

ಫ್ರೆಸ್ನೊ (ಕ್ಯಾಲಿಫೋರ್ನಿಯಾ): ಅಮೆರಿಕದಲ್ಲಿ ಎರಡು ಪ್ರತ್ಯೇಕ ಗುಂಡಿನ ದಾಳಿ ಘಟನೆಗಳು ನಡೆದಿದ್ದು, ಓಹಿಯೋದಲ್ಲಿ ಬೇಬಿ ಶವರ್ ಕಾರ್ಯಕ್ರಮದ ವೇಳೆ ನಡೆದ ಗುಂಡಿನ ದಾಳಿಗೆ ಮೂವರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ. ಇನ್ನು ಕ್ಯಾಲಿಫೋರ್ನಿಯಾದ ಮಧ್ಯಭಾಗದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಒಂಬತ್ತು ಮಂದಿಗೆ ಗುಂಡು ತಗುಲಿ ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಓಹಿಯೋದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಕ್ಲೀವ್‌ಲ್ಯಾಂಡ್‌ನಿಂದ ಸುಮಾರು 16 ಕಿ.ಮೀ. ದಕ್ಷಿಣದಲ್ಲಿರುವ ಪಾರ್ಮಾ ಪ್ರದೇಶದ ಪಂಡೋರಾಸ್ ಮ್ಯಾಜಿಕಲ್ ಇವೆಂಟ್ಸ್ ವೇನ್ಯೂನಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಕೌಟುಂಬಿಕ ಕಲಹವೇ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಗುಂಡಿನ ದಾಳಿ ನಡೆಸಿದವರಲ್ಲಿ ಒಬ್ಬನಾದ 29 ವರ್ಷದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಆತನ ವಿರುದ್ಧ ತಕ್ಷಣಕ್ಕೆ ಯಾವುದೇ ಆರೋಪ ದಾಖಲಿಸಿಲ್ಲ.
ಆತನೇ ಮೊದಲು ದಾಳಿ ನಡೆಸಿದ್ದನೇ ಅಥವಾ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದನೇ ಎಂಬುದನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ ಎಂದು ಪೊಲೀಸ್ ವಕ್ತಾರ ಸ್ಕಾಟ್ ಟ್ರಾಕ್ಸ್ಲರ್ ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಮೃತಪಟ್ಟವರಲ್ಲಿ 19 ವರ್ಷದ ಮತ್ತೊಬ್ಬ ಶಂಕಿತ ಆರೋಪಿಯೂ ಸೇರಿದ್ದಾನೆ.
ಮೃತರಲ್ಲಿ 17 ವರ್ಷದ ಲೀಸಿಯಾ ಇಂಗ್ಲೆಂಡ್ ಮತ್ತು 45 ವರ್ಷದ ಜೇಸನ್ ಟೌನ್‌ಸೆಂಡ್ ಅವರನ್ನು ಅಧಿಕಾರಿಗಳು ಗುರುತಿಸಿದ್ದಾರೆ.
ಬೇಬಿ ಶವರ್ ಕಾರ್ಯಕ್ರಮ ಯಾರಿಗಾಗಿ ಆಯೋಜಿಸಲಾಗಿತ್ತೋ ಆ ಮಹಿಳೆಯ ತಂದೆಯೇ ಟೌನ್‌ಸೆಂಡ್. ಆ ಮಹಿಳೆಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಮೃತಪಟ್ಟ 19 ವರ್ಷದ ಶಂಕಿತ ಆರೋಪಿ ಹಾಗೂ ಕಾಲಿಗೆ ಗುಂಡು ತಗುಲಿರುವ 39 ವರ್ಷದ ಮಹಿಳೆಯ ಹೆಸರುಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತಪಟ್ಟ 19 ವರ್ಷದ ಯುವಕ ಹುಟ್ಟಲಿರುವ ಮಗುವಿನ ತಂದೆಯಾಗಿದ್ದು, ಆತನಿಗೆ ಬೇಬಿ ಶವರ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರಲಿಲ್ಲ ಎಂದು ಸಾಕ್ಷಿಗಳು ತಿಳಿಸಿದ್ದಾರೆ. ವಶಕ್ಕೆ ಪಡೆದಿರುವ 29 ವರ್ಷದ ವ್ಯಕ್ತಿ ಗರ್ಭಿಣಿ ಮಹಿಳೆಯ ಸಂಬಂಧಿಕನಾಗಿರಬಹುದು ಎಂದು ಟ್ರಾಕ್ಸ್ಲರ್ ಹೇಳಿದ್ದಾರೆ.
ಗುಂಡಿನ ದಾಳಿಗೆ ಬಳಸಲಾದ ಎರಡೂ ಬಂದೂಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಕಾರಣವಾದ ಸಂಘರ್ಷದ ಹಿನ್ನೆಲೆ ತಿಳಿಯಲು ಭಾನುವಾರ ಸಿಸಿಟಿವಿ ದೃಶ್ಯಾವಳಿ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರತಿಯೊಬ್ಬರ ಮೇಲೆ ಯಾವ ಬಂದೂಕಿನಿಂದ ಗುಂಡು ಹಾರಿಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ವಿಧಿವಿಜ್ಞಾನ ಪರೀಕ್ಷೆಯ ಅಗತ್ಯವೂ ಎದುರಾಗಬಹುದು ಎಂದು ಟ್ರಾಕ್ಸ್ಲರ್ ತಿಳಿಸಿದ್ದಾರೆ.
ವಶಕ್ಕೆ ಪಡೆದಿರುವ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಆರೋಪ ದಾಖಲಿಸಬೇಕೇ ಎಂಬುದನ್ನು ಅಂತಿಮವಾಗಿ ಸರ್ಕಾರಿ ಅಭಿಯೋಜಕರು ನಿರ್ಧರಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಮತ್ತೊಂದು ಘಟನೆ ಕ್ಯಾಲಿಫೋರ್ನಿಯಾದ ಮಧ್ಯಭಾಗದ ಸ್ಟ್ರಾಥ್‌ಮೋರ್ ಎಂಬ ಪುಟ್ಟ ಪಟ್ಟಣದಲ್ಲಿ ನಡೆದಿದೆ. ಶನಿವಾರ ಸಂಜೆ ಸುಮಾರು 150 ಮಂದಿ ಭಾಗವಹಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆದಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಟುಲೇರ್ ಕೌಂಟಿ ಶೆರಿಫ್ ಇಲಾಖೆ ತಿಳಿಸಿದೆ.
ಶನಿವಾರ ಸಂಜೆ ಸುಮಾರು 7.30ಕ್ಕೆ ಅಪರಿಚಿತ ಸಂಖ್ಯೆಯ ದುಷ್ಕರ್ಮಿಗಳು ಜನರ ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈವರೆಗೆ ಯಾರನ್ನೂ ಬಂಧಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ದಾಳಿಯಲ್ಲಿ 26 ವರ್ಷದ ಯುವಕನ ಎದೆಗೆ ಗುಂಡು ತಗುಲಿದ್ದು, ಆತನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಆತನ ಸ್ಥಿತಿ ಗಂಭೀರವಾಗಿದೆ. 19 ಮತ್ತು 22 ವರ್ಷದ ಇನ್ನಿಬ್ಬರಿಗೂ ಶಸ್ತ್ರಚಿಕಿತ್ಸೆ ಅಗತ್ಯವಾಗಿದ್ದು, ಉಳಿದ ಆರು ಮಂದಿ ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎಂದು ತಿಳಿಸಿದೆ.
ಈ ಗುಂಡಿನ ದಾಳಿಯ ಹಿಂದೆ ಗ್ಯಾಂಗ್‌ಗಳ ಕೈವಾಡ ಇರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ, ಈ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಸುಮಾರು 3,000 ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ನೆರೆಯ ರಾಜ್ಯಗಳ ಕಲಾವಿದರು ಪ್ರದರ್ಶನ ನೀಡುತ್ತಿದ್ದರು ಎಂದು ಇಲಾಖೆ ತಿಳಿಸಿದೆ.