೇಲೆ ಅಮ್ಮ' ಹೇಳಿಕೆ: BJP, RSS ಮನಸ್ಸಿನಲ್ಲಿ ದ್ವೇಷ; ಶಿವ-ಪಾರ್ವತಿ ಫೋಟೋ ಹಾಕಿ ರಾಹುಲ್ ತಿರುಗೇಟು!

ಈ ಬೇಸಿಗೆಯಲ್ಲಿ ದೆಹಲಿ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಈ ಪ್ರತಿಭಟನೆಗಳು ದಿಢೀರನೆ ಹುಟ್ಟಿಕೊಂಡಿದ್ದಲ್ಲ. ಸುಮಾರು ಒಂದು ದಶಕದಿಂದ ರಾಜಕೀಯ ಮತ್ತು ಆರ್ಥಿಕ ಅಧಿಕಾರ ಕೆಲವೇ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕರಣಗೊಳ್ಳುತ್ತಿರುವುದರ ವಿರುದ್ಧ ವಿವಿಧ ವರ್ಗಗಳು ನಡೆಸುತ್ತಿರುವ ಪ್ರತಿರೋಧದ ಭಾಗವಾಗಿವೆ ಎಂದರು.

ಭಾರತದಲ್ಲಿ ಅಧಿಕಾರ ಕೇಂದ್ರೀಕರಣಗೊಳ್ಳುತ್ತಿದ್ದಂತೆ, ವಿವಿಧ ಗುಂಪುಗಳು ಬೇರೆ ಬೇರೆ ಸ್ಥಳಗಳಲ್ಲಿ ವಿಭಿನ್ನ ಹಂತಗಳಲ್ಲಿ ಪ್ರತಿರೋಧ ವ್ಯಕ್ತಪಡಿಸುತ್ತಿವೆ. ಇದು ಕಳೆದ ಸುಮಾರು ಒಂದು ದಶಕದಿಂದ ನಡೆಯುತ್ತಿದೆ ಎಂದು ಹೇಳಿದರು.

ಅಮೆರಿಕದ ವಲಸೆ ನೀತಿಗಳು ಬಿಗಿಗೊಳ್ಳುತ್ತಿರುವುದರಿಂದ ವಿದೇಶದಲ್ಲಿ ಉನ್ನತ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಬಯಸುವ ಭಾರತೀಯ ವಿದ್ಯಾರ್ಥಿಗಳ ಮೇಲಾಗುವ ಪರಿಣಾಮದ ಕುರಿತು ಮಾತನಾಡಿದ ಅವರು, ಭಾರತದ ಬೃಹತ್ ನಿರುದ್ಯೋಗ ಮತ್ತು ಆರ್ಥಿಕ ಸಮಸ್ಯೆಗಳಿಗೆ ಹೋಲಿಸಿದರೆ ಇದು ಸಣ್ಣ ವಿಚಾರವಾಗಿದೆ ಎಂದರು.

ಇದು ದೊಡ್ಡ ಸಮಸ್ಯೆಯ ಒಂದು ಸಣ್ಣ ಭಾಗವಷ್ಟೇ. ಭಾರತದ ಶೇ.30ರಷ್ಟು ಜನರು ವಿದೇಶಕ್ಕೆ ತೆರಳಿ ಉದ್ಯೋಗ ಪಡೆಯುತ್ತಿದ್ದಾರೆ ಎಂದೇನಿಲ್ಲ. ಈ ವಿಚಾರವನ್ನೇ ದೊಡ್ಡದಾಗಿ ಪರಿಗಣಿಸಿ ಉಳಿದ ಸಮಸ್ಯೆಗಳನ್ನು ಮರೆಯಬಾರದು ಎಂದು ಹೇಳಿದರು.

ಅನೇಕ ಭಾರತೀಯ ವಿದ್ಯಾರ್ಥಿಗಳು ವಿದೇಶಗಳಲ್ಲಿ ಉತ್ತಮ ಅವಕಾಶಗಳನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ಒಪ್ಪಿಕೊಂಡ ರಾಹುಲ್ ಗಾಂಧಿ, ದೇಶದ ಆಂತರಿಕ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸಬೇಕು ಎಂದು ಹೇಳಿದರು.

ಭಾರತದ ಬಗ್ಗೆ ನಾನು ಸಾಕಷ್ಟು ಆಶಾವಾದಿಯಾಗಿದ್ದೇನೆ. ಆದರೆ ನಾವು ನಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದೇವೆ ಎಂಬ ಆತಂಕವಿದೆ. ಇದೇ ಪರಿಸ್ಥಿತಿ ಇನ್ನೂ 10 ವರ್ಷ ಅಥವಾ ಐದು ವರ್ಷ ಮುಂದುವರಿದರೆ ನಾವು ನಿಜವಾಗಿಯೂ ಗಂಭೀರ ಸಂಕಷ್ಟಕ್ಕೆ ಸಿಲುಕುತ್ತೇವೆ ಎಂಬುದು ನನ್ನ ಅಭಿಪ್ರಾಯ ಎಂದು ರಾಹುಲ್ ಗಾಂಧಿ ಎಚ್ಚರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X