

ಬ್ಯಾಂಕಾಕ್ (ಥೈಲ್ಯಾಂಡ್): ಯಾವಗಲೂ ಐಎಂಎಫ್ ಅರ್ಥಾತ್ ಅಂತರರಾಷ್ಟ್ರೀಯ ಹಣಕಾಸು ನಿಧಿ ಮುಂದೇ ಸಾಲಕ್ಕಾಗಿ ಕೈಚಾಚುವ ಪಾಕಿಸ್ತಾನಕ್ಕೆ ಅದೃಷ್ಟವೆಂಬಂತೆ, ಈಗ ಅದೇ ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್ ಗ್ರೂಪ್ನ ಬೋರ್ಡ್ ಆಫ್ ಗವರ್ನರ್ಸ್ನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದೆ. ಆದರೆ, ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಜಾಗತಿಕ ಮಟ್ಟದಲ್ಲಿ ಸದಾ ಸಾಲಕ್ಕಾಗಿ ಕೈಚಾಚುವ ಪಾಕಿಸ್ತಾನಕ್ಕೆ ಈ ಪ್ರತಿಷ್ಠಿತ ಪಟ್ಟ ಸಿಕ್ಕಿದ್ದರೂ, ಅದರ ಕೈಯಲ್ಲಿ ಯಾವುದೇ ನೈಜ ಅಧಿಕಾರ ಅಥವಾ ಪವರ್ ಇರುವುದಿಲ್ಲ. ಆ ಕುರಿತ ವರದಿ ಇಲ್ಲಿದೆ:
ಹೌದು, ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಸಾಲಕ್ಕಾಗಿ ಸದಾ ಜಾಗತಿಕ ಹಣಕಾಸು ಸಂಸ್ಥೆಗಳ ಮುಂದೆ ಕೈಯೊಡ್ಡುವ ಪಾಕಿಸ್ತಾನಕ್ಕೆ, 2027ರ ಸಾಲಿನ ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್ ಮಂಡಳಿಗಳ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ನಿಜ. ಬ್ಯಾಂಕಾಕ್ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಪಾಕಿಸ್ತಾನದ ಆರ್ಥಿಕ ವ್ಯವಹಾರಗಳ ಸಚಿವ ಅಹದ್ ಖಾನ್ ಚೀಮಾ ಅವರನ್ನು ಮುಂಬರುವ ವರ್ಷದ ಅಧ್ಯಕ್ಷರನ್ನಾಗಿ ಅಧಿಕೃತವಾಗಿ ಘೋಷಿಸಲಾಗಿದೆ. ಸುಮಾರು 74 ವರ್ಷಗಳ ಸುದೀರ್ಘ ಅವಧಿಯ ಬಳಿಕ (1953ರ ನಂತರ) ಪಾಕಿಸ್ತಾನಕ್ಕೆ ಈ ಸ್ಥಾನ ಒಲಿದುಬಂದಿದೆ.
ಪಟ್ಟ ಸಿಕ್ಕರೂ ಪಾಕಿಸ್ತಾನಕ್ಕಿಲ್ಲ ಪವರ್! ಯಾಕೆ?
ಹೆಸರಿಗೆ ಮಾತ್ರ ಪಾಕಿಸ್ತಾನ ಐಎಂಎಫ್ ಬಾಸ್ ಪಟ್ಟಕ್ಕೇರಲಿದೆಯಾದರೂ, ಅದಕ್ಕೆ ಯಾವುದೇ ನಿರ್ಣಾಯಕ ಅಧಿಕಾರ ಇರುವುದಿಲ್ಲ. ಹೌದು, ಈ ಬೋರ್ಡ್ ಆಫ್ ಗವರ್ನರ್ಸ್ ಅಧ್ಯಕ್ಷ ಸ್ಥಾನವು ಕೇವಲ ಸಾಂಸ್ಥಿಕ ಕಾರ್ಯವಿಧಾನಗಳು ಮತ್ತು ವಾರ್ಷಿಕ ಸಭೆಗಳ ಅಧ್ಯಕ್ಷತೆ ವಹಿಸುವುದಕ್ಕಷ್ಟೇ ಸೀಮಿತವಾಗಿರುತ್ತದೆ. ಯಾವ ದೇಶಕ್ಕೆ ಎಷ್ಟು ಸಾಲ ನೀಡಬೇಕು ಅಥವಾ ಯಾರ ಸಾಲ ಮನ್ನಾ ಮಾಡಬೇಕು ಎಂಬ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಯಾವುದೇ ಪವರ್ ಈ ಹುದ್ದೆಗೆ ಇರುವುದಿಲ್ಲ. ಆ ಎಲ್ಲ ಆರ್ಥಿಕ ಮತ್ತು ಸಾಲದ ನಿರ್ಧಾರಗಳನ್ನು IMF ಮತ್ತು ವಿಶ್ವಬ್ಯಾಂಕ್ನ ಕಾರ್ಯಕಾರಿ ಮಂಡಳಿ ಮತ್ತು ವ್ಯವಸ್ಥಾಪಕ ನಿರ್ದೇಶಕರು ಮಾತ್ರ ತೆಗೆದುಕೊಳ್ಳುತ್ತಾರೆ. ಹಾಗಾಗಿ, ಈ ಸ್ಥಾನವು ಪಾಕಿಸ್ತಾನಕ್ಕೆ ಜಾಗತಿಕ ಆರ್ಥಿಕ ಚರ್ಚೆಗಳಲ್ಲಿ ಭಾಗವಹಿಸಲು ಒಂದು ಪ್ರಮುಖ ವೇದಿಕೆಯನ್ನು ಒದಗಿಸುತ್ತದೆಯೇ ಹೊರತು, ಸ್ವಂತ ಲಾಭಕ್ಕೆ ಬಳಸಿಕೊಳ್ಳುವಂತಹ ರಾಜಕೀಯ ಅಥವಾ ಆರ್ಥಿಕ ಶಕ್ತಿಯನ್ನು ನೀಡುವುದಿಲ್ಲ.
ಒಂದೆಡೆ ಅಧ್ಯಕ್ಷ ಪಟ್ಟ, ಮತ್ತೊಂದೆಡೆ ಸಾಲದ ಭಿಕ್ಷೆ!
ಒಂದೆಡೆ ಜಾಗತಿಕ ಆರ್ಥಿಕ ಸಂಸ್ಥೆಗಳ ಮುಖಂಡತ್ವ ವಹಿಸಿಕೊಳ್ಳುತ್ತಿರುವ ಪಾಕಿಸ್ತಾನ, ಮತ್ತೊಂದೆಡೆ ಅದೇ ಸಂಸ್ಥೆಗಳ ಮುಂದೆ ಸಾಲಕ್ಕಾಗಿ ಬಿಕ್ಷಾಪಾತ್ರೆ ಹಿಡಿದು ನಿಂತಿರುವುದು ದೊಡ್ಡ ವಿಪರ್ಯಾಸವಾಗಿದೆ. ಅದರಂತೆ, ಪ್ರಸ್ತುತ ಪಾಕಿಸ್ತಾನವು ತನ್ನ ಆರ್ಥಿಕ ಕುಸಿತವನ್ನು ತಡೆಯಲು IMF ನಿಂದ $7 ಬಿಲಿಯನ್ ಮತ್ತು ಹವಾಮಾನ ಬಿಕ್ಕಟ್ಟು ಎದುರಿಸಲು $1.4 ಬಿಲಿಯನ್ ಸಾಲದ ನೆರವನ್ನು ಅವಲಂಬಿಸಿದೆ. ಇದಲ್ಲದೆ, ಇತ್ತೀಚಿನ ಪರಾಮರ್ಶೆಗಳ ಪ್ರಕಾರ ಹೆಚ್ಚುವರಿಯಾಗಿ $1.2 ಬಿಲಿಯನ್ ಹಣದ ಬಿಡುಗಡೆಗಾಗಿ ಐಎಂಎಫ್ ಕಾರ್ಯಕಾರಿ ಮಂಡಳಿಯ ಅನುಮೋದನೆಗೆ ಚಾತಕ ಪಕ್ಷಿಯಂತೆ ಕಾಯುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಜಾಗತಿಕ ಸಂಸ್ಥೆಗಳ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಪಾಕಿಸ್ತಾನಕ್ಕೆ ರಾಜತಾಂತ್ರಿಕವಾಗಿ ಹೆಮ್ಮೆಯ ವಿಷಯವಾಗಿದ್ದರೂ, ದೇಶದ ಆರ್ಥಿಕ ದಿವಾಳಿತನ ಮತ್ತು ಸಾಲದ ಸುಳಿಗೆ ಸಿಲುಕಿರುವ ಅದರ ವಾಸ್ತವ ಸ್ಥಿತಿಯೇನೂ ಬದಲಾಗುವುದಿಲ್ಲ. ಈ ಕುರಿತಾದ ಹೆಚ್ಚಿನ ಆರ್ಥಿಕ ವಿಶ್ಲೇಷಣೆಯನ್ನು ನೀವು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಯಲ್ಲಿ ವೀಕ್ಷಿಸಬಹುದು.