

ಸುಮಿ: ಉಕ್ರೇನ್‌ನಲ್ಲಿರುವ ಭಾರತದ 'ಕುಸುಮ್ ಗ್ರೂಪ್' (Kusum Group) ಒಡೆತನದ ಬೃಹತ್ ಔಷಧ ಘಟಕದ ಮೇಲೆ ರಷ್ಯಾ ಡ್ರೋನ್ ದಾಳಿ ನಡೆಸಿದೆ. ಈ ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಉಕ್ರೇನ್‌ನ ಸುಮಿ (Sumy) ನಗರದಲ್ಲಿರುವ ಈ ಔಷಧ ಘಟಕದ ಮುಖ್ಯ ಕಟ್ಟಡ ಬಹುತೇಕ ನಾಶವಾಗಿದೆ. ಮೃತಪಟ್ಟವರು ಮತ್ತು ಗಾಯಗೊಂಡವರ ಸಂಖ್ಯೆಯಲ್ಲಿ ಬದಲಾವಣೆಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ದೃಶ್ಯಗಳಲ್ಲಿ ಡ್ರೋನ್ ಅಪ್ಪಳಿಸಿದ ಸ್ಥಳದಿಂದ ದಟ್ಟವಾದ ಹೊಗೆ ಬರುತ್ತಿರುವುದು ಕಂಡುಬಂದಿದೆ.
ಕುಸುಮ್ ಗ್ರೂಪ್ 1994 ರಲ್ಲಿ ಭಾರತೀಯ ಔಷಧಗಳನ್ನು ಉಕ್ರೇನ್‌ಗೆ ರಫ್ತು ಮಾಡುವ ವಿತರಕ ಸಂಸ್ಥೆಯಾಗಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಪ್ರಸ್ತುತ ಇದನ್ನು ರಾಜೀವ್ ಗುಪ್ತಾ ಎಂಬ ಭಾರತೀಯ ಪ್ರಜೆ ನಿರ್ವಹಿಸುತ್ತಿದ್ದಾರೆ.
2002 ರಲ್ಲಿ ಕಂಪನಿಯು ಇತರ ಸಂಸ್ಥೆಗಳ ಉತ್ಪನ್ನಗಳ ವಿತರಣೆಯನ್ನು ನಿಲ್ಲಿಸಿ, ತನ್ನದೇ ಆದ ಬ್ರಾಂಡ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಆರಂಭಿಸಿತು. ನಂತರ ಉತ್ಪಾದನಾ ವಲಯಕ್ಕೆ ಪ್ರವೇಶಿಸಿದ ಕಂಪನಿಯು, 2007 ರಲ್ಲಿ ಭಾರತದಲ್ಲಿ ಮತ್ತು 2009 ರಲ್ಲಿ ಉಕ್ರೇನ್‌ನ ಸುಮಿ ನಗರದಲ್ಲಿ ಘಟಕಗಳನ್ನು ಸ್ಥಾಪಿಸಿತು. ತರುವಾಯ ಭಾರತದಲ್ಲಿ ಇನ್ನೂ ಎರಡು ಘಟಕಗಳನ್ನು ಆರಂಭಿಸಿತು.
ಈ ಸಮೂಹವು 50 ಕ್ಕೂ ಹೆಚ್ಚು (ಮುಖ್ಯವಾಗಿ ಜೆನೆರಿಕ್) ಉತ್ಪನ್ನಗಳನ್ನು ತಯಾರಿಸುತ್ತದೆ ಮತ್ತು ಅವುಗಳನ್ನು ಒಂಬತ್ತಕ್ಕೂ ಹೆಚ್ಚು ದೇಶಗಳಲ್ಲಿ - ಪ್ರಮುಖವಾಗಿ ಉಕ್ರೇನ್, ಉಜ್ಬೇಕಿಸ್ತಾನ್, ಕಝಾಕಿಸ್ತಾನ್ ಮತ್ತು ಫಿಲಿಪೈನ್ಸ್‌ನಲ್ಲಿ - ಮಾರಾಟ ಮಾಡುತ್ತದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಘಟನೆಯನ್ನು ಹಂಚಿಕೊಂಡಿದ್ದು, ರಷ್ಯಾದ ದಾಳಿ ಯನ್ನು ಖಂಡಿಸಿದ್ದಾರೆ. ಮೃತಪಟ್ಟ ವ್ಯಕ್ತಿಯ ಕುಟುಂಬ ಹಾಗೂ ಆಪ್ತರಿಗೆ ಸಂತಾಪ ಸೂಚಿಸಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧದ ಅವಧಿಯಾದ್ಯಂತ ಸುಮಿ ಘಟಕವು ಕಾರ್ಯನಿರ್ವಹಿಸುತ್ತಲೇ ಇತ್ತು. ಆದರೆ ಈಗ ಅದು ತೀವ್ರ ಹಾನಿಗೊಳಗಾಗಿದೆ. ಡ್ರೋನ್ ದಾಳಿಯಿಂದಾಗಿ 400 ಕೋಟಿ ರೂ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.