

ಟೆಲ್ ಅವಿವ್: ಸುಮಾರು 180 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ 'ಫ್ಲೈದುಬೈ' ವಿಮಾನವನ್ನು ಪತನಗೊಳಿಸಲು ಸಹ-ಪೈಲಟ್ ನಡೆಸಿದ ಪ್ರಯತ್ನವನ್ನು ವಿಫಲಗೊಳಿಸಿದ ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಇಸ್ರೇಲ್ ನಾಯಕರು ಹೀರೋ ಎಂದು ಶ್ಲಾಘಿಸಿದ್ದಾರೆ ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಬುಧವಾರ ದುಬೈನಿಂದ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ 'ಫ್ಲೈದುಬೈ' ವಿಮಾನ FZ1073ರ ಕಾಕ್‌ಪಿಟ್‌ನಲ್ಲಿ, ಸಹ-ಪೈಲಟ್ ನಡೆಸಿದ ಚಾಕು ದಾಳಿಯಿಂದ ಮಚ್ಚಾರ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
"ಚಾಕು ಇರಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರೂ, ಅವರು ಪ್ರತಿರೋಧ ಒಡ್ಡಿ ಹೋರಾಡಿದರು, ಕಾಕ್‌ಪಿಟ್ ಬಾಗಿಲನ್ನು ತೆರೆದರು ಮತ್ತು ಪ್ರಯಾಣಿಕರು ಹಾಗೂ ಸಿಬ್ಬಂದಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ನೆರವಾದರು; ಹೀಗೆ ಅವರು ಆಕಾಶದಲ್ಲಿ ಸಂಭವಿಸಬಹುದಿದ್ದ ಭೀಕರ ದುರಂತವನ್ನು ತಡೆಗಟ್ಟಿದರು" ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರಕಟಣೆಯಲ್ಲಿ ತಿಳಿಸಿದ್ದು, ಅವರನ್ನು "ನಿಜವಾದ ಹೀರೋ" ಎಂದು ಬಣ್ಣಿಸಿದ್ದು, ಇಸ್ರೇಲ್ ಸರ್ಕಾರ ಅವರನ್ನು ಅಭಿನಂದಿಸುತ್ತದೆ ಎಂದಿದ್ದಾರೆ.
"ಅಸಾಧಾರಣ ಧೈರ್ಯ ಪ್ರದರ್ಶಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ನನ್ನ ನಮನಗಳು," ಎಂದು ಹೇಳಿದ ನೆತನ್ಯಾಹು, ಅವರು ಇಸ್ರೇಲ್, ಇ ಪ್ರಜೆಗಳು ಮತ್ತು ಇತರ ದೇಶಗಳ ಪ್ರಯಾಣಿಕರು ಸೇರಿದಂತೆ 174 ಜನರ ಜೀವ ಉಳಿಸಿದ್ದಾರೆ ಎಂದು ಹೇಳಿದ್ದಾರೆ.
"ಕ್ಯಾಪ್ಟನ್ ಮಚ್ಚಾರ್ ಅವರು ಶೀಘ್ರವಾಗಿ ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಅವರು ನಿಜವಾದ ಹೀರೋ" ಎಂದಿದ್ದಾರೆ.
ಇಸ್ರೇಲ್ ಅಧ್ಯಕ್ಷ ಐಸಾಕ್ ಹರ್ಜೋಗ್ ಅವರು ಮಚ್ಚಾರ್ ಅವರಿಗೆ ಧನ್ಯವಾದ ಅರ್ಪಿಸಿದ್ದು, "ತಮ್ಮ ಕೊನೆಯ ಶಕ್ತಿಯನ್ನು ಬಳಸಿ ಕಾಕ್‌ಪಿಟ್ ಬಾಗಿಲನ್ನು ತೆರೆದು, ಭಯೋತ್ಪಾದಕನನ್ನು ನಿಷ್ಕ್ರಿಯಗೊಳಿಸಲು ಅವರು ನೆರವಾದರು," ಎಂದು ಹರ್ಜೋಗ್ ಹೇಳಿದ್ದಾರೆ.
"ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ, ಅನೇಕ ಜೀವಗಳನ್ನು ಉಳಿಸಿದ ನಿಮ್ಮ ಧೈರ್ಯ, ದೃಢನಿಶ್ಚಯ ಮತ್ತು ಕಾರ್ಯಗಳಿಗಾಗಿ ನನ್ನ ಹೃದಯಾಂತರಾಳದ ಧನ್ಯವಾದಗಳು. ನೀವು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಮತ್ತು ಉತ್ತಮ ಆರೋಗ್ಯವನ್ನು ಹೊಂದಲಿ ಎಂದು ಹಾರೈಸುತ್ತೇನೆ. ಇಸ್ರೇಲ್ ರಾಷ್ಟ್ರವು ನಿಮಗೆ ಅಪಾರ ಕೃತಜ್ಞತೆಯನ್ನು ಸಲ್ಲಿಸುತ್ತದೆ" ಎಂದು ಅವರು 'ಎಕ್ಸ್' (X)ನಲ್ಲಿ ಪೋಸ್ಟ್ ಮಾಡಿದ್ದಾರೆ.