Flydubai: ಒಬ್ಬ ಪ್ಲಂಬರ್‌ ವಿಮಾನ ಲ್ಯಾಂಡ್ ಮಾಡಲು ಸಾಧ್ಯವೇ?; ಮತ್ತಷ್ಟು ವಿವರ ಬಿಚ್ಚಿಟ್ಟ ಕ್ಯಾಪ್ಟನ್ ಸ್ಮಿತ್ ಮಚ್ಚಾರ್!

ಅಬುಧಾಬಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಮಿತ್ ಮಚ್ಚಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ.
Captain Smit Machchhar reveals more details of the flydubai incident
ಕ್ಯಾಪ್ಟನ್ ಸ್ಮಿತ್ ಮಚ್ಚಾರ್
Updated on: 

ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ 'ಫ್ಲೈದುಬೈ' ವಿಮಾನ FZ1073ರ ಕಾಕ್‌ಪಿಟ್‌ನಲ್ಲಿ ಸಹ-ಪೈಲಟ್‌ನಿಂದ ಇರಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ದುಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಬುಧಾಬಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಮಿತ್ ಮಚ್ಚಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ. ಈ ಮಧ್ಯೆ ಆಸ್ಪತ್ರೆಯಿಂದಲೇ ದಿ ನ್ಯಾಷನಲ್‌ಗೆ ನೀಡಿದ ಸಂದರ್ಶನದಲ್ಲಿ, ದಾಳಿ ನಡೆಯುವ ಮುನ್ನ ಸುಮಾರು 2 ಗಂಟೆಗಳ ಕಾಲ ಸಹ-ಪೈಲಟ್ ಅಲ್ ಅಮ್ಮಾಮಿ ಪಕ್ಕದಲ್ಲೇ ಕುಳಿತಿದ್ದೆ. ಆದರೆ ಆ ಸಮಯದಲ್ಲಿ ಅವರ ನಡವಳಿಕೆಯಲ್ಲಿ ಯಾವುದೇ ಅನುಮಾನ ಬರಲಿಲ್ಲ ಎಂದು ಹೇಳಿದ್ದಾರೆ.

ನಾನು ಕಂಪ್ಯೂಟರ್‌ನಲ್ಲಿ ನಿಗದಿತ ಲ್ಯಾಂಡಿಂಗ್ ಸಮಯದಂತಹ ಸಾಮಾನ್ಯ ಮಾಹಿತಿಯನ್ನು ಪರಿಶೀಲಿಸುತ್ತಿದ್ದೆ. "ಅಲ್ಲಿಂದಲೇ ಎಲ್ಲವೂ ಶುರುವಾಯಿತು. ಇದ್ದಕ್ಕಿದ್ದಂತೆ, ನನ್ನ ತಲೆಯ ಹಿಂಭಾಗದಲ್ಲಿ ಬಲವಾದ ಪೆಟ್ಟು ಬಿತ್ತು. ಆ ಹೊಡೆತ ಎಷ್ಟು ಪ್ರಬಲವಾಗಿತ್ತೆಂದರೆ, ಅವರು ಮುಂದಕ್ಕೆ ಬಾಗಿ, ನಿಯಂತ್ರಣಾ ಸಾಧನದ (control column) ಮೇಲೆ ಬೀಳುವಂತಾದರು. ಈ ವೇಳೆ ವಿಮಾನದಲ್ಲಿ ಏನೋ ಭೀಕರವಾದ ದೋಷ ಉಂಟಾಗಿದೆ ಎಂದು ನಾನು ಭಾವಿಸಿದೆ. ಆದರೆ, ಮುಂದಿನ ಕೆಲವೇ ಕ್ಷಣಗಳಲ್ಲಿ, ಸತತವಾಗಿ ಹೊಡೆತಗಳು ಬೀಳುತ್ತಿದ್ದಾಗ, ನಾನು ಹಿಂದಕ್ಕೆ ತಿರುಗಿ ನೋಡಿದೆ. ಆಗ ನನ್ನ ಸಹೋದ್ಯೋಗಿಯೇ ನನ್ನ ಮೇಲೆ ಹಲ್ಲೆ ನಡೆಸುತ್ತಿರುವುದು ತಿಳಿಯಿತು ಎಂದಿದ್ದಾರೆ.

Captain Smit Machchhar reveals more details of the flydubai incident
ಆಸ್ಪತ್ರೆಗೆ ಭೇಟಿ ನೀಡಿ, ಫ್ಲೈದುಬೈ ಹೀರೋ ಸ್ಮಿತ್ ಮಚ್ಚಾರ್ ಹಣೆಗೆ ಮುತ್ತಿಟ್ಟ ದುಬೈ ಕ್ರೌನ್ ಪ್ರಿನ್ಸ್! ಹೇಳಿದ್ದೇನು?

ಇನ್ನು ಫ್ಲೈದುಬೈ ವಿಮಾನವು ಆಗಸದಿಂದ ನೋಸ್‌ ಡೈವ್‌ ಮಾಡುತ್ತಿದ್ದ ಸಂದರ್ಭದಲ್ಲಿ, ಇಸ್ರೇಲಿ ಪ್ಲಂಬರ್‌ ಯಾನಿವ್‌ ಹಯೌನ್‌ ವಿಮಾನವನ್ನು ನಿಯಂತ್ರಣಕ್ಕೆ ಪಡೆದ ಕುರಿತು ಕೇಳಿದ ಪ್ರಶ್ನೆಗೆ, "ನನಗೆ ಆ ಕಥೆ ಗೊತ್ತಿಲ್ಲ" ಎಂದು ಸ್ಮಿತ್‌ ಮಚ್ಚಾರ್‌ ಹೇಳಿದ್ದಾರೆ.

"ನಿಜ ಹೇಳಬೇಕೆಂದರೆ ವಿಮಾನ 17,000 ಅಡಿಯಿಂದ ಕೆಳಗೆ ಜಾರಿದಾಗ ಇಸ್ರೇಲಿ ಪ್ಲಂಬರ್‌ವೋರ್ವ ವಿಮಾನವನ್ನು ಕಂಟ್ರೋಲ್‌ ಮಾಡಿದ್ದರ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನನ್ನ ಸಂಪೂರ್ಣ ಶಕ್ತಿಯನ್ನು ನಾನು ಛಲ ಬಿಡದಿರುವ ಕಡೆಗೆ ಕೇಂದ್ರೀಕರಿಸಿದ್ದೆ. ಅಂತಿಮವಾಗಿ ವಿಮಾನದ ಹಿರಿಯ ಸಿಬ್ಬಂದಿಯೋರ್ವರು ಕ್ಯಾಪ್ಟನ್ ವಿಮಾನದ ನಿಯಂತ್ರಣದಲ್ಲಿದೆ" ಎಂದು ಹೇಳಿದ್ದಷ್ಟೇ ನನಗೆ ನೆನಪಿದೆ" ಎಂದು ಸ್ಮಿತ್‌ ಮಚ್ಚಾರ್‌ ಸ್ಪಷ್ಟಪಡಿಸಿದ್ದಾರೆ.

"ಒಬ್ಬ ಪ್ಲಂಬರ್ ವಿಮಾನವನ್ನು ಲ್ಯಾಂಡ್ ಮಾಡಲು ಸಾಧ್ಯವೇ? ನಾನು ಇಲ್ಲಿ ಊಹೆಗಳನ್ನು ಮಾಡಲು ಬಯಸುವುದಿಲ್ಲ. ಆದರೆ ನಿಮ್ಮ ಪ್ರಶ್ನೆಗೆ ಉತ್ತರಿಸುವುದಾದರೆ, ಆ ಸಮಯದಲ್ಲಿ ನನ್ನ ನೆನಪಿನ ಶಕ್ತಿ ಮತ್ತು ನನ್ನ ಸಂಪೂರ್ಣ ಗಮನವು ಹೇಗಾದರೂ ಮಾಡಿ ಬದುಕುಳಿಯುವುದರ ಕಡೆಗೆ ಮಾತ್ರ ಇತ್ತು" ಎಂದು ಕ್ಯಾ. ಸ್ಮಿತ್‌ ಮಚ್ಚಾರ್‌ ಹೇಳಿದ್ದಾರೆ.

ಇಸ್ರೇಲ್ ಪಂಬರ್ ಹೇಳಿದ್ದೇನು?

ವೃತ್ತಿಯಿಂದ ಪ್ಲಂಬರ್ ಆಗಿರುವ ಇಸ್ರೇಲ್ ನ ಯಾನಿವ್ ಹಯೌನ್, "ನಾನು ಕಾಕ್‌ಪಿಟ್‌ಗೆ ನುಗ್ಗಿ ಸಹ-ಪೈಲಟ್‌ನನ್ನು ಹೊಡೆದು, ಆತನನ್ನು ಹತೋಟಿಗೆ ಪಡೆದೆ. ನಂತರ ವಿಮಾನವನ್ನು ನಿಯಂತ್ರಣಕ್ಕೆ ತಂದುಕೊಂಡೆ" ಎಂದು ಪ್ರತಿಪಾದಿಸಿದ್ದಾನೆ.

ತಾನು 'ಏರ್ ಕ್ರ್ಯಾಶ್ ಇನ್ವೆಸ್ಟಿಗೇಷನ್' ಡಾಕ್ಯೂಮೆಂಟರಿ ವೀಕ್ಷಣೆ ಮಾಡಿದ್ದು, ವಿಮಾನವನ್ನು ನಿಯಂತ್ರಿಸುವುದು ಹೇಗೆ ಎಂಬುದನ್ನು ಕಲಿತಿದ್ದಾಗಿ ಹಯೌನ್‌ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರಿಗೆ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com