

ಜೆರುಸೆಲೆಂ: ಕಾಕ್‌ಪಿಟ್‌ನಲ್ಲಿ ಕ್ಯಾಪ್ಟನ್ ಮೇಲೆ ದಾಳಿ ಮಾಡಿದ ನಂತರ 150 ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಫ್ಲೈದುಬೈ ಮಾನವನ್ನು ಹೊಡೆದುರುಳಿಸಲು ಇಸ್ರೇಲ್ ಸಿದ್ಧವಾಗಿತ್ತು ಎಂದು ಇಸ್ರೇಲಿ ಮೂಲಗಳನ್ನು ಉಲ್ಲೇಖಿಸಿ ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ವಿಮಾನವು ಕಳೆದ ವಾರ ಇಸ್ರೇಲ್ ಸಮೀಪಿಸುತ್ತಿದ್ದಾಗ ಸಹ-ಪೈಲಟ್ ಕ್ಯಾಪ್ಟನ್‌ಗೆ ಇರಿದು ವಿಮಾನವನ್ನು ಪತನಗೊಳಿಸಲು ಪ್ರಯತ್ನಿಸಿದ್ದಾನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಪ್ರಯಾಣಿಕರು ಮತ್ತು ಕ್ಯಾಪ್ಟನ್ ಹೇಳಿದ್ದಾರೆ.
9/11 ಶೈಲಿಯ ಸಂಭಾವ್ಯ ವಾಯುಯಾನ ಬೆದರಿಕೆಯನ್ನು ಎದುರಿಸಲು ಇಸ್ರೇಲ್ ದೀರ್ಘಕಾಲದಿಂದ ಸ್ಥಾಪಿತವಾದ ಕಾರ್ಯವಿಧಾನವೊಂದನ್ನು ಹೊಂದಿದೆ. ವಿಮಾನವು ಇದ್ದಕ್ಕಿದ್ದಂತೆ 14,000 ಅಡಿಗಳಷ್ಟು ಕೆಳಗೆ ಇಳಿದ ನಂತರ ಮತ್ತು ಇಸ್ರೇಲಿ ವಾಯುಪಡೆಯು ಕಾಕ್‌ಪಿಟ್ ಅನ್ನು ಸಂಪರ್ಕಿಸಲು ಮಾಡಿದ ಪ್ರಯತ್ನಗಳಿಗೆ ಯಾವುದೇ ಪ್ರತಿಕ್ರಿಯೆ ಸಿಗದ ನಂತರ ಆ ವಿಧಾನವನ್ನು ಅನುಸರಿಸಲು ಸಜ್ಜಾಗಿತ್ತು.
ಪೂರ್ವ ಸ್ಥಾಪಿತ ಸಮಿತಿಗೆ ಎಚ್ಚರಿಸಲಾಯಿತು ಮತ್ತು ಯುದ್ಧ ವಿಮಾನಗಳು ತುರ್ತಾಗಿ ಹಾರುತ್ತಿದ್ದಂತೆ ಕಮಾಂಡ್ ಸೆಂಟರ್ ಅನ್ನು ಸ್ಥಾಪಿಸಲಾಯಿತು. ಅಧಿಕಾರಿಗಳು ಪರಿಸ್ಥಿತಿಯನ್ನು ನಿರ್ಣಯಿಸುತ್ತಿದ್ದಂತೆ ಇಸ್ರೇಲ್ ತನ್ನ ವಾಯುಪ್ರದೇಶವನ್ನು ಸಹ ಮುಚ್ಚಿತು. ಇಸ್ರೇಲ್‌ನಿಂದ ಸುಮಾರು 400 ಮೈಲುಗಳಷ್ಟು ದೂರದಲ್ಲಿರುವ ವಿಮಾನವು ಸೌದಿ ಅರೇಬಿಯಾ ಕಡೆಗೆ ದಿಕ್ಕನ್ನು ಬದಲಾಯಿಸಿದ ನಂತರ ಜೆಟ್‌ಗಳನ್ನು ಹಿಂಪಡೆಯಲಾಯಿತು. ನಂತರ ಸೌದಿ ಅರೇಬಿಯಾ ತನ್ನದೇ ಆದ ಫೈಟರ್ ಜೆಟ್‌ಗಳನ್ನು ಹಾರಿಸಿತು.
ವಿಮಾನದಲ್ಲಿದ್ದ ಜನರ ವರದಿಗಳ ಪ್ರಕಾರ, ಕ್ಯಾಪ್ಟನ್ ಕಾಕ್‌ಪಿಟ್ ಬಾಗಿಲು ತೆಗೆಯುವವರೆಗೂ ಸಹ-ಪೈಲಟ್‌ನನ್ನು ವಿರೋಧಿಸುವಲ್ಲಿ ಯಶಸ್ವಿಯಾದರು. ನಂತರ ಇಸ್ರೇಲಿ ಪ್ರಯಾಣಿಕರು ಮತ್ತು ಫ್ಲೈದುಬೈ ಸಿಬ್ಬಂದಿ ಸಹ-ಪೈಲಟ್‌ನನ್ನು ಹಿಡಿದುಕೊಂಡರು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಆಫ್-ಡ್ಯೂಟಿ ಪೈಲಟ್‌ಗಳು ನಂತರ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸೌದಿ ಅರೇಬಿಯಾದ ತಬುಕ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ಸಹಾಯ ಮಾಡಿದರು.
ಫ್ಲೈಟ್ 1073 ಇಸ್ರೇಲ್‌ನಿಂದ ಒಂದು ನಿರ್ದಿಷ್ಟ ದೂರವನ್ನು ತಲುಪಿದ್ದರೆ, ಪರಿಸ್ಥಿತಿಯನ್ನು ನಿರ್ಣಯಿಸಲು ಇಸ್ರೇಲಿ ಫೈಟರ್ ಜೆಟ್‌ಗಳು ಜೋರ್ಡಾನ್ ವಾಯುಪ್ರದೇಶವನ್ನು ಪ್ರವೇಶಿಸುತ್ತಿದ್ದವು ಎಂದು ಇಸ್ರೇಲಿ ಮೂಲಗಳು ಸಿಬಿಎಸ್‌ಗೆ ತಿಳಿಸಿವೆ.
ವಿಮಾನ ಹೊಡೆದುರುಳಿಸಲು ಪ್ರಧಾನಿ ಅನುಮತಿ ಅಗತ್ಯ: ಪೈಲಟ್‌ಗಳು ಕಾಕ್‌ಪಿಟ್ ಅನ್ನು ಪರಿಶೀಲಿಸಲು ಮತ್ತು ವಿಮಾನದ ಪೈಲಟ್‌ನೊಂದಿಗೆ ದೃಶ್ಯ ಸಂಪರ್ಕವನ್ನು (visual contact) ನೀಡಲು ವಿಮಾನದ ಅತ್ಯಂತ ಸಮೀಪಕ್ಕೆ ತೆರಳುತ್ತಿದ್ದರು. ನಂತರ ಅವರು ಪ್ರಯಾಣಿಕರ ಸ್ಥಿತಿಯನ್ನು ನಿರ್ಧರಿಸಲು ಕ್ಯಾಬಿನ್ ಪರಿಶೀಲಿಸುತ್ತಿದ್ದರು. ಒಂದು ವೇಳೆ ಆತಂಕದ ಲಕ್ಷಣಗಳು ಕಂಡುಬಂದಿದ್ದರೆ,ಆ ಮಾಹಿತಿಯನ್ನು ಇಸ್ರೇಲಿ ವಾಯುಪಡೆ ಮತ್ತು ಮೊದಲೇ ರಚಿಸಲಾದ ಸಮಿತಿಗೆ ರವಾನಿಸಲಾಗುತ್ತಿತ್ತು.
ವರದಿಯ ಪ್ರಕಾರ, ವಿಮಾನವನ್ನು ಅಪಹರಿಸಲಾಗಿದೆ ಎಂದು ಅಧಿಕಾರಿಗಳು ನಿರ್ಧರಿಸಿದರೂ, ಅಪಹರಣಕಾರರು ಯಾವುದೇ ಬೇಡಿಕೆಗಳನ್ನು ಇಡದೆ ರೇಡಿಯೋ ಸಂಪರ್ಕವನ್ನೂ ಕಡಿದುಕೊಂಡಿದ್ದರೆ (ಮೌನವಾಗಿದ್ದರೆ), ಸಮಿತಿಯು ಇಸ್ರೇಲ್‌ನ ರಕ್ಷಣಾ ಸಚಿವರು ಮತ್ತು ಪ್ರಧಾನ ಮಂತ್ರಿಯನ್ನು ಸಂಪರ್ಕಿಸುತ್ತಿತ್ತು. ನಿಗದಿತ ಕಾರ್ಯವಿಧಾನದ (Protocal) ಅಡಿಯಲ್ಲಿ ಇಸ್ರೇಲ್‌ನತ್ತ ಬರುತ್ತಿರುವ ಅಪಾಯಕಾರಿ ವಿಮಾನವನ್ನು ಹೊಡೆದುರುಳಿಸಬಹುದಾಗಿತ್ತು. ಆದರೆ ಅಂತಹ ಕ್ರಮಕ್ಕೆ ಪ್ರಧಾನ ಮಂತ್ರಿಗಳು ಮಾತ್ರ ಅನುಮತಿ ನೀಡಬಹುದಾಗಿತ್ತು.
ಇಂತಹ ನಿರ್ಧಾರ ಯಾಕೆ?
ಅಜ್ರಿಯೆಲಿ ಕಟ್ಟಡಗಳು, ವಿಮಾನ ನಿಲ್ದಾಣ ಅಥವಾ ಇತರ ಪ್ರಮುಖ ಕಟ್ಟಡಗಳ ಮೇಲೆ ವಿಮಾನ ಅಪ್ಪಳಿಸಿ ನೂರಾರು ಜನರು ಸಾವನ್ನಪ್ಪುವ ಸಾಧ್ಯತೆಗಿಂತ ಅಂತಹ ನಿರ್ಧಾರವನ್ನು (ವಿಮಾನವನ್ನು ಹೊಡೆದುರುಳಿಸುವುದನ್ನು) ಉತ್ತಮವೆಂದು ಪರಿಗಣಿಸಲಾಗುತ್ತಿತ್ತು ಎಂದು ಮೂಲಗಳು ಸಿಬಿಎಸ್ ನ್ಯೂಸ್‌ಗೆ ತಿಳಿಸಿವೆ. ತನಿಖೆಯ ವೇಳೆ ಸಂಯುಕ್ತ ಅರಬ್ ಎಮಿರೇಟ್ಸ್ ಸಹ-ಪೈಲಟ್, ತಾವು 'ಫ್ಲೈದುಬೈ' (FlyDubai) ಸಂಸ್ಥೆಗೆ ಸೇರುವ ಮೊದಲೇ ಈ ದಾಳಿಯ ಯೋಜನೆ ರೂಪಿಸಿದ್ದಾಗಿ ಹೇಳಿಕೊಂಡಿದ್ದಾರೆ ಎಂದು ಇಸ್ರೇಲಿ ಅಧಿಕಾರಿಯೊಬ್ಬರು ಸಿಬಿಎಸ್ ನ್ಯೂಸ್‌ಗೆ ತಿಳಿಸಿದ್ದಾರೆ.
ಸಹ ಪೈಲಟ್ ಉದ್ದೇಶ ಏನಾಗಿತ್ತು?
ಸಹ-ಪೈಲಟ್‌ನನ್ನು ಒಮಾನ್ ಪ್ರಜೆ ಹಮಾಮ್ ಅಲ್ ಹಮಾಮಿ ಎಂದು ಗುರುತಿಸಲಾಗಿದೆ. ಆತ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ವಿಮಾನವನ್ನು ಅಪ್ಪಳಿಸುವ ಉದ್ದೇಶ ಹೊಂದಿದ್ದ. ಈ ಹಿಂದೆ ಇಸ್ರೇಲ್‌ಗೆ ವಿಮಾನದಲ್ಲಿ ಪ್ರಯಾಣಿಸಿದ್ದ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ.
ಏಕಾಂಗಿ ದಾಳಿಯ ಪ್ರಯತ್ನ: ಇಸ್ರೇಲ್‌ನ ಪ್ರಾಥಮಿಕ ತನಿಖೆ ಪ್ರಕಾರ, ಈ ಅಪಹರಣದ ಪ್ರಯತ್ನವು 'ಲೋನ್-ವುಲ್ಫ್' ದಾಳಿಯಾಗಿ (ಯಾವುದೇ ಸಂಘಟನೆಯ ಬೆಂಬಲವಿಲ್ಲದೆ ಒಬ್ಬರೇ ನಡೆಸುವ ದಾಳಿ) ನಡೆದಿದೆ ಎಂದು ಸೂಚಿಸುತ್ತದೆ. ತನಿಖೆ ಮುಂದುವರಿದಿದೆ ಮತ್ತು ಅಧಿಕಾರಿಗಳು ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಸಿಬಿಎಸ್ ನ್ಯೂಸ್ ವರದಿ ಮಾಡಿದೆ.